"ಟಿಕ್ರಿ ಗಡಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕನಿಷ್ಠ 50 ಕಿ.ಮೀ. ದೂರದವರೆಗೆ ಟ್ರಾಕ್ಟರುಗಳ ಕ್ಯೂ ಇದೆ" ಎಂದು ಕಮಲ್ ಬ್ರಾರ್ ಹೇಳುತ್ತಾರೆ. ಅವರು ಮತ್ತು ಹರಿಯಾಣದ ಫತೇಹಾಬಾದ್ ಜಿಲ್ಲೆಯ ಇತರ 20 ರೈತರು ಜನವರಿ 24 ರಂದು ಎರಡು ಟ್ರಾಕ್ಟರುಗಳು ಮತ್ತು ಎರಡು ಟ್ರಾಲಿಯೊಂದಿಗೆ ಟಿಕ್ರಿ ಗಡಿಯನ್ನು ತಲುಪಿದರು.
2020ರ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26ರಿಂದ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹರಿಯಾಣ-ದೆಹಲಿ ಗಡಿಯಲ್ಲಿರುವ ಟಿಕ್ರಿ ಗಡಿ ಅವುಗಳಲ್ಲಿ ಒಂದು.
ಈ ಆಂದೋಲನದ ಭಾಗವಾಗಿ ಜನವರಿ 26ರಂದು ರಾಜಧಾನಿಯಲ್ಲಿ ಅಭೂತಪೂರ್ವ ಟ್ರ್ಯಾಕ್ಟರ್ ರ‍್ಯಾಲಿಯನ್ನು ನಡೆಸಲು ರೈತರು ನಿರ್ಧರಿಸಿದ್ದಾರೆ.
ಈ ರ‍್ಯಾಲಿಯಲ್ಲಿ ಭಾಗವಹಿಸಲು ಅಲ್ಲಿ ಸೇರಿರುವವರಲ್ಲಿ ನಿರ್ಮಲ್ ಸಿಂಗ್ ಕೂಡ ಒಬ್ಬರು. ಪಂಜಾಬ್‌ನ ಫಾಝಿಲ್ಕಾ ಜಿಲ್ಲೆಯ ಅಬೋಹರ್ ಬ್ಲಾಕ್‌ನಲ್ಲಿರುವ ತನ್ನ ಊರಾದ ವಹಾಬ್ವಾಲಾದಿಂದ ನಾಲ್ಕು ಟ್ರಾಕ್ಟರುಗಳೊಂದಿಗೆ ಬಂದ ನಿರ್ಮಲ್ ಸಿಂಗ್‌ಗೆ ಟಿಕ್ರಿಯಲ್ಲಿ ಪಾರ್ಕಿಂಗ್ ಸ್ಥಳಾವಕಾಶ ದೊರೆಯಲು ಹಲವಾರು ಗಂಟೆಗಳ ಸಮಯ ಬೇಕಾಯಿತು. ಕಿಸಾನ್ ಮಜ್ದೂರ್ ಏಕ್ತಾ ಯೂನಿಯನ್ ಬ್ಯಾನರ್ ಅಡಿಯಲ್ಲಿ ವಹಾಬ್ವಾಲಾದ 25 ಜನರೊಂದಿಗೆ ಅವರು ಇಲ್ಲಿಗೆ ಬಂದಿದ್ದಾರೆ. "ಇನ್ನೂ ಅನೇಕ ಜನರು ಬರುತ್ತಿದ್ದಾರೆ. ಟ್ರಾಕ್ಟರುಗಳ ಸಂಖ್ಯೆಯು ಅನೇಕ ಪಟ್ಟು ಹೆಚ್ಚಾಗಲಿದೆ, ನೀವು ನೋಡಲಿದ್ದೀರಿ,” ಎಂದು ಅವರು ಹೇಳಿದರು.








