ಅಂತಹದೊಂದು ಶೂಟಿಂಗ್ ನಡೆದೇ ಇರಲಿಲ್ಲವಾದರೂ, "ಪೋಲಿಸರು ರೈತನೊಬ್ಬನನ್ನು ಹೊಡೆದುರುಳಿಸಿದ್ದಾರೆ"ನ್ನುವ ಹೆಡ್‌ಲೈನ್‌ಗಳು ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಫ್ಲಾಶ್ ಆಗಲು ಪ್ರಾರಂಭಗೊಂಡಿತ್ತು. ಈ "ಕೊಲೆ"ಯನ್ನು ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿ ಮಾಡಲಾಗಿದೆಯೆನ್ನುವ ವದಂತಿ ಎಲ್ಲೆಡೆ ಹರಡಿತ್ತು. ಈ ನಡೆದೇ ಇರದ "ʼಕೊಲೆ"ಯು ಆಗಿದೆಯೆಂಬ ವದಂತಿಯು ಜನವರಿ 26, ಗಣರಾಜ್ಯೋತ್ಸವದಂದು ದೆಹಲಿಯ ಪ್ರಸಿದ್ಧ ಆದಾಯ ತೆರಿಗೆ ಕಚೇರಿ (ಐಟಿಒ) ಜಂಕ್ಷನ್‌ಗೆ ಬಂದ ಪ್ರತಿಭಟನಾಕಾರರ ಗುಂಪುಗಳಲ್ಲಿ ಅಶಿಸ್ತು ಮತ್ತು ಗೊಂದಲವನ್ನು ಸೃಷ್ಟಿಸಿತು. ಇದೇ ವದಂತಿ ಕೆಂಪುಕೋಟೆಯಲ್ಲಿನ ಗಲಭೆಗೂ ಕಾರಣವೆನ್ನಲಾಗಿದೆ.
ಹರಡಿದ ವದಂತಿಗಳ ಪ್ರಕಾರ ಟ್ರ್ಯಾಕ್ಟರ್ ಓಡಿಸುತ್ತಿದ್ದ ಯುವ ರೈತನೊಬ್ಬನನ್ನು ಪಾಯಿಂಟ್ ಬ್ಲಾಂಕಿನಲ್ಲಿ ಪೋಲಿಸರು ಶೂಟ್ ಮಾಡಿದ್ದರಿಂದ ಅವನು ಸತ್ತಿದ್ದ. ಸೋಷಿಯಲ್ ಮೀಡಿಯಾದಲ್ಲಿ ಎಂದಿನಂತೆ ಸುದ್ದಿಯ ಸತ್ಯಾಸತ್ಯತೆ ತಿಳಿಯದೆ ಅದನ್ನು ಎಲ್ಲೆಡೆ ಹರಿಬಿಡಲಾಯಿತು. ಸ್ವಲ್ಪ ಹೊತ್ತಿನಲ್ಲೇ ಅದೇ ಸುದ್ದಿಯನ್ನು ಕೆಲವು ಸುದ್ದಿ ಚಾನಲ್‌ಗಳೂ ಕೈಗೆತ್ತಿಕೊಂಡವು. ಸ್ಥಳದಲ್ಲಿದ್ದ ಜನರು ಈ ʼಗೋಲಿಕಾಂಡ್ʼ (ಗುಂಡಿಟ್ಟಿದ್ದನ್ನು) ಖಂಡಿಸುತ್ತಿದ್ದರು ಮತ್ತು ಪೋಲಿಸರ ಮೇಲೆ ದೌರ್ಜನ್ಯದ ಆರೋಪ ಮಾಡುತ್ತಿದ್ದರು. ಮತ್ತು ಐಟಿಒ ಜಂಕ್ಷನ್ ಬಳಿ ಪ್ರತಿಭಟನಾಕಾರರು ಎಲ್ಲೆಂದರಲ್ಲಿ ಚದುರಿ ಹೋಗುತ್ತಿದ್ದರು.
ವಾಸ್ತವದಲ್ಲಿ, ನವನೀತ್ ಸಿಂಗ್ ಎಂದು ಗುರುತಿಸಲಾಗಿರುವ ವ್ಯಕ್ತಿಯು ಅವರು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಮಗುಚಿಬಿದ್ದು ಸಾವನ್ನಪ್ಪಿದ್ದರು. ಯಾರೂ ಗುಂಡು ಹಾರಿಸಿರಲಿಲ್ಲ. ಇದು ಸ್ಪಷ್ಟವಾಗುವ ಹೊತ್ತಿಗಾಗಲೇ ಕೆಂಪು ಕೋಟೆಯಲ್ಲಿ ಬೇರೆಯವರಿಂದ ಹಿಂಸಾಚಾರ ಭುಗಿಲೆದ್ದು ಸೆಪ್ಟೆಂಬರ್ 2020ರಲ್ಲಿ ಸಂಸತ್ತಿನ ಮೂಲಕ ಅಪ್ಪಳಿಸಿದ ಮೂರು ಕಾನೂನುಗಳನ್ನು ವಿರೋಧಿಸಿ ರೈತರ ನಿಜವಾದ, ಬಹುದೊಡ್ಡ ಟ್ರ್ಯಾಕ್ಟರ್ ರ‍್ಯಾಲಿಗೆ ಗ್ರಹಣ ಬಡಿದಾಗಿತ್ತು.
ಆ ದಿನ ಬಹಳ ದುರದೃಷ್ಟಕರ ರೀತಿಯಲ್ಲಿ ಪ್ರಾರಂಭವಾಯಿತು
ಭಾರತದ 72 ನೇ ಗಣರಾಜ್ಯೋತ್ಸವವು ಕತ್ತಲೆ ಮತ್ತು ಚಳಿ ಕಳೆದು ಆಹ್ಲಾದಕರ ಬೆಚ್ಚಗಿನ ಬಿಸಿಲಿನೊಂದಿಗೆ ಪ್ರಾರಂಭವಾಗಿತ್ತು. ಅಂದು ಕಳೆದ ಎರಡು ತಿಂಗಳಿನಿಂದ ದೇಶದ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಗೊತ್ತುಪಡಿಸಿದ ಮಾರ್ಗದಲ್ಲಿ ಶಾಂತಿಯುತ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿ ಇತಿಹಾಸ ನಿರ್ಮಿಸಬೇಕಿತ್ತು. ರಾಜ್‌ಪಥ್‌ನಲ್ಲಿ ಸರಕಾರದ ಮೆರವಣಿಗೆ ಮಧ್ಯಾಹ್ನದ ಹೊತ್ತಿಗೆ ಮುಗಿದು,, ನಂತರ ಸಿಂಗು, ಟಿಕ್ರಿ ಮತ್ತು ಗಾಜಿಪುರದಿಂದ ಮೂರು ಮೆರವಣಿಗೆಗಳು ಪ್ರಾರಂಭವಾಗಬೇಕಿತ್ತು.
ಈ ಮೂರು ಮೆರವಣಿಗೆಗಳು ದೇಶವೊಂದರ ನಾಗರಿಕರು ಆಚರಿಸುವ ಅತಿದೊಡ್ಡ, ಭವ್ಯ ಗಣರಾಜ್ಯೋತ್ಸವವಾಗಿ ದಾಖಲಾಗಬೇಕಿತ್ತು - ಮತ್ತು ಅವರು ಅದನ್ನು ಮಾಡಿದ್ದರು ಕೂಡ. ಆದರೆ ಸಂಜೆಯ ಹೊತ್ತಿಗೆ ಜನರ ಗಮನ ಮತ್ತು ಕುತೂಹಲವು ವಿರುದ್ಧ ದಿಕ್ಕಿನತ್ತ ತಿರುಗಿತ್ತು.








