ʼಯಾರಿಗೆ ಗೊತ್ತಿತ್ತು, ತುರ್ತು ಪರಿಸ್ಥಿತಿ ಹೊಸ ವೇಷದಲ್ಲಿ ಮರಳುತ್ತದೆಯೆಂದು
ನಿರಂಕುಶ ಪ್ರಭುತ್ವಕ್ಕೆ ಪ್ರಜಾಪ್ರಭುತ್ವವೆನ್ನುವ ಹೆಸರಿಡಲಾಗುತ್ತದೆಯೆಂದುʼ
ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಮತ್ತು ಭಿನ್ನಮತೀಯರನ್ನು ಸುಮ್ಮನಾಗಿಸುವ ಅಥವಾ ಬಂಧಿಸುವ ಅಥವಾ ಎರಡನ್ನೂ ಮಾಡಲಾಗುವ ಈ ಸಮಯದಲ್ಲಿ, ರೈತರು ಮತ್ತು ಕೃಷಿ ಕಾರ್ಮಿಕರು - ಕಿಸಾನ್ ಮತ್ತು ಮಜ್ದೂರ್ - ಕೆಂಪು ಮತ್ತು ಹಸಿರು ಮತ್ತು ಹಳದಿ ಧ್ವಜಗಳನ್ನು ಎತ್ತರಕ್ಕೆ ಹಾರಿಸುತ್ತಾ ರಾಮ್ ಲೀಲಾ ಮೈದಾನದತ್ತ ನಡೆಯುತ್ತಿರುವಾಗ ಪ್ರತಿಭಟನಾ ಹಾಡಿನ ಈ ಸಾಲುಗಳು ಮತ್ತೊಮ್ಮೆ ನಿಜವಾದವು.
ಎಐಕೆಎಸ್ (ಅಖಿಲ ಭಾರತ ಕಿಸಾನ್ ಸಭಾ), ಬಿಕೆಯು (ಭಾರತೀಯ ಕಿಸಾನ್ ಯೂನಿಯನ್), ಎಐಕೆಕೆಎಂಎಸ್ (ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಘಟನ್) ಮತ್ತು ಇತರ ಸಂಘಟನೆಗಳ ರೈತರು ಮಾರ್ಚ್ 14, 2024ರಂದು ಎಸ್‌ಕೆಎಂ (ಸಂಯುಕ್ತ ಕಿಸಾನ್ ಮೋರ್ಚಾ) ಏಕೀಕೃತ ವೇದಿಕೆಯ ಅಡಿಯಲ್ಲಿ ನಡೆದ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ಸಭೆಯಲ್ಲಿ ಭಾಗವಹಿಸಲು ಐತಿಹಾಸಿಕ ಮೈದಾನದಲ್ಲಿ ಸೇರಿದ್ದರು.
"ಈ ಹಿಂದೆ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ, ಸರ್ಕಾರವು ಕೆಲವು ಭರವಸೆಗಳನ್ನು ನೀಡಿತ್ತು, ಆದರೆ ಅವು ಇನ್ನೂ ಈಡೇರಿಲ್ಲ. ಈಗ ಅವರು ಆ ಭರವಸೆಗಳನ್ನು ಈಡೇರಿಸಬೇಕು. ವರ್ನಾ ಹಮ್ ಲಡೇಂಗೆ, ಔರ್ ಲಡ್ತೇ ರಹೇಂಗೆ [ಅವರು ಈಡೇರಿಸದಿದ್ದರೆ, ನಾವು ಹೋರಾಡುತ್ತೇವೆ ಮತ್ತು ಹೋರಾಟವನ್ನು ಮುಂದುವರಿಸುತ್ತೇವೆ]" ಎಂದು ಕಲಾನ್ ಗ್ರಾಮದ ರೈತ ಮಹಿಳೆ ಪ್ರೇಮಮತಿ ಪರಿಗೆ ತಿಳಿಸಿದರು. ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 ಈ ಮೂರು ಕಾನೂನುಗಳನ್ನು ಅವರು ಉಲ್ಲೇಖಿಸುತ್ತಿದ್ದರು.
"ನಾವು ಮೂರು ವರ್ಷಗಳ ಹಿಂದೆ ಪ್ರತಿಭಟನೆಗಾಗಿ ಇಲ್ಲಿಗೆ ಬಂದಿದ್ದೆವು" ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಿಂದ ಮಹಾಪಂಚಾಯತ್ ಸಭೆಗೆ ಆಗಮಿಸಿದ ಮೂವರು ಮಹಿಳೆಯರಲ್ಲಿ ಪ್ರೇಮಮತಿ ಕೂಡ ಒಬ್ಬರು. ಅವರು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. "ಈ ಸರ್ಕಾರವು ಅಭಿವೃದ್ಧಿ ಹೊಂದುತ್ತಿದೆ, ಆದರೆ ಅವರು ರೈತರನ್ನು ನಾಶ ಮಾಡುತ್ತಿದ್ದಾರೆ" ಎಂದು ಅವರು ಆಕ್ರೋಶದಿಂದ ಹೇಳಿದರು.
ಪರಿ ಮಾತನಾಡಿಸಿದ ಎಲ್ಲಾ ಮಹಿಳೆಯರು 4-5 ಎಕರೆ ಭೂಮಿಯಲ್ಲಿ ಕೆಲಸ ಮಾಡುವ ಸಣ್ಣ ರೈತ ಮಹಿಳೆಯರು. ಮಹಿಳಾ ರೈತರು ಮತ್ತು ಕಾರ್ಮಿಕರು ಭಾರತದಲ್ಲಿ ಶೇಕಡಾ 65ಕ್ಕಿಂತ ಹೆಚ್ಚು ಕೃಷಿ ಕೆಲಸಗಳನ್ನು ಮಾಡುತ್ತಾರೆ, ಆದರೆ ಕೇವಲ 12 ಪ್ರತಿಶತದಷ್ಟು ಮಹಿಳಾ ರೈತರು ಮಾತ್ರವೇ ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿದ್ದಾರೆ.
















