“ಈ ಸರ್ಕಾರಕ್ಕೆ ರೈತರ ಬಗ್ಗೆ ಒಂದಿಷ್ಟೂ ಕಾಳಜಿಯಿಲ್ಲ. ಇದು ದೊಡ್ಡ ಕಂಪನಿಗಳ ಪರವಾಗಿದೆ. ಅವರಿಗೆ ʼಎಪಿಎಂಸಿʼಯನ್ನು ಸಹ ನೀಡಲಾಗುತ್ತಿದೆ. ಸರ್ಕಾರ ರೈತರಿಗೆ ಸಹಾಯ ಮಾಡುವ ಬದಲು ಅವರಿಗ್ಯಾಕೆ ಸಹಾಯ ಮಾಡುತ್ತಿದೆ? " ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಮತ್ತು ತಾಲ್ಲೂಕಿನ ಕೃಷಿ ಕಾರ್ಮಿಕ ಶಾಂತಾ ಕಾಂಬ್ಳೆಯವರ ಪ್ರಶ್ನೆಯಿದು.
ಅವರು ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್‌ನ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಬಳಿ ರಸ್ತೆ ವಿಭಾಜಕದ ಮೇಲೆ ಕುಳಿತು, ತನ್ನ ಸುತ್ತಲೂ ಪ್ರತಿಧ್ವನಿಸುತ್ತಿದ್ದ ʼಕೇಂದ್ರ ಸರಕಾರಕ್ಕೆ ಧಿಕ್ಕಾರʼ ಎನ್ನುವ ಘೋಷಣೆಯನ್ನು ಆಲಿಸುತ್ತಿದ್ದರು.
ರೈತರ ಗಣರಾಜ್ಯೋತ್ಸವ ದಿನದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು 50 ವರ್ಷದ ಶಾಂತಾ ಜನವರಿ 26ರ ಬೆಳಿಗ್ಗೆ ಬೆಂಗಳೂರಿಗೆ ಬಂದರು. ಅಂದು ಬೆಳಿಗ್ಗೆ, ದೆಹಲಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಟ್ರಾಕ್ಟರ್ ಮೆರವಣಿಗೆಯನ್ನು ಬೆಂಬಲಿಸಲು ಕರ್ನಾಟಕದ ಎಲ್ಲೆಡೆಯ ರೈತರು ಮತ್ತು ಕೃಷಿ ಕಾರ್ಮಿಕರು ರೈಲುಗಳು ಮತ್ತು ಬಸ್ಸುಗಳ ಮೂಲಕ ಮೆಜೆಸ್ಟಿಕ್‌ಗೆ ಬಂದು ತಲುಪುತ್ತಿದ್ದರು. ನಂತರ ಅವರು ಅಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದರು.
ಅವರ ಊರಿನಲ್ಲಿ, ಆಲೂಗಡ್ಡೆ, ಬೇಳೆ-ಕಾಳುಗಳು ಮತ್ತು ಕಡಲೆಕಾಯಿಯಂತಹ ಬೆಳೆಗಳನ್ನು ಬಿತ್ತುವುದು, ಹೊಲಗಳಲ್ಲಿ ಕಳೆ ತೆಗೆಯುವ ಮೂಲಕ ಶಾಂತಾ ದಿನಕ್ಕೆ 280 ರೂ ದಿನಗೂಲಿ ಸಂಪಾದಿಸುತ್ತಾರೆ. ಕೃಷಿ ಕೆಲಸ ಲಭ್ಯವಿಲ್ಲದಿರುವಾಗ, ಅವರು ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ 28 ಮತ್ತು 25 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದು, ಅವರು ಮನರೇಗಾ ಅಡಿಯಲ್ಲಿ ಲಭ್ಯವಿರುವ ನಿರ್ಮಾಣ ಕಾರ್ಯಗಳಲ್ಲಿ ಕೆಲಸ ಮಾಡುತ್ತಾರೆ.
"[ಕೋವಿಡ್ -19] ಲಾಕ್ ಡೌನ್ ಸಮಯದಲ್ಲಿ ನಮಗೆ ಸರಿಯಾದ ಆಹಾರ ಅಥವಾ ನೀರು ಲಭ್ಯವಿರಲಿಲ್ಲ"ವೆಂದು ಅವರು ಹೇಳಿದರು. "ಸರ್ಕಾರ ನಮ್ಮ ಕುರಿತು ಒಂದಿಷ್ಟೂ ಯೋಚಿಸುವುದಿಲ್ಲ."
ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಸ್ಥಳದಲ್ಲಿ ರೈತರ ಗುಂಪು "ನಮಗೆ ಎಪಿಎಂಸಿ ಬೇಕು, ಹೊಸ ಕಾನೂನನ್ನು ಹಿಂದಕ್ಕೆ ತೆಗೆದುಕೊಳ್ಳಿ." ಎಂದು ಕೂಗುತ್ತಿದ್ದರು.








