ಡಿ. ಅಮರನಾಥ ರೆಡ್ಡಿಯವರು ತಾವು ಹಾಕಿಸಿದ್ದ ಮೂರನೇ ಕೊಳವೆ ಬಾವಿಯೂ ಬತ್ತಿದ ನಂತರ ಬೆಳೆಗಳಿಗೆ ನೀರುಣಿಸಲು ಮಳೆಯನ್ನೇ ಆಶ್ರಯಿಸಬೇಕಾಯಿತು. ಆದರೆ ಚಿತ್ತೂರು ಜಿಲ್ಲೆಯ ಮುಡಿವೇಡು ಗ್ರಾಮದ ಈ 51 ವರ್ಷದ ರೈತ ಟೊಮೆಟೊ ಬೆಳೆಯುವ ಹೊಲವಿರುವ ರಾಯಲಸೀಮದಲ್ಲಿ ಮಳೆಯೆನ್ನುವುದು ಬಹಳ ಅನಿಶ್ಚಿತವಾಗಿರುತ್ತದೆ. ಈ ಕಾರಣಕ್ಕಾಗಿಯೇ ಅಮರನಾಥ 5 ಲಕ್ಷ ರೂಪಾಯಿಗಳನ್ನು ಬೋರ್ ಕೊರೆಸುವುದಕ್ಕೆಂದು ವ್ಯಯಿಸಿದ್ದರು. ಈ ಹಣಕ್ಕಾಗಿ ಅವರು ಖಾಸಗಿ ಲೇವಾದೇವಿದಾರರನ್ನು ಆಶ್ರಯಿಸಿದ್ದರು. ಮೊದಲನೇ ಬೋರ್ ವಿಫಲಗೊಂಡಾಗ, ಎರಡನೆಯದನ್ನು ಕೊರೆಸಿದರು. ಅದೂ ವಿಫಲಗೊಂಡು ಮೂರನೇ ಬೋರ್ ಕೊರೆಸುವ ಹೊತ್ತಿಗೆ ಅವರು ಸಾಲದ ಕೂಪದಲ್ಲಿದ್ದರು ಮತ್ತು ನೀರೆನ್ನುವುದು ಅವರ ಪಾಲಿಗೆ ದೂರವಾಗಿಯೇ ಉಳಿಯಿತು.
ಅಮರನಾಥ ಅವರು 2020ರ ಎಪ್ರಿಲ್-ಮೇ ತಿಂಗಳಿನಲ್ಲಿ ಬೆಳೆ ಕೈಗೆ ಬರುವುದನ್ನೇ ಕಾತರದಿಂದ ಕಾಯುತ್ತಿದ್ದರು. ಈ ಮೂಲಕ ಅವರು ತನ್ನ ಮೇಲಿರುವ ಸಾಲದ ಹೊರೆಯನ್ನು ಒಂದಿಷ್ಟು ಕಡಿಮೆ ಮಾಡಿಕಕೊಳ್ಳುವ ಆಲೋಚನೆಯಲ್ಲಿದ್ದರು. ಬೋರ್ ಹಾಕಿಸಲು ಮಾಡಿದ್ದ ಸಾಲ, ಹಿರಿಯ ಮಗಳ ಮದುವೆಗೆಂದು ಮಾಡಿದ್ದ ಸಾಲ ಮತ್ತು ಬೆಳೆ ಸಾಲ ಸೇರಿ ರೂ. 10 ಲಕ್ಷಗಳಷ್ಟು ಸಾಲದಲ್ಲಿದ್ದರು. ಆದರೆ ಕಳೆದ ವರ್ಷದ ಮಾರ್ಚ್ 24ರಂದು ಪ್ರಧಾನಮಂತ್ರಿ ಅಚಾನಕ್ ಘೋಷಿಸಿದ ಲಾಕ್‌ಡೌನ್ ಅವರ ಕನಸಿಗೆ ಮಣ್ಣು ಸುರಿಯಿತು. ಅವರು ತಾವು ಬೆಳೆದ ಟೊಮೆಟೊ ಹೊಲದಲ್ಲೇ ಹಣ್ಣಾಗಿ ಕೊಳೆಯುವುದನ್ನು ಅಸಹಾಯಕರಾಗಿ ನೋಡುತ್ತಾ ನಿಲ್ಲಬೇಕಾಯಿತು.
"ಈ ಕೊರೋನಾ ಸಮಯದಲ್ಲಿ ಪರಿಸ್ಥಿತಿಗಳು ಸುಧಾರಿಸಲಿಕ್ಕಿಲ್ಲ ಎಂದು ಅವರಿಗೆ ಎನ್ನಿಸಿರಬಹುದು ಹಾಗೂ ಇದರಿಂದಾಗಿ ಬದುಕಿನ ಕುರಿತು ಭರವಸೆ ಕಳೆದುಕೊಂಡಿರಬಹುದು" ಎಂದು ಹೇಳುತ್ತಾ ಮರನಾಥ ಅವರ ಪತ್ನಿ ಡಿ. ವಿಮಲಾ ತನ್ನ ಪತಿ ಸೆಪ್ಟೆಂಬರ್ 17, 2020ರಂದು ವಿಷವನ್ನು ಏಕೆ ಸೇವಿಸಿದರೆನ್ನುವುದನ್ನು ವಿವರಿಸಲು ಪ್ರಯತ್ನಿಸುತ್ತಿದ್ದರು. "ಅವರು ಇದಕ್ಕೂ 10 ದಿನಗಳ ಮೊದಲು ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ನಾವು ಅವರನ್ನು ಉಳಿಸಿಕೊಳ್ಳಲಿ ಉಳಿಸಲು ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ [180 ಕಿಲೋಮೀಟರ್ ದೂರ] ಕರೆದುಕೊಂಡು ಹೋದೆವು. ಆಗ 1 ಲಕ್ಷ ರೂಪಾಯಿ ಖರ್ಚಾಗಿತ್ತು." ಎಂದು ಅಮರನಾಥ ಅವರ ಬಳಿ ಇನ್ನು ಮುಂದೆ ಹೀಗೆ ಮಾಡದಂತೆ ಮನವಿ ಮಾಡಿದ್ದ ವಿಮಲಾ ಹೇಳುತ್ತಾರೆ.
ಚಿತ್ತೂರಿನಲ್ಲಿ ವರದಿಯಾಗಿರುವ ರೈತರ ಆತ್ಮಹತ್ಯೆಗಳಿಗೆ ಬೋರ್‌ವೆಲ್ ವೈಫಲ್ಯವು ಪ್ರಮುಖ ಕಾರಣವೆಂದು ಇಲ್ಲಿನ ಪೋಲಿಸ್ ವರದಿಗಳು ಹೇಳುತ್ತವೆ. ಉಳಿದ ಕಾರಣಗಳೆಂದರೆ ಟೊಮೆಟೊ ಬೆಳೆ ವೈಫಲ್ಯ ಮತ್ತು ಕೃಷಿ ಸಾಲ. ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಬಂದ ಆದೇಶವು ಹೆಚ್ಚಿನ ಕಾರಣಗಳನ್ನು ಒದಗಿಸುತ್ತದೆ: "ಕೊಳವೆಬಾವಿಗಳ ವೈಫಲ್ಯ, ಹೆಚ್ಚಿನ ಕೃಷಿ ವೆಚ್ಚದೊಂದಿಗೆ ವಾಣಿಜ್ಯ ಬೆಳೆಗಳನ್ನು ಹೆಚ್ಚಿಸುವುದು, ಲಾಭದಾಯಕವಲ್ಲದ ಬೆಲೆಗಳು, ಮೌಖಿಕ ಬೋಗ್ಯ ಮತ್ತು ಬ್ಯಾಂಕ್ ಸಾಲಗಳನ್ನು ಪಡೆಯಲು ಅನರ್ಹತೆ, ಹೆಚ್ಚಿನ ಬಡ್ಡಿ ದರಗಳೊಂದಿಗೆ ಖಾಸಗಿ ಸಾಲ, ಪ್ರತಿಕೂಲ ಋತುಮಾನದ ಪರಿಸ್ಥಿತಿಗಳು, ಮಕ್ಕಳ ಶಿಕ್ಷಣ, ಅನಾರೋಗ್ಯ ಮತ್ತು ಮದುವೆಗಳಿಗೆ ಭಾರಿ ವೆಚ್ಚ ಮುಂತಾದ ಹಲವು ಸಂಗತಿಗಳು ಆತ್ಮಹತ್ಯೆಗೆ ಕಾರಣವಾಗುತ್ತಿವೆ."
ಅನೇಕರ ಪಾಲಿಗೆ ಇದ್ದಕ್ಕಿದ್ದಂತೆ ಘೋಷಿಸಲ್ಪಟ್ಟ ಲಾಕ್‌ಡೌನ್ ಸಾವಿನ ಕುಣಿಕೆಯಾಗಿ ಮಾರ್ಪಟ್ಟಿತು. 2020ರಲ್ಲಿ ಮಾತ್ರವೇ ಚಿತ್ತೂರು ಜಿಲ್ಲೆಯ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 2014ರ ನಂತರ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಅವರಲ್ಲಿ 27 ಮಂದಿ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ನಿಧನರಾದರು.







