ಇಪ್ಪತ್ತು ವರ್ಷಗಳ ಹಿಂದೆ ಮೋರಿಗಳೆಲ್ಲವೂ ಸ್ವಚ್ಛವಾಗಿದ್ದಾಗ; "ನೀರು ಗಾಜಿನಂತೆ ನಿರ್ಮಲವಾಗಿತ್ತು. ಅದರಲ್ಲಿ (ನದಿಯ ತಳದಲ್ಲಿ) ಬಿದ್ದ ನಾಣ್ಯವು ಮೇಲಿನಿಂದ ಸ್ಪಷ್ಟವಾಗಿ ಕಾಣುತ್ತಿತ್ತಲ್ಲದೆ, ಯಮುನೆಯ ನೀರನ್ನು ನೇರವಾಗಿ ಕುಡಿಯಬಹುದಿತ್ತು", ತನ್ನ ಮಾತಿಗೆ ಒತ್ತು ನೀಡಲೋ ಎಂಬಂತೆ ಅಂಗೈಯಿಂದ ಕಲುಷಿತ ನೀರನ್ನು ಮೊಗೆದು, ಅದನ್ನು ಬಾಯಿಯ ಬಳಿಗೆ ತಂದ ಬೆಸ್ತ ರಮನ್ ಹಲ್ದರ್ ಗಲಿಬಿಲಿಗೊಂಡ ನಮ್ಮನ್ನು ನೋಡಿ, ವಿಷಾದದ ನಗುವಿನೊಂದಿಗೆ ತಮ್ಮ ಬೆರಳುಗಳ ಸಂದಿಯಿಂದ ನೀರನ್ನು ಹೊರಚೆಲ್ಲಿದರು.
ಇಂದಿನ ಯಮುನೆಯಲ್ಲಿನ ಪ್ಲಾಸ್ಟಿಕ್‍ಗಳು, ತೆಳು ಲೋಹದ ಮುಚ್ಚುಹಾಳೆಗಳು, ಕೊಚ್ಚೆ, ದಿನಪತ್ರಿಕೆಗಳು, ಮುದುಡಿದ ಗಿಡಗಂಟಿಗಳು, ಕಾಂಕ್ರೀಟಿನ ಮುರುಕುಚೂರುಗಳು, ಬಟ್ಟೆಯ ತುಣುಕುಗಳು, ಕೆಸರು, ಕೊಳೆತ ತಿಂಡಿತಿನಿಸುಗಳು, ತೇಲುತ್ತಿರುವ ತೆಂಗಿನಕಾಯಿಗಳು, ರಾಸಾಯನಿಕದ ನೊರೆ ಮತ್ತು ಗಂಟೆ ಹೂವಿನ ಜೊಂಡು ಇತ್ಯಾದಿಗಳು ರಾಜಧಾನಿಯ ಭೌತಿಕ ಹಾಗೂ ಕಾಲ್ಪನಿಕ ಉಪಭೋಗದ ಕರಾಳ ಪ್ರತಿಬಿಂಬಗಳಾಗಿವೆ.
ಕೇವಲ 22 ಕಿ.ಮೀ. ವ್ಯಾಪ್ತಿಯ (ಶೇ. 1.6) ಯಮುನೆಯು ರಾಷ್ಟ್ರೀಯ ರಾಜಧಾನಿಯ ಭೂಪ್ರದೇಶದಲ್ಲಿ ಹರಿಯುತ್ತದೆ. ಆದರೆ ನದಿಯ ಈ ಚಿಕ್ಕ ಹರಿವಿನ ವ್ಯಾಪ್ತಿಯಲ್ಲಿ, ಇಡೀ 1,376 ಕಿ.ಮೀ. ವ್ಯಾಪ್ತಿಯ ಶೇ. 80 ರಷ್ಟು ಕಸ ಹಾಗೂ ವಿಷಕಾರಕ ವಸ್ತುಗಳನ್ನು ಸುರಿಯಲಾಗುತ್ತದೆ. ಇದನ್ನು ಗುರುತಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ [ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎನ್. ಬಿ. ಟಿ)] ಮೇಲ್ವಿಚಾರಣಾ ಸಮಿತಿಯ ವರದಿಯು, 2018ರಲ್ಲಿ ದೆಹಲಿಯ ಈ ನದಿಯನ್ನು ‘ಹೊಲಸು ನೀರನ್ನು ಸಾಗಿಸುವ ಕಾಲುವೆ’ ಎಂಬುದಾಗಿ ಘೋಷಿಸಿತು.
ಕಳೆದ ವರ್ಷ ದೆಹಲಿಯಲ್ಲಿನ ನದಿಯ ದಕ್ಷಿಣದ ಹರಿವಿನ ಕಾಲಿಂದಿ ಕುಂಜ್ ಘಾಟ್‍ನಲ್ಲಿ ಸಾವಿರಾರು ಮೀನುಗಳು ಸಾವಿಗೀಡಾಗಿರುವುದು ಕಂಡುಬಂದಿತು. ದೆಹಲಿಯಲ್ಲಿನ ನದಿಯ ಹರಿವಿನಲ್ಲಿ ಇತರೆ ಜಲಸಂಬಂಧಿತ ಸಂಗತಿಗಳು ವಾರ್ಷಿಕವಾಗಿ ಘಟಿಸತೊಡಗಿವೆ.
"ನದಿಯ ಪರಿಸರ ವ್ಯವಸ್ಥೆಯು ಉಳಿವಿಗೆ, ನೀರಿನಲ್ಲಿನ ಆಮ್ಲಜನಕದ ಪ್ರಮಾಣದ ಮಟ್ಟವು 6 ಅಥವ ಅದಕ್ಕಿಂತಲೂ ಹೆಚ್ಚಿರತಕ್ಕದ್ದು. ಮೀನುಗಳಿಗೆ ಕನಿಷ್ಠ 4-5ರಷ್ಟು ನೀರಿನಲ್ಲಿನ ಆಮ್ಲಜನಕದ ಪ್ರಮಾಣವು ಅವಶ್ಯ", ಎಂಬುದಾಗಿ ಚಿಕಾಗೋ ವಿಶ್ವವಿದ್ಯಾನಿಲಯದ ಟಾಟಾ ಸೆಂಟರ್ ಫಾರ್ ಡೆವಲಪ್‍ಮೆಂಟ್ ನ ವಾಟರ್ ಟು ಕ್ಲೌಡ್ ಯೋಜನೆಯ ನಿರ್ದೇಶಕರಾದ ಪ್ರಿಯಾಂಕ ಹಿರಾನಿಯವರು ತಿಳಿಸುತ್ತಾರೆ. ಈ ಯೋಜನೆಯು ನದಿಗಳ ವಾಸ್ತವಿಕ ಮಾಲಿನ್ಯವನ್ನು ತಿಳಿಯಪಡಿಸುತ್ತದೆ.











