ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನ ಶಾಹೂ ಕಾಂಬಳೆ ಗೆಳತಿಯ ಮಾತಿನಿಂದ ನೊಂದಾಗ ತಮ್ಮ ಕುಟುಂಬದ ಅದರಲ್ಲೂ ತಾಯಿಯ ಭಾವನಾತ್ಮಕ ಬೆಂಬಲವನ್ನು ನೆನಪಿಸಿಕೊಳ್ಳುತ್ತಾರೆ

ಒಬ್ಬ ಗೆಳತಿ ತನ್ನ ನಂಬಿಕೆಯನ್ನು ಸುಳ್ಳುಮಾಡಿ ಹೃದಯವನ್ನು ಒಡೆದರೆ ಹೆಣ್ಣು ಏನು ಮಾಡುತ್ತಾಳೆ? ಕೆಲವು ದಶಕಗಳ ಹಿಂದೆ ಆತ್ಮೀಯರು ಮನಸಿಗೆ ನೋವು ಮಾಡಿದರೆ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಅದರಿಂದ ಹಾಡುಗಳು ಹುಟ್ಟುತ್ತಿದ್ದವು. ಬೀಸುಕಲ್ಲಿನೆದುರು ಕುಳಿತು, ದಿನವಿಡೀ ಅದನ್ನು ತಿರುಗಿಸುತ್ತಾ ಓವಿಯ (ಬೀಸುಕಲ್ಲಿನ ಪದ) ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಾರೆ. ಶಾಹೂ ಕಾಂಬಳೆಯವರು ಮಾಡಿದ್ದು ಕೂಡಾ ಅದನ್ನೇ.

ಈ 26 ಹಾಡುಗಳಲ್ಲಿ ಶಾಹುಬಾಯಿ ತನ್ನ ಪಕ್ಕದ ಮನೆಯ ಗೆಳತಿಯೊಂದಿಗೆ ಜಗಳವಾಡಿದಾಗ ಜೀವ ಎಷ್ಟು ದುಃಖಿತಗೊಂಡಿದೆಯೆನ್ನುವುದನ್ನು ಪ್ರಸ್ತುತಪಡಿಸಿದ್ದಾರೆ. ಈ ಹಾಡುಗಳಿಗೆ ಕೊರಳೂ ಶಾಹುಬಾಯಿಯ ಅವರದ್ದೇ. ಈ ಹಾಡುಗಳ ಮೊದಲೆರಡು ಸಾಲಿನಲ್ಲಿ ಅವರು ಹೀಗೆ ಹಾಡುತ್ತಾರೆ:

ನನ್ನ ಗುಟ್ಟುಗಳನ್ನು ಗೆಳತಿಯೊಡನೆ ಹಂಚಿಕೊಳ್ಳುವುದು ವ್ಯರ್ಥ
ಗುಟ್ಟು ಗುಟ್ಟಾಗಿಯೇ ಉಳಿಯುವುದು ತಾಯಿಯ ಬಳಿ ಮಾತ್ರ

ಆಕೆಯ ಸ್ನೇಹಿತೆ ಮಾಡಿದ್ದು ಕೇವಲ ದ್ರೋಹವನ್ನಷ್ಟೇ ಅಲ್ಲ, ಜೊತೆಗೆ ತೀಕ್ಷ್ಣವಾದ ಮಾತುಗಳನ್ನು ನುಡಿದಿದ್ದಳು, ಅದು ಗಾಯಕಿಯ ಹೃದಯವನ್ನು ಚುಚ್ಚಿತು ಮತ್ತು ಅವಳನ್ನು ಹಗಲಿರುಳು ಕಣ್ಣೀರು ಸುರಿಸುವಂತೆ ಮಾಡಿತು. ಆ ಹೆಣ್ಣು ತನ್ನ ನೋವನ್ನು ಗೆಳತಿಗೆ ಹೀಗೆ ವಿವರಿಸುತ್ತಾಳೆ:

ಹೈರಾಣಾಗಿದ್ದೇನೆ ನಿನ್ನ ಕಟು ನುಡಿಗಳಿಂದ
ಬೀಸು ಗಾಳಿಗೆ ಹರಿದ ಬಾಳೆಯ ಚಿಗುರೆಲೆಯಂತೆ

ನೆರೆಮನೆಯವಳು ತನ್ನ ಕುತ್ತಿಗೆ ಮತ್ತು ತೋಳುಗಳಲ್ಲಿನ ಚಿನ್ನದ ಆಭರಣಗಳನ್ನು ಪ್ರದರ್ಶಿಸಿದಾಗ, ಗಾಯಕಿ ತನ್ನ ಮಗ ಮತ್ತು ಮಗಳು ಚಿನ್ನಕ್ಕಿಂತಲೂ ಹೆಚ್ಚು ಅಮೂಲ್ಯ ಮತ್ತು ಹೊಳಪುಳ್ಳವರು ತನ್ನ ಪಾಲಿಗೆ ಎನ್ನುತ್ತಾಳೆ. ಬಹುಶಃ ಸ್ನೇಹದಲ್ಲಿನ ಈ ಬಿರುಕು ಅವರ ನಡುವಿನ ಸಂಪತ್ತಿನ ಅಸಮಾನತೆಯಿಂದ ಉಂಟಾಗಿದೆಯೆಂದು ಈ ದ್ವಿಪದಿ ಸೂಚಿಸುತ್ತದೆ.

ತನ್ನ ಸ್ನೇಹಿತೆಯಿಂದ ನೋವಿಗೊಳಗಾದ ನಾಯಕಿ ತನ್ನ ಕೌಟುಂಬಿಕ ಪ್ರೇಮದ ಸಾಂತ್ವನದಲ್ಲಿ ಸಮಾಧಾನ ಕಂಡುಕೊಳ್ಳುತ್ತಾಳೆ. ತಾನು ಕಡಲ ಬದಿಗೆ ಹೋಗಿದ್ದು, ಅಲ್ಲಿ ಬುಟ್ಟಿಯಷ್ಟು ಮೀನು ಕಂಡಿದ್ದು, ಮತ್ತು ಇನ್ನೊಮ್ಮೆ “ಬೊಗಸೆಯ ಒಳಗೊಂದು ಮುತ್ತು ಹೊಳೆದಿದ್ದು.” ಇವೆಲ್ಲವನ್ನೂ ನೆಪಿಸಿಕೊಳ್ಳುತ್ತಾಳೆ. ಇದು ಅವಳು ತನಗೆ ದೊರೆತ ಮಗ ಮತ್ತು ಮಗಳೆನ್ನುವ ಆಶೀರ್ವಾದದ ಕುರಿತು ಹೇಳುವ ರೂಪಕಗಳಿವು.

Shahu Kamble's sons, daughters-in-law and grandchildren in Nangaon village. Her sister-in-law and friend Kusum Sonawane, who also sings grindmill songs, is standing third from the left
PHOTO • Samyukta Shastri

ನಂದಗಾಂವ್ ಗ್ರಾಮದಲ್ಲಿ ಶಾಹೂ ಕಾಂಬ್ಳೆಯವರ ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು. ಅವರಂತೆಯೇ ಬೀಸುಕಲ್ಲಿನ ಹಾಡುಗಳನ್ನು ಹಾಡುವ ಅವರ ಅತ್ತಿಗೆ ಮತ್ತು ಸ್ನೇಹಿತೆ ಕುಸುಮ್ ಸೊನಾವಾಣೆ ( ಎಡದಿಂದ ನಿಂತಿರುವವರಲ್ಲಿ ಮೂರನೆಯವರು)

ಇತರರಿಂದ ಏನನ್ನೂ ನಿರೀಕ್ಷಿಸಬಾರದೆಂದು ಎಂದು ಗಾಯಕಿ ತನಗೆ ತಾನೇ ಹೇಳಿಕೊಂಡರೂ, ಅವಳು ಸಂಪೂರ್ಣವಾಗಿ ಅವಲಂಬಿಸಬಹುದಾದ ವಿಶ್ವದ ಏಕೈಕ ವ್ಯಕ್ತಿ ತನ್ನ ಸ್ವಂತ ತಾಯಿ ಎಂದು ಹೇಳಿಕೊಳ್ಳುತ್ತಾಳೆ. ಸಾಗರವು ಅವಳ ಬಾಯಾರಿಕೆ ತಣಿಸದು, ಆದರೆ ತನ್ನ ತಾಯಿ ಸ್ವರ್ಗದಿಂದ ಇಳಿಯುವ ಗಂಗಾ ನದಿಯ ನೀರಿನಂತೆ ಎಂದು ಅವಳು ಹೇಳುತ್ತಾಳೆ. ಅವಳು ತನ್ನ ತಾಯಿಯ ಔದಾರ್ಯವನ್ನು ತುಂಬಿ ತುಳುಕುತ್ತಿರುವ ಚಂದ್ರಭಾಗಾ ನದಿಗೆ ಹೋಲಿಸುತ್ತಾಳೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿರುವ ಈ ನದಿಯನ್ನು ಹೆಚ್ಚಾಗಿ ಭೀಮಾ ಎಂದು ಕರೆಯಲಾಗುತ್ತದೆ. ಭಕ್ತಿ ಕವಿ ಸಂತ ಏಕನಾಥರು ತಮ್ಮ ಜನಪ್ರಿಯ ಅಭಂಗ ಅಥವಾ ಭಕ್ತಿಕವಿತೆಯಾದ 'ಮಝೆ ಮಹೆರ್ ಪಂಢಾರಿ'ಯಲ್ಲಿ ಈ ನದಿಯನ್ನು 'ಪಾಪಗಳ ವಿನಾಶಕ' ಎಂದು ಕರೆದು ಅಮರಗೊಳಿಸುತ್ತಾರೆ.

ಈ ಸಂಗ್ರಹದಲ್ಲಿನ ಕೊನೆಯ 10 ಪದ್ಯಗಳಲ್ಲಿ, ಅವರು ತಮ್ಮ ತಾಯಿಯ ಮೇಲಿನ ಅಚಲವಾದ ನಂಬಿಕೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಕ್ಕಪಕ್ಕದವರಿಂದ ಸಾಲ ತಂದರೆ ಮರುಪಾವತಿ ಮಾಡಲು ಲೆಕ್ಕ ಇಡಬಹುದು ಆದರೆ ತಾಯಿ ಕೊಟ್ಟಿದ್ದನ್ನು ಯಾರು ತೀರಿಸುತ್ತಾರೆ? ಇನ್ನೊಂದು ಪದ್ಯದಲ್ಲಿ ತಾಯಿಯನ್ನು ಮಾವಿನ ಹಣ್ಣಿನ ಪುಡಿಗೆ ಹೋಲಿಸಲಾಗಿದೆ. (ಅಮ್ಸುಲ್), ಈ ಪುಡಿಯಿಂದ ಮಾಡಲಾಗುವ ಪಾನೀಯವು ಕುಡಿದವರ ಜೀವವನ್ನು ತಂಪಾಗಿಸುತ್ತದೆ.

"ನಾನು ಆಗಾಗ್ಗೆ ನನ್ನ ತಾಯಿಯ ಅಡುಗೆಯನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಮದುವೆಯಾದ ನಂತರ ತನ್ನ ಹೆತ್ತವರ ಮನೆಯಿಂದ ದೂರವಿರುವ ಗಾಯಕಿ ಹೇಳುತ್ತಾಳೆ. ತನ್ನ ತಾಯಿಯಿಂದ ತನ್ನ ಮನೆಯನ್ನು ಸಮರ್ಥವಾಗಿ ಮತ್ತು ಆರ್ಥಿಕವಾಗಿ ನಡೆಸುವ ರಹಸ್ಯಗಳನ್ನು ಕಲಿತಿದ್ದೇನೆ ಎಂದು ಅವಳು ಹೇಳುತ್ತಾಳೆ - ಧಾನ್ಯವನ್ನು ಎಷ್ಟು ಚೆನ್ನಾಗಿ ಅರೆಯುವಮೂಲಕ ಹೆಚ್ಚು ಹಿಟ್ಟು ಗಿರಣಿಯಾಗುತ್ತದೆ, ಮತ್ತು ಹೆಚ್ಚಿನ ಭಕರ್ (ರೊಟ್ಟಿಯ ಒಂದು ರೂಪ) ಮಾಡಬಹುದು.

ಇಲ್ಲಿರುವ ಓವಿಗಳಲ್ಲಿ ಶಾಹೂಬಾಯಿಯವರ ಸಂದೇಶವು ಸ್ಪಷ್ಟವಾಗಿದೆ: ಹೊರಗಿನ ಜಗತ್ತಿನಲ್ಲಿ ಅಹಿತಕರ ಘಟನೆಗಳಿಂದ ಮಹಿಳೆಗೆ ನೋವಾದಾಗ, ಅವಳ ಕುಟುಂಬದ ಪ್ರೀತಿ, ವಿಶೇಷವಾಗಿ ಅವಳ ತಾಯಿಯ ಪ್ರೀತಿ, ಅವಳ ಗಾಯಗೊಂಡ ಹೃದಯವನ್ನು ಸಮಾಧಾನಿಸುವ ಮುಲಾಮು.

2017ರ ಸೆಪ್ಟೆಂಬರ್ ತಿಂಗಳಿನಲ್ಲಿ ಪರಿ ಜಿಎಸ್‌ಪಿ ತಂಡವು ಶಾಹುಬಾಯಿ ಅವರ ಗ್ರಾಮವಾದ ನಂದಗಾಂವ್‌ಗೆ ಭೇಟಿ ನೀಡಿದಾಗ, ಗಾಯಕಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ; ಹಿಂದಿನ ವರ್ಷವೇ ಅವರು ತೀರಿಕೊಂಡಿದ್ದರು. ಬೀಸುಕಲ್ಲಿನ ಪದಗಳನ್ನು ಹಾಡುವ ಅವರ ಅತ್ತಿಗೆ ಮತ್ತು ಸ್ನೇಹಿತೆ ಕುಸುಮತಾಯಿ ಸೊನಾವಣೆ, ಶಾಹೂಬಾಯಿ ರಚಿಸಿದ ರಾಗಗಳ ಕುರಿತು ಪರಿಗೆ ತಿಳಿಸಿದರು. "ಹೊಸ, ಮಧುರವಾದ ರಾಗಗಳಿಗೆ ಹಾಡುಗಳನ್ನು ಹೊಂದಿಸುವಲ್ಲಿ ಅವಳು ನಿಷ್ಣಾತಳಾಗಿದ್ದಳು. ಯಾವ ಗಲಾ (ರಾಗ) ಓವಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆಯೆನ್ನುವುದು ಅವಳಿಗೆ ನಿಖರವಾಗಿ ತಿಳಿದಿತ್ತು. ಎಲ್ಲರಿಗೂ ಈ ರೀತಿ ಮಾಡಲು ಸಾಧ್ಯವಿಲ್ಲ," ಕುಸುಮತಾಯಿ ಹೇಳಿದರು.

ಸಮೃದ್ಧ ಅರ್ಥಗಳ ರೂಪಕಗಳೊಂದಿಗೆ, ಈ ಹಾಡುಗಳ ಸಂಗ್ರಹವನ್ನು ಶಾಹುಬಾಯಿ ಅವರು ಜನಪ್ರಿಯ ಗೌಲನ್ ಅಥವಾ ಜಾನಪದ ಹಾಡಾದ 'ನೇಸಲೆ ಗಾ ಬಾಯಿ, ಆಜ್ ಶಾಲು ಬನಾರಸಿ' ರಾಗವನ್ನು ಗುನುಗುವ ಮೂಲಕ ಹಾಡಿದ್ದಾರೆ. ಅವರ ವಿಶೇಷ ಶೈಲಿಯಲ್ಲಿ ಹಾಡಲಾದ ಈ ರಾಗವು ಮುಂದಿನ ಓವಿಗಾಗಿ ಸ್ವರವನ್ನು ಹೊಂದಿಸುತ್ತದೆ.

ಶಾಹೂ ಕಾಂಬ್ಳೆಯವರ ದನಿಯಲ್ಲಿ ಗೌಲನ್ ಮತ್ತು ಓವಿಯನ್ನು ಕೇಳಿ

ನನ್ನ ಗುಟ್ಟುಗಳನ್ನು ಗೆಳತಿಯೊಡನೆ ಹಂಚಿಕೊಳ್ಳುವುದು ವ್ಯರ್ಥ
ಗುಟ್ಟು ಗುಟ್ಟಾಗಿಯೇ ಉಳಿಯುವುದು ತಾಯಿಯ ಬಳಿ ಮಾತ್ರ

ವಿಶ್ವಾಸವಿಟ್ಟು ಹೇಳಿದರೆ ಗೆಳತಿಯೊಡನೆ ಗುಟ್ಟು, ರಟ್ಟು ಮಾಡುತ್ತಾಳವಳು ಬೇರೆಯವರೆದುರು
ಅಮ್ಮನೊಬ್ಬಳೆ ಕಾಪಾಡುವುದದನು ತನ್ನ ಎದೆಯೊಳಗೆ

ನಿನ್ನ ಮಾತುಗಳ ತುಂಬಾ ತುಂಬಿಹುದು ದ್ವೇಷದ ವಾಸನೆ
ನಿನ್ನ ಕಟುವಾದ ಮಾತುಗಳು ಮನಸ್ಸನ್ನು ಇರಿವ ಮುಳ್ಳಿನ ಮೊನೆ

ನಿನ್ನ ಇರಿವ ಮಾತುಗಳ ಜೇಡರಬಲೆ ತುಂಬಿಕೊಂಡಿದೆ ಎದೆಯಲ್ಲಿ
ಹಗಲಿರುಳು ನೀರಿರುತ್ತದೆ ಈಗೀಗ ಕಣ್ಣುಗಳಲ್ಲಿ

ಹೈರಾಣಾಗಿದ್ದೇನೆ ನಿನ್ನ ಕಟು ನುಡಿಗಳಿಂದ
ಬೀಸು ಗಾಳಿಗೆ ಹರಿದ ಬಾಳೆಯ ಚಿಗುರೆಲೆಯಂತೆ

ಮೂಳೆಯಂತಹ ಆಭರಣ ತೊಟ್ಟು ಮೆರೆಯುತ್ತಾಳೆ ನನ್ನ ನೆರೆಯವಳು
ಬಾ ನನ್ನ ಮನೆಗೆ, ತೋರಿಸುವೆ ಹೊಳೆಯುವ ನಿಜವಾದ ಚಿನ್ನವನ್ನು (ಮಗನನ್ನು)

ಅವಳು ಒಂದಿಷ್ಟು ಚಿನ್ನ ತೊಟ್ಟು ನೋಡುತ್ತಾಳೆ ನನ್ನತ್ತ ಅಪಮಾನದ ದೃಷ್ಟಿಯಿಂದ
ಬಾ ನನ್ನ ಮನೆಗೆ, ನನ್ನ ಒಡವೆಗಳ ತೋರಿಸುವೆ, ನನ್ನ ಮಗ, ಮಗಳನ್ನು ತೋರಿಸುವೆ

ಭಾರವಾದ ಒಡವೆಗಳು, ಸೀರೆ ತೊಟ್ಟು ಕೂರಬೇಡ ನನ್ನ ಪಕ್ಕದಲ್ಲಿ
ನನ್ನ ಮಕ್ಕಳೆಂದರೆ ನನಗೆ ಅದಕ್ಕೂ ಹೆಚ್ಚು, ಕಸೂತಿಯಂತೆ ಅವರು ಜರತಾರಿ ಸೀರೆಯಲ್ಲಿ

ಆಗಾಗ ತೊಡುವೆನು, ನನ್ನಲ್ಲೂ ಇದೆ ಕಾಸಿನ ಸರ
ಈಗ ನನ್ನ ಮಗನೇ ನನ್ನ ಪಾಲಿನ ಹೊಸ ಚಂದ್ರಹಾರ

ಲೋಕದಿಂದ ಮುಕ್ತಿ ಬೇಕೆಂದರೆ ಮಗಳನ್ನು ಹೆರಬೇಕು
ಈಗ ನನ್ನ ಮುದ್ದಿನ ಮಗಳೇ ನನ್ನ ಕಾಸಿನ ಸರ ಮಾಲೆ

ನನ್ನ ಕುತ್ತಿಗೆಯ ಸುತ್ತಲೂ ಹೊಳೆಯುತ್ತದೆ ಕಾಸಿನ ಸರ
ಈಗ ಉಳಿದ ಒಡವೆಯ ಜೊತೆಗೆ ಹೊಳೆಯುತ್ತಿದೆ ನನ್ನ ಮಗನ ತೋಳೆಂಬ ಚಂದ್ರಹಾರ

ದೇವರೇ, ನಾ ಕೇಳುವುದೊಂದೇ ನಿನ್ನ ಬಳಿ, ಕುಂಕುಮ ನಗುತಿರಲಿ ಹಣೆಯಲ್ಲಿ
ಅದು ಸದಾ ನನ್ನ ಬಳಿಯೇ ಇರಲೆಂದು ಬೇಡುವುದಿಲ್ಲ ನಾನು

ಓ ಮೂರ್ಖ ಮನವೇ, ಯಾರಿಂದಲೂ ಬಯಸಿದರು ಏನನ್ನೂ
ಓ ದೇವರೇ, ಇಷ್ಟೇ ಪ್ರಾರ್ಥನೆ ಸಾಕಷ್ಟು ಶಕ್ತಿ ಕೊಡು ನನ್ನ ಕಂದನಿಗೆ

ಓ ಮೂರ್ಖ ಹೃದಯವೇ, ಯಾರಿಂದಲೂ ಬಯಸಿದರು ಏನನ್ನೂ
ಓ ದೇವರೇ, ಇಷ್ಟೇ ಪ್ರಾರ್ಥನೆ ಸಾಕಷ್ಟು ಶಕ್ತಿ ಕೊಡು ನನ್ನ ಕಂದನಿಗೆ

ನಾನು ಕಡಲ ತೀರಕ್ಕೆ ಹೋಗಿದ್ದೆ ಮಗನ ಕರುಣಿಸೆಂದು ಬೇಡಿಕೊಳ್ಳಲು
ಮತ್ತು ಮಗಳು ಜನಿಸಿದಳು, ಬುಟ್ಟಿಯ ತುಂಬಾ ಮೀನು ದೊರೆತಂತೆ

ನಾನು ಆಕಸ್ಮಿಕವಾಗಿ ಸಮುದ್ರ ತೀರದಲ್ಲಿ ಸ್ನಾನಕ್ಕೆಂದು ಹೋದೆ
ಮತ್ತು ನನ್ನ ಮಗ, ನನ್ನ ಮುತ್ತು, ನನ್ನ ಬೊಗಸೆಯಲ್ಲಿದ್ದ

ಕಡಲು ಬತ್ತಿದ್ದರಿಂದಾಗಿ ನನ್ನ ಬಾಯಾರಿಕೆ ತಣಿಯಲಿಲ್ಲ
ಇಳಿದು ಬಂದಳು ನನ್ನಮ್ಮ ಸ್ವರ್ಗದಿಂದ ದೇವಗಂಗೆಯಂತೆ

ಕಡಲು ಬತ್ತಿದ್ದರಿಂದಾಗಿ ಬಾಯಾರಿಕೆ ತಣಿಯಲಿಲ್ಲ
ನನ್ನ ತಾಯಿ ಚಂಧ್ರಭಾಗ ನದಿಯಂತೆ ದಣಿವಾರಿಸಲು

ಯಾರನ್ನೋ ಅಮ್ಮನೆಂದು ಕರೆದರೆ ಅವರು ಅಮ್ಮನಾಗುವುದಿಲ್ಲ
ನನ್ನ ನೆರೆಮನೆಯ ಹೆಂಗಸು ಎಂದಿಗೂ ಅಮ್ಮನಂತಲ್ಲ

ಅಮ್ಸುಲ್‌ (ಪುನರ್ಪುಳಿ) ಹಣ್ಣಿನ ಗೊಂಚಲಿನಂತೆ ನನ್ನಮ್ಮ
ಈ ಹಣ್ಣಿನ ಗೊಂಚಲಿನಲ್ಲೇ (ಬಹಳ ಕಾಲ ಬದುಕುವ) ಜನಿಸಿದೆ ನಾನು

ಅಮ್ಮ, ಅಮ್ಮ, ಎನ್ನುತ್ತೆವೆ ನಾವು, ತಾಯಿಯೆಂದರೆ ಚಿನ್ನದ ಒಡವೆ
ಅದು ಪರಿಶುದ್ಧ ಚಿನ್ನ, ಅದನ್ನು ಪರೀಕ್ಷಿಸುವುದೇ ಬೇಡ

ಪಕ್ಕದ ಮನೆಯಿಂದಲಾದರೆ ಎರಡು ಸೇರು, ಮೂರು ಸೇರು ಕಡ ಪಡೆಯುತ್ತೇನೆ
ಅಮ್ಮನಿಂದ ತರುವುದಾದರೆ ಯಾವ ಲೆಕ್ಕವನ್ನೂ ಇಡಬೇಕಿಲ್ಲ

ಪಕ್ಕದ ಮನೆಯಿಂದ ಕಡ ಪಡೆದರೆ, ಇಷ್ಷಿಷ್ಟಾಗಿ ಮರಳಿಸುತ್ತೇನೆ
ಅಮ್ಮನಿಂದ ಪಡೆದಿದ್ದು ಮರಳಿ ಕೊಟ್ಟ ಅಭ್ಯಾಸವೇ ಇಲ್ಲ

ನೆರೆ ಮನೆಯಿಂದ ಕಡ ಪಡೆಯುತ್ತೇನೆ, ಬಾಗಿಲಿನಲ್ಲಿ ಕುಳಿತು
ನನ್ನ ತಾಯಿಯಿಂದ ಹುಟ್ಟಿದಾಗಿನಿಂದಲೂ ಪಡೆಯುತ್ತಿದ್ದೇನೆ

ಹೆಣ್ಣು, ಹಿಟ್ಟನ್ನು ಅರೆಯುತ್ತಾಳೆ ನುಣ್ಣಗೆ, ಒಂದೂ ಅರ್ಧ ರೊಟ್ಟಿ ಮಾಡಲೆಂದು
ಅಮ್ಮ ಹೇಳಿಕೊಟ್ಟಿದ್ದಾಳೆ ಮನೆ ನೋಡಿಕೊಳ್ಳುವುದು ಹೇಗೆಂದು

ಚಂದದ ದುಂಡನೆ ರೊಟ್ಟಿಗೆ ಚೆನ್ನಾಗಿ ಹಿಟ್ಟು ಬೀಸಿರಬೇಕು
ಆಗಾಗ ನೆನಪಾಗುತ್ತದೆ ನನ್ನಮ್ಮನ ಕೈಯಡುಗೆ


Shahu Kamble

ಪ್ರದರ್ಶಕರು/ಗಾಯಕರು : ಶಾಹೂ ಕಾಂಬ್ಳೆ

ಗ್ರಾಮ : ನಂದಗಾಂವ್

ತಾಲ್ಲೂಕು : ಮುಲ್ಶಿ

ಜಿಲ್ಲೆ : ಪುಣೆ

ಜಾತಿ : ನವ ಬೌದ್ಧ

ವಯಸ್ಸು : 70 (ಆಗಸ್ಟ್ 2016ರಲ್ಲಿ ಗರ್ಭಾಶಯದ ಕ್ಯಾನ್ಸರಿನಿಂದ ನಿಧನರಾದರು)

ಮಕ್ಕಳು : ಇಬ್ಬರು ಪುತ್ರರು ಮತ್ತು ಇಬ್ಬರು ಹೆಣ್ಣುಮಕ್ಕಳು

ಉದ್ಯೋಗ : ಕೃಷಿ ಮತ್ತು ಸೂಲಗಿತ್ತಿ

ದಿನಾಂಕ : ಈ ಹಾಡುಗಳು ಮತ್ತು ಅದರೊಂದಿಗಿನ ಮಾಹಿತಿಯನ್ನು ಅಕ್ಟೋಬರ್ 5, 1999 ರಂದು ರೆಕಾರ್ಡ್ ಮಾಡಲಾಯಿತು. ಛಾಯಾಚಿತ್ರಗಳನ್ನು ಸೆಪ್ಟೆಂಬರ್ 11, 2017ರಂದು ತೆಗೆದುಕೊಳ್ಳಲಾಗಿದೆ.

ಪೋಸ್ಟರ್: ಊರ್ಜಾ

ಹೇಮಾ ರಾಯಿರ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರಿಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಇಲ್ಲಿ ಓದಿ.

ಅನುವಾದ: ಶಂಕರ ಎನ್‌. ಕೆಂಚನೂರು

ਨਮਿਤਾ ਵਾਇਕਰ ਇੱਕ ਲੇਖਿਕਾ, ਤਰਜਮਾਕਾਰ ਅਤੇ ਪੀਪਲਸ ਆਰਕਾਈਵ ਆਫ਼ ਰੂਰਲ ਇੰਡੀਆ ਵਿਖੇ ਪ੍ਰਬੰਧਕੀ ਸੰਪਾਦਕ ਹਨ। ਉਹ 2018 ਵਿੱਚ ਪ੍ਰਕਾਸ਼ਤ 'The Long March' ਨਾਵਲ ਦੀ ਰਚੇਤਾ ਹਨ।

Other stories by Namita Waikar
PARI GSP Team

ਪਾਰੀ ਗ੍ਰਿੰਡਮਿਲ ਸੌਂਗਸ ਪ੍ਰਾਜੈਕਟ ਟੀਮ: ਆਸ਼ਾ ਓਗਲੇ (ਤਰਜ਼ਮਾਕਾਰ); ਬਰਨਾਰਡ ਬੇਲ (ਡਿਜੀਟੀਜੇਸ਼ਨ, ਡਾਟਾਬੇਸ ਡਿਜਾਇਨ, ਡਿਵਲਪਮੈਂਟ ਐਂਡ ਮੇਨਟੰਨੈਂਸ); ਜਤਿੰਦਰ ਮੇਡ (ਟ੍ਰਾਂਸਕ੍ਰਿਪਸ਼ਨ, ਤਰਜ਼ਮਾ ਸਹਿਯੋਗੀ); ਨਮਿਤਾ ਵਾਈਕਰ (ਪ੍ਰਾਜੈਕਟ ਲੀਡ ਅਤੇ ਨਿਰੀਖਕ); ਰਜਨੀ ਖਾਲਾਦਕਰ (ਡਾਟਾ ਐਂਟਰੀ)।

Other stories by PARI GSP Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru