"ವರ್ಷಕ್ಕೊಮ್ಮೆ ಬರುವ ಈ ಬಜೆಟ್ನ ಗದ್ದಲದಿಂದ ನಮ್ಮ ಬದುಕಿನಲ್ಲಿ ಸ್ವಲ್ಪವಾದರೂ ಬದಲಾವಣೆಯಾಗಬಹುದೇ?" ಎಂದು ಎರಡು ಮಕ್ಕಳ ವಿಧವೆ ತಾಯಿ ಕೆ ನಾಗಮ್ಮ ಕೇಳುತ್ತಾರೆ. ಅವರ ಪತಿ 2007 ರಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮರಣಹೊಂದಿದರು. ಈ ದುರಂತ ಅವರು ಸಫಾಯಿ ಕರ್ಮಚಾರಿ ಆಂದೋಲನವನ್ನು ಸೇರುವಂತೆ ಮಾಡಿತು. ಈಗ ಅಲ್ಲಿ ಅವರು ಸಂಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ದೊಡ್ಡ ಮಗಳು ಶೈಲಾ ನರ್ಸ್, ಸಣ್ಣ ಮಗಳು ಆನಂದಿ ತಾತ್ಕಾಲಿಕ ಸರ್ಕಾರಿ ಉದ್ಯೋಗಿಯಾಗಿದ್ದಾರೆ.
"'ಬಜೆಟ್' ಎಂಬ ಪದ ಕೇಳೋದಕ್ಕೇನೋ ಚೆನ್ನಾಗಿದೆ. ನಾವು ಸಂಪಾದಿಸುವ ಹಣದಿಂದ ಮನೆಯ ಬಜೆಟನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ನಮ್ಮನ್ನು ತನ್ನ ಯೋಜನೆಗಳಿಂದ ಹೊರಗೆ ಇಟ್ಟಿದೆ. ಹೀಗಾದರೆ ಇದು ಯಾವ ಬಜೆಟ್? ಇದರಿಂದ ನನ್ನ ಹೆಣ್ಣು ಮಕ್ಕಳ ಮದುವೆಗೆ ಏನಾದ್ರೂ ಸಹಾಯ ಆಗ್ತದಾ?" ಎಂದು ನಾಗಮ್ಮ ಕೇಳುತ್ತಾರೆ.
ನಾಗಮ್ಮ ಅವರು ಹುಟ್ಟುವ ಮೊದಲೇ ಅವರ ತಂದೆ ತಾಯಿ ಚೆನ್ನೈಗೆ ವಲಸೆ ಬಂದಿದ್ದರು, ಹಾಗಾಗಿ ಅವರು ಚೆನ್ನೈನಲ್ಲಿ ಹುಟ್ಟಿ ಬೆಳೆದರು. 1995 ರಲ್ಲಿ ನಾಗಮ್ಮ ಅವರನ್ನು ಅವರ ತಂದೆ ತಮ್ಮ ಊರು ನಾಗುಲಪುರಂನಲ್ಲಿ ವಾಸಿಸುತ್ತಿದ್ದ ಸಹೋದರಿಯ ಮಗನಿಗೆ ಮದುವೆ ಮಾಡಿಕೊಟ್ಟರು. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಾಮುರು ಬಳಿ ಇರುವ ಈ ಗ್ರಾಮದಲ್ಲಿ ಅವರ ಪತಿ ಕಣ್ಣನ್ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇವರು ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿರುವ ಮಾದಿಗ ಸಮುದಾಯದವರು. "2004 ರಲ್ಲಿ, ಇಬ್ಬರು ಹೆಣ್ಣು ಮಕ್ಕಳು ಆದ ಮೇಲೆ ಅವರ ಶಿಕ್ಷಣಕ್ಕಾಗಿ ನಾವು ಚೆನ್ನೈಗೆ ಬರಲು ನಿರ್ಧರಿಸಿದೆವು," ಎಂದು ನಾಗಮ್ಮ ನೆನಪಿಸಿಕೊಳ್ಳುತ್ತಾರೆ. ಚೆನ್ನೈಗೆ ಬಂದ ಮೂರು ವರ್ಷಗಳಲ್ಲಿ ಕಣ್ಣನ್ ನಿಧನರಾದರು.




