"ನಾವು ನಮ್ಮ ಟ್ರ್ಯಾಕ್ಟರನ್ನು ತ್ರಿವರ್ಣದಿಂದ ಅಲಂಕರಿಸಿದ್ದೇವೆ ಏಕೆಂದರೆ ನಾವು ನಮ್ಮ ರಾಷ್ಟ್ರವನ್ನು ಪ್ರೀತಿಸುತ್ತೇವೆ" ಎಂದು ಶಂಶೇರ್ ಸಿಂಗ್ ಹೇಳುತ್ತಾರೆ. ಅವರ ಟ್ರ್ಯಾಕ್ಟರ್ ಅನ್ನು ಭಾರತೀಯ ಧ್ವಜದ ಬಣ್ಣಗಳಲ್ಲಿ ರಿಬ್ಬನ್, ಬಲೂನ್‌ಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿದೆ. "ಕೃಷಿ ನಮ್ಮ ತಾಯಿನಾಡಿನಂತೆಯೇ ನಮಗೆ ಪ್ರಿಯವಾದುದು" ಎಂದು ಅವರು ಹೇಳುತ್ತಾರೆ. “ನಾವು ಭೂಮಿಯನ್ನು ತಿಂಗಳುಗಟ್ಟಲೆ ಕೃಷಿ ಮಾಡುತ್ತೇವೆ, ನಮ್ಮ ತಾಯಂದಿರು ನಮ್ಮನ್ನು ನೋಡಿಕೊಳ್ಳುವ ಹಾಗೆ ನಾವು ಬೆಳೆಗಳನ್ನು ನೋಡಿಕೊಳ್ಳುತ್ತೇವೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಟ್ರಾಕ್ಟರನ್ನು ತಾಯಿ ನೆಲದಂತೆ ಅಲಂಕರಿಸಿದ್ದೇವೆ.”
ದೆಹಲಿಯ ಪ್ರತಿಭಟನಾ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ರೈತರು ತಮ್ಮ ಟ್ರಾಕ್ಟರುಗಳನ್ನು ವಿವಿಧ ವಿಷಯಗಳಲ್ಲಿ ಸಿದ್ಧಪಡಿಸುತ್ತಿದ್ದಾರೆ. ಈ ರ‍್ಯಾಲಿಯನ್ನು ವಿವಿಧ ರಾಜ್ಯಗಳು ಮತ್ತು ಥೀಮ್‌ಗಳನ್ನು ಪ್ರತಿನಿಧಿಸುವ ಫ್ಲೋಟ್‌ಗಳೊಂದಿಗೆ ರಾಜಧಾನಿಯಲ್ಲಿ ವಾರ್ಷಿಕ ಗಣರಾಜ್ಯೋತ್ಸವದ ಮೆರವಣಿಗೆಯಂತೆ ವರ್ಣರಂಜಿತ ಮತ್ತು ಅರ್ಥಪೂರ್ಣವಾಗಿಸಲು ಅವರು ಬಯಸುತ್ತಾರೆ. ಹೂವುಗಳು, ಧ್ವಜಗಳು ಮತ್ತು ಟ್ಯಾಬ್ಲೋಗಳಿಂದ ಅಲಂಕೃತಗೊಂಡ ಟ್ರಾಕ್ಟರುಗಳು ಹೊಸ ನೋಟವನ್ನು ಪಡೆದಿವೆ. ರೈತರು ಮತ್ತು ಕೃಷಿ-ಒಕ್ಕೂಟದಿಂದ ನೇಮಕಗೊಂಡ ತಂಡಗಳು ಕಳೆದ ಕೆಲವು ದಿನಗಳಿಂದ ಜನವರಿ 26ಕ್ಕೆ ಸಮಯಕ್ಕೆ ಸರಿಯಾಗಿ ಸಿದ್ಧಗೊಳ್ಳಲು ತಯಾರಿ ನಡೆಸಿವೆ.
"ಗೌರಿ ನಂಗಲ್‌ನಲ್ಲಿರುವ ನನ್ನ ಮನೆಯಿಂದ [ಟ್ರ್ಯಾಕ್ಟರ್] ಓಡಿಸಿಕೊಂಡು ಬರಲು ಎರಡು ದಿನಗಳು ಬೇಕಾಯಿತು" ಎಂದು 53 ವರ್ಷದ ಶಂಶೇರ್ ಹೇಳುತ್ತಾರೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ರೈತರ ಬೇಡಿಕೆಗಳನ್ನು ಪುನರುಚ್ಚರಿಸುವ ಮೆರವಣಿಗೆಯಲ್ಲಿ ಭಾಗವಹಿಸಲು ಅವರು ಹರಿಯಾಣ-ದೆಹಲಿ ಗಡಿಯಲ್ಲಿರುವ ಟಿಕ್ರಿಗೆ ಪಂಜಾಬ್‌ನ ಅಮೃತಸರ ಜಿಲ್ಲೆಯ ಈ ಊರಿನ ಇತರ 20 ರೈತರೊಂದಿಗೆ ಬಂದಿದ್ದಾರೆ.




