“ನನ್ನ ಮಗ ಸುಮಾರು ನಾಲ್ಕು ವರ್ಷಗಳ ಹಿಂದೆ ತೀರಿಕೊಂಡ. ಒಂದು ವರ್ಷದ ನಂತರ, ನನ್ನ ಪತಿ ಕೂಡ ನಿಧನರಾದರು” ಎಂದು 70 ವರ್ಷದ ಭೀಮಾ ತಾಂಡಲೆ ಹೇಳುತ್ತಾರೆ. ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಸುಡುವ ಬಿಸಿಲಿನಲ್ಲಿ ಕುಳಿತು, ಒಂದು ವರ್ಷದೊಳಗೆ ಎದುರಾದ ಈ ಎರಡು ವಿನಾಶಕಾರಿ ನಷ್ಟಗಳ ಬಗ್ಗೆ ಹೇಳುತ್ತಿದ್ದರು. ಪತಿ ಮತ್ತು ಮಗ ಇಬ್ಬರು ಕೂಡ ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಭೀಮಾ ಅವರ ಮಗ ದತ್ತು ಅವರು ಸಾಯುವಾಗ ಅವರಿಗೆ ಕೇವಲ 30 ವರ್ಷ, ಮತ್ತು ಅವರ ಪತಿ ಉತ್ತಮ್ ಅವರ 60ರ ದಶಕದ ಮಧ್ಯದಲ್ಲಿದ್ದರು. "ಅಂದಿನಿಂದ, ನಾನು ನನ್ನ ಸೊಸೆ ಸಂಗಿತಾಳೊಂದಿಗೆ ಮನೆಯೊಂದನ್ನು ನಿರ್ವಹಿಸುತ್ತಿದ್ದೇನೆ" ಎಂದು ಕೃಷಿ ಕಾರ್ಮಿಕರಾಗಿ ದುಡಿಮೆ ಮಾಡುತ್ತಿರುವ ಭೀಮಾ ಹೇಳುತ್ತಾರೆ. "ನನ್ನ ಮೊಮ್ಮಗ, ಸುಮಿತ್‌ಗೆ ಈಗ14 ವರ್ಷ. ನಾವು ಅವನನ್ನು ನೋಡಿಕೊಳ್ಳಬೇಕು."
ಇದೆಲ್ಲದರ ನಡುವೆಯೂ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಜನವರಿ 25-26ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಭೀಮಾ ಮುಂಬೈಗೆ ಬಂದಿದ್ದಾರೆ. ದೆಹಲಿಯ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಲು ಸಮುಕ್ತಾ ಶೆಟ್ಕರಿ ಕಮಗರ್ ಮೋರ್ಚಾ ಈ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ. ಅಖಿಲ ಭಾರತ ಕಿಸಾನ್ ಸಭೆಯಿಂದ ಸಂಘಟಿಸಲಾಗಿರುವ ಮಹಾರಾಷ್ಟ್ರದ 21 ಜಿಲ್ಲೆಗಳ ರೈತರು ಇದಕ್ಕಾಗಿ ಮುಂಬೈಗೆ ಬಂದಿದ್ದಾರೆ.
ಜನವರಿ 23ರ ಬೆಳಿಗ್ಗೆ ಹೊರಟು ಮರುದಿನ ಮುಂಬೈ ತಲುಪಿದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನ ಅಂಬೆವಾನಿ ಎಂಬ ತನ್ನ ಹಳ್ಳಿಯ 12-15 ಮಹಿಳೆಯರಲ್ಲಿ ಭೀಮಾ ಕೂಡ ಒಬ್ಬರು. ಅವರಲ್ಲಿ ಮೂವರು ಕೃಷಿಕ ವಿಧವೆಯರು.
ಸುಮನ್ ಬೊಂಬಲೆ ಅವರ ಪತಿ ಒಂದು ದಶಕದ ಹಿಂದೆ ನಿಧನರಾದರು. "ಅವರು ಬಳಲಿಕೆ ಮತ್ತು ಮಾನಸಿಕ ಒತ್ತಡದಿಂದಾಗಿ ನಿಧನರಾದರು" ಎಂದು ಸುಮನ್ ಹೇಳುತ್ತಾರೆ, ಅವರ ಪತಿ ಮೋತಿರಾಮ್‌ಗೆ ಆಗ 50 ವರ್ಷ ವಯಸ್ಸಾಗಿತ್ತು. “ನಾವು ಹಲವು ವರ್ಷಗಳಿಂದ ಐದು ಎಕರೆ ಅರಣ್ಯ ಭೂಮಿಯನ್ನು ಕೃಷಿ ಮಾಡುತ್ತಿದ್ದೇವೆ. ಆದರೆ ಅದು ಈಗಲೂ ನಮ್ಮ ಹೆಸರಿನಲ್ಲಿಲ್ಲ. ಅರಣ್ಯ ಅಧಿಕಾರಿಗಳು ನಮಗೆ ಕಿರುಕುಳ ನೀಡುತ್ತಲೇ ಇರುತ್ತಾರೆ. ನನ್ನ ಪತಿ ಯಾವಾಗಲೂ ಈ ಕುರಿತು ಚಿಂತಿತರಾಗಿರುತ್ತಿದ್ದರು." ಉತ್ತಮ್ ಅವರಂತೆಯೇ, ಮೋತಿರಾಮ್ ಕೂಡ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಕುಸಿದುಬಿದ್ದರು.






