ಜಾರ್ಖಂಡ್‌ನ ಚೆಚರಿಯಾ ಗ್ರಾಮದ ಸವಿತಾ ದೇವಿ ಅವರ ಮಣ್ಣಿನ ಮನೆಯ ಗೋಡೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಕಾಣುತ್ತಿದೆ. "ಬಾಬಾಸಾಹೇಬರು ನಮಗೆ [ಮತದಾನದ ಹಕ್ಕು] ಕೊಟ್ಟಿದ್ದಾರೆ, ಅದಕ್ಕಾಗಿಯೇ ನಾವು ವೋಟ್ ಮಾಡುತ್ತಿದ್ದೇವೆ," ಎಂದು ಸವಿತಾ ಹೇಳುತ್ತಾರೆ.
ಸವಿತಾರವರಲ್ಲಿ ಒಂದು ಬಿಘಾ (0.75 ಎಕರೆ) ಜಮೀನು ಇದೆ. ಖಾರಿಫ್ ಋತುವಿನಲ್ಲಿ ಇವರು ಇದರಲ್ಲಿ ಭತ್ತ ಮತ್ತು ಜೋಳವನ್ನು ಹಾಗೂ ರಬಿ ಋತುವಿನಲ್ಲಿ ಗೋಧಿ, ಕಪ್ಪು ಕಡಲೆ ಮತ್ತು ಎಣ್ಣೆಕಾಳುಗಳನ್ನು ಬೆಳೆಯುತ್ತಾರೆ. ತಮ್ಮ ಹಿತ್ತಲಿನಲ್ಲಿ ತರಕಾರಿ ಬೆಳೆಯಬೇಕು ಅಂದುಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ನೀರಿಲ್ಲದೆ ಸಮಸ್ಯೆಯಾಗಿದೆ. ಸತತವಾಗಿ ಬರಗಾಲ ಬಂದು ಇವರ ಇಡೀ ಕುಟುಂಬವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ.
ಮೂವತ್ತೆರಡು ವರ್ಷ ಪ್ರಾಯದ ಸವಿತಾ ಪಲಾಮು ಜಿಲ್ಲೆಯ ಈ ಹಳ್ಳಿಯಲ್ಲಿ ತಮ್ಮ ನಾಲ್ಕು
ಮಂದಿ ಮಕ್ಕಳೊಂದಿಗೆ ವಾಸಿಸುತ್ತಾರೆ. ಇವರ ಪತಿ 37 ವರ್ಷ ಪ್ರಾಯದ ಪ್ರಮೋದ್ ರಾಮ್ 2,000 ಕಿಲೋಮೀಟರ್
ದೂರದಲ್ಲಿರುವ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. "ಸರ್ಕಾರ ನಮಗೆ
ಯಾವುದೇ ಉದ್ಯೋಗ ನೀಡುತ್ತಿಲ್ಲ. ದುಡಿದದ್ದು ಮಕ್ಕಳ ಹೊಟ್ಟೆ ತುಂಬಿಸಲೂ ಸಾಕಾಗುತ್ತಿಲ್ಲ,"
ಎಂದು ಈ ದಲಿತ ದಿನಗೂಲಿ ಕಾರ್ಮಿಕ ಹೇಳುತ್ತಾರೆ.
ಕಟ್ಟಡ ನಿರ್ಮಾಣ ಸೈಟ್‌ಗಳಲ್ಲಿ ಕೆಲಸ ಮಾಡುವ ಪ್ರಮೋದ್ ತಿಂಗಳಿಗೆ ಸುಮಾರು 10,000-12,000 ರುಪಾಯಿ ಸಂಪಾದನೆ ಮಾಡುತ್ತಾರೆ. ಕೆಲವೊಮ್ಮೆ ಟ್ರಕ್ ಡ್ರೈವರ್ ಆಗಿಯೂ ಕೆಲಸ ಮಾಡುತ್ತಾರೆ, ಆದರೆ ಆ ಕೆಲಸ ವರ್ಷಪೂರ್ತಿ ಸಿಗುವುದಿಲ್ಲ. “ಗಂಡಸರು ನಾಲ್ಕು ತಿಂಗಳು ಮನೆಯಲ್ಲಿ ಕುಳಿತರೆ ನಾವು ಭಿಕ್ಷೆಯೆತ್ತಬೇಕಾಗುತ್ತದೆ. ನಾವು ಏನು ಮಾಡಬಹುದು [ವಲಸೆಯಲ್ಲದೇ]?" ಎಂದು ಸವಿತಾ ಕೇಳುತ್ತಾರೆ.
960 ಮಂದಿ ನಿವಾಸಿಗಳಿರುವ (2011 ರ ಜನಗಣತಿ) ಚೆಚರಿಯಾ ಗ್ರಾಮದ ಹೆಚ್ಚಿನ ಪುರುಷರು ಕೆಲಸ ಹುಡುಕಲು ಬೇರೆ ಕಡೆಗೆ ಹೋಗುತ್ತಾರೆ. ಏಕೆಂದರೆ “ಇಲ್ಲಿ ಉದ್ಯೋಗಾವಕಾಶಗಳಿಲ್ಲ. ಇಲ್ಲಿ ಕೆಲಸಗಳಿದ್ದರೆ ಜನ ಏಕೆ ಹೊರಗಡೆ ಹೋಗುತ್ತಾರೆ?” ಎಂದು ಸವಿತಾರ ಅತ್ತೆ 60 ವರ್ಷ ಪ್ರಾಯದ ಸುರಪತಿ ದೇವಿ ಹೇಳುತ್ತಾರೆ.
ಎಂಟು ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ಜಾರ್ಖಂಡ್‌ನಿಂದ ಹೊರಗೆ ವಲಸೆ ಹೋಗುತ್ತಾರೆ (ಜನಗಣತಿ 2011). "ಈ ಗ್ರಾಮದಲ್ಲಿ ಕೆಲಸ ಮಾಡುವ 20 ರಿಂದ 52 ವರ್ಷದೊಳಗಿನ ಒಬ್ಬನೇ ಒಬ್ಬ ವ್ಯಕ್ತಿ ನಿಮಗೆ ಸಿಗುವುದಿಲ್ಲ,” ಎಂದು ಹರಿಶಂಕರ್ ದುಬೆ ಹೇಳುತ್ತಾರೆ. “ಕೇವಲ ಶೇಕಡಾ ಐದುರಷ್ಟು ಮಂದಿ ಮಾತ್ರ ಇಲ್ಲಿ ಉಳಿದಿದ್ದಾರೆ. ಉಳಿದವರು ವಲಸೆ ಹೋಗಿದ್ದಾರೆ," ಎಂದು ಚೆಚರಿಯಾವನ್ನು ಒಳಗೊಂಡಿರುವ ಬಸ್ನಾ ಪಂಚಾಯತ್ ಸಮಿತಿಯ ಸದಸ್ಯರಾಗಿರುವ ಇವರು ಹೇಳುತ್ತಾರೆ.
"ಈ ಬಾರಿ ಅವರು ವೋಟು ಕೇಳಿಕೊಂಡು ಬಂದರೆ, ನೀವು ನಮ್ಮ ಊರಿಗೆ ಏನು ಮಾಡಿದ್ದೀರಿ ಎಂದು ಕೇಳುತ್ತೇವೆ?" ಎಂದು ಕೋಪದಿಂದಲೇ ಸವಿತಾ ಹೇಳುತ್ತಾರೆ. ಗುಲಾಬಿ ಬಣ್ಣದ ನೈಟಿಯನ್ನು ತೊಟ್ಟಿರುವ, ತಲೆಗೆ ಹಳದಿ ದುಪಟ್ಟಾವನ್ನು ಧರಿಸಿರುವ ಇವರು, ತಮ್ಮ ಮನೆಯ ಮುಂದೆ ಮನೆಯವರೊಂದಿಗೆ ಕುಳಿತಿದ್ದಾರೆ. ಅದು ಮಧ್ಯಾಹ್ನದ ಹೊತ್ತು, ಇವರ ನಾಲ್ವರು ಮಕ್ಕಳು ಶಾಲೆಯಿಂದ ಹಿಂತಿರುಗಿ ಖಿಚಡಿಯ ಊಟ ಮಾಡುತ್ತಿದ್ದಾರೆ.
ಸವಿತಾರವರು ದಲಿತ ಚಮ್ಮಾರ ಸಮುದಾಯಕ್ಕೆ ಸೇರಿದವರು. ಭಾರತದ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಗ್ರಾಮದ ನಿವಾಸಿಗಳು ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಂದು ತಿಳಿದುಕೊಂಡೆ ಎಂದು ಅವರು ಹೇಳುತ್ತಾರೆ. ಈ ಗ್ರಾಮದ ಶೇಕಡಾ 70 ರಷ್ಟು ನಿವಾಸಿಗಳು ಪರಿಶಿಷ್ಟ ಜಾತಿಗಳಿಗೆ ಸೇರಿದವರು. ಇವರು ಕೆಲವು ವರ್ಷಗಳ ಹಿಂದೆ 25 ಕಿಲೋಮೀಟರ್ ದೂರದಲ್ಲಿರುವ ಗರ್ವಾ ಪಟ್ಟಣದ ಮಾರ್ಕೆಟ್‌ನಲ್ಲಿ ಅಂಬೇಡ್ಕರ್ ಅವರ ಫೋಟೋವೊಂದನ್ನು ಖರೀದಿಸಿದ್ದರು.
2022 ರ ಪಂಚಾಯತ್ ಚುನಾವಣೆಗೂ ಮೊದಲು, ಸವಿತಾ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರೂ ಗ್ರಾಮದ ಮುಖಿಯರ (ಮುಖ್ಯಸ್ಥರ) ಪತ್ನಿಯ ಮನವಿಯ ಮೇರೆಗೆ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದರು. "ಅವರು ಗೆದ್ದರೆ ನಮಗೆ ಹ್ಯಾಂಡ್ ಪಂಪ್ ಕೊಡುವುದಾಗಿ ಭರವಸೆ ನೀಡಿದ್ದರು," ಎಂದು ಸವಿತಾ ಹೇಳುತ್ತಾರೆ. ಅವರು ಗೆದ್ದರೂ ಅವರು ನೀಡಿದ ಭರವಸೆಯನ್ನು ಮಾತ್ರ ಈಡೇರಿಸಲಿಲ್ಲ. ಸವಿತಾ ಅವರ ಮನೆಗೆ ಎರಡು ಬಾರಿ ಹೋದರೂ ಪ್ರಯೋಜನವಾಗಲಿಲ್ಲ. “ನನ್ನನ್ನು ಭೇಟಿಯಾಗುವುದು ಬಿಡಿ, ಆಕೆ ನನ್ನತ್ತ ನೋಡಲೂ ಇಲ್ಲ. ಅವರೂ ಒಬ್ಬರು ಹೆಣ್ಣು, ಆದರೆ ಅವರಲ್ಲಿ ಇನ್ನೊಬ್ಬ ಹೆಣ್ಣಿನ ಅವಸ್ಥೆ ಬಗ್ಗೆ ಯಾವುದೇ ಸಹಾನುಭೂತಿ ಇರಲಿಲ್ಲ,” ಎಂದು ಅವರು ಹೇಳುತ್ತಾರೆ.
ಚೆಚರಿಯಾ ಗ್ರಾಮ ಕಳೆದ 10 ವರ್ಷಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇಲ್ಲಿನ 179 ಮನೆಗಳ ಬಳಕೆಗಾಗಿ ಒಂದೇ ಒಂದು ಬಾವಿಯಿದೆ. ಪ್ರತಿ ದಿನ ಎರಡು ಬಾರಿ ಸವಿತಾ 200 ಮೀಟರ್‌ಗಳಷ್ಟು ದೂರ ಗುಡ್ಡ ಹತ್ತಿ ಪಂಪ್‌ನಿಂದ ನೀರು ತರಲು ಹೋಗುತ್ತಾರೆ. ಬೆಳಗ್ಗೆ ನಾಲ್ಕು ಅಥವಾ ಐದು ಗಂಟೆಗೆ ಶುರುವಾದರೆ ದಿನದಲ್ಲಿ ಸುಮಾರು ಐದರಿಂದ ಆರು ಗಂಟೆಗಳನ್ನು ನೀರಿನ ಕೆಲಸದಲ್ಲೇ ಕಳೆಯುತ್ತಾರೆ. "ಹ್ಯಾಂಡ್ ಪಂಪ್ ಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ?" ಎಂದು ಕೇಳುತ್ತಾರೆ.
ಜಾರ್ಖಂಡ್ ಸತತ ಬರಗಾಲವನ್ನು ಎದುರಿಸಿ ತೀವ್ರವಾದ ಹಾನಿಗೆ ಒಳಗಾಗಿದೆ. 2022 ರಲ್ಲಿ ಬಹುತೇಕ ಇಡೀ ರಾಜ್ಯವನ್ನು - 226 ಬ್ಲಾಕ್‌ಗಳನ್ನು ಬರ ಪೀಡಿತ ಎಂದು ಘೋಷಿಸಲಾಯಿತು. ನಂತರ 2023ರಲ್ಲೂ 158 ಬ್ಲಾಕ್‌ಗಳು ಪೂರ್ತಿ ಒಣಗಿ ಹೋದವು.
“ಕುಡಿಯಲು, ಬಟ್ಟೆ ಒಗೆಯಲು ಎಷ್ಟು ನೀರು ಬಳಸಬೇಕು ಎಂಬುದನ್ನು ನಾವು ಯೋಚಿಸಬೇಕಾಗಿದೆ,” ಎಂದು ತಮ್ಮ ಮನೆಯ ಅಂಗಳದಲ್ಲಿರುವ 2024 ರ ಬೇಸಿಗೆ ಆರಂಭವಾದ ಮೇಲೆ ಕಳೆದ ತಿಂಗಳಲ್ಲಿ ಬತ್ತಿ ಹೋಗಿರುವ ಬಾವಿಯನ್ನು ತೋರಿಸುತ್ತಾ ಸವಿತಾ ಹೇಳುತ್ತಾರೆ.
ಚೆಚರಿಯಾದಲ್ಲಿ ಮೇ 13 ರಂದು 2024 ರ ಸಾರ್ವತ್ರಿಕ ಚುನಾವಣೆಯ ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ಅದಕ್ಕೂ ಮುನ್ನ ವಲಸೆ ಕಾರ್ಮಿಕರಾಗಿರುವ ಪ್ರಮೋದ್ ಮತ್ತು ಅವರ ಕಿರಿಯ ಸಹೋದರ ಮನೆಗೆ ಹಿಂತಿರುಗುತ್ತಾರೆ. ಅವರು ಕೇವಲ ಮತ ಹಾಕಲು ಮಾತ್ರ ಊರಿಗೆ ಬರುತ್ತಿದ್ದಾರೆ ಎನ್ನುತ್ತಾರೆ ಸವಿತಾ. ಮನೆಗೆ ಬರಲು ಅವರಿಗೆ ಸುಮಾರು 700 ರುಪಾಯಿ ಖರ್ಚಾಗುತ್ತದೆ. ಇದು ಸದ್ಯ ಅವರು ಮಾಡುವ ಕೆಲಸದ ಮೇಲೂ ಪರಿಣಾಮ ಬೀರಬಹುದು, ಅವರನ್ನು ಮತ್ತೆ ಕಾರ್ಮಿಕ ಮಾರ್ಕೆಟ್‌ಗೆ ತಳ್ಳಬಹುದು.
*****
ಚೆಚರಿಯಾದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಚತುಷ್ಪತ ಹೆದ್ದಾರಿಯ ನಿರ್ಮಾಣ ಪ್ರಗತಿಯಲ್ಲಿದೆ, ಆದರೆ ಈ ಗ್ರಾಮಕ್ಕೆ ರಸ್ತೆ ಇನ್ನೂ ಬಂದಿಲ್ಲ. ಹಾಗಾಗಿ 25 ವರ್ಷದ ರೇಣು ದೇವಿಯವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸರ್ಕಾರಿ ಗಾರಿ (ಸರ್ಕಾರಿ ಆಂಬ್ಯುಲೆನ್ಸ್) ಅವರ ಮನೆ ಬಾಗಿಲಿಗೆ ಬರಲು ಸಾಧ್ಯವಾಗಲಿಲ್ಲ. "ನಾನು ಆ ಪರಿಸ್ಥಿತಿಯಲ್ಲಿ ಮೈನ್ ರೋಡಿಗೆ [ಸುಮಾರು 300 ಮೀಟರ್] ನಡೆದುಕೊಂಡು ಹೋಗಬೇಕಾಯ್ತು," ಎಂದು ಹನ್ನೊಂದು ಗಂಟೆ ರಾತ್ರಿ ತಾವು ನಡೆದುಕೊಂಡು ಹೋಗಿದ್ದನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ.
ಆಂಬ್ಯುಲೆನ್ಸ್‌ಗಳು ಮಾತ್ರವಲ್ಲ, ಸರ್ಕಾರದ ಯಾವುದೇ ಯೋಜನೆಗಳೂ ಅವರ ಮನೆ ಬಾಗಿಲಿಗೆ ಬಂದಿಲ್ಲ.
ಚಚರಿಯಾದ ಹೆಚ್ಚಿನ ಮನೆಗಳಲ್ಲಿ ಚುಲ್ಹಾದಲ್ಲಿ (ಒಲೆಯಲ್ಲಿ) ಅಡುಗೆ ಮಾಡಲಾಗುತ್ತದೆ. ಅವರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಡಿಯಲ್ಲಿ ಸಿಗುವ ಎಲ್‌ಪಿಜಿ ಸಿಲಿಂಡರ್ ಸಿಕ್ಕಿಲ್ಲ, ಅಲ್ಲದೇ ಖಾಲಿಯಾದ ಸಿಲಿಂಡರ್‌ಗಳನ್ನು ಮತ್ತೆ ತುಂಬಲು ಅವರಲ್ಲಿ ಹಣವೂ ಇಲ್ಲ.
ಚಚರಿಯಾದ ಎಲ್ಲಾ ನಿವಾಸಿಗಳ ಬಳಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಕಾರ್ಡ್ (ಪುಸ್ತಕ) ಇದೆ. ಈ ಯೋಜನೆಯ ಅಡಿಯಲ್ಲಿ ಒಂದು ವರ್ಷದಲ್ಲಿ 100 ದಿನಗಳ ಕೆಲಸವನ್ನು ನೀಡಲಾಗುತ್ತದೆ. ಐದಾರು ವರ್ಷಗಳ ಹಿಂದೆ ಈ ಕಾರ್ಡ್‌ಗಳನ್ನು ನೀಡಲಾಗಿತ್ತು, ಆದರೆ ಅದರ ಪುಟಗಳು ಖಾಲಿಯಾಗಿಯೇ ಇವೆ. ಕಾಗದದ ತಾಜಾ ವಾಸನೆ ಹಾಗೆಯೇ ಇದೆ.
ರೇಣು ಅವರ ಸಹೋದರಿ ಪ್ರಿಯಾಂಕಾ ಶಾಲಾ ಶುಲ್ಕ ಭರಿಸಲಾಗದೆ 12 ನೇ ತರಗತಿಯ ನಂತರ ಶಾಲೆಯನ್ನು ತೊರೆದರು. 20 ವರ್ಷದ ಈ ಯುವತಿ ಇತ್ತೀಚೆಗೆ ತನ್ನ ಚಿಕ್ಕಮ್ಮನಿಂದ ಹೊಲಿಗೆ ಯಂತ್ರವನ್ನು ತೆಗೆದುಕೊಂಡಿದ್ದಾರೆ, ಟೈಲರಿಂಗ್ ಕೆಲಸದಿಂದ ಜೀವನ ನಡೆಸಲು ಯೋಚಿಸಿದ್ದಾರೆ. "ಅವಳು ಸ್ವಲ್ಪ ದಿನಗಳಲ್ಲೇ ಮದುವೆಯಾಗಲಿದ್ದಾಳೆ. ಮದುಮಗನಿಗೆ ಉದ್ಯೋಗವಿಲ್ಲ, ಸ್ವಂತ ಮನೆಯೂ ಇಲ್ಲ, ಆದರೆ ಅವನು 2 ಲಕ್ಷ ರುಪಾಯಿ ಕೇಳುತ್ತಿದ್ದಾನೆ," ಎಂದು ಹೆರಿಗೆಯ ನಂತರ ತಮ್ಮ ತವರು ಮನೆಯಲ್ಲಿಯೇ ಉಳಿದುಕೊಂಡಿರುವ ರೇಣು ಹೇಳುತ್ತಾರೆ. ಮದುವೆಗಾಗಿ ಈ ಕುಟುಂಬ ಈಗಾಗಲೇ ಸಾಲ ಮಾಡಿದೆ.
ಯಾವುದೇ ಸಂಪಾದನೆ ಇಲ್ಲದೇ ಇದ್ದಾಗ, ಚೆಚರಿಯಾದ ಅನೇಕ ಜನರು ಹೆಚ್ಚಿನ ಬಡ್ಡಿದರಕ್ಕೆ ಲೇವಾದೇವಿಗಾರರಿಂದ ಹಣವನ್ನು ಸಾಲವಾಗಿ ಪಡೆಯುತ್ತಾರೆ. "ಈ ಇಡೀ ಗ್ರಾಮದಲ್ಲಿ ಸಾಲದ ಹೊರೆಯಿಲ್ಲದ ಒಂದೇ ಒಂದು ಮನೆ ಇಲ್ಲ," ಎಂದು ಸುನೀತಾ ದೇವಿ ಹೇಳುತ್ತಾರೆ. ಇವರ ಅವಳಿ ಮಕ್ಕಳಾದ ಲವ್ ಮತ್ತು ಕುಶ್ ಇಬ್ಬರೂ ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ವಲಸೆ ಹೋಗಿದ್ದಾರೆ. ಅವರು ದುಡಿದು ಮನೆಗೆ ಕಳುಹಿಸುವ ಹಣವೇ ಇವರ ಜೀವನಾಧಾರ. “ಕೆಲವೊಮ್ಮೆ 5,000 ಮತ್ತು ಇನ್ನೂ ಕೆಲವೊಮ್ಮೆ 10,000 [ರೂಪಾಯಿ] ಕಳಿಸುತ್ತಾರೆ,” ಎಂದು 49 ವರ್ಷ ವಯಸ್ಸಿನ ಈ ತಾಯಿ ಹೇಳುತ್ತಾರೆ.
ಕಳೆದ ವರ್ಷ ತಮ್ಮ ಮಗಳ ಮದುವೆಗಾಗಿ ಸುನೀತಾ ಮತ್ತು ಅವರ ಪತಿ ರಾಜ್‌ಕುಮಾರ್ ರಾಮ್ ಸ್ಥಳೀಯ ಲೇವಾದೇವಿಗಾರರಿಂದ ಶೇಕಡಾ ಐದು ಬಡ್ಡಿಗೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ 20,000 ರುಪಾಯಿ ಹಿಂತುರುಗಿಸಿದ್ದಾರೆ, 1.5 ಲಕ್ಷ ರುಪಾಯಿ ಇನ್ನೂ ಬಾಕಿ ಇದೆ.
“ಗರೀಬ್ ಕೆ ಚಾವ್ ದೇವ್ ಲಾ ಕೋಯಿ ನಾಯ್ಕೆ. ಅಗರ್ ಏಕ್ ದಿನ್ ಹಮಾನ್ ಝೂರಿ ನಹಿ ಲನಾಬ್, ತಾ ಅಗ್ಲಾ ದಿನ್ ಹಮಾನ್ ಕೆ ಚುಲ್ಹಾ ನಹೀ ಜಲ್ತಿ [ಬಡವರಿಗೆ ಸಹಾಯ ಮಾಡಲು ಯಾರೂ ಇಲ್ಲ. ಒಂದು ದಿನ ನಾವು ಕಟ್ಟಿಗೆ ತರದೇ ಇದ್ದರೆ, ಮಾರನೇ ದಿನ ನಮ್ಮ ಮನೆಯಲ್ಲಿ ಒಲೆ ಉರಿಯುವುದಿಲ್ಲ],” ಎಂದು ಸುನೀತಾ ದೇವಿ ಹೇಳುತ್ತಾರೆ.
ಗ್ರಾಮದ ಇತರ ಮಹಿಳೆಯರೊಂದಿಗೆ ಗುಡ್ಡದಿಂದ ಕಟ್ಟಿಗೆ ತರಲು ಪ್ರತಿದಿನ 10-15 ಕಿ.ಮೀ ನಡೆದುಕೊಂಡು ಹೋಗುತ್ತಾರೆ, ಆಗ ಅರಣ್ಯ ಸಿಬ್ಬಂದಿಯ ನಿರಂತರ ಕಿರುಕುಳವನ್ನೂ ಎದುರಿಸುತ್ತಾರೆ.
2019 ರ ಸಾರ್ವತ್ರಿಕ ಚುನಾವಣೆಯ ಮೊದಲು, ಸುನೀತಾ ದೇವಿ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಊರಿನ ಇತರ ಮಹಿಳೆಯರೊಂದಿಗೆ ಹೊಸ ಮನೆಗಾಗಿ ಅರ್ಜಿ ಸಲ್ಲಿಸಿದ್ದರು. "ಯಾರಿಗೂ ಮನೆ ಸಿಕ್ಕಿಲ್ಲ," ಅವರು ಹೇಳುತ್ತಾರೆ. "ನಮಗೆ ಸಿಗುವ ಒಂದೇ ಒಂದು ಸೌಲಭ್ಯವೆಂದರೆ ಪಡಿತರ. ಅದರಲ್ಲೂ ನಮಗೆ ಐದು ಕೆಜಿಯ ಬದಲಿಗೆ ನಾಲ್ಕು ವರೆ ಕೆಜಿ ಸಿಗುತ್ತದೆ,” ಎಂದು ಮಾತನ್ನು ಮುಂದುವರಿಸುತ್ತಾರೆ..
ಐದು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷದ ವಿಷ್ಣು ದಯಾಳ್ ರಾಮ್ ಒಟ್ಟು ಶೇಕಡಾ 62 ಮತಗಳೊಂದಿಗೆ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ರಾಷ್ಟ್ರೀಯ ಜನತಾ ದಳದ ಘುರಾನ್ ರಾಮ್ ಸೋತಿದ್ದರು. ವಿಷ್ಣು ದಯಾಳ್ ರಾಮ್ ಅವರು ಈ ವರ್ಷವೂ ಅದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದಾರೆ.
2023 ರವರೆಗೂ ಇವರ ಬಗ್ಗೆ ಸುನೀತಾ ಅವರಿಗೆ ಏನೇನೂ ತಿಳಿದಿರಲಿಲ್ಲ. ಸ್ಥಳೀಯ ಜಾತ್ರೆಯೊಂದರಲ್ಲಿ ವಿಷ್ಣು ದಯಾಳ್ ರಾಮ್ ಹೆಸರಿನ ಕೆಲವು ಘೋಷಣೆಗಳನ್ನು ಕೂಗುವುದನ್ನು ಕೇಳಿದ್ದರು. “ಹುಮಾರಾ ನೇತಾ ಕೈಸಾ ಹೋ? ವಿ ಡಿ ರಾಮ್ ಜೈಸಾ ಹೋ!”
"ಆಜ್ ತಕ್ ಉಂಕೋ ಹಮ್ಲೋಗ್ ದೇಖಾ ನಹೀ ಹೈ [ನಾವು ಇಲ್ಲಿಯವರೆಗೆ ಅವರನ್ನು ನೋಡಿಲ್ಲ]," ಸುನೀತಾ ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು