"ಟ್ರ್ಯಾಕ್ಟರ್ ಅನ್ನು ಹೇಗೆ ಓಡಿಸಬೇಕು ಎಂದು ನನಗೆ ತಿಳಿದಿದೆ" ಎಂದು ಸರಬ್ಜೀತ್ ಕೌರ್ ಹೇಳುತ್ತಾರೆ. ಅವರು ಹರಿಯಾಣ-ದೆಹಲಿ ಗಡಿಯಲ್ಲಿರುವ ಪಂಜಾಬ್‌ನ ಜಸ್ರೌರ್ ಗ್ರಾಮದಿಂದ ಸುಮಾರು 480 ಕಿಲೋಮೀಟರ್ ದೂರದಲ್ಲಿರುವ ಸಿಂಘುವಿಗೆ ತನ್ನ ಕುಟುಂಬದ ಬಿಳಿ ಟ್ರಾಕ್ಟರ್ ಅನ್ನು ಓಡಿಸಿಕೊಂಡು ಸುಮಾರು ಎರಡು ತಿಂಗಳ ಹಿಂದೆ ಸಿಂಘುವಿಗೆ ಬಂದಿದ್ದರು. "ನಾನು ನನ್ನದೇ ಟ್ರಾಕ್ಟರ್ ಮೇಲೆ ಬಂದಿದ್ದೇನೆ" ಎಂದು ಅವರು ಹೇಳುತ್ತಾರೆ, ಆದರೆ ಅವರ ಗ್ರಾಮದ ಇತರರು ತಮ್ಮ ರೈತ ಸಂಘವು ವ್ಯವಸ್ಥೆ ಮಾಡಿದ್ದ ಟ್ರಾಲಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದರು.
40 ವರ್ಷದ ಸರಬ್ ಜೀತ್ ಅವರು ಜಸ್ರೌರ್ ತೊರೆಯುವ ಮೊದಲು, ಸೆಪ್ಟೆಂಬರ್ 2020ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಕೃಷಿ ಕಾನೂನುಗಳ ಕುರಿತಾಗಿ ಮಾತನಾಡುತ್ತಿದ್ದರು ಮತ್ತು ಪ್ರತಿಭಟಿಸುತ್ತಿದ್ದರು. ಅವರು ಅಮೃತಸರ ಜಿಲ್ಲೆ ಅಜ್ನಾಲಾ ತಹಸಿಲ್‌ನಲ್ಲಿರುವ ತನ್ನ 2,169 ಜನ ಸಂಖ್ಯೆಯ ತನ್ನ ಊರಿನನಲ್ಲಿ ಕಾನೂನುಗಳ ವಿರುದ್ಧ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ನಂತರ, ನವೆಂಬರ್ 25ರಂದು, ಅವರು ಜಸ್ರೌರ್ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರಯಾಣಿಸುತ್ತಿದ್ದ 14 ಟ್ರಾಕ್ಟರ್-ಟ್ರಾಲಿಗಳ ಗುಂಪಿನಲ್ಲಿ ಹೊರಟರು, ಇದನ್ನು ಜಮ್ಹೂರಿ ಕಿಸಾನ್ ಸಭಾ ಆಯೋಜಿಸಿತ್ತು (ಅಖಿಲ ಭಾರತ ರೈತರ ಹೋರಾಟ ಸಮನ್ವಯ ಸಮಿತಿಯ ಅಂಗಸಂಸ್ಥೆ, ದೇಶಾದ್ಯಂತದ 200ಕ್ಕೂ ಹೆಚ್ಚು ರೈತ ಸಂಘಟನೆಗಳ ಜಂಟಿ ವೇದಿಕೆ). ಅವರು ಮುಂಜಾನೆ ಹೊರಟು ನವೆಂಬರ್ 27ರಂದು ಸಿಂಘು ತಲುಪಿದರು.
ಈಗ ಸರಬ್ಜೀತ್ ಜನವರಿ 26ರಂದು ಗಣರಾಜ್ಯೋತ್ಸವದಂದು ನಡೆಯಲಿರುವ ಅಭೂತಪೂರ್ವ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದು, ಇದು ಹರಿಯಾಣದ ಸೋನಿಪತ್ ಬಳಿಯ ಸಿಂಘುವಿನಿಂದ ಮೂರು ಕಿಲೋಮೀಟರ್ ಉತ್ತರದಲ್ಲಿರುವ ಕುಂಡಲಿ ಗಡಿಯಲ್ಲಿ ಪ್ರಾರಂಭವಾಗುತ್ತದೆ. "ನನ್ನ ಟ್ರಾಕ್ಟರಿನೊಂದಿಗೆ ನಾನು ಇದರಲ್ಲಿ ಭಾಗಿಯಾಗಲಿದ್ದೇನೆ" ಎಂದು ಅವರು ಹೇಳುತ್ತಾರೆ.
ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ 2020ರ ನವೆಂಬರ್ 26ರಿಂದ ಲಕ್ಷಾಂತರ ರೈತರು ಮತ್ತು ಹಲವಾರು ಕೃಷಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ತಾಣಗಳಲ್ಲಿ ಹರಿಯಾಣದ ಸಿಂಘು ಮತ್ತು ಟಿಕ್ರಿ ಮತ್ತು ಉತ್ತರ ಪ್ರದೇಶದ ಘಾಜಿಪುರ ಸೇರಿವೆ. "ಈ ಕಾನೂನುಗಳನ್ನು ರದ್ದುಗೊಳಿಸದಿದ್ದರೆ, ವಯಸ್ಸಾದವರು ಅಥವಾ ಯುವಕರು, ಪುರುಷರು ಅಥವಾ ಮಹಿಳೆಯರು ಯಾರೂ ಇಲ್ಲಿಂದ ಹಿಂತಿರುಗಿ ಹೋಗುವುದಿಲ್ಲ" ಎಂದು ಸರಬ್ಜೀತ್ ಹೇಳುತ್ತಾರೆ.
"ಯಾರೂ ಇಲ್ಲಿಗೆ ಬರಲು ಹೇಳಲಿಲ್ಲ. ಯಾರೂ ನನ್ನನ್ನು ಇಲ್ಲಿ 'ಹಿಡಿದಿಟ್ಟಿಲ್ಲ' ಎಂದು ಹೇಳುತ್ತಾರೆ, ಅವರು ಪ್ರತಿಭಟನಾ ಸ್ಥಳದಲ್ಲಿ ಇತರ ಜನರ ಟ್ರಾಕ್ಟರುಗಳ ಸಾಲಿನಲ್ಲಿ ತನ್ನ ಟ್ರ್ಯಾಕ್ಟರ್ ಬಳಿ ನಿಂತಿದ್ದರು. “ನನ್ನ ಟ್ರಾಕ್ಟರ್‌ನಲ್ಲಿ ಪ್ರತಿಭಟಿಸಲು ಅನೇಕ ಜನರು ಇಲ್ಲಿಗೆ ಬಂದಿದ್ದಾರೆ. ಹಾಗಾದರೆ ನಾನು ಅವರನ್ನು ಇಲ್ಲಿಗೆ ಕರೆತಂದೆ ಎಂದು ನೀವು ಹೇಳುತ್ತೀರಾ?" ಪ್ರತಿಭಟನೆಯಲ್ಲಿ ಮಹಿಳೆಯರು ಮತ್ತು ಹಿರಿಯರನ್ನು 'ಇರಿಸಿಕೊಳ್ಳಲಾಗುತ್ತಿದೆ' ಮತ್ತು ಅವರನ್ನು ಮರಳುವಂತೆ 'ಮನವೊಲಿಸಬೇಕು' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಜನವರಿ 11ರಂದು) ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದರು.






