ಅದೊಂದು ಅನಿರೀಕ್ಷಿತ ಮ್ಯಾಜಿಕ್ ಶೋ. ಫಾತಿಮಾ ತಮ್ಮ ಅಂಗಡಿಯ ಹಿಂದಿನಿಂದ ಹಳೆಯ ನೀಲಿ ಬಣ್ಣದ ಬಾಕ್ಸ್ ಒಂದನ್ನು ತಂದರು. ಅದರಲ್ಲಿ ನಿಧಿಯಿತ್ತು. ಒಂದೊಂದು ಕೂಡಾ ಕಲಾಕೃತಿಯಂತಿತ್ತು. ತೂತುಕುಡಿಯ ಕಡಲಿನಲ್ಲಿ ಬದುಕಿಕೊಂಡಿದ್ದ ದೊಡ್ಡ ಮೀನೊಂದು ಈಗ ಸೂರ್ಯನ ಬಿಸಿಲು, ಉಪ್ಪು ಮತ್ತು ಕೈಚಳಕ ಸೇರಿ ಸಂರಕ್ಷಣೆಗೊಂಡು ಒಣ ಮೀನಾಗಿ ಪರಿವರ್ತನೆ ಹೊಂದಿತ್ತು.
ಫಾತಿಮಾ ತಮ್ಮ ಕೈಯಲ್ಲಿ ಕಟ್ಟ ಪರೈ ಮೀನನ್ನು (ರಾಣಿ ಮೀನು) ತಮ್ಮ ಕೈಯಲ್ಲಿ ಹಿಡಿದಿದ್ದರು. ಅದು ಫಾತಿಮಾರ ಎತ್ತರದ ಅರ್ಧದಷ್ಟು ಎತ್ತರವಿದ್ದು ಅವರ ಕೈಯಳತೆಯ ಬಾಯಿಯನ್ನು ಹೊಂದಿತ್ತು. ಅದರ ಅಗಲ ಬಾಯಿಯಿಂದ ಅದರ ಬಾಲದ ತನಕ ಚೂಪಾದ ಚಾಕು ಬಳಸಿ ಕೊಯ್ದು, ಅದಕ್ಕೆ ಉಪ್ಪು ಹಾಕಿ ಒಣಗಿಸುತ್ತಾರೆ. ನಂತರ ಅದನ್ನು ಚುರುಕಾದ ಬಿಸಿಲಿನಲ್ಲಿ ಇರಿಸಲಾಗುತ್ತದೆ. ಈ ಬಿಸಿಲು ಮೀನು, ಮನುಷ್ಯರು ಹೀಗೆ ತನ್ನ ಕೆಳಗೆ ಬಂದ ಎಲ್ಲವನ್ನೂ ಒಣಗಿಸುತ್ತದೆ…
ಅವರ ಕೈಗಳು ಹಾಗೂ ಮುಖದ ಮೇಲಿನ ಸುಕ್ಕುಗಳೇ ಈ ಸುಡುವ ಬಿಸಿಲಿನ ಕತೆಯನ್ನು ಹೇಳುತ್ತವೆ. ಆದರೆ ಅವರು ಅದರತ್ತ ಗಮನ ಕೊಡದೆ ಇನ್ನೊಂದು ಮೀನನ್ನು ಕೊಯ್ದು ಒಣಗಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಂದಾನೊಂದು ಕಾಲದಲ್ಲಿ ಅವರ ಆಚಿ (ಅಜ್ಜಿ) ಉಪ್ಪು ಹಾಕಿ ಮೀನು ಒಣಗಿಸುವುದು ಮತು ಮೀನು ಮಾರುವ ಕೆಲಸವನ್ನು ಮಾಡುತ್ತಿದ್ದರು. ಅದು ಬೇರೆಯದೇ ನಗರವಾಗಿತ್ತು, ಆಗ ಅಲ್ಲಿ ಕಾಲುವೆ ಕೆಲವೇ ಅಡಿಗಳ ಅಗಲದಲ್ಲಿತ್ತು. ಅದರ ಪಕ್ಕದಲ್ಲೇ ಅವರ ಮನೆಯಿತ್ತು. 2004ರ ಸುನಾಮಿಯು ಅವರ ಬದುಕಿಗೆ ಚರಂಡಿ ಮತ್ತು ಕೆಸರನ್ನು ತಂದು ಸುರಿಯಿತು. ಜೊತೆಗೆ ಹೊಸ ಮನೆಯ ಭರವಸೆಯನ್ನೂ. ಆದರೆ ಹೀಗೆ ಯೋಜನಾಬದ್ಧವಾಗಿ ಕಟ್ಟಿದ ಮನೆ ಇಲ್ಲಿಂದ “ರೊಂಬಾ ದೂರಂ [ಬಹಳ ದೂರ]” ಎನ್ನತ್ತಾ ಕೈಯೆತ್ತಿ ತೋರಿಸುತ್ತಾರೆ ತಲೆ ಬಾಗಿಸಿಕೊಂಡು ಕುಳಿತಿದ್ದ ಫಾತಿಮಾ. ಬಸ್ಸಿನಲ್ಲಿ ಹೋದರೆ ಅದು ಇಲ್ಲಿಂದ ಅರ್ಧ ಗಂಟೆಯ ದಾರಿ. ಅವರು ಮೀನು ಖರೀದಿಗೆ ಇಲ್ಲಿಗೆ ಬರಲೇಬೇಕಿತ್ತು.
ಒಂಬತ್ತು ವರ್ಷಗಳ ನಂತರ ಫಾತಿಮಾ ಮತ್ತು ಅವರ ಸಹೋದರಿಯರು ತಮ್ಮ ಹಳೆಯ ಊರಾದ ಥೆರೇಸಪುರಂಗೆ ವಾಪಸ್ ಬಂದರು. ಇದು ತೂತುಕುಡಿ ಪಟ್ಟಣದ ತುದಿಯಲ್ಲಿದೆ. ಈಗಿನ ಅಂಗಡಿ ಮತ್ತು ಮನೆ ಅಗಲಗೊಂಡಿರುವ ಕಾಲುವೆಯ ಪಕ್ಕದಲ್ಲಿದೆ. ಇಲ್ಲಿ ನೀರು ನಿಧಾನಗತಿಯಲ್ಲಿ ಹರಿಯುತ್ತಿರುತ್ತದೆ. ಅಂದಿನ ಮಧ್ಯಾಹ್ನವು ನಿಶ್ಚಲವಾಗಿತ್ತು. ಒಂದಷ್ಟು ಉಪ್ಪು ಮತ್ತು ಬಹಳಷ್ಟು ಬಿಸಿಲು ಸೇರಿ ಮಹಿಳೆಯರ ಬದುಕನ್ನೂ ನಿಶ್ಚಲಗೊಳಿಸಿದ್ದವು.
ಫಾತಿಮಾ ಅವರಿಗೆ ಪ್ರಸ್ತುತ 64 ವರ್ಷ್. ಅವರಿಗೆ ಮದುವೆಯಾಗುವವರೆಗೂ ಅಜ್ಜಿಯೊಂದಿಗೆ ಮೀನಿನ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ನಂತರ ಗಂಡ ತೀರಿಕೊಂಡ ನಂತರ ಪುನಃ ಈ ವ್ಯವಹಾರಕ್ಕೆ ಮರಳಿದರು. ಅವರ ಪತಿ ತೀರಿಕೊಂಡು ಎರಡು ದಶಕಗಳು ಕಳೆದಿವೆ. ತಾನು ಸಣ್ಣವಳಿದ್ದಾಗ ಬಲೆಯಲ್ಲಿ ಮೀನುಗಳು ಸಾವು-ಬದುಕಿನ ನಡುವೆ ಬಡಿದಾಡುತ್ತಿದ್ದವು. ಮೀನುಗಳು ಆಗೆಲ್ಲ ಅಷ್ಟು ತಾಜಾ ಸಿಗುತ್ತಿದ್ದವು. ಈಗ 56 ವರ್ಷಗಳ ನಂತರ ಸಿಗುತ್ತಿರುವುದೆಲ್ಲವೂ ಬರೀ ಐಸ್ ಮೀನು ಎಂದು ಅವರು ದೂರುತ್ತಾರೆ. ಈಗ ದೊಡ್ಡ ದೊಡ್ಡ ಮೀನುಗಳ ವ್ಯವಹಾರ ಲಕ್ಷಗಳಲ್ಲಿರುತ್ತದೆ. “ಆಗಿನ ಕಾಲದಲ್ಲಿ ನಾವು ಆಣೆ, ಪೈಸೆಗಳಲ್ಲಿ ವ್ಯವಹಾರ ಮಾಡುತ್ತಿದ್ದೆವು. ಆಗ ನೂರು ರೂಪಾಯಿಯೆಂದರೆ ಬಹಳ ದೊಡ್ಡ ಮೊತ್ತವಾಗಿತ್ತು. ಈಗಿನ ಸಾವಿರ, ಲಕ್ಷಗಳಿಗೆ ಸಮವಾಗಿತ್ತು.”



























