ಪ್ರವೀಣ್ ಕುಮಾರ್ ಅವರು ಊರುಗೋಲು ಹಿಡಿದು ಸ್ಕೂಟರ್ ಮೇಲೆ ಕುಳಿತು ಒಂದು ಕೈಯಲ್ಲಿ ಬ್ರಷ್ ಹಿಡಿದು ತನ್ನ ಸುತ್ತಮುತ್ತಲಿನ ಜನರೊಂದಿಗೆ ಮಾತನಾಡುತ್ತಿದ್ದರೆ, ಹತ್ತಿರದಲ್ಲೇ ಸುಮಾರು 18 ಅಡಿ ಉದ್ದದ ದೊಡ್ಡ ಕ್ಯಾನ್ವಾಸ್ ಇದೆ - ಅದರ ಮೇಲೆ ಸಿಂಘುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕೆಲವು ರೈತರ ಚಿತ್ರಗಳನ್ನು ಅವರು ಬಿಡಿಸಿದ್ದಾರೆ.
ಕಲಾ ಶಿಕ್ಷಕ ಮತ್ತು ಕಲಾವಿದರಾಗಿರುವ ಪ್ರವೀಣ್ ಲುಧಿಯಾನದಿಂದ ಸುಮಾರು 300 ಕಿ.ಮೀ ಪ್ರಯಾಣಿಸಿ ಸಿಂಘು ತಲುಪಿದ್ದಾರೆ. ಜನವರಿ 10ರಂದು ಹರಿಯಾಣ-ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳವನ್ನು ತಲುಪಿ ತಮ್ಮ ಕೊಡುಗೆಯನ್ನು ನೀಡುವ ಹಂಬಲಕ್ಕೊಳಗಾಗಿದ್ದಾಗಿ ಅವರು ಹೇಳುತ್ತಾರೆ.
"ನಾನು ಯಾವುದೇ ಪ್ರಚಾರಕ್ಕಾಗಿ ಇದನ್ನು ಮಾಡುತ್ತಿಲ್ಲ, ದೇವರು ನನಗೆ ಸಾಕಷ್ಟು ಕೊಟ್ಟಿದ್ದಾನೆ, ನಾನು ಆ ಕುರಿತು ಚಿಂತಿಸುತ್ತಿಲ್ಲ. ನನಗೆ ಸಂತೋಷ ನೀಡುವ ವಿಷಯವೆಂದರೆ ನಾನು ಈಗ ಈ ಚಳವಳಿಯ ಭಾಗವಾಗಿದ್ದೇನೆನ್ನುವುದು" ಎಂದು ಅವರು ಹೇಳುತ್ತಾರೆ.
"ನಾನು 70 ಪ್ರತಿಶತ ಅಂಗವಿಕಲನಾಗಿದ್ದೇನೆ" ಎಂದು ಅವರು ಹೇಳುತ್ತಾರೆ, ಅವರ ಕಾಲನ್ನು ತೋರಿಸಿ, ಇದು ಮೂರು ವರ್ಷ ವಯಸ್ಸಿನಲ್ಲಿ ಪೋಲಿಯೊ ಪಾರ್ಶ್ವವಾಯುವಿಗೆ ಒಳಗಾಯಿತು. ಪ್ರವೀಣ್ ಅವರ ಅಂಗವೈಕಲ್ಯವಾಗಲಿ ಅಥವಾ ಅವರ ಕುಟುಂಬದ ಆರಂಭಿಕ ಅಸಮಾಧಾನವಾಗಲಿ ಅವರು ಸಿಂಘುವಿಗೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ.
43ರ ಹರೆಯದ ಪ್ರವೀಣ್, ಲುಧಿಯಾನದ ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರ ಬಿಡಿಸಲು ಪ್ರಾರಂಭಿಸಿದರು ಮತ್ತು ಅದನ್ನು ತನ್ನೊಂದಿಗೆ ಸಿಂಘುವಿಗೆ ತಂದು, ಅಲ್ಲಿ ಪ್ರತಿಭಟನಾಕಾರರ ನಡುವೆ ಬೀದಿಯಲ್ಲಿ ಕುಳಿತು ಚಿತ್ರ ಸಿದ್ಧವಾಗುವ ತನಕ ಬಿಡಿಸುತ್ತಿದ್ದರು.



