ಇದೊಂದು 152 ಮುಖ್ಯ ಯಾರ್ಡ್‌ಗಳು, 279 ಸಬ್ ಯಾರ್ಡ್‌ಗಳು ಮತ್ತು ಪಂಜಾಬ್ ನಾದ್ಯಂತ ಇರುವ 1,389 ಖರೀದಿ ಕೇಂದ್ರಗಳ (2019-20ರಲ್ಲಿ) ದೊಡ್ಡ ಜಾಲವಾಗಿದೆ. ಈ ಮಂಡಿಗಳ ಜಾಲವು ಜಸ್ವಿಂದರ್ ಸಿಂಗ್ ಅವರ ಪಾಲಿಗೆ ಸುರಕ್ಷಾ ಕವಚವಾಗಿದೆ. ಈ ಮಂಡಿ ವ್ಯವಸ್ಥೆಯಲ್ಲಿ ಒಬ್ಬ ರೈತ ತಾನು ಸುರಕ್ಷಿತ ಎಂದು ಭಾವಿಸುತ್ತಾನೆ ಎಂದು ಸಂಗ್ರೂರ್ ಜಿಲ್ಲೆಯ ಲೊಂಗೋವಾಲ್ ಪಟ್ಟಣದ 42 ವರ್ಷದ ಜಸ್ವಿಂದರ್ ಹೇಳುತ್ತಾರೆ, ಅವರ ಕುಟುಂಬವು ತಮ್ಮ 17 ಎಕರೆ ನೆಲದಲ್ಲಿ ಬೇಸಾಯ ಮಾಡುತ್ತದೆ. "ನಾನು ನನ್ನ ಫಸಲನ್ನು ಮಂಡಿಗೆ ಯಾವುದೇ ಹಿಂಜರಿಕೆ ಅಥವಾ ಭಯವಿಲ್ಲದೆ ತೆಗೆದುಕೊಂಡು ಹೋಗಬಹುದು, ನನಗೆ ಅಲ್ಲಿ ಹಣ ಸಿಗುವ ಭರವಸೆಯಿರುತ್ತದೆ. ನನಗೆ ಇಲ್ಲಿನ ವ್ಯವಹಾರ ಪ್ರಕ್ರಿಯೆಯ ಸಂಪೂರ್ಣ ಅರಿವಿದೆ ಹೀಗಾಗಿ ನನ್ನ ಪಾಲಿನ ಹಣ ನನಗೆ ಸಿಗುವ ಖಾತರಿಯಿರುತ್ತದೆ..ʼʼ
ಮುಖ್ಯ (ಅಥವಾ ಪ್ರಧಾನ) ಯಾರ್ಡುಗಳು ದೊಡ್ಡ ಮಂಡಿಗಳಾಗಿವೆ (ಇಲ್ಲಿನ ಫೋಟೋಗಳಲ್ಲಿ ಸುನಮ್‌ನಲ್ಲಿರುವಂತೆ). ಈ ಯಾರ್ಡುಗಳು ರೈತರಿಗೆಂದೇ ಮೀಸಲಿಡಲಾಗಿರುವ ಫಸಲಿನ ಚೀಲಗಳನ್ನು ಜೋಡಿಸಿಡಲು ವಿವಿಧ ಸೌಲಭ್ಯಗಳು ಮತ್ತು ಜಾಗಗಳನ್ನು ಹೊಂದಿವೆ, ಈ ಸ್ಥಳವು ಸಾಮಾನ್ಯವಾಗಿ ಅವರ ಅರ್ಹತಿಯಾ (ಕಮಿಷನ್ ಏಜೆಂಟರು) ಅಂಗಡಿಗಳ ಮುಂದೆ ಇರುತ್ತದೆ. ಮುಖ್ಯ ಯಾರ್ಡಿನಲ್ಲಿ ಆ ವರ್ಷದ ಉತ್ಪನ್ನಗಳಿಗೆ ಸ್ಥಳ ಕಡಿಮೆಯಿದ್ದರೆ ಹತ್ತಿರದ ಸಬ್-ಯಾರ್ಡ್‌ಗಳು ಹೆಚ್ಚುವರಿ ಸ್ಥಳಗಳಾಗಿವೆ. ಸಣ್ಣ ಮಂಡಿಗಳು ಖರೀದಿ ಕೇಂದ್ರಗಳಾಗಿ ಕೆಲಸ ಮಾಡುತ್ತವೆ. ಇವು ಹೆಚ್ಚಾಗಿ ಹಳ್ಳಿಗಳಲ್ಲಿರುತ್ತವೆ (ಇಲ್ಲಿನ ಫೋಟೋಗಳಲ್ಲಿರುವ ಶೆರಾನ್ ಮಂಡಿಯಂತೆ). ಇದು ಒಟ್ಟಾರೆ ಪಂಜಾಬಿನ ವಿಶಾಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹೊಂದಿರುವ ಜಾಲ.
"ನನ್ನ ಬೆಳೆಯನ್ನು ಮಾರಾಟ ಮಾಡಿದ ನಂತರ, ಅರ್ಹತಿಯಾ ನನಗೆ ಜೆ-ಫಾರ್ಮ್ ನೀಡುತ್ತಾರೆ ಮತ್ತು ದುಡ್ಡು ಬರುವ ತನಕ ಅದು ಆಶ್ವಾಸನಾ ಪತ್ರವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಜಸ್ವಿಂದರ್ ಹೇಳುತ್ತಾರೆ. "ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಇದು ಸರ್ಕಾರದ ವ್ಯವಸ್ಥೆಯಾಗಿರುವುದರಿಂದ, ನನಗೆ ಬರಬೇಕಾದ ಹಣಕ್ಕೆ ಏನಾದರೂ ಅಪಾಯ ಎದುರಾದಲ್ಲಿ, ನಾನು ಕಾನೂನಿನ ಅಡಿಯಲ್ಲಿ ಸುರಕ್ಷಿತ ಮತ್ತು ಅದು ದೊಡ್ಡ ಭದ್ರತೆಯೆನ್ನುವುದು ನನಗೆ ತಿಳಿದಿದೆ" ಎಂದು ಅವರು ಮುಂದುವರೆದು ಹೇಳುತ್ತಾರೆ (1961 ರ ಪಂಜಾಬ್ ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾಯ್ದೆಯನ್ನು ಉಲ್ಲೇಖಿಸಿ).
ಖಾಸಗಿ ವ್ಯಾಪಾರಿಗಳು ಅಥವಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ ಮಾರ್ಕ್‌ಫೆಡ್ (ಪಂಜಾಬ್ ಸ್ಟೇಟ್ ಕೋಆಪರೇಟಿವ್ ಸಪ್ಲೈ & ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್)ನಂತಹ ಸರ್ಕಾರಿ ಏಜೆನ್ಸಿಗಳಿಂದ ನಿಯಂತ್ರಿತ ಪ್ರಕ್ರಿಯೆಯಲ್ಲಿ ಬೆಳೆಗಳನ್ನು ಸಂಗ್ರಹಿಸಲಾಗಿದೆ ಎನ್ನುವುದನ್ನು ನೆಟ್‌ವರ್ಕ್ ಖಚಿತಪಡಿಸುತ್ತದೆ, ಇದು ಮುಖ್ಯವಾಗಿ ಗೋಧಿ ಮತ್ತು ಭತ್ತವನ್ನು ಸರ್ಕಾರಿ-ಆದೇಶದ ಕನಿಷ್ಠ ಬೆಂಬಲ ಬೆಲೆಯಡಿ (ಎಮ್‌ಎಸ್‌ಪಿ) ಖರೀದಿಸುತ್ತದೆ. ಧಾನ್ಯವು ಪಂಜಾಬ್‌ನ ಯಾವುದೇ ಮಂಡಿಗಳನ್ನು ತಲುಪಿದ ನಂತರ, ಅದರಲ್ಲಿರುವ ತೇವಾಂಶದ ಪ್ರಮಾಣದಂತಹ ನಿರ್ದಿಷ್ಟ ಮಾನದಂಡಗಳ ಪ್ರಕಾರ ಎಫ್‌ಸಿಐ ಅಥವಾ ಮಾರ್ಕ್‌ಫೆಡ್ ಅಧಿಕಾರಿಗಳು ಅದರ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ನಂತರ ಧಾನ್ಯವನ್ನು ಹರಾಜು ಮಾಡಿ ಮಾರಾಟ ಮಾಡಲಾಗುತ್ತದೆ. ಈ ಸರಪಳಿಯಲ್ಲಿ ನಿರ್ಣಾಯಕ ಕೊಂಡಿಯಾಗಿರುವ ಅರ್ಹತಿಯಾಗಳ ಮೂಲಕ ಈ ಪ್ರಕ್ರಿಯೆಯು ಸಾಗುತ್ತದೆ.
ಹತ್ತಿರದಲ್ಲೇ ಲಭ್ಯತೆ ಮತ್ತು ವಿಶ್ವಾಸಾರ್ಹತೆಯು ಇಂತಹ ವ್ಯವಸ್ಥೆಯ ಪ್ರಮುಖ ಪ್ರಯೋಜನಗಳಾಗಿವೆ ಎಂದು ಪಟಿಯಾಲ ಜಿಲ್ಲೆಯ ಪತ್ರಾನ್ ತಹಸಿಲ್‌ನ ದುಗಲ್ ಕಲಾನ್ ಎನ್ನುವ ಹಳ್ಳಿಯ 32 ವರ್ಷದ ಅಮನ್‌ದೀಪ್ ಕೌರ್ ಹೇಳುತ್ತಾರೆ. “ನನಗೆ ಇದರಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ನನ್ನ ಉತ್ಪನ್ನಗಳನ್ನು ಹಳ್ಳಿಯ ಮಂಡಿಗೆ [ಖರೀದಿ ಕೇಂದ್ರ] ಕೊಂಡೊಯ್ಯಬಹುದು. ಇದು ಅನುಕೂಲಕರವಾಗಿದೆ ಮತ್ತು ನನ್ನ ಬೆಳೆಗೆ [ಎಮ್‌ಎಸ್‌ಪಿ ಪ್ರಕಾರ] ನಾನು ಪಡೆಯಲಿರುವ ದರ ನನಗೆ ತಿಳಿದಿರುತ್ತದೆ. ರಾಜ್ಯದಲ್ಲಿ ಕಬ್ಬಿನ ವಿಷಯದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಅದಕ್ಕೆ ಈಗ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇಲ್ಲ, ಹಾಗಾಗಿ ರೈತರು ತಮ್ಮ ಉತ್ಪನ್ನಗಳನ್ನು ಕೆಲವೊಮ್ಮೆ ಒಂದು ನಗರಕ್ಕೆ ತೆಗೆದುಕೊಂಡು ಹೋಗಬೇಕು ಇನ್ನೆಲ್ಲೋ ಅಲ್ಲಿಗಿಂತ ಉತ್ತಮ ಬೆಲೆಯಿದ್ದಲ್ಲಿ ಅಲ್ಲಿಗೆ ಕೊಂಡುಹೋಗಬೇಕು. ಒಳ್ಳೆಯ ರೇಟಿಗೆಂದು ಎಷ್ಟು ಊರನ್ನು ಅಲೆಯಲು ಸಾಧ್ಯ?ʼʼ





















