ನಾನು ಅವರನ್ನು ಭೇಟಿಯಾದ ಸಂದರ್ಭ ಅವರಿಗೆ 104 ವರ್ಷ. ಆಗಲೂ ಅವರು ತನ್ನನ್ನು ಕೋಣೆಯಿಂದ ಹೊರಗೆ ಕರೆ ತರಲು ಸಹಾಯ ಮಾಡುತ್ತಿದ್ದ ಕೈಗಳನ್ನು ಅಸಹನೆಯಿಂದ ಹಿಂದಕ್ಕೆ ತಳ್ಳುತ್ತಿದ್ದರು. ತನ್ನ ಊರುಗೋಲಿನ ಹೊರತು ಉಳಿದ ಎಲ್ಲಾ ಸಹಾಯಗಳನ್ನು ಅವರು ಅಂದು ನಿರಾಕರಿಸಿದ್ದರು. ಆ ವಯಸ್ಸಿನಲ್ಲೂ ಅವರು ನಡೆಯಬಲ್ಲವರಾಗಿದ್ದರು, ತಾನೇ ನಿಲ್ಲುತ್ತಿದ್ದ ಅವರು, ಯಾರ ಸಹಾಯವನ್ನೂ ಪಡೆಯದೆ ಕುಳಿತುಕೊಂಡಿದ್ದರು. ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಚೆಪುವಾ ಗ್ರಾಮದಲ್ಲಿನ ಅವರ ವಿಶಾಲ ಅವಿಭಕ್ತ ಕುಟುಂಬದ ತಲೆಮಾರುಗಳು ಬಹುತೇಕ ತಮ್ಮ ಭವಿಷ್ಯದ ಕೇಂದ್ರವಾಗಿದ್ದ ಈ ಗೃಹಿಣಿ ಮತ್ತು ರೈತ ಮಹಿಳೆಯನ್ನು ಅವಲಂಬಿಸಿದ್ದವು.
ಸ್ವಾತಂತ್ರ್ಯ ಹೋರಾಟಗಾರರಾದ ಭ(ಬಾ)ವಾನಿ ಮಹತೋ ಆಗಸ್ಟ್ 29-30, 2024ರ ಮಧ್ಯರಾತ್ರಿಯ ನಡುವೆ ನಿದ್ರೆಯಲ್ಲೇ ಶಾಂತವಾಗಿ ಈ ಲೋಕವನ್ನು ಬಿಟ್ಟು ತೆರಳಿದರು. ಅವರಿಗೆ 106 ವರ್ಷ ವಯಸ್ಸಾಗಿತ್ತು. ಇವರ ನಿಧನದೊಂದಿಗೆ ನನ್ನ ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ (ಪೆಂಗ್ವಿನ್ ನವೆಂಬರ್ 2022) ಪುಸ್ತಕದ 16 ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೇವಲ ನಾಲ್ವರು ಮಾತ್ರ ಈಗ ಜೀವಂತವಾಗಿದ್ದಾರೆ. ಹಾಗೆ ನೋಡಿದರೆ ಪರಿ ಸ್ವಾತಂತ್ರ್ಯ ಹೋರಾಟಗಾರರ ವಿಭಾಗದಲ್ಲಿ ದಾಖಲಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರರಲ್ಲೇ ಭವಾನಿ ಮಹತೋ ಭಿನ್ನರು. ಅವರು ನಮ್ಮೊಂದಿಗೆ ಗಂಟೆಗಳ ಕಾಲ ಮಾತನಾಡಿದ್ದರು. ಆದರೆ ಮಹಾಕಾವ್ಯದಂತಹ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಬಲವಾಗಿ ಹೇಳುವ ಮೂಲಕ ಅವರು ಹೋರಾಟದ ಕ್ರೆಡಿಟ್ ನಿರಾಕರಿಸಿದ್ದರು. 2022ರಲ್ಲಿ ನಾವು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು “ಸ್ವಾತಂತ್ರ್ಯ ಹೋರಾಟಕ್ಕೂ ನನಗೂ ಏನು ಸಂಬಂಧ? ಅಥವಾ ಅಂತಹ ಹೋರಾಟಗಳಲ್ಲಿ ನನ್ನ ಪಾತ್ರ ಏನಿದೆ?” ಎಂದು ಅವರು ನಮ್ಮನ್ನು ಕೇಳಿದರು. ಓದಿ: ಕ್ರಾಂತಿಗೆ ಕೈತುತ್ತು ನೀಡಿದ ಭವಾನಿ ಮಹತೊ








