"ಪ್ರಸ್ತುತ ಪರಿಸ್ಥಿತಿ ಹಾಗಿಲ್ಲ. ಈಗ ಇಲ್ಲಿನ ಪರಿಸ್ಥಿತಿ ಬದಲಾಗಿದೆ. ಇಂದಿನ ಮಹಿಳೆಯರಿಗೆ ಗರ್ಭನಿರೋಧಕದ ಯಾವ ವಿಧಾನಗಳು ಲಭ್ಯವಿವೆ ಎಂಬುದು ಚೆನ್ನಾಗಿ ತಿಳಿದಿದೆ,” ಎಂದು ಸೂರ್ಯನ ಬೆಳಕು ಬೀಳುತ್ತಿದ್ದ ತನ್ನ ಮನೆಯ ವರಾಂಡದಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದ ಸಲ್ಹಾ ಖಾತೂನ್ ಹೇಳಿದರು. ಅವರ ಮನೆಗೆ ಇಟ್ಟಿಗೆ ಬಳಸಿ ಗಾರೆಯಿಂದ ಕಟ್ಟಲಾಗಿತ್ತು. ಅದರ ಗೋಡೆಗಳಿಗೆ ಸಮುದ್ರ ಹಸಿರು ಬಣ್ಣ ಬಳಿಯಲಾಗಿತ್ತು.
ಅವರು ಇದನ್ನು ತಮ್ಮ ಅನುಭವದ ಮೂಲಕವೇ ಹೇಳುತ್ತಿದ್ದಾರೆ. ಕಳೆದ ಒಂದು ದಶಕದಿಂದ, ಸಲ್ಹಾ, ತನ್ನ ಸೋದರಳಿಯನ ಪತ್ನಿ ಶಮಾ ಪರ್ವೀನ್ ಜೊತೆಗೂಡಿ, ಬಿಹಾರದ ಮಧುಬನಿ ಜಿಲ್ಲೆಯ ಹಸನ್ ಪುರ ಗ್ರಾಮದಲ್ಲಿ ಅನೌಪಚಾರಿಕವಾಗಿ ನಿಯೋಜಿಸಲ್ಪಟ್ಟ ಕುಟುಂಬ ಯೋಜನೆ ಮತ್ತು ಮುಟ್ಟಿನ ನೈರ್ಮಲ್ಯ ಸಲಹೆಗಾರರಾಗಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಹೆಚ್ಚಾಗಿ ಗರ್ಭನಿರೋಧಕ ಕುರಿತು ಪ್ರಶ್ನೆಗಳು ಮತ್ತು ವಿನಂತಿಗಳೊಡನೆ ಅವರನ್ನು ಸಂಪರ್ಕಿಸುತ್ತಾರೆ. ಅವರು ಕೇಳುವ ಪ್ರಶ್ನೆಗಳು ಇಬ್ಬರು ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವುದು ಹೇಗೆ, ಲಸಿಕೆ ಯಾವ ಸಮಯದಿಂದ ಪ್ರಾರಂಭವಾಗುತ್ತದೆ ಈ ರೀತಿಯಲ್ಲಿರುತ್ತವೆ. ಮತ್ತು ಕೆಲವೊಮ್ಮೆ ಮಹಿಳೆಯರು ಅಗತ್ಯವಿದ್ದಲ್ಲಿ ಗರ್ಭನಿರೋಧಕ ಚುಚ್ಚುಮದ್ದುಗಳನ್ನು ರಹಸ್ಯವಾಗಿ ಪಡೆಯಲು ಬರುತ್ತಾರೆ.
ಶಮಾ ಅವರ ಮನೆಯ ಮೂಲೆಯ ಕೋಣೆಯಲ್ಲೊಂದು ಚಿಕ್ಕ ಔಷಧಾಲಯವಿದೆ, ಅಲ್ಲಿ ಕಪಾಟಿನಲ್ಲಿ ಔಷಧಿಯ ಸಣ್ಣ ಬಾಟಲಿಗಳು ಮತ್ತು ಮಾತ್ರೆಗಳ ಪ್ಯಾಕೇಟುಗಳನ್ನು ಇಡಲಾಗಿದೆ. 40 ವರ್ಷದ ಶಮಾ ಮತ್ತು 50 ವರ್ಷದ ಸಲ್ಹಾ- ಇಬ್ಬರೂ ತರಬೇತಿ ಪಡೆದ ದಾದಿಯರು-ಇವುಗಳನ್ನು ಸ್ನಾಯುಗಳಿಗೆ ಚುಚ್ಚುತ್ತಾರೆ. "ಕೆಲವೊಮ್ಮೆ ಮಹಿಳೆಯರು ಒಂಟಿಯಾಗಿ ಬರುತ್ತಾರೆ, ಚುಚ್ಚುಮದ್ದು ತೆಗೆದುಕೊಂಡು ಬೇಗ ಹೊರಡುತ್ತಾರೆ. ಅವರ ಮನೆಯಲ್ಲಿರುವವರಿಗೆ ಇದು ತಿಳಿಯಬಾರದೆನ್ನುವುದು ಅದರ ಹಿಂದಿನ ಉದ್ದೇಶ." ಎಂದು ಸಲ್ಹಾ ಹೇಳುತ್ತಾರೆ. "ಉಳಿದಂತೆ ಬೇರೆ ಮಹಿಳೆಯರು ತಮ್ಮ ಪತಿ ಅಥವಾ ಸಂಬಂಧಿಕರೊಂದಿಗೆ ಬರುತ್ತಾರೆ."
ಇದು ಒಂದು ದಶಕದ ಹಿಂದಿನ ನಾಟಕೀಯ ಬದಲಾವಣೆಯಾಗಿದ್ದು, ಫೂಲ್ ಪರಾಸ್ ಬ್ಲಾಕ್‌ನ ಸೈನಿ ಗ್ರಾಮ ಪಂಚಾಯತ್‌ನಲ್ಲಿ ಸುಮಾರು 2,500 ಜನಸಂಖ್ಯೆ ಹೊಂದಿರುವ ಹಸನ್ ಪುರ ಗ್ರಾಮದ ನಿವಾಸಿಗಳು ಕುಟುಂಬ ಯೋಜನಾ ತಂತ್ರಗಳನ್ನು ಅಷ್ಟೇನೂ ಬಳಸುತ್ತಿರಲಿಲ್ಲ.
ಬದಲಾವಣೆ ಹೇಗೆ ಬಂತು? "ಇದು ಒಳಗಿನ ವಿಷಯ" ಎಂದು ಶಮಾ ಹೇಳುತ್ತಾರೆ.







