"ಮುಂಬಬರುವ ದಿನಗಳಲ್ಲಿ ಯಾವುದೇ ಎಂಎಸ್‌ಪಿ ಇರುವುದಿಲ್ಲ, ಅವರು ಕ್ರಮೇಣ ಎಪಿಎಂಸಿಯನ್ನು ನಿಲ್ಲಿಸುತ್ತಾರೆ ಮತ್ತು ವಿದ್ಯುತ್ ಸರಬರಾಜನ್ನು ಖಾಸಗೀಕರಣಗೊಳಿಸುತ್ತಿದ್ದಾರೆ ಇದರಿಂದಾಗಿ ನಾವು ಚಿಂತಿತರಾಗಿದ್ದೇವೆ” ಎಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈತ ಡಿ. ಮಲ್ಲಿಕಾರ್ಜುನಪ್ಪ ಹೇಳಿದರು.
61 ವರ್ಷದ ಮಲ್ಲಿಕಾರ್ಜುನಪ್ಪನವರು ಜನವರಿ 25ರಂದು ಬೆಂಗಳೂರಿನಲ್ಲಿ ಮರುದಿನ ನಡೆಯಲಿರುವ ರೈತರ ಗಣರಾಜ್ಯೋತ್ಸವದ ಟ್ರಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸುವ ಸಲುವಾಗಿ ಹುಲುಗಿನಕೊಪ್ಪ ಗ್ರಾಮದಿಂದ ಬಂದಿದ್ದರು. ಅವರು ಶಿಕಾರಿಪುರ ತಾಲ್ಲೂಕಿನ ತಮ್ಮ ಊರಿನಿಂದ ಸುಮಾರು 350 ಕಿಲೋಮೀಟರ್ ಪ್ರಯಾಣಿಸಿದ್ದರು. "ದೊಡ್ಡ ಕಂಪನಿಗಳ ಮಾತನ್ನು ಕೇಳುವ ಬದಲು, ಅವರು [ಕೇಂದ್ರ ಸರ್ಕಾರ] ಎಪಿಎಂಸಿಯನ್ನು ಸುಧಾರಿಸಬೇಕು ಇದರಿಂದ ನಮಗೆ ಸರಿಯಾದ ಬೆಲೆ ಸಿಗುತ್ತದೆ" ಎಂದು ಅವರು ಹೇಳಿದರು.
ಹೊಸ ಕೃಷಿ ಕಾನೂನುಗಳು ಅವರ ಕಳವಳವನ್ನು ಇನ್ನಷ್ಟು ಹೆಚ್ಚಿಸಿವೆ - ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ದುರ್ಬಲಗೊಳಿಸುತ್ತವೆ, ಇವೆರಡೂ ಅವರ ಬೆಳೆ ಖರೀದಿಯನ್ನು ಖಾತರಿಗೊಳಿಸುತ್ತಿದ್ದವು.
ಮಲ್ಲಿಕಾರ್ಜುನಪ್ಪನವರು ತನ್ನ 12 ಎಕರೆ ಭೂಮಿಯಲ್ಲಿ 3-4 ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಾರೆ. ಉಳಿದ ಭೂಮಿಯಲ್ಲಿ ಅಡಿಕೆ ತೋಟವಿದೆ. "ಕಳೆದ ವರ್ಷ ಅಡಿಕೆ ಇಳುವರಿ ಕಳಪೆಯಾಗಿತ್ತು, ಮತ್ತು ಅಷ್ಟೊಂದು ಭತ್ತವೂ ಸಿಗಲಿಲ್ಲ" ಎಂದು ಅವರು ಹೇಳಿದರು. “ನಾನು ಬ್ಯಾಂಕಿನಿಂದ ತೆಗೆದುಕೊಂಡ 12 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಬೇಕಾಗಿದೆ. ಅವರು [ರಾಜ್ಯ ಸರ್ಕಾರ] ಸಾಲವನ್ನು ಮನ್ನಾ ಮಾಡಿರುವುದಾಗಿ ಹೇಳಿದ್ದರು. ಆದರೆ ಬ್ಯಾಂಕುಗಳು ಇನ್ನೂ ನಿರಂತರವಾಗಿ ನನಗೆ ನೋಟಿಸ್ ಕಳುಹಿಸುತ್ತಿವೆ ಮತ್ತು ದಂಡದ ಎಚ್ಚರಿಕೆ ನೀಡುತ್ತಿವೆ. ಈ ಎಲ್ಲದರ ಕುರಿತು ಚಿಂತಿತನಾಗಿದ್ದೇನೆ,” ಎಂದು ಕೋಪದಿಂದ ಹೇಳಿದರು.
ಮೆರವಣಿಗೆಯ ಹಿಂದಿನ ದಿನ ಕರ್ನಾಟಕದ ದೂರದ ಜಿಲ್ಲೆಗಳಿಂದ ಮಲ್ಲಿಕಾರ್ಜುನಪ್ಪ ಅವರಂತಹ ರೈತರು ಬೆಂಗಳೂರಿಗೆ ಬಂದರು. ಆದರೆ ಜನವರಿ 26ರಂದು ಮಂಡ್ಯ, ರಾಮನಗರ, ತುಮಕೂರು ಮತ್ತು ಇತರ ಪಕ್ಕದ ಜಿಲ್ಲೆಗಳ ರೈತರು ಜನವರಿ 26ರಂದು ಬೆಳಿಗ್ಗೆ 9 ಗಂಟೆಯಿಂದ ಬೆಂಗಳೂರು ನಗರದ ಹೊರವಲಯದಲ್ಲಿ ಟ್ರಾಕ್ಟರುಗಳು, ಕಾರುಗಳು ಮತ್ತು ಬಸ್ಸುಗಳಲ್ಲಿ ಬಂದು ಸೇರಲು ಪ್ರಾರಂಭಿಸಿದರು. ಅವರು ಮಧ್ಯಾಹ್ನ ಬೆಂಗಳೂರಿನ ಕೇಂದ್ರ ಭಾಗವಾದ ಗಾಂಧಿ ನಗರ ಪ್ರದೇಶದ ಸ್ವಾತಂತ್ರ್ಯ ಉದ್ಯಾನವನವನ್ನು ತಲುಪಿ ದೆಹಲಿಯ ರೈತರ ಟ್ರಾಕ್ಟರ್ ಮೆರವಣಿಗೆಯನ್ನು ಬೆಂಬಲಿಸುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿತ್ತು. ನವೆಂಬರ್ 26ರಿಂದ ದೆಹಲಿಯ ಗಡಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರು ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಆಯೋಜಿಸಿದ್ದರು.







