“ಪ್ರತಿಯೊಬ್ಬರೂ ಪ್ರತಿಭಟನಾ ಸ್ಥಳಕ್ಕೆ ಕಳುಹಿಸುವ ಸಲುವಾಗಿ ತಮ್ಮಿಂದ ಸಾಧ್ಯವಿರುವುದನ್ನು ಸಹಾಯವಾಗಿ ನೀಡಬೇಕೆಂದು ಕೋರಿಕೆ ಸಲ್ಲಿಸುತ್ತಾ ಟ್ರಾಕ್ಟರ್ ಗಾಡಿ ಇಡೀ ಹಳ್ಳಿಯುದ್ದಕ್ಕೂ ಸಂಚರಿಸಿತು. ನಾನು 500 ರೂಪಾಯಿ ಮೂರು ಲೀಟರ್ ಹಾಲು ಮತ್ತು ಒಂದು ಬಟ್ಟಲು ಸಕ್ಕರೆಯನ್ನು ನೀಡಿದ್ದೇನೆ” ಎಂದು ಹರಿಯಾಣದ ಹಿಸಾರ್ ಜಿಲ್ಲೆಯ ಪೆತ್ವಾರ್ ಗ್ರಾಮದ 34 ವರ್ಷದ ಸೋನಿಯಾ ಪೆತ್ವಾರ್ ಹೇಳುತ್ತಾರೆ.
ಇದು 2020ರ ಡಿಸೆಂಬರ್ ಮಧ್ಯಭಾಗದಲ್ಲಿ ಮೊದಲ ಬಾರಿಗೆ ನರ್ನಾಂಡ್ ತಾಲೂಕಿನಲ್ಲಿರುವ ಅವರ ಹಳ್ಳಿಯಲ್ಲಿ ಪಡಿತರವನ್ನು ಸಂಗ್ರಹಿಸಿದ ಸಂದರ್ಭದಲ್ಲಿ ನಡೆದದ್ದು. ಈ ಸಂಗ್ರಹವನ್ನು ನವೆಂಬರ್ 26ರಿಂದ ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರೋಧಿಸಿ ದೆಹಲಿ-ಹರಿಯಾಣ ಗಡಿಯಲ್ಲಿ ಪೆತ್ವಾರ್ನಿಂದ ಸುಮಾರು 105 ಕಿಲೋಮೀಟರ್ ದೂರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಟಿಕ್ರಿಯಲ್ಲಿನ ರೈತರಿಗೆ ಕಳುಹಿಸಲಾಗಿದೆ.
“ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ. ಹಾಗಾಗಿ ನಾನು ಕಟ್ಟಿಗೆ ತುಂಡುಗಳನ್ನು ನೀಡಿದ್ದೇನೆ,” ಎಂದು ಸೋನಿಯಾ ಅವರ ಕುಟುಂಬದ ಸದಸ್ಯೆ 60 ವರ್ಷದ ಶಾಂತಿ ದೇವಿ ಹೇಳಿದರು. ”ಆಗ ಚಳಿ ಇದ್ದಿದ್ದರಿಂದಾಗಿ ಅಲ್ಲಿ ಪ್ರತಿಭಟನೆ ಮಾಡುವವರು ಬೆಚ್ಚಗಿರಲು ಈ ಕಟ್ಟಿಗೆ ನೆರವಾಗಬಹುದು ಎಂದು ನಾನು ಯೋಚಿಸಿದೆ."
ಜನವರಿ ಆರಂಭದಲ್ಲಿ ಪೆತ್ವಾರ್ ಗೆ ಎರಡನೇ ಬಾರಿಗೆ ಟ್ರಾಕ್ಟರ್ ಗಾಡಿ ಬಂದಾಗ, ”ಪ್ರತಿಯೊಬ್ಬ ಮಹಿಳೆಯೂ ಪ್ರತಿಭಟನಾ ಸ್ಥಳಕ್ಕೆ ಹೋಗುವ ವ್ಯಕ್ತಿಗೆ ಏನನ್ನಾದರೂ ನೀಡುತ್ತಿದ್ದರು” ಎಂದು ಸೋನಿಯಾ ಹೇಳುತ್ತಾರೆ. ಪಶುಗಳನ್ನು ಸಾಕುವ ಮಹಿಳೆಯರು ಹಾಲನ್ನು ನೀಡುತ್ತಿದ್ದರು. ಇದೊಂದು ರೀತಿ ತೆರೆಮರೆಯಲ್ಲಿ ರೈತರ ಚಳವಳಿಯನ್ನು ಬೆಂಬಲಿಸುವ ನಡೆಯಾಗಿದೆ.
ರೈತರ ಪ್ರತಿಭಟನೆ ಈಗ ಮೂರನೇ ತಿಂಗಳಿಗೆ ಕಾಲಿಟ್ಟಿದೆ ಮತ್ತು ಇನ್ನೂ ಹತ್ತಾರು ಸಾವಿರ ಪುರುಷ ಹಾಗೂ ಮಹಿಳಾ ಚಳವಳಿಗಾರರು ಮುಖ್ಯವಾಗಿ ದೆಹಲಿಯ ಗಡಿ ಪ್ರದೇಶಗಳಾದ ಟಿಕ್ರಿ ಮತ್ತು ಸಿಂಗು (ದೆಹಲಿ-ಹರಿಯಾಣ ಗಡಿ) ಮತ್ತು ಗಾಜಿಪುರದಲ್ಲಿ (ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ) ಸೇರಿದ್ದಾರೆ.
ನಾನು ಫೆಬ್ರವರಿ 3ರ ಮಧ್ಯಾಹ್ನ ಟಿಕ್ರಿಯಲ್ಲಿ ಸೋನಿಯಾರನ್ನು ಭೇಟಿಯಾದೆ. 2011ರ ಜನಗಣತಿ ಪ್ರಕಾರ ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುವ ಪೆತ್ವಾರ್ ಗ್ರಾಮದಿಂದ ಚಳವಳಿಯಲ್ಲಿ ಪಾಲ್ಗೊಳ್ಳಲು ಬಂದಿರುವ 150 ಮಹಿಳೆಯರನ್ನೊಳಗೊಂಡ ಗುಂಪಿನೊಂದಿಗೆ ಇದ್ದರು, ಆದರೆ ಅವರು ಆಗಲೇ ಹಿಂತಿರುಗಲು ಸಿದ್ದರಾಗಿದ್ದರು. ಆನಂತರ ನಾನು ಆಕೆಯನ್ನು ಫೆಬ್ರುವರಿ 7 ರಂದು ಭೇಟಿಯಾದಾಗ “ಈ ಚಳುವಳಿಗಳನ್ನು ನೋಡುತ್ತಿದ್ದರೆ ಯಾರಿಗಾದರೂ ಕೂಡ ಸ್ಫೂರ್ತಿ ಬರುತ್ತೆ” ಎಂದು ಹೇಳಿದಳು.










