“ನನಗೆ ಓದುವಷ್ಟು ತಾಳ್ಮೆಯಿಲ್ಲ” ಎನ್ನುತ್ತಾನೆ ಪಾರ್ಥ ಪ್ರತಿಮ್ ಬರುವಾ. ನವೆಂಬರ್ ತಿಂಗಳ ಒಂದು ಆಹ್ಲಾದಕರ ಮಧ್ಯಾಹ್ನ ಅವನು ಮಜುಲಿಯ ಸಣ್ಣ ಪಟ್ಟಣವಾದ ಗರಮುರ್ ಎನ್ನುವಲ್ಲಿ ಓಡಾಡುತ್ತಾ ಮಾತನಾಡುತ್ತಿದ್ದನು. “ಓದಿ ಕೆಲಸ ಪಡೆಯುವುದು ನನ್ನಿಂದ ಸಾಧ್ಯವಿಲ್ಲವೆನ್ನುವುದು ನನಗೆ ತಿಳಿದಿದೆ” ಎಂದು ಅವನು ಹೇಳುತ್ತಾನೆ. 16 ವರ್ಷದ ಈ ಬಾಲಕ ಜಿಲ್ಲೆಯ ಗರಮೂರ್ ಸರು ಸತ್ರದ ಯುವ ಗಾಯನ್-ಬಯಾನ್ ಕಲಾವಿದರಲ್ಲಿ ಒಬ್ಬ.
ಸತ್ರಿಯಾ ಸಂಸ್ಕೃತಿಯ ಒಂದು ಪ್ರಮುಖ ಅಂಶವಾದ ಗಾಯನ್-ಬಯಾನ್ ಧಾರ್ಮಿಕ ಜಾನಪದ ಪ್ರದರ್ಶನವಾಗಿದ್ದು, ಇದನ್ನು ಮುಖ್ಯವಾಗಿ ಅಸ್ಸಾಂನ ಸತ್ರಗಳಲ್ಲಿ (ವೈಷ್ಣವ ಮಠಗಳು) ಆಚರಿಸಲಾಗುತ್ತದೆ. ಪ್ರದರ್ಶನ ನೀಡುವ ಗಾಯಕರನ್ನು ಗಾಯನ್ ಎಂದು ಕರೆಯಲಾಗುತ್ತದೆ, ಅವರು ತಾಳ್ (ತಾಳ) ನುಡಿಸುತ್ತಾರೆ, ಆದರೆ ಖೋಲ್ ಡ್ರಮ್ಸ್ ಮತ್ತು ಕೊಳಲು ನುಡಿಸುವ ವಾದ್ಯ ವಾದಕರನ್ನು ಬಯಾನ್ ಎಂದು ಕರೆಯಲಾಗುತ್ತದೆ. ಮಜುಲಿಯಲ್ಲಿ, ಗಾಯನ್ ಅಥವಾ ಬಯಾನ್ ಎನ್ನುವುದು ಒಂದು ವೃತ್ತಿಯಲ್ಲ ಆದರೆ ಜನರು ಈ ಕುರಿತು ಹೆಮ್ಮೆ ಪಡುತ್ತಾರೆ ಮತ್ತು ಅದನ್ನು ತಮ್ಮ ಗುರುತಿನ ಭಾಗವೆಂದು ಪರಿಗಣಿಸುತ್ತಾರೆ.
“ಓದು ಮುಗಿಸಿದ ಮೇಲೆ ಕೆಲಸ ಪಡೆಯುವುದು ನನ್ನ ಹಣೆಬರಹದಲ್ಲಿ ಇಲ್ಲದಿದ್ದರೆ ಏನು ಮಾಡುವುದು?” ಎಂದು ಕೇಳುತ್ತಾನೆ ಪಾರ್ಥ. ಅವನಿಗೆ ಈಗಾಗಲೇ ಬದುಕಿನ ವಾಸ್ತವ ಅರ್ಥವಾಗಿದೆ. ತನ್ನ 12ನೇ ತರಗತಿಯ ಪರೀಕ್ಷೆ ಮುಗಿದ ನಂತರ ಅವನು ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದಾನೆ. ಅವನ ಅಕ್ಕ ಈಗಾಗಲೇ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
"ನನ್ನ ಪೋಷಕರು ಸಹ [ಗುವಾಹಟಿಯ ಸಂಗೀತ ಶಾಲೆಗೆ ಸೇರುವ] ಯೋಚನೆಯನ್ನು ಬೆಂಬಲಿಸಿದ್ದಾರೆ" ಎಂದು ಅವನು ಹೇಳುತ್ತಾನೆ. "ಆ ಬೆಂಬಲ ಮುಖ್ಯ. ಅದು ಇಲ್ಲದೆ, ನಾನು ಸಂಗೀತ ಪಾಠವನ್ನು ಮುಂದುವರಿಸಲು ಹೇಗೆ ಸಾಧ್ಯವಾಗುತ್ತದೆ? ಅಕ್ಕಿ ಮತ್ತು ಉರುವಲು ಮಾರಾಟ ಮಾಡುವ ಸಣ್ಣ ವ್ಯವಹಾರದ ಮಾಲೀಕರಾದ ಅವನ ತಂದೆ ಈ ಆಲೋಚನೆಯನ್ನು ಒಪ್ಪಿಕೊಂಡಿದ್ದಾರೆ ಆದರೆ ಅವನ ತಾಯಿಗೆ ಈ ಬಗ್ಗೆ ಅಷ್ಟೇನೂ ಖುಷಿಯಿಲ್ಲ. ಪಾರ್ಥ ತನ್ನ ಕಲಿಕೆಗಾಗಿ ಮನೆಯಿಂದ ದೂರ ಹೋಗುವುದು ಅವರಿಗೆ ಇಷ್ಟವಿಲ್ಲ.
ಪ್ರದರ್ಶನದ ಸಮಯ ಬಂದಾಗ, ಪಾರ್ಥ್ ಹಳೆಯ ಬಿಳಿ ಕುರ್ತಾ, ಧೋತಿ ಮತ್ತು ತಲೆಗೆ ಪಾಗ್ ಎಂಬ ಟೋಪಿಯನ್ನು ಧರಿಸುತ್ತಾನೆ ಮತ್ತು ಅವನ ದೇಹಕ್ಕೆ ಸಲೆಂಗ್ ಎಂಬ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾನೆ. ಕಲಾವಿದರು ಮೋಟಮೋನಿ ಮುತ್ತುಗಳ ಹಾರಗಳನ್ನು ಸಹ ಧರಿಸುತ್ತಾರೆ ಮತ್ತು ಅವರ ಹಣೆಗೆ ಶ್ರೀಗಂಧದ ತಿಲಕವನ್ನು ಹಚ್ಚಲಾಗುತ್ತದೆ.
ಪ್ರದರ್ಶನಕ್ಕೆ ಹೋಗುವ ಮೊದಲು ನನಗೆ ಸಂದರ್ಶನ ನೀಡಿದ ಅನೇಕ ಯುವ ಪ್ರದರ್ಶಕರಲ್ಲಿ ಪಾರ್ಥ್ ಒಬ್ಬ. ವೇದಿಕೆಯ ಹಿಂದೆ ಪೇಟಗಳನ್ನು ಕಟ್ಟುವಾಗ ಆತ್ಮವಿಶ್ವಾಸದಿಂದ ಕಾಣುತ್ತಿದ್ದ ಮತ್ತು ಪಿನ್ ಬಳಸಿ ಸಲಾಂಗ್ ಸರಿಯಾಗಿ ಹಚ್ಚಲು ಸಹಾಯ ಮಾಡುತ್ತಿದ್ದ.




























