ಹನುಮಂತ್ ಗುಂಜಲ್ ಅವರು ಶಹಜಹಾನ್ಪುರದ ಪ್ರತಿಭಟನಾ ಸ್ಥಳದಲ್ಲಿ ಮೂರು ದಿನಗಳನ್ನು ಕಳೆದ ನಂತರ ತಮ್ಮ ಊರಿಗೆ ಮರಳಿದರು, ಅಲ್ಲಿಂದ ಮರಳುವಾಗ ಅವರೊಂದಿಗೆ ಹಲವಾರು ಮರೆಯಲಾಗದ ನೆನಪುಗಳನ್ನು ಹೊತ್ತುತಂದರು.
ಡಿಸೆಂಬರ್ 25ರಂದು ಶಹಜಹಾನ್ಪುರ ತಲುಪಿದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದ್ವಾಡ್ ಗ್ರಾಮದ 41 ವರ್ಷದ ಭಿಲ್ ಬುಡಕಟ್ಟು ರೈತ "ಅಲ್ಲಿನ ರೈತರು ಅತ್ಯಂತ ಒಳ್ಳೆಯ ಆತಿಥ್ಯ ನೀಡುವ ಮನೋಭಾವ ಹೊಂದಿರುವವರು ಮತ್ತು ನಿಜವಾಗಿಯೂ ಒಳ್ಳೆಯವರು" ಎಂದು ಹೇಳುತ್ತಾರೆ. "ಅಗತ್ಯಕ್ಕೆಂದು ನಾವು ನಮ್ಮೊಂದಿಗೆ ಅಕ್ಕಿ ಮತ್ತು ಬೇಳೆಯನ್ನು ಕೊಂಡೊಯ್ದಿದ್ದೆವು. ಆದರೆ ನಮಗೆ ಅದನ್ನು ಬಳಸುವ ಪ್ರಮೇಯವೇ ಬರಲಿಲ್ಲ. ಅವರು ನಮಗೆ ತುಪ್ಪದಿಂದ ಕೂಡಿದ ರುಚಿಯಾದ ಆಹಾರ ಬಡಿಸಿದರು. ಅವರು ಮುಕ್ತ ಆದರತೆಯಿಂದ ನಮ್ಮನ್ನು ಸ್ವಾಗತಿಸಿದರು."
ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಲು ನಾಸಿಕ್‌ನಿಂದ ಒಂದು ಗುಂಪಿನ ವಾಹನಗಳು ಡಿಸೆಂಬರ್ 21ರಂದು ದೆಹಲಿಗೆ ತೆರಳಿದವು. ಸುಮಾರು 1,400 ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ದೆಹಲಿಯ ಹೊರವಲಯಕ್ಕೆ ಸುಮಾರು 1,000 ರೈತರು ತಲುಪಲು ಐದು ದಿನಗಳು ಬೇಕಾಯಿತು. ಜಾಥಾ ಅಂತ್ಯಗೊಂಡ ಶಹಜಹಾನ್ಪುರ್, ರಾಜಸ್ಥಾನ-ಹರಿಯಾಣ ಗಡಿಯಲ್ಲಿ ದೆಹಲಿಯಿಂದ ದಕ್ಷಿಣಕ್ಕೆ 120 ಕಿ.ಮೀ ದೂರದಲ್ಲಿದೆ. ಇದು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಲ್ಲಿ ಒಂದಾಗಿದೆ, ಇಲ್ಲಿ ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಸಾವಿರಾರು ರೈತರು ನವೆಂಬರ್ 26ರಿಂದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
. ಈ ರೈತರು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತರಲಾಯಿತು. ಕಾನೂನುಗಳು ಹೀಗಿವೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.





