ಭಾನುಬೆನ್ ಭರ್ವಾಡ್ ಬನಸ್ಕಾಂತ ಜಿಲ್ಲೆಯ ತಮ್ಮ 2.5 ಎಕರೆ ಜಮೀನಿಗೆ ತೆರಳಿ ಒಂದು ವರ್ಷವಾಗಿದೆ. ಅವರೂ ಅವರ ಗಂಡನೂ ಆ ಜಮೀನಿಗೆ ನಿತ್ಯ ಹೋಗುತ್ತಿದ್ದ ಕಾಲವೊಂದಿತ್ತು. ಅಲ್ಲಿ ಅವರು ಬಜ್ರಾ, ಹೆಸರು, ಜೋಳ ಬೆಳೆದು ಅದನ್ನು ವರ್ಷವಿಡೀ ಆಹಾರಕ್ಕಾಗಿ ಬಳಸುತ್ತಿದ್ದರು. ಈ ಕೃಷಿಭೂಮಿ ಅವರಿಗೆ ಆಹಾರದ ಮುಖ್ಯ ಮೂಲವಾಗಿತ್ತು, ಆದರೆ 2017ರ ವಿನಾಶಕಾರಿ ಪ್ರವಾಹದ ನಂತರ, ಅವರ ಜಮೀನು ಸಂಪೂರ್ಣವಾಗಿ ನಾಶವಾಯಿತು. ನಂತರ ನಮ್ಮ ಆಹಾರ ವ್ಯವಸ್ಥೆ ಬದಲಾಯಿತು’ ಎನ್ನುತ್ತಾರೆ ಭಾನುಬೆನ್ (35). "ನಾವು ಈಗ ಭೂಮಿಯಲ್ಲಿ ಕೊಯ್ಲು ಮಾಡುತ್ತಿದ್ದ ಬೆಳೆಗಳನ್ನು ಖರೀದಿಸಬೇಕಾಗಿದೆ."
ಅವರು ತಮ್ಮ ಅರ್ಧ ಎಕರೆ ಭೂಮಿಯಲ್ಲಿ ಸಜ್ಜೆ ಕೃಷಿ ಮಾಡುತ್ತಿದ್ದರು ಮತ್ತು ಅದರಿಂದ ಸುಮಾರು 4 ಕ್ವಿಂಟಾಲ್ (400 ಕೆಜಿ) ಧಾನ್ಯವನ್ನು ಕೊಯ್ಲು ಮಾಡುತ್ತಿದ್ದರು. ಈಗ ಮಾರುಕಟ್ಟೆಯಿಂದ ಅಷ್ಟೇ ಪ್ರಮಾಣದ ಸಜ್ಜೆ ಖರೀದಿಸಲು ಸುಮಾರು 10 ಸಾವಿರ ರೂ. ಖರ್ಚು ಮಾಡಬೇಕು. ಅಲ್ಲದೆ, ಬೆಲೆ ಹೆಚ್ಚಳವನ್ನು ನೋಡಿದರೆ, ಅರ್ಧ ಎಕರೆ ಭೂಮಿಯಲ್ಲಿ ಸಜ್ಜೆ ಬೆಳೆಯಲು ನಾವು ಮಾರುಕಟ್ಟೆಯ ಅರ್ಧದಷ್ಟು (ಒಳಸುರಿಗಳ ವಿಷಯದಲ್ಲಿ) ಖರ್ಚು ಮಾಡಿದರೆ ಸಾಲುತ್ತಿತ್ತು ಎಂದು ಅವರು ಹೇಳುತ್ತಾರೆ. “ಈ ಲೆಕ್ಕಾಚಾರವು ಇತರ ಬೆಳೆಗಳಿಗೂ ಅನ್ವಯಿಸುತ್ತದೆ. [ನಾವು ಬೆಳೆಯುವ] ಪ್ರತಿ ಬೆಳೆಗೆ ಬೆಲೆ ದ್ವಿಗುಣಗೊಂಡಿದೆ.
ಭಾನುಬೆನ್, ಅವರ ಪತಿ ಭೋಜಾಭಾಯಿ, 38, ಮತ್ತು ಅವರ ಮೂವರು ಮಕ್ಕಳು ಬನಸ್ಕಾಂತದ ಕಂಕ್ರೇಜ್ ತಾಲೂಕಿನ ತೋತಾನಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಭೋಜಾಭಾಯಿ ಅವರು ತಮ್ಮ ಹೊಲಗಳಲ್ಲಿ ಕೃಷಿ ಮಾಡುತ್ತಿದ್ದಾಗಲೂ ತಮ್ಮ ಆದಾಯಕ್ಕೆ ಪೂರಕವಾಗಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ 2017ರಿಂದ ಪೂರ್ಣಾವಧಿ ಕೃಷಿ ಕೂಲಿ ಕೆಲಸ ಮಾಡಬೇಕಾಗಿದೆ. ಅವರು 30 ಕಿಲೋಮೀಟರ್ ದೂರದಲ್ಲಿರುವ ಪಟಾನ್‌ನಲ್ಲಿ ನಿರ್ಮಾಣ ಸ್ಥಳಗಳು ಮತ್ತು ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತಾರೆ. ಭಾನುಬೆನ್ ಹೇಳುತ್ತಾರೆ, “ಅವರು ಇನ್ನೂ ಕೆಲಸದ ಹುಡುಕಾಟದಲ್ಲಿದ್ದಾರೆ. ಕೆಲಸ ಸಿಕ್ಕರೆ ದಿನಕ್ಕೆ 200 ರೂ. ಸಂಪಾದಿಸುತ್ತಾರೆ."
ಭಾನುಬೆನ್ ಮತ್ತು ಭೋಜಭಾಯಿಯವರ ಕಿರಿಯ ಮಗಳಾದ ಸುಹಾನಾ ವಿನಾಶಕಾರಿ ಪ್ರವಾಹ ಬಂದ ವರ್ಷವೇ ಜನಿಸಿದಳು. ಆಕೆಯ ಹಣೆಯನ್ನು ನೇವರಿಸುತ್ತ, ಭಾನುಬೆನ್ ಈಗಾಗಲೇ ಐದು ವರ್ಷಗಳು ಕಳೆದುಹೋಗಿವೆಯೆನ್ನುವುದನ್ನು ನಂಬಲಾಗುತ್ತಿಲ್ಲ ಎನ್ನುತ್ತಾರೆ.
ಬನಸ್ಕಾಂತ, ಪಟಾನ್, ಸುರೇಂದ್ರನಗರ, ಅರಾವಳಿ ಮತ್ತು ಮೊರ್ಬಿ ಸೇರಿದಂತೆ ಗುಜರಾತ್‌ನ ಹಲವಾರು ಜಿಲ್ಲೆಗಳು ಜುಲೈ 2017ರಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದವು. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಕಡಿಮೆ ಒತ್ತಡವೇ ಮಳೆಯ ಪ್ರಮಾಣಕ್ಕೆ ಪ್ರಮುಖ ಕಾರಣ. ಇದೊಂದು ಅಪರೂಪದ ವಿದ್ಯಮಾನವಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಇದು ಕಳೆದ 112 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸುರಿದ ಗರಿಷ್ಠ ಮಳೆಯಾಗಿದೆ.









