“2020ರ ಲಾಕ್‌ಡೌನ್ ಸಮಯದಲ್ಲಿ ನಮಗೆ ಸೇರಿದ 1.20 ಎಕರೆ ಜಾಗಕ್ಕೆ ಬೇಲಿ ಹಾಕಲು ಯಾರೋ ಬಂದಿದ್ದರು” 30 ಫಗುವಾ ಉರಾಂವ್ ಹೇಳಿದರು. ಅವರು ಹೀಗೆ ಹೇಳುವಾಗ ನಮಗೆ ತೆರೆದ ಭೂಮಿಯ ಸುತ್ತ ನಿರ್ಮಿಸಲಾಗಿದ್ದ ಇಟ್ಟಿಗೆ ಗೋಡೆಯನ್ನು ತೋರಿಸುತ್ತಿದ್ದರು. ಅಂದು ನಾವು ಖುಂಟಿ ಜಿಲ್ಲೆಯ ದುಮರಿ ಗ್ರಾಮದಲ್ಲಿದ್ದೆವು. ಇಲ್ಲಿನ ಹೆಚ್ಚಿನ ಸಂಖ್ಯೆಯ ಜನರು ಉರಾಂವ್ ಆದಿವಾಸಿ ಸಮುದಾಯಕ್ಕೆ ಸೇರಿದವರು. “ನಂತರ ಅವರು ಈ ಭೂಮಿ ಬೇರೊಬ್ಬರಿಗೆ ಸೇರಿದ್ದು, ನಿಮ್ಮದಲ್ಲ ಎಂದು ಅದನ್ನು ಅಳೆಯಲು ಪ್ರಾರಂಭಿಸಿದರು."
"ಈ ಘಟನೆ ನಡೆದ ಸುಮಾರು 15 ದಿನಗಳ ನಂತರ, ನಾವು ಊರಿನಿಂದ 30 ಕಿಲೋಮೀಟರ್ ದೂರದಲ್ಲಿರುವ ಖುಂಟಿ ನಗರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಬಳಿಗೆ ಹೋದೆವು. ಅಲ್ಲಿಗೆ ಹೋಗಲು ನಮಗೆ ಪ್ರತಿ ಪ್ರಯಾಣಕ್ಕೆ 200 ರೂಪಾಯಿಗಿಂತಲೂ ಹೆಚ್ಚು ಖರ್ಚಾಗುತ್ತದೆ. ಅಲ್ಲಿಗೆ ಹೋದ ನಮಗೆ ವಕೀಲರೊಬ್ಬರ ಸಹಾಯವನ್ನೂ ಪಡೆಯಬೇಕಾಯಿತು. ಆ ವ್ಯಕ್ತಿ ಈಗಾಗಲೇ ನಮ್ಮಿಂದ 2,500 ರೂ.ಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.
“ಇದಕ್ಕೂ ಮೊದಲು ನಾವು ನಮ್ಮ ಬ್ಲಾಕಿಗೆ ಸೇರಿದ ವಲಯ ಕಚೇರಿಯನ್ನು ಸಂಪರ್ಕಿಸಿದ್ದೆವು. ನಂತರ ಪೊಲೀಸ್ ಠಾಣೆಗೂ ಈ ವಿಷಯವಾಗಿ ದೂರು ನೀಡಲೆಂದು ಹೋಗಿದ್ದೆವು. ಭೂಮಿಯ ಮೇಲಿನ ನಮ್ಮ ಹಕ್ಕನ್ನು ಬಿಟ್ಟುಕೊಡುವಂತೆ ನಮಗೆ ಬೆದರಿಕೆಗಳು ಬರುತ್ತಿದ್ದವು. ಖುಂಟಿಯ ಕರ್ರಾ ಬ್ಲಾಕ್‌ನ ಬಲಪಂಥೀಯ ಸಂಘಟನೆಯೊಂದರ ಸದಸ್ಯರೊಬ್ಬರು ನಮಗೆ ಬೆದರಿಕೆಯನ್ನೂ ಹಾಕಿದ್ದರು. ಆದರೆ ಇಷ್ಟೆಲ್ಲ ನಡೆದರೂ ಕೋರ್ಟಿನಲ್ಲಿ ಈ ಕುರಿತು ಒಂದು ವಿಚಾರಣೆಯೂ ನಡೆಯಲಿಲ್ಲ. ಈಗ ನಮ್ಮ ಜಾಗದಲ್ಲಿ ಈ ಗೋಡೆ ಎದ್ದು ನಿಂತಿದೆ. ಔರ್ ಹಮ್ ದೋ ಸಾಲ್ ಸೇ ಇಸೀ ತರಹ್ ದೌಡ್-ಧೂಪ್ ಕರ್ ರಹೇ ಹೈ [ಮತ್ತೆ ನಾವು ಕಳೆದ ಎರಡು ವರ್ಷಗಳಿಂದ ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿದ್ದೇವೆ].
“ಈ ಭೂಮಿಯನ್ನು 1930ರಲ್ಲಿ ನನ್ನ ಅಜ್ಜ ಲೂಸಾ ಉರಾಂವ್ ಅವರು ಭೂಮಾಲಿಕ ಬಾಲಚಂದ್ ಸಾಹು ಎನ್ನುವವರಿಂದ ಖರೀದಿಸಿದ್ದರು. ಅಂದಿನಿಂದಲೂ ನಾವು ಈ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ.ಈ ಜಾಗಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ 1930ರಿಂದ 2015ರವರೆಗಿನ ತೆರಿಗೆ ರಶೀದಿಗಳಿವೆ. ಅದರ ನಂತರ [2106ರಲ್ಲಿ] ಆನ್ ಲೈನ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು ಮತ್ತು ಆನ್ ಲೈನ್ ದಾಖಲೆಗಳಲ್ಲಿ ನಮ್ಮ ತುಂಡು ಭೂಮಿ [ಮಾಜಿ] ಮಾಲಿಕರ ವಂಶಸ್ಥರ ಹೆಸರಿನಲ್ಲಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವ ಕುರಿತು ನಮಗೆ ಕಿಂಚಿತ್ತೂ ಮಾಹಿತಿಯಿಲ್ಲ.”
ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಸೇಷನ್ ಪ್ರೋಗ್ರಾಮ್ (ಡಿಐಎಲ್‌ಆರ್‌ಎಂಪಿ) ಯೋಜನೆಯನ್ನು ದೇಶದ ಭೂದಾಖಲೆಗಳನ್ನು ಡಿಜಿಟಲೈಸ್ ಮಾಡಿ, ಅವುಗಳ ಕೇಂದ್ರೀಕೃತ ನಿರ್ವಹಣೆಗಾಗಿ ಡೇಟಾ ಬೇಸ್ ನಿರ್ಮಿಸುವ ಉದ್ದೇಶದಿಂದ ಪರಿಚಯಿಸಿತ್ತು. ಇದೇ ಯೋಜನೆಯಿಂದಾಗಿ ಈಗ ಫಗುವಾ ಉರಾಂವ್ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. 2016ರಲ್ಲಿ ರಾಜ್ಯ ಸರ್ಕಾರವು ಭೂದಾಖಲೆಗಳನ್ನು ಡಿಜಿಟಲೈಸ್ ಮಾಡುವ ಉದ್ದೇಶದಿಂದ ಭೂಮಿಯ ವಿವರಗಳ ಕುರಿತಾದ ಜಿಲ್ಲಾವಾರು ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಲ್ಯಾಂಡ್ ಬ್ಯಾಂಕ್ ಪೋರ್ಟಲ್ ಎನ್ನುವ ಯೋಜನೆಯನ್ನು ಉದ್ಘಾಟಿಸಿತು. “ಭೂಮಿ/ಆಸ್ತಿಯ ವಿವಾದಗಳ ಸಾಧ್ಯತೆಯನ್ನು ಕಡಿಮೆ ಮಾಡುವುದು ಮತ್ತು ಭೂ ದಾಖಲೆಗಳ ನಿರ್ವಣೆಯಲ್ಲಿ ಪಾರದರ್ಶಕತೆ ತರುವುದು ಈ ಯೋಜನೆಯ ಉದ್ದೇಶವಾಗಿತ್ತು.”
ಆದರೆ ಫಗುವಾ ಮತ್ತು ಇನ್ನೂ ಹಲವರ ಬಾಳಿನಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ಮಾತ್ರವೇ ಈ ಯೋಜನೆ ಯಶಸ್ವಿಯಾಯಿತು.
ಆನ್‌ಲೈನಿನಲ್ಲಿ ನಮ್ಮ ಭೂಮಿಯ ಸ್ಥಿತಿಗತಿ ತಿಳಿಯಲೆಂದು ನಾವು ಪ್ರಗ್ಯಾ ಕೇಂದ್ರಕ್ಕೆ ಹೋದೆವು. ಈ ಕೇಂದ್ರವು ಜಾರ್ಖಂಡ್ ರಾಜ್ಯ ಸರ್ಕಾರದ ಸಾಮಾನ್ಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಅಂಗಡಿ. ಇದನ್ನು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ರಚಿಸಲಾಗಿದೆ, ಇದು ಗ್ರಾಮ ಪಂಚಾಯಿತಿಯಲ್ಲಿ ಶುಲ್ಕ ಪಡೆದು ಸಾರ್ವಜನಿಕ ಸೇವೆಗಳನ್ನು ಒದಗಿಸುತ್ತದೆ. “ಅಲ್ಲಿದ್ದ ಆನ್ಲೈನ್ ದಾಖಲೆಗಳ ಪ್ರಕಾರ ನಾಗೇಂದ್ರ ಸಿಂಗ್ ಎನ್ನುವವರು ಭೂಮಿಯ ಪ್ರಸ್ತುತ ಮಾಲಿಕರು. ವರಿಗಿಂತ ಮೊದಲು ಸಂಜಯ್ ಸಿಂಗ್ ಇದರ ಮಾಲೀಕರಾಗಿದ್ದರು. ಅವರು ಭೂಮಿಯನ್ನು ಬಿಂದು ದೇವಿ ಎನ್ನುವ ಮಹಿಳೆಗೆ ಮಾರಾಟ ಮಾಡಿದ್ದರು ಮತ್ತು ಆ ಮಹಿಳೆ ಅದನ್ನು ನಾಗೇಂದ್ರ ಸಿಂಗ್ ಅವರಿಗೆ ಮಾರಾಟ ಮಾಡಿದ್ದರು.
“ನಮಗೆ ಜಾಗವನ್ನು ಮಾರಿದವರ ವಂಶಸ್ಥರು ಎರಡು ಮೂರು ಬಾರಿ ಅದೇ ಭೂಮಿಯನ್ನು ನಮಗೆ ತಿಳಿಯದಂತೆ ಕೊಳ್ಳುವುದು ಹಾಗೂ ಮಾರುವುದನ್ನು ಮಾಡಿದಂತಿದೆ. ಆದರೆ ನಮ್ಮ ಬಳಿ ಆದರೆ 1930 ರಿಂದ 2015 ರವರೆಗೆ ಭೂಮಿಗೆ ಆಫ್ಲೈನ್ ರಸೀದಿಗಳನ್ನು ಹೊಂದಿರುವಾಗ ಇದು ಹೇಗೆ ಸಾಧ್ಯ?” ನಾವು ಇಲ್ಲಿಯವರೆಗೆ 20,000 ರೂಪಾಯಿಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದೇವೆ. ಈಗಲೂ ಸಮಸ್ಯೆಯ ಪರಿಹಾರಕ್ಕಾಗಿ ಓಡಾಡುತ್ತಿದ್ದೇವೆ. ಹಣ ಹೊಂದಿಸಲು ಮನೆಯಲ್ಲಿದ್ದ ಆಹಾರ ಧಾನ್ಯಗಳನ್ನು ಮಾರಿದ್ದೇವೆ. “ಈಗ ನಮ್ಮ ಜಾಗದಲ್ಲಿ ಗೋಡೆ ಎದ್ದಿರುವುದನ್ನು ನೋಡಿದರೆ ನಾವು ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುತ್ತಿದೆ. ಈ ಹೋರಾಟದಲ್ಲಿ ನಮ್ಮ ಸಹಾಯಕ್ಕೆ ಯಾರು ಬರಬಹುದೆನ್ನುವುದು ತಿಳಿಯದೆ ನಾವು ಕಂಗಾಲಾಗಿದ್ದೇವೆ.”







