ಅವರ ಕೈಗಳನ್ನು ಬಂಧಿಸಲಾಗಿದೆ ಮತ್ತು ಕುತ್ತಿಗೆಗೆ ಹಾಕಿರುವ ಚೈನ್ ಕಾಲಿನವರೆಗೂ ಬಂದಿದೆ. ಕಪ್ಪು ಪಟ್ಟೆಯಿರುವ ಅವರ ಕುರ್ತಾ ಅವರನ್ನು ಒಬ್ಬ ಟಿಪಿಕಲ್ ಜೈಲು ಖೈದಿಯಂತೆಯೇ ಕಾಣುವಂತೆ ಮಾಡಿದೆ.
ಆದರೆ 42 – ವರ್ಷದ ಕಬಲ್ ಸಿಂಗ್ ತಾವುದೇ ಅಪರಾಧಕ್ಕಾಗಿ ಶಿಕ್ಷೆಗೆ ಒಳಪಟ್ಟವರಲ್ಲ. ಅವರ ಸರಪಳಿ ಸ್ವಯಂ ತೊಡಿಸಿಕೊಂಡಿದ್ದು. ಅವರು ಪಂಜಾಬಿನ ಫಝಿಲ್ಕಾ ಜಿಲ್ಲೆಯ ರುಕಾನ್‌ಪುರದ (ಖುಯ್‌ಕೇರ ಎಂದೂ ಕರೆಯಲಾಗುತ್ತದೆ) ಗ್ರಾಮದ ಒಬ್ಬ ರೈತ.
ಇತ್ತೀಚಿನ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಲಕ್ಷಾಂತರ ರೈತರಲ್ಲಿ ಇವರೂ ಸೇರಿದ್ದಾರೆ, ಈ ಕಾನೂನುಗಳನ್ನು ಮೊದಲು 2020ರ ಜೂನ್ 5ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿಸಲು ಆತುರ ತೋರಿಸಲಾಯಿತು.
ಹಾಗಾದರೆ ಸ್ವಯಂ ಪ್ರೇರಿತ ಸರಪಳಿ ಬಂಧನ ಏಕೆ?
"ರೈತರು ತಮ್ಮ ಹಕ್ಕುಗಳಿಗಾಗಿ ಇಷ್ಟು ದಿನ ಒತ್ತಾಯಿಸುತ್ತಿರುವುದನ್ನು ನೋಡಿದಾಗ, ಅವರ ನೋವನ್ನು ನನ್ನಿಂದ ಸಹಿಸಲಾಗಲಿಲ್ಲ. ನನ್ನ ದೇಹದ ಸುತ್ತಲೂ ನೀವು ನೋಡುವ ಈ ಸರಪಳಿಯು ಅವರ ಸಂಕಟದ ಪ್ರತಿಬಿಂಬವಾಗಿದೆ. ಅವರು ಎಷ್ಟು ಸಂಕಟದಲ್ಲಿದ್ದಾರೋ ಅಷ್ಟೇ ಸಂಕಟ ನನಗೂ ಇದೆ”
"ನನ್ನ ಮೈಮೇಲೆ ನೀವು ನೋಡುತ್ತಿರುವ ಸರಪಳಿ, ನಮ್ಮೆಲ್ಲರನ್ನೂ ಸುತ್ತುವರೆದಿದೆ, ನೀವು ಅದನ್ನು ಕಂಡುಕೊಳ್ಳಬೇಕಿದೆ." ಕಬಲ್ ಸಿಂಗ್ ಮೂರು ಜನಪ್ರಿಯವಲ್ಲದ ಕಾನೂನುಗಳನ್ನು ನಮ್ಮೆಲ್ಲರನ್ನು ಬಂಧಿಸಿರುವ ಆ ಸರಪಳಿಗಳಲ್ಲಿನ ಇತ್ತೀಚಿನ ಕೊಂಡಿಗಳಾಗಿ ನೋಡುತ್ತಾರೆ.



