“ಪಾನಿ ಲೇ ಲೋ! ಪಾನಿ [ನೀರು ಬೇಕಾ! ನೀರು]!"
ಈಗ ಹೋಗಿ ನೀರು ತುಂಬಿಸಲು ಪಾತ್ರೆಗಳನ್ನು ತರಬೇಡಿ. ಈ ನೀರಿನ ಟ್ಯಾಂಕರ್ ಸ್ವಲ್ಪ ಸಣ್ಣದು. ಪ್ಲಾಸ್ಟಿಕ್ ಬಾಟಲ್, ಹಳೆಯ ರಬ್ಬರ್ ಚಪ್ಪಲ್, ಹೆಚ್ಚು ಉದ್ದವಿಲ್ಲದ ಪ್ಲಾಸ್ಟಿಕ್ ಪೈಪ್ ಮತ್ತು ಮರದ ತುಂಡುಗಳನ್ನು ಬಳಸಿ ತಯಾರಿಸಿದ ಈ 'ಟ್ಯಾಂಕರ್'ನಲ್ಲಿ ಒಂದು ಲೋಟ ನೀರನ್ನು ಮಾತ್ರ ಸಾಗಿಸಲು ಸಾಧ್ಯ.
ಬಲ್ವೀರ್ ಸಿಂಗ್, ಭವಾನಿ ಸಿಂಗ್, ಕೈಲಾಶ್ ಕನ್ವರ್ ಮತ್ತು ಮೋತಿ ಸಿಂಗ್ - 5 ರಿಂದ 13 ವರ್ಷ ಪ್ರಾಯದ ಸಾನ್ವಟದ ಈ ಮಕ್ಕಳು - ವಾರಕ್ಕೆ ಎರಡು ಬಾರಿ ಬರುವ ನೀರಿನ ಟ್ಯಾಂಕರನ್ನು ತಮ್ಮ ಪೋಷಕರು ಮತ್ತು ಇತರರು ಹಳ್ಳಿಯಲ್ಲಿ ಹೇಗೆ ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಿ ಈ ಆಟದ ಸಾಮಾನನ್ನು ತಯಾರಿಸಿದ್ದಾರೆ. ಈ ಗ್ರಾಮ ರಾಜಸ್ಥಾನದ ಪೂರ್ವದ ಒಂದು ಮೂಲೆಯಲ್ಲಿದೆ.
ಇಲ್ಲಿ ಮೈಲುಗಟ್ಟಲೆ ಒಣ ಭೂಮಿಯೇ ಇದೆ, ಅಂತರ್ಜಲವೂ ಇಲ್ಲ. ಅಲ್ಲಲ್ಲಿ ಇರುವ ಕೆಲವು ಓರಾನ್‌ಗಳಲ್ಲಿ (ದೇವರ ಬನ) ಮಾತ್ರ ದೊಡ್ಡ ಕೆರೆಗಳಿವೆ.
ಕೆಲವೊಮ್ಮೆ ಮಕ್ಕಳು ಈ ನೀರಿನ ಟ್ಯಾಂಕರ್‌ಗೆ ಪ್ಲಾಸ್ಟಿಕ್ ಕ್ಯಾನನ್ನು ಕತ್ತರಿಸಿ ಮಾಡಿದ ಪಾಟೆಯನ್ನು ಜೋಡಿಸುತ್ತಾರೆ. ವರದಿಗಾರರು ಈ ಬಗ್ಗೆ ಮಕ್ಕಳೊಂದಿಗೆ ಮಾತನಾಡಿದಾಗ, ಬೇರೆ ಬೇರೆ ಭಾಗಗಳನ್ನು ಹುಡುಕಿ ತರಲು ಸಮಯ ಬೇಕು, ಅವುಗಳನ್ನು ಗುಜುರಿಗೆ ಹಾಕಿರುತ್ತಾರೆ ಎಂದು ಹೇಳಿದರು.
ಚಂದದ ಆಟಿಕೆಯ ಗಟ್ಟಿಯಾದ ಚೌಕಟ್ಟು ಸಿದ್ದವಾದ ಮೇಲೆ, ಅದಕ್ಕೆ ಉದ್ದದ ಲೋಹದ ತಂತಿಯೊಂದನ್ನು ಬಿಗಿದು ಸುತ್ತವ ಚಕ್ರಗಳ ಮೂಲಕ ಟ್ಯಾಂಕರನ್ನು ಓಡಿಸುತ್ತಾರೆ. ಹೀಗೇ ಈ ಟ್ಯಾಂಕರನ್ನು ಎಳೆಯುತ್ತಾ, ಕೇರು ಮರದ (ಕ್ಯಾಪಾರಿಸ್ ಡೆಸಿಡುವಾ) ಅಡಿಯಿಂದ ಕೂಗಳತೆಯ ಅಂತರದಲ್ಲಿರುವ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ.
ಕನ್ನಡ: ಚರಣ್ ಐವರ್ನಾಡು