"ಯಾಕ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ," ಎಂದು ಪದ್ಮಾ ಥುಮೊ ಹೇಳುತ್ತಾರೆ. 30 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಯಾಕ್‌ಗಳನ್ನು ಸಾಕುತ್ತಿರುವ ಇವರು, "ಸದ್ಯ ಕೆಳ ಪ್ರಸ್ಥಭೂಮಿಯಲ್ಲಿ [ಸುಮಾರು 3,000 ಮೀಟರ್‌ಗಳು] ಕೆಲವೇ ಕೆಲವು ಯಾಕ್‌ಗಳನ್ನು ನೋಡಬಹುದು,” ಎಂದು ಹೇಳುತ್ತಾರೆ.
ಝನಸ್ಕರ್ ಬ್ಲಾಕ್‌ನ ಅಬ್ರಾನ್ ಗ್ರಾಮದ ಪದ್ಮಾ, ಮೈನಸ್ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ತಾಪಮಾನದಲ್ಲಿ ಲಡಾಖ್‌ನ ಎತ್ತರೆತ್ತರದ ಶೀತ ಪರ್ವತಗಳ ತುಂಬೆಲ್ಲಾ ವರ್ಷಕ್ಕೆ ಸುಮಾರು 120 ಪ್ರಾಣಿಗಳೊಂದಿಗೆ ಓಡಾಡುತ್ತಾರೆ.
ಯಾಕ್‌ಗಳು (ಬಾಸ್ ಗ್ರಾನಿಯನ್ಸ್) ಶೀತ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಪ್ರಾಣಿಗಳು, ಆದರೂ 13 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನದಲ್ಲಿ ಅವು ಬದುಕುವುದು ಕಷ್ಟ.
ಕಳೆದ ಕೆಲವು ದಶಕಗಳಿಂದ ಝನಸ್ಕರ್ ಕಣಿವೆಯ ಕೆಳ ಪ್ರಸ್ಥಭೂಮಿಗಳ ಸರಾಸರಿ ಬೇಸಿಗೆ ತಾಪಮಾನ 25 - 32 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. "ಚಳಿಗಾಲ ಮತ್ತು ಬೇಸಿಗೆಯ ತಾಪಮಾನದಲ್ಲಿ ದೊಡ್ಡ ವ್ಯತ್ಯಾಸವಾಗಿದೆ," ಎಂದು ಕಣಿವೆಯಲ್ಲಿ ವಾಸಿಸುವ ಡ್ರೈವರ್ ಟೆನ್ಜಿನ್ ಎನ್ ಹೇಳುತ್ತಾರೆ.
ಈ ಅಸಹಜ ಶಾಖ 2012 ರಿಂದ 2019 ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಯಾಕ್‌ಗಳ ಮೇಲೆ ಪರಿಣಾಮ ಬೀರಿ, ಅವುಗಳ ಸಂಖ್ಯೆ ಅರ್ಧಕ್ಕರ್ಧ ( 20ನೇ ಜಾನುವಾರು ಗಣತಿ ) ಕುಸಿದಿದೆ.
ಯಾಕ್ ಸಾಕಣೆದಾರರು ಹೆಚ್ಚು ಇರುವ ಚಾಂಗ್‌ತಾಂಗ್ ಪ್ರಸ್ಥಭೂಮಿಗೆ ಹೋಲಿಸಿದರೆ ಝನಸ್ಕರ್ ಕಣಿವೆಯಲ್ಲಿ ಕೆಲವೇ ಕೆಲವು ಮಂದಿ ಇದ್ದಾರೆ. ಝನಸ್ಕರ್ಪಸ್ ಎಂದು ಕರೆಯಲ್ಪಡುವ ಇವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಅಬ್ರಾನ್, ಅಕ್ಷೋ ಮತ್ತು ಚಾಹ್ ಗ್ರಾಮಗಳ ಕೆಲವು ಕುಟುಂಬಗಳು ಮಾತ್ರ ಇನ್ನೂ ಯಾಕ್‌ಗಳನ್ನು ಸಾಕುತ್ತಿವೆ.
ನಾರ್ಫೆಲ್ ಕೂಡ ಪಶುಪಾಲಕರಾಗಿದ್ದರು. ಆದರೆ 2017ರಲ್ಲಿ ತಾವು ಸಾಕುತ್ತಿದ್ದ ಯಾಕ್‌ಗಳನ್ನು ಮಾರಿ, ಅಬ್ರಾನ್ ಗ್ರಾಮದಲ್ಲಿ ಸೀಸನಲ್ ಅಂಗಡಿಯೊಂದನ್ನು ತೆರೆದರು. ಅವರ ಅಂಗಡಿ ಮೇ ತಿಂಗಳಿನಿಂದ ಅಕ್ಟೋಬರ್ ತನಕ ತೆರೆದಿರುತ್ತದೆ. ಇದರಲ್ಲಿ ಚಹಾ, ಬಿಸ್ಕತ್ತು, ಪ್ಯಾಕ್ ಮಾಡಿದ ತಿನಿಸುಗಳು, ಸೀಮೆಎಣ್ಣೆ, ಪಾತ್ರೆಗಳು, ಮಸಾಲೆಗಳು, ಅಡುಗೆ ಎಣ್ಣೆ, ಒಣ ಮಾಂಸ ಮೊದಲಾದವನ್ನು ಮಾರುತ್ತಾರೆ. ಪಶುಪಾಲನೆ ಬೇಸರ ತರಿಸುವ ಲಾಭದಾಯಕವಲ್ಲದ ಕೆಲಸ ಎಂದು ಅವರು ಹೇಳುತ್ತಾರೆ. "ಮೊದಲೆಲ್ಲಾ ನಾನು ಯಾಕ್‌ಗಳನ್ನು ಸಾಕುತ್ತಿದ್ದೆ, ಈಗ ನನ್ನ ಬಳಿ ಹಸುಗಳಿವೆ. ಹೆಚ್ಚಿನ ಸಂಪಾದನೆ ಅಂಗಡಿಯಲ್ಲಿ ಆಗುತ್ತದೆ. ಕೆಲವೊಮ್ಮೆ ಒಂದು ತಿಂಗಳಲ್ಲಿ 3,000-4,000 ರೂಪಾಯಿ ಸಂಪಾದನೆಯಾಗುತ್ತದೆ. ಇದು ಯಾಕ್‌ಗಳನ್ನು ಸಾಕುವುದರಿಂದ ಸಿಗುವ ಹಣಕ್ಕಿಂತ ಹೆಚ್ಚು,” ಎನ್ನುತ್ತಾರೆ ನಾರ್ಫೆಲ್.
ಅಬ್ರಾನ್‌ನಿನ ಸೋನಮ್ ಮೊಟುಪ್ ಮತ್ತು ತ್ಸೆರಿಂಗ್ ಆಂಗ್ಮೊ ಕೆಲವು ದಶಕಗಳಿಂದ ಯಾಕ್‌ಗಳನ್ನು ಸಾಕುತ್ತಿದ್ದಾರೆ. ಅವರ ಬಳಿ ಸುಮಾರು 120 ಯಾಕ್‌ಗಳಿವೆ. "ಪ್ರತಿ ವರ್ಷ ಬೇಸಿಗೆಯಲ್ಲಿ [ಮೇ-ಅಕ್ಟೋಬರ್] ನಾವು ತಣ್ಣಗಿನ ವಾತಾವರಣ ಇರುವ ಕಣಿವೆಯ ಎತ್ತರದ ಪ್ರದೇಶಕ್ಕೆ ವಲಸೆ ಹೋಗುತ್ತೇವೆ. ನಾಲ್ಕರಿಂದ ಐದು ತಿಂಗಳ ಕಾಲ ಡೋಕ್ಸಾದಲ್ಲೇ ಇರುತ್ತೇವೆ" ಎಂದು ತ್ಸೆರಿಂಗ್ ಹೇಳುತ್ತಾರೆ.
ಡೋಕ್ಸಾ ಎಂದರೆ ಬೇಸಿಗೆಯಲ್ಲಿ ವಲಸೆ ಹೋಗುವ ಕುಟುಂಬಗಳಿಗೆ ಬೇಕಾದ ಅನೇಕ ಕೋಣೆಗಳು ಮತ್ತು ಅಡುಗೆಮನೆಯನ್ನು ಹೊಂದಿರುವ ಕಟ್ಟಡ. ಗೋಥ್ ಮತ್ತು ಮನಿ ಎಂದೂ ಕರೆಯಲಾಗುವ ಇವುಗಳನ್ನು ಮಣ್ಣು ಮತ್ತು ಕಲ್ಲುಗಳಂತಹ ಕೈಗೆ ಸುಲಭವಾಗಿ ಸಿಗುವ ವಸ್ತುಗಳಿಂದ ಕಟ್ಟಲಾಗುತ್ತದೆ. ಹಳ್ಳಿಯೊಂದರ ಪಶುಪಾಲಕರು ಸಾಮಾನ್ಯವಾಗಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಪಶುಗಳ ಹಿಂಡಿನೊಂದಿಗೆ ಡೊಕ್ಸಾದಲ್ಲಿ ಉಳಿದುಕೊಳ್ಳುತ್ತಾರೆ. “ನಾನು ಮೇಯಲು ಹೋದ ಪಶುಗಳನ್ನು ನೋಡಿಕೊಳ್ಳುತ್ತೇನೆ. ಇಲ್ಲಿ ಲೈಫ್ ತುಂಬಾ ಬ್ಯುಸಿಯಾಗಿದೆ,” ಎನ್ನುತ್ತಾರೆ ಸೋನಂ.
ಈ ಸಮಯದಲ್ಲಿ, ಸೋನಮ್ ಮತ್ತು ತ್ಸೆರಿಂಗ್ ಮಾರಾಟ ಮಾಡಲು ಚುರ್ಪಿಯನ್ನು (ಸ್ಥಳೀಯ ಚೀಸ್) ತಯಾರಿಸುವ ಮೂಲಕ ಮುಂಜಾನೆ 3 ಗಂಟೆಗೆ ತಮ್ಮ ದಿನಚರಿಯನ್ನು ಆರಂಭಿಸುತ್ತಾರೆ. "ಸೂರ್ಯೋದಯವಾದ ಮೇಲೆ ನಾವು ಪಶುಗಳ ಹಿಂಡನ್ನು ಮೇಯಿಸಲು ಕರೆದುಕೊಂಡು ಹೋಗುತ್ತೇವೆ. ಇದಾದ ಮೇಲೆ, ಮಧ್ಯಾಹ್ನದ ಹೊತ್ತು ವಿಶ್ರಾಂತಿ ಪಡೆಯುತ್ತೇವೆ," ಎಂದು 69 ವರ್ಷದ ಸೋನಮ್ ಹೇಳುತ್ತಾರೆ.
"ಇಲ್ಲಿನ [ಝನಸ್ಕರ್ ಕಣಿವೆ] ಪಶುಸಾಕಣೆದಾರರು ಹೆಚ್ಚಾಗಿ ಹೆಣ್ಣು ಝೋಮೋಗಳನ್ನು ಅವಲಂಬಿಸಿದ್ದಾರೆ," ಎಂದು ತ್ಸೆರಿಂಗ್ ಹೇಳುತ್ತಾರೆ. ಗಂಡು ಝೋ ಮತ್ತು ಹೆಣ್ಣು ಝೋಮೋಗಳು ಯಾಕ್ ಮತ್ತು ಕೋಟ್‌ಗಳು ಕ್ರಾಸ್ ಆಗಿ ಹುಟ್ಟಿದ ತಳಿ. ಝೋಗಳಿಗೆ ಸಂತಾನಶಕ್ತಿ ಇಲ್ಲ. “ನಾವು ಇಲ್ಲಿ ಸಂತಾನೋತ್ಪತ್ತಿಗಾಗಿ ಮಾತ್ರ ಗಂಡು ಯಾಕ್‌ಗಳನ್ನು ಇಟ್ಟುಕೊಳ್ಳುತ್ತೇವೆ. ನಾವು ಝೋಮೋನಿಂದ ಹಾಲು ಕರೆದು, ತುಪ್ಪ ಮತ್ತು ಚುರ್ಪಿಯನ್ನು ತಯಾರಿಸುತ್ತೇವೆ," ಎಂದು 65 ವರ್ಷ ವಯಸ್ಸಿನ ಇವರು ಹೇಳುತ್ತಾರೆ.
ಕಳೆದ ಒಂದು ದಶಕದಲ್ಲಿ ತಮ್ಮ ಆದಾಯ ಮೂರನೇ ಒಂದಕ್ಕೆ ಕುಸಿದಿದೆ ಎಂದು ದಂಪತಿಗಳು ಹೇಳುತ್ತಾರೆ. ಇವರಂತೆ ಈ ಕೆಲಸವನ್ನು ಅವಲಂಬಿಸಿರುವ ಅನೇಕರು ಕಷ್ಟಪಡುತ್ತಿದ್ದಾರೆ. ಆಗಸ್ಟ್ 2023 ರಲ್ಲಿ ಪರಿ ಇವರನ್ನು ಭೇಟಿಯಾದಾಗ ಸಾಕಣೆದಾರರು ಚಳಿಗಾಲದಲ್ಲಿ ಪಶುಗಳಿಗೆ ಬೇಕಾದ ಸಾಕಷ್ಟು ಮೇವನ್ನು ವ್ಯವಸ್ಥೆ ಮಾಡುವ ಬಗ್ಗೆ ಚಿಂತೆಯಲ್ಲಿದ್ದರು. ಮೇವಿನ ಪೂರೈಕೆಯಾಗಬೇಕಾದರೆ ಸಾಕಷ್ಟು ನೀರು ಬೇಕು, ಆದರೆ ಹಿಮಪಾತ ಕುಸಿತ ಮತ್ತು ಹಿಮ್ಮೆಟ್ಟುತ್ತಿರುವ ಹಿಮನದಿಗಳಿಂದಾಗಿ ಲಡಾಖ್‌ನ ಕೃಷಿ ಚಟುವಟಿಕೆಯ ಮೇಲೆ ಹೊಡೆತ ಬಿದ್ದಿದೆ. ಯಾಕೆಂದರೆ ಇವೇ ಎತ್ತರದ ಈ ಪ್ರದೇಶಗಳ ಏಕೈಕ ನೀರಿನ ಮೂಲಗಳು.
ಅಬ್ರಾನ್ ಹಳ್ಳಿಯ ಮೇಲೆ ಇನ್ನೂ ಯಾವ ಪರಿಣಾಮವಾಗದಿದ್ದರೂ, ಸೋನಮ್ ಅವರಿಗೆ ಚಿಂತೆ ಕಾಡುತ್ತಿದೆ. "ಹವಾಮಾನ ಬದಲಾದರೆ, ಇನ್ನು ಮುಂದೆ ಕುಡಿಯಲು ಬೇಕಾದಷ್ಟು ನೀರು, ಪಶುಗಳಿಗೆ ಮೇವು ಹಾಕಲು ಸಾಕಷ್ಟು ನೀರು ಇಲ್ಲದಿದ್ದರೆ ಏನಾಗಬಹುದು ಎಂದು ನಾನು ದಿನಾ ಯೋಚಿಸುತ್ತಿದ್ದೇನೆ," ಎಂದು ಅವರು ಹೇಳಿತ್ತಾರೆ.
ಸೋನಮ್ ಮತ್ತು ತ್ಸೆರಿಂಗ್‌ಗೆ 20 ರಿಂದ 30 ವರ್ಷ ಪ್ರಾಯದ ಐವರು ಮಕ್ಕಳಿದ್ದಾರೆ. ಅವರಲ್ಲಿ ಯಾರೊಬ್ಬರೂ ತಮ್ಮ ಹೆತ್ತವರ ವೃತ್ತಿಯನ್ನು ಮುಂದುವರಿಸದೆ ದಿನಗೂಲಿ ಕೆಲಸಗಳನ್ನು ಮಾಡುತ್ತಿದ್ದಾರೆ.
“ಯುವ ಪೀಳಿಗೆಯು ಈ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸುವ ಬದಲು, ನಗರ ಪ್ರದೇಶಗಳ ಕಡೆ ಹೋಗಿ ಬದುಕುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಬಾರ್ಡರ್ ರೋಡ್ಸ್ ಸಂಸ್ಥೆಯಲ್ಲಿ ಡ್ರೈವರ್‌ಗಳಾಗಿ ಮತ್ತು ಕಾರ್ಮಿಕರಾಗಿ ಕೆಲಸ ಮಾಡಲು ಬಯಸುತ್ತಿದ್ದಾರೆ,” ಎಂದು ಸೋನಮ್ ಹೇಳುತ್ತಾರೆ.
ಇದನ್ನು ಒಪ್ಪುವ ಪದ್ಮಾ ಥುಮೊ, "ಇದು [ಯಾಕ್ ಸಾಕಣೆ] ಇನ್ನು ಮುಂದೆ ಬದುಕು ಕಟ್ಟಿಕೊಳ್ಳಲು ಬೇಕಾದ ಉದ್ಯಮವಾಗಿ ಉಳಿದಿಲ್ಲ," ಎನ್ನುತ್ತಾರೆ.
ಅನುವಾದಕರು: ಚರಣ್ ಐವರ್ನಾಡು