"ಶಾಲೆಗೆ ಹೋಗುವ ಮೊದಲು ನಾನು ದಿನಾ ಈ ಕೆಲಸಗಳನ್ನು ಮಾಡಬೇಕು. ಬೇರೆ ಯಾರಿದ್ದಾರೆ ಮಾಡುವುದಕ್ಕೆ?" ಎಂದು ತಾಯಿಯ ಹಾಲನ್ನು ಕುಡಿಯಲು ಎಳೆ ಕರುವಿನ ಹಗ್ಗವನ್ನು ಬಿಚ್ಚುತ್ತಾ 15 ವರ್ಷ ಪ್ರಾಯದ ಕಿರಣ್ ಕೇಳುತ್ತಾಳೆ. ಮುಂಜಾನೆ ಐದು ಗಂಟೆಯ ಹೊತ್ತು. ಅನಾರೋಗ್ಯ ಪೀಡಿತ ತಾಯಿ ಮತ್ತು ತಮ್ಮ ರವಿ ಇನ್ನೂ ಕೋಣೆಯಲ್ಲಿ ಮಲಗಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ಮೊದಲು ಅವಳು ಕರುವನ್ನು ಮತ್ತೆ ಹಟ್ಟಿಯಲ್ಲಿ ಕಟ್ಟಿಹಾಕಬೇಕು. ಆ ನಂತರ ಅವಳ ಅಜ್ಜ ಹಾಲು ಕರೆಯಲು ಬರುತ್ತಾರೆ.
ಎಂದಿನಂತೆ ಬೇಗ ಎದ್ದ ಕಿರಣ್ ಗೆ ಅಂದು ಕೆಲಸ ಮಾಡಲಾಗಲೀ, ಶಾಲೆಗೆ ಹೋಗಲಾಗಲೀ ಸಾಧ್ಯವಿರಲಿಲ್ಲ. ಅದು ಅವಳ ಋತುಚಕ್ರದ ಮೊದಲ ದಿನವಾದ್ದರಿಂದ ಆಯಾಸ ಹೆಚ್ಚಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಅವಳಿಗೆ ವಿಪರೀತ ಹೊಟ್ಟೆ ನೋವು ಕೂಡ ಇತ್ತು. ಆದರೆ ಅವಳು ತನ್ನ ಕೆಲಸಗಳನ್ನು 6.30 ಗಂಟೆಗೆ ಮುನ್ನ ಮುಗಿಸಲೇ ಬೇಕು. "ಬೆಳಿಗ್ಗಿನ ಅಸೆಂಬ್ಲಿ 7 ಗಂಟೆಗೆ ಆರಂಭವಾಗುತ್ತದೆ. ಅಲ್ಲದೇ, ಶಾಲೆಗೆ ಹೋಗಲು ನನಗೆ 20-25 ನಿಮಿಷಗಳು ಬೇಕು" ಎಂದು ಅವಳು ಹೇಳುತ್ತಾಳೆ.
11 ನೇ ತರಗತಿಯಲ್ಲಿ ಓದುತ್ತಿರುವ ಕಿರಣ್ ದೇವಿಯ ಸರ್ಕಾರಿ ಶಾಲೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಕಾರ್ವಿ ತಹಸಿಲ್‌ನಲ್ಲಿರುವ ಅವಳ ಮನೆಯಿಂದ 2 ಕಿಲೋಮೀಟರ್ ದೂರದಲ್ಲಿದೆ. ಅವಳು ತನ್ನ ಸಹೋದರ ರವಿ, 40 ವರ್ಷ ಪ್ರಾಯದ ತಾಯಿ ಪೂನಂ ದೇವಿ ಮತ್ತು 67 ವರ್ಷದ ಅಜ್ಜ ಖುಷಿರಾಮ್ ಅವರೊಂದಿಗೆ ಇಲ್ಲಿ ವಾಸಿಸುತ್ತಾಳೆ. ಅವಳ ಅಜ್ಜ ಮನೆಯ ಹಿಂದಿರುವ ತನ್ನ ಕುಟುಂಬಕ್ಕೆ ಸೇರಿದ 800 ಚದರ ಅಡಿ ಜಾಗವನ್ನು ನೋಡಿಕೊಂಡು ಗೋಧಿ, ಕಡ್ಲೆ ಮತ್ತು ಕೆಲವೊಮ್ಮೆ ಕಾಲೋಚಿತವಾದ ತರಕಾರಿಗಳನ್ನು ಬೆಳೆಯುತ್ತಾರೆ. ಪೂನಂ ಅವರಿಗೆ ಮಣಿಕಟ್ಟು ಮತ್ತು ಮೊಣಕಾಲುಗಳ ವಿಪರೀತ ನೋವಿದೆ. ಇದರಿಂದಾಗಿ ಮನೆಯಲ್ಲಿ ಕೆಲಸ ಮಾಡಲು ಇವರಿಗೆ ಸಾಧ್ಯವೇ ಇಲ್ಲ. ಹೀಗಾಗಿ ಈ ಎಲ್ಲಾ ಕೆಲಸಗಳ ಜವಾಬ್ದಾರಿಯೂ ಕಿರಣ್ ಮೇಲಿದೆ.
ಕಿರಣ್‌ಗೆ ದಿನದಿನದ ಕೆಲಸಗಳು ಒಂದು ರೀತಿಯ ಯಾತನಾಮಯ ಕಸರತ್ತಾಗಿ ಹೋಗಿವೆ. "ಈ ಸಣ್ಣ ಕೆಲಸಗಳನ್ನು ಮಾಡಲು ನನಗೇನೂ ಅಡ್ಡಿಯಿಲ್ಲ, ಆದರೆ ಮುಟ್ಟಿನ ಸಮಯದಲ್ಲಿ ತುಂಬಾ ಕಷ್ಟವಾಗುತ್ತದೆ.”
ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಕಿಶೋರಿ ಸುರಕ್ಷಾ ಯೋಜನೆಯ ನಿಂತು ಹೋಗಿ ಉಚಿತ ಸ್ಯಾನಿಟರಿ ಪ್ಯಾಡ್‌ಗಳು ಸಿಗದೆ ಸಂಕಷ್ಟಕ್ಕೆ ಒಳಗಾಗಿರುವ ಉತ್ತರ ಪ್ರದೇಶದ ಒಂದು ಕೋಟಿಗಿಂತಲೂ ಹೆಚ್ಚು ಹುಡುಗಿಯರಲ್ಲಿ ಕಿರಣ್ ಕೂಡ ಒಬ್ಬಳು. ಕೆಎಸ್‌ವೈ, ಇದು ಕೇಂದ್ರ ಸರ್ಕಾರದ ಮುಟ್ಟಿನ ನೈರ್ಮಲ್ಯ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ 6 ರಿಂದ 12 ನೇ ತರಗತಿವರೆಗಿನ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮವಾಗಿದೆ. 2015 ರಲ್ಲಿ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ರಾಜ್ಯ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಿದ್ದರು. ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಬಾಲಕಿಯೂ 10 ಸ್ಯಾನಿಟರಿ ನ್ಯಾಪ್ಕಿನ್‌ಗಳ ಪ್ಯಾಕ್ ಗಳನ್ನು ಉಚಿತವಾಗಿ ಪಡೆಯಲೇ ಬೇಕು.
ಉತ್ತರ ಪ್ರದೇಶದಲ್ಲಿ ಎಷ್ಟು ಬಾಲಕಿಯರು ಆ ಕಾರ್ಯಕ್ರಮದ ಅಡಿಯಲ್ಲಿ ಪ್ಯಾಡ್‌ಗಳನ್ನು ಪಡೆಯುತ್ತಿದ್ದಾರೆ ಎಂಬ ಅಂಕಿಅಂಶವನ್ನು ಕಂಡುಹಿಡಿಯುವುದು ಅಸಾಧ್ಯ. ಆದರೆ ಆ ಸಂಖ್ಯೆಯ ಹತ್ತನೇ ಒಂದು ಭಾಗ ಎಂದೇ ಭಾವಿಸಿದರೂ ಕೋವಿಡ್‌ನ ನಂತರ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬಡ ಕುಟುಂಬಗಳ ಹತ್ತು ಲಕ್ಞಕ್ಕಿಂತಲೂ ಹೆಚ್ಚು ಹುಡುಗಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಸಿಕ್ಕಿಲ್ಲ .
ಅಲ್ಲದೆ, ಕಾರ್ಯಕ್ರಮವನ್ನು ಮತ್ತೆ ಯಶಸ್ವಿಯಾಗಿ ಮರು ಆರಂಭಿಸಲಾಗಿದೆ ಎಂಬುದು ಕೂಡ ಪ್ರಶ್ನಾರ್ಹವಾಗಿವೆ. ಕೆಲವು ನಗರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಮತ್ತೆ ಆರಂಭಿಸಿದರೂ ಕಿರಣ್ ಗೆ ಇನ್ನೂ ಯಾವುದೇ ಉಚಿತ ಸ್ಯಾನಿಟರಿ ಪ್ಯಾಡ್ ಸಿಕ್ಕಿಲ್ಲ. ಅವಳಿಗೆ ಬ್ರಾಂಡೆಡ್ ಪ್ಯಾಡ್‌ಗಳನ್ನು ಖರೀದಿಸಲೂ ಸಾಧ್ಯವಿಲ್ಲ. ಹೀಗೆ ಸಾಧ್ಯವಾಗದ ಸಾವಿರಾರು ಹುಡುಗಿಯರಲ್ಲಿ ಇವಳು ಒಬ್ಬಳಷ್ಟೇ.
ಕಿರಣ್ ಮನೆ, ದನದ ಕೊಟ್ಟಿಗೆ ಮತ್ತು ತನ್ನ ಮನೆಯ ಹೊರಗಿನ ಮುಖ್ಯ ರಸ್ತೆಗೆ ಹೋಗುವ ಇಡೀ ದಾರಿವನ್ನು ಗುಡಿಸಿ ಸ್ವಚ್ಚ ಮಾಡಿದ್ದಾಳೆ. ಕವಾಟಿನಲ್ಲಿ ಇರುವ ಹಳೆಯ ಗೋಡೆ ಗಡಿಯಾರವನ್ನು ನೋಡಲು ಅವಳು ಮನೆಯ ಒಳಗೆ ಓಡುತ್ತಾಳೆ. "ಓಹ್, ಈಗಲೇ ಗಂಟೆ 6:10 ಆಗಿದೆ!" ಅವಳು ಗಾಬರಿಯಿಂದ ಹೇಳುತ್ತಾಳೆ. "ಮಮ್ಮಿ, ನೀನು ಬೇಗ ನನಗೆ ಜಡೆ ಹಾಕು, ನಾನು ಈಗಲೇ ಬರುತ್ತೇನೆ" ಎಂದು ಕೂಗುತ್ತಾ ಮನೆಯ ಹೊರಗೆ ಹೋಗಿ ಪ್ಲಾಸ್ಟಿಕ್ ತೊಟ್ಟಿಯ ಬಳಿ ಇರುವ ತೆರೆದ ಸ್ಥಳದಲ್ಲಿ, ಅದೂ ಬಹುತೇಕ ರಸ್ತೆಬದಿಯಲ್ಲಿಯೇ ಸ್ನಾನ ಮಾಡುತ್ತಾಳೆ.
ಸ್ನಾನದ ಮನೆಯ ಬಗ್ಗೆ ನಾನು ಕೇಳಿದಾಗ ಅವಳು ನಕ್ಕಳು. “ಯಾವ ಬಾತ್ರೂಮ್? ನಮ್ಮ ಶೌಚಾಲಯದಲ್ಲಿಯೇ ಸಾಕಷ್ಟು ನೀರಿಲ್ಲ, ಇನ್ನು ಸ್ನಾನದ ಮನೆ ಎಲ್ಲಿಂದ? ಕೊಳೆಯಾದ ಬಟ್ಟೆಯನ್ನು ಬದಲಾಯಿಸಲು ನಾನು ಶೌಚಾಲಯವನ್ನು ಬಳಸುತ್ತೇನೆ,” ಎಂದು ಅವಳು ಹೇಳುತ್ತಾಳೆ. ಕೋವಿಡ್ -19ನ ಮೊದಲ ಲಾಕ್‌ಡೌನ್‌ನಿಂದಾಗಿ ಶಾಲೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಕೊಡುವುದು ನಿಂತುಹೋದಾಗಿನಿಂದ ತಾನು ಹತ್ತಿ ಬಟ್ಟೆ ಬಳಸುತ್ತಿರುವುದನ್ನು ಹೇಳಿಕೊಳ್ಳಲು ಕಿರಣ್‌ಗೆ ಮುಜುಗರವಾಗುತ್ತದೆ. ಕೋವಿಡ್ -19 ಬಂದು ಎರಡು ವರ್ಷಗಳಾದರೂ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳು ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವ ಕಾರ್ಯಕ್ರಮವನ್ನು ಪುನರಾರಂಭಿಸಿಲ್ಲ.
"ನನ್ನ ಸಹಪಾಠಿಯೊಬ್ಬಳಿಗೆ ತರಗತಿಯಲ್ಲಿ ರಕ್ತಸ್ರಾವವಾದಾಗ ಶಿಕ್ಷಕರಲ್ಲಿ ಒಂದು ಸ್ಯಾನಿಟರಿ ಪ್ಯಾಡನ್ನು ಕೇಳಿದೆವು. ಆಗ ಅವರು ಸ್ಟಾಕ್ ಇಲ್ಲ ಎಂದು ಹೇಳಿದರು. ಹಾಗಾಗಿ, ನಮ್ಮ ಇನ್ನೊಬ್ಬ ಸ್ನೇಹಿತೆ ಅವಳಿಗೆ ಕರವಸ್ತ್ರ ಒಂದನ್ನು ಕೊಟ್ಟಳು,” ಎನ್ನುತ್ತಾಳೆ ಕಿರಣ್. “ಮೊದಲೆಲ್ಲಾ ನಮಗೆ ಶಾಲೆಯಲ್ಲಿ ಪ್ಯಾಡ್‌ಗಳು ಬೇಕಾದಾಗ ನಾವು ಶಿಕ್ಷಕರನ್ನು ಕೇಳುತ್ತಿದ್ದೆವು. ಆಮೇಲೆ ಲಾಕ್‌ಡೌನ್ ಶುರುವಾಯಿತು ಮತ್ತು ಶಾಲೆಗಳೂ ಮುಚ್ಚಿದವು. ಆ ನಂತರ ಶಾಲೆಗಳು ಪುನರಾರಂಭವಾದಾಗ ಪ್ಯಾಡ್ ಇರಲಿಲ್ಲ. ಇನ್ನು ಮುಂದೆ ಶಾಲೆಯಲ್ಲಿ ಪ್ಯಾಡ್ ಸಿಗುವುದಿಲ್ಲ ಎಂದು ನಮಗೆ ಹೇಳಿದರು,” ಎಂದು ಅವಳು ಹೇಳುತ್ತಾಳೆ.
ಕಿರಣ್‌ಗೆ ಪಿರಿಯಡ್ಸ್ ಸಮಯದಲ್ಲಿ ತುಂಬಾ ನೋವಿತ್ತು. ಕೋವಿಡ್ -19 ಶುರುವಾದಾಗಿನಿಂದ ಕಳೆದ ಎರಡು ವರ್ಷಗಳಲ್ಲಿ, ಅವಳು ಋತುಸ್ರಾವದ ಮೊದಲ ದಿನದಲ್ಲಿ ತೀವ್ರವಾದ ಯಾತನೆಯನ್ನು ಅನುಭವಿಸಿದ್ದಾಳೆ. ಆಕೆಯ ಕುಟುಂಬದಲ್ಲಿ ಯಾರಿಗೂ ಕೋವಿಡ್ -19 ಬಾರದೇ ಇದ್ದರೂ ಇಡೀ ಚಿತ್ರಕೂಟ ಜಿಲ್ಲೆಯ ಮೇಲೆ ಅದು ತೀವ್ರವಾದ ಪರಿಣಾಮವನ್ನು ಬೀರಿತ್ತು. ಆಕೆಯ ನೆರೆಹೊರೆಯವರಲ್ಲಿ ಹಲವರಿಗೆ ಈ ಸೋಂಕು ತಗುಲಿತ್ತು. ಕೆಲವರನ್ನು 3 ಕಿಲೋಮೀಟರ್ ದೂರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಕೋವಿಡ್ -19 ರ ನೇರ ಪರಿಣಾಮದಿಂದಾಗಿ ಹೆಚ್ಚಿನ ಹಾಗೂ ಯಾತನಾಮಯವಾದ ಮುಟ್ಟಿನ ಸ್ರಾವ ಉಂಟಾಗಬಹುದು, "ಒತ್ತಡ, ಆತಂಕ, ಅಪೌಷ್ಟಿಕತೆ ಮತ್ತು ನಿದ್ರಾಹೀನತೆ ಮತ್ತು ದೈಹಿಕ ವ್ಯಾಯಾಮದಲ್ಲಿನ ವ್ಯತ್ಯಾಸಗಳು ಪರೋಕ್ಷವಾಗಿ ಸಂತಾನೋತ್ಪತ್ತಿ ಮತ್ತು ಋತುಚಕ್ರದ ಮೇಲೆ ಪರಿಣಾಮ ಬೀರಬಹುದು" ಎಂದು ಯುಎನ್‌ಐಸಿಇಎಫ್ ಹೇಳುತ್ತದೆ. ಅಕ್ಟೋಬರ್ 2020 ರಲ್ಲಿ ಬಿಡುಗಡೆಯಾದ 'ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಕೋವಿಡ್-19 ರ ಪರಿಣಾಮಗಳನ್ನು ತಗ್ಗಿಸುವುದು' ಎಂಬ ಶೀರ್ಷಿಕೆಯ ವರದಿಯು " ಕೋವಿಡ್-19 ಬಂದ ಮೇಲೆ ಮೊದಲಿಗಿಂತ ಮುಟ್ಟಿನ ಸಮಸ್ಯೆಗಳು ಸಹಜವಾಗಿ ಹೋಗಿವೆ” ಎಂದು ತಿಳಿಸುತ್ತದೆ.
ಕಿರಣ್ ಮನೆಯಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿ ವಾಸಿಸುವ ಫೂಲ್ವಾಟಿಯಾಳಿಗೂ ಶಾಲೆಯಿಂದ ಸ್ಯಾನಿಟರಿ ನ್ಯಾಪ್ಕಿನ್ ಗಳು ಸಿಗುತ್ತಿಲ್ಲ. "ಕೋವಿಡ್-19 ನಿಂದಾಗಿ ಶಾಲೆಯನ್ನು ಮುಚ್ಚಿದ ನಂತರ ನಾನು ಬಟ್ಟೆಯನ್ನು ಬಳಸಲು, ಅವುಗಳನ್ನು ತೊಳೆದು ಮನೆಯೊಳಗೆ ಒಣಗಿಸಲು ಶುರುಮಾಡಿದೆ" ಎಂದು 2020ರಲ್ಲಿ ಅವಳು ಪರಿಗೆ ಹೇಳಿದ್ದಳು . ಸ್ಯಾನಿಟರಿ ನ್ಯಾಪ್ಕಿನ್ ಕೊಡುಗೆಯಿಂದ ಫೂಲ್ವಾಟಿಯಾ ಸೇರಿದಂತೆ ಚಿತ್ರಕೂಟದ ಗ್ರಾಮೀಣ ಪ್ರದೇಶದ ಸಾವಿರಾರು ಹುಡುಗಿಯರು ನೆರವನ್ನು ಪಡೆದರು. ಆದರೆ ಅದು ಕೇವಲ 3-4 ತಿಂಗಳುಗಳ ಕಾಲ ಮಾತ್ರ ನಡೆಯಿತು. ಅದಾಗಿ ಎರಡು ವರ್ಷಗಳು ಕಳೆದಿವೆ, ಅವಳು ಮತ್ತೆ ಬಟ್ಟೆಯನ್ನೇ ಬಳಸಲು ಶುರುಮಾಡಿದ್ದಾಳೆ. “ಶಾಲೆಯಲ್ಲಿ ಇನ್ನೂ ಪ್ಯಾಡ್‌ಗಳನ್ನು ಕೊಡದೇ ಇರುವುದರಿಂದ ನಾನು ಬಟ್ಟೆಯನ್ನು ಮಾತ್ರ ಬಳಸುತ್ತಿದ್ದೇನೆ. ಆ ಸೌಲಭ್ಯ ಕೂಡ ಈಗ ನಿಂತುಹೋಗಿದೆ ಅಂದುಕೊಂಡಿದ್ದೇನೆ, ”ಎಂದು ಅವಳು ಹೇಳುತ್ತಾಳೆ.
ಇಷ್ಟಾಗಿಯೂ, ರಾಜ್ಯದ ರಾಜಧಾನಿಯಲ್ಲಿ ಈಗ ಪರಿಸ್ಥಿತಿ ಉತ್ತಮವಾಗಿದೆ ಎಂದು ಲಕ್ನೋ ಜಿಲ್ಲೆಯ ಕಾಕೋರಿ ಬ್ಲಾಕ್‌ನಲ್ಲಿರುವ ಸರೋಸಾ ಭರೋಸಾದಲ್ಲಿರುವ ಸಂಯುಕ್ತ ಶಾಲೆಯ ಶಿಕ್ಷಕಿ ಶ್ವೇತಾ ಶುಕ್ಲಾ ಹೇಳುತ್ತಾರೆ. “ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿ ತಿಂಗಳು ನಿಯಮಿತವಾಗಿ ಪ್ಯಾಡ್‌ಗಳನ್ನು ಪಡೆಯುತ್ತಿದ್ದಾರೆ. ನಾವು ಇದನ್ನು ದಾಖಲಿಸಬೇಕು ಹಾಗೂ ನೀಡಿದ ಪ್ಯಾಡನ್ನು ಬಳಸಬೇಕು,” ಎಂದು ಅವರು ಹೇಳುತ್ತಾರೆ. ಆದರೆ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶದ ಪರಿಸ್ಥಿತಿಯನ್ನು ನೋಡಿದರೆ ಅಚ್ಚರಿಯೇನೂ ಆಗುವುದಿಲ್ಲ. "ಸರ್ಕಾರಿ ಶಾಲೆಗಳಲ್ಲಿ ಈ ರೀತಿಯ ಪರಿಸ್ಥಿತಿ ಸಾಮಾನ್ಯವಾಗಿದೆ. ಅದು ನಿಮಗೆ ಕೂಡ ತಿಳಿದಿದೆ. ನಮಗೆ ಏನೂ ಮಾಡಲು ಸಾಧ್ಯವಿಲ್ಲ, ಅದೂ ನಾವು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಹಾಗೂ ನಮ್ಮ ಮಕ್ಕಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಲು ಸಾಧ್ಯವಿಲ್ಲದೆ ಇದ್ದಾಗ" ಎಂದು ಅವರು ಹೇಳುತ್ತಾರೆ.
ಪೂನಂ ದೇವಿ ಮತ್ತು ಅವರ ಪತಿಗೆ ತಮ್ಮ ಮಕ್ಕಳಾದ ಕಿರಣ್ ಮತ್ತು ರವಿಯನ್ನು ಖಾಸಗಿ ಶಾಲೆಗೆ ಸೇರಿಸುವ ಕನಸು. “ನನ್ನ ಮಕ್ಕಳು ಚೆನ್ನಾಗಿ ಓದುತ್ತಾರೆ. ನನ್ನ ಮಕ್ಕಳನ್ನು ಕೇಂದ್ರೀಯ ವಿದ್ಯಾಲಯದಂತಹ ಶಾಲೆಗೆ ಕಳುಹಿಸಲು ಯಾವುದೇ ದಾರಿ ಇಲ್ಲವೇ?” ಎಂದು ಕೇಳುತ್ತಾರೆ. "ನಮ್ಮಲ್ಲಿ ಅಷ್ಟು ಹಣವಿಲ್ಲದಿದ್ದರೂ, ಅವರ ತಂದೆ ಯಾವಾಗಲೂ ನಮ್ಮ ಮಕ್ಕಳು ಒಳ್ಳೆಯ ಶಾಲೆಯಲ್ಲಿ ಓದಬೇಕು ಎಂದೇ ಬಯಸುತ್ತಾರೆ. ಇದರಿಂದ ಅವರು ಸಿಟಿಗೆ ಹೋಗಿ ಒಳ್ಳೆಯ ಕೆಲಸ ಮಾಡಬಹುದು ಮತ್ತು ಐಷಾರಾಮಿಯಾಗಿ ಬದುಕಬಹುದು," ಎಂದು ಅವರು ಹೇಳುತ್ತಾರೆ. ಆದರೆ ಸುಮಾರು 10 ವರ್ಷಗಳ ಹಿಂದೆ ಕಿರಣ್ ಕೇವಲ ಐದು ವರ್ಷದವಳಾಗಿದ್ದಾಗ ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಅವಳ ತಂದೆ ಕೆಲಸ ಮಾಡುತ್ತಲೇ ನಿಧನರಾದರು. ಪೂನಂ ಅವರಿಗೆ ತಮ್ಮ ಅನಾರೋಗ್ಯ ಒಂದು ದೊಡ್ಡ ಸವಾಲಾಗಿತ್ತು. ಕೃಷಿಯಿಂದ ಬರುವ ಆದಾಯವು ಏನೇನೂ ಸಾಕಾಗುವುದಿಲ್ಲ. ಅಂತಹ ಸಮಯದಲ್ಲಿ, ಅವಳ ಮುಟ್ಟಿನ ಸಂದರ್ಭದ ಅಗತ್ಯವನ್ನು ಶಾಲೆ ನೋಡಿಕೊಳ್ಳುವುದು ಒಂದು ಉಪಕಾರವಾಗಿತ್ತು.
ಆದಾಗ್ಯೂ, ಕಿರಣ್ ಅವರಂತಹ ಹತ್ತಾರು ಹುಡುಗಿಯರಿಗೆ ತಮ್ಮ ಪಿರಿಯಡ್ ಸಮಯದಲ್ಲಿ ಶುಚಿತ್ವವನ್ನು ನಿರ್ಲಕ್ಷಿಸುವುದು ಒಂದು ಅಭ್ಯಾಸವಾಗಿ ಹೋಗಿದೆ. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನಲ್ ಪ್ಲಾನಿಂಗ್ ಅಂಡ್ ಅಡ್ಮಿನಿಸ್ಟ್ರೇಷನ್‌ನ 2016-17ರ ವರದಿ ಮತ್ತು ಭಾರತದಲ್ಲಿ ಶಾಲಾ ಶಿಕ್ಷಣದ ಪ್ರಕಾರ ಉತ್ತರ ಪ್ರದೇಶದಲ್ಲಿ 6 ರಿಂದ 12 ನೇ ತರಗತಿ ಓದುವ 10.86 ಮಿಲಿಯನ್ ವಿದ್ಯಾರ್ಥಿನಿಯರಿದ್ದಾರೆ. ಪ್ರತಿ ತಿಂಗಳು ಅವರ ಋತುಸ್ರಾವದ ಸಮಯದಲ್ಲಿ ತರಗತಿಗಳನ್ನು ತಪ್ಪಿಸದೇ ಇರಲು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವ ಯೋಜನೆಯನ್ನು ಜಾರಿಗೊಳಿಸಲಾಯಿತು. 2015ರಲ್ಲಿ ರಾಜ್ಯದಲ್ಲಿ ಆ ಸಂಖ್ಯೆ 28 ಲಕ್ಷ ಇತ್ತು. ಈ ಯೋಜನೆ ನಿಂತುಹೋದರೆ ಉತ್ತರ ಪ್ರದೇಶದಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ನೆನೆದುಕೊಂಡು ಜನ ಗಾಬರಿಗೊಳಗಾಗುತ್ತಾರೆ.
ಚಿತ್ರಕೂಟದ ಜಿಲ್ಲಾ ಮ್ಯಾಜಿಸ್ಟ್ರೇಟ್ ಶುಭ್ರಂತ್ ಕುಮಾರ್ ಶುಕ್ಲಾ ಅವರು ಪರಿಸ್ಥಿತಿಯ ಸರಳ ಅಭಿಪ್ರಾಯವನ್ನು ಹೊಂದಿದ್ದಾರೆ. "ಕೋವಿಡ್-19 ನಂತರ ಪ್ಯಾಡ್‌ಗಳ ಪೂರೈಕೆಯಲ್ಲಿ ಸಮಸ್ಯೆಗಳಾಗಿರುವುದನ್ನು ನಾನು ಒಪ್ಪುತ್ತೇನೆ" ಎಂದು ಅವರು ಹೇಳುತ್ತಾರೆ. "ಇಲ್ಲದಿದ್ದರೆ ಹುಡುಗಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳು ಸಿಗಬೇಕಿತ್ತು. ಆದರೆ, ಅಗತ್ಯವಿರುವ ಪ್ರತಿಯೊಬ್ಬ ಹೆಣ್ಣುಮಗುವೂ ತನ್ನ ಹತ್ತಿರದ ಅಂಗನವಾಡಿ ಕೇಂದ್ರವನ್ನು ಹೋಗಿ ಅಲ್ಲಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ತೆಗೆದುಕೊಳ್ಳಬಹುದು. ಅವರು ಅಲ್ಲಿ ಫೋಲಿಕ್ ಆಸಿಡ್ ಸಪ್ಲಿಮೆಂಟ್‌ಗಳನ್ನೂ ಸಹ ತೆಗೆದುಕೊಳ್ಳಬಹುದು” ಎಂದು ಶುಭ್ರಂತ್ ಹೇಳುತ್ತಾರೆ. ಆದರೆ ಕಿರಣ್ ಮತ್ತು ಅವಳ ನೆರೆಹೊರೆಯ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಲ್ಲದೇ ಚಿತ್ರಕೂಟದಲ್ಲಿರುವ ಅಂಗನವಾಡಿಗಳಿಗೆ ಸ್ಯಾನಿಟರಿ ನ್ಯಾಪ್ಕಿನ್‌ಗಳ ಪೂರೈಕೆ ಇದೆ. ಆದರೆ ಅವು ತಾಯಂದಿರಿಗೆ ಮಾತ್ರ ನೀಡಲಾಗುತ್ತಿದೆ ಎಂದು ಸೀತಾಪುರ ಬ್ಲಾಕ್‌ನ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳುತ್ತಾರೆ.
2020 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಂದು ಕೆಂಪು ಕೋಟೆಯಲ್ಲಿ ಮಾಡಿದ ತಮ್ಮ ಭಾಷಣ ದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರವು "ಜನೌಷಧಿ ಕೇಂದ್ರಗಳಲ್ಲಿ ತಲಾ ಒಂದು ರೂಪಾಯಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡುವ ದೊಡ್ಡಕೆಲಸವನ್ನು ಮಾಡುತ್ತಿದೆ" ಎಂದು ಹೇಳಿದ್ದರು. ಕಡಿಮೆ ಅವಧಿಯಲ್ಲಿ 6,000 ಜನೌಷಧಿ ಕೇಂದ್ರಗಳಲ್ಲಿ 5 ಕೋಟಿಗೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳನ್ನು ಬಡ ಮಹಿಳೆಯರಿಗೆ ತಲುಪಿಸಲಾಗಿದೆ ಎಂದು ಅವರು ಹೇಳಿದ್ದರು.
ಈ ಜನೌಷದಿ ಕೇಂದ್ರಗಳು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಅಡಿಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ. ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಪ್ರಕಾರ, ಆಗಸ್ಟ್ 2021 ರ ಹೊತ್ತಿಗೆ ದೇಶದಲ್ಲಿ 8,012 ಜನೌಷದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 1,616 ಔಷಧಗಳು ಮತ್ತು 250 ಶಸ್ತ್ರಚಿಕಿತ್ಸಾ ಉಪಕರಣ-ವಸ್ತುಗಳನ್ನು ಮಾರಾಟ ಮಾಡುತ್ತಿವೆ.
ಆದರೆ ಕಿರಣ್ ಅವರ ಮನೆಯ 5 ಕಿಲೋಮೀಟರ್ ಒಳಗಿನ ವ್ಯಾಪ್ತಿಯಲ್ಲಿ ಎಲ್ಲಿಯೂ ಜನೌಷಧಿ ಕೇಂದ್ರವಿಲ್ಲ. ಮನೆಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಮೆಡಿಕಲ್‌ನಿಂದ ಕನಿಷ್ಠ 45 ರೂಪಾಯಿ ಕೊಟ್ಟು ಒಂದು ಪ್ಯಾಕೇಟ್ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಖರೀದಿಸಬೇಕು. ಅದನ್ನು ಖರೀದಿಸಲು ಅವಳಲ್ಲಿ ಹಣವೂ ಇಲ್ಲ.
ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಕೊರತೆಯ ಜೊತೆಗೆ ಮುಟ್ಟಿನ ಸಂದರ್ಭದಲ್ಲಿ ಯುವತಿಯರಿಗೆ ಶಾಲೆಯಲ್ಲಿ ನೀಡಬೇಕಾದ ಸೌಲಭ್ಯಗಳೂ ಅತ್ಯಂತ ಅಸಮರ್ಪಕವಾಗಿವೆ. ಕಿರಣ್ ಹೇಳುತ್ತಾರೆ, " ನಮ್ಮ ಶಾಲೆಯಲ್ಲಿ ಸರಿಯಾದ ಕಸದ ಬುಟ್ಟಿಗಳು ಇಲ್ಲದ ಕಾರಣ ಪ್ಯಾಡ್ ಬದಲಾಯಿಸಲು ನಾನು ಮನೆಗೆ ಹೋಗುವ ವರೆಗೆ ಕಾಯಬೇಕಿದೆ. ನಾನು ಶಾಲೆಯಲ್ಲಿದ್ದಾಗ ಕೆಲವೊಮ್ಮೆ ಪ್ಯಾಡ್ ತುಂಬಿ ಹೋಗಿ ನನ್ನ ಸಮವಸ್ತ್ರದ ಮೇಲೆ ಕಲೆಯಾಗುತ್ತದೆ. ಶಾಲೆಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಶೌಚಾಲಯ ಕೂಡ ಸ್ವಚ್ಛವಾಗಿಲ್ಲ. ಇದನ್ನು ಭಾನುವಾರ ಮಾತ್ರ ಸ್ವಚ್ಛಗೊಳಿಸಲಾಗುತ್ತದೆ. ಸೋಮವಾರದಂದು ಮಾತ್ರ ಶೌಚಾಲಯ ಸ್ವಚ್ಛವಾಗಿರುತ್ತದೆ. ಉಳಿದ ದಿನಗಳಲ್ಲಿ ಗಲೀಜಾಗಿರುತ್ತದೆ" ಎಂದು ಕಿರಣ್ ಹೇಳುತ್ತಾಳೆ.
ಲಕ್ನೋ ನಗರದ ಸ್ಲಮ್‌ಗಳಲ್ಲಿ ವಾಸಿಸುವ ಯುವತಿಯರ ಮುಟ್ಟಿನ ಸಮಸ್ಯೆಗಳ ಕುರಿತಾದ ಜರ್ನಲ್ ಲೇಖನ ವೊಂದು ಈ ಸವಾಲುಗಳು ವೈಯಕ್ತಿಕ, ಸಾಮಾಜಿಕ ಮತ್ತು ಸಾಂಸ್ಥಿಕ ಸ್ಥರಗಳಲ್ಲಿವೆ ಎಂದು ವಿವರಿಸುತ್ತದೆ. “ವೈಯಕ್ತಿಕ ಮಟ್ಟದಲ್ಲಿ ಯುವತಿಯರಿಗೆ ಅರಿವಿನ ಕೊರತೆಯಿದೆ. ಸಾಮಾಜಿಕ ಕ್ಷೇತ್ರದಲ್ಲಿ ಯುವತಿಯರು ಮುಟ್ಟಿನ ಸುತ್ತ ಇರುವ ಮೂಢನಂಬಿಕೆಯ ಕಳಂಕವನ್ನು ಅನುಭವಿಸುತ್ತಾರೆ. ಅದನ್ನು ಚರ್ಚಿಸಲು ಅವರಿಗೆ ಅವಕಾಶಗಳೂ ಇರುವುದಿಲ್ಲ. ಮುಟ್ಟಿನ ಸಮಯದಲ್ಲಿ ಓಡಾಟ ಮತ್ತು ಇತರ ಚಟುವಟಿಕೆಗಳನ್ನು ಮಾಡಲು ನಿರ್ಬಂಧಗಳನ್ನು ಹಾಕಲಾಗಿದೆ. ಸಾಂಸ್ಥಿಕ ಮಟ್ಟದಲ್ಲಿ, ಉದಾಹರಣೆಗೆ ಶಾಲೆಯಲ್ಲಿ, ಬಾಗಿಲುಗಳಿಲ್ಲದ ಗಲೀಜಾಗಿರುವ ಶೌಚಾಲಯಗಳಿರುವುದರಿಂದ ಮುಟ್ಟಿನ ಸಂದರ್ಭದಲ್ಲಿ ಯುವತಿಯರಿಗೆ ಯಾವ ಬೆಂಬಲವೂ ಸಿಗುವುದಿಲ್ಲ,”ಎಂದು ಪತ್ರಿಕೆಯ ವರದಿ ಹೇಳುತ್ತದೆ.
ಲಖಿಂಪುರ ಖೇರಿ ಜಿಲ್ಲೆಯ ರಾಜಾಪುರ ಗ್ರಾಮದ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ರಿತು ಅವಸ್ತಿ, ನಿಜವಾದ ಸಮಸ್ಯೆ ಇರುವುದು ಸ್ವಚ್ಛತಾ ಸಿಬ್ಬಂದಿಗಳಲ್ಲಿಯೇ ಹೊರತು ಉತ್ತರ ಪ್ರದೇಶದ ಶಾಲೆಗಳ ಕಳಪೆ ಕಸ ವಿಲೇವಾರಿ ನಿರ್ವಹಣೆಯಲ್ಲಿ ಅಲ್ಲ ಎಂದು ಪ್ರತಿಪಾದಿಸುತ್ತಾರೆ. “ಇಲ್ಲಿನ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ನೀಡಲಾಗುತ್ತಿದೆ. ಶೌಚಾಲಯಗಳಲ್ಲಿ ಅವುಗಳನ್ನು ಸುಡುವ ಯಂತ್ರಗಳಿವೆ. ಆದರೆ ಸ್ವಚ್ಛತಾ ಸಿಬ್ಬಂದಿಗಳಿಂದಾಗಿ ಯಾವುದೂ ಸರಿಯಾಗಿಲ್ಲ. ಸರ್ಕಾರದಿಂದ ನೇಮಿಸಲ್ಪಟ್ಟ ಗುಡಿಸುವವರು ಗ್ರಾಮ ಪ್ರಧಾನರ [ಗ್ರಾಮ ಮುಖ್ಯಸ್ಥರು] ಅಡಿಯಲ್ಲಿ ಕೆಲಸ ಮಾಡುವುದರಿಂದ ಅವರ ಮಾತನ್ನು ಮಾತ್ರ ಕೇಳುತ್ತಾರೆ. ಶಾಲೆಗಳನ್ನು ನಿತ್ಯ ಶುಚಿಗೊಳಿಸಬೇಕು. ಆದರೆ ವಾರಕ್ಕೆ ಎರಡು ಬಾರಿ ಮಾತ್ರ ಮಾಡಲಾಗುತ್ತಿದೆ,”ಎಂದು ಅವರು ಹೇಳುತ್ತಾರೆ.
ಸೂರ್ಯನ ಮೊದಲ ಕಿರಣಗಳು ಕಿರಣ್‌ಳ ಮನೆಯ ಒಳಗೆ ಇರುವ ಮೂರು ಮರದ ಮಂಚಗಳನ್ನು ದಾಟಿ ಬರುತ್ತಿದ್ದಂತೆ ಅವಳು ತನ್ನ ಕೆಲಸಗಳನ್ನು ಮುಗಿಸಿ ಸಿದ್ಧಳಾಗಿದ್ದಾಳೆ. ಪೂನಂ ತನ್ನ ಮಗಳ ಕೂದಲನ್ನು ಮುದ್ದಾದ ಎರಡು ಜಡೆಗಳಾಗಿ ಕಟ್ಟಿ ರಿಬ್ಬನ್‌ಗಳಿಂದ ಸಿಂಗರಿಸುತ್ತಾರೆ. "ಕಿರಣ್, ಜಲ್ದಿ ಆ ಜಾ, ಮೈ ಯಾಹಿಂ ರುಕಿ ಹೂಂ [ಕಿರಣ್, ಬೇಗ ಬಾ, ನಾನು ಇಲ್ಲಿ ಕಾಯುತ್ತಿದ್ದೇನೆ]" ಎಂದು ರೀನಾ ಸಿಂಗ್ ಹೊರಗಿನಿಂದ ಕೂಗುತ್ತಾಳೆ. ಅವಳು ಕಿರಣ್‌ನ ಸಹಪಾಠಿ ಮತ್ತು ಇಬ್ಬರೂ ಜತೆಯಾಗಿ ಶಾಲೆಗೆ ಹೋಗುತ್ತಾರೆ. ಕಿರಣ್ ಹೊರಗೆ ಓಡಿ ಹೋಗಿ ಅವಸರದಿಂದ ತನ್ನ ಸ್ನೇಹಿತೆಯ ಜೊತೆಗೆ ಶಾಲೆಯ ಕಡೆಗೆ ನಡೆದಳು.
ಜಿಗ್ಯಾಸಾ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.
ಅನುವಾದಕರು: ಚರಣ್ ಐವರ್ನಾಡು