ಬಾಲ್ಯದಲ್ಲಿ ರಜಿತಾ ತನ್ನ ತಂದೆ ಮತ್ತು ಅಜ್ಜ ಚಿಕ್ಕ ಹುಡುಗರಿಗೆ ತರಬೇತಿ ನೀಡುವುದನ್ನು ಕಿಟಕಿಯಿಂದ ಇಣುಕಿ ನೋಡುತ್ತಿದ್ದರು. ಆ ಹುಡುಗರ ಜೊತೆ ತನಗೂ ತರಬೇತಿ ಪಡೆಯಲು ಏಕೆ ಸಾಧ್ಯವಿಲ್ಲ ಎನ್ನುವ ಕುರಿತು ಯೋಚಿಸುತ್ತಿದ್ದರು. ವಿಶೇಷವಾಗಿ ಬೊಂಬೆಗಳು ಆ ಪುಟ್ಟ ಹುಡುಗಿಯ ಕಣ್ಣನ್ನು ಸೆಳೆಯುತ್ತಿದ್ದವು. ಕಿವಿಗಳಿಗೆ ಪದ್ಯಗಳ ವಿಶಿಷ್ಟ ಲಯ ಇಂಪೆನ್ನಿಸುತ್ತಿತ್ತು.
“ಗೊಂಬೆಯಾಟದ ಕಡೆಗಿನ ನನ್ನ ಮೋಹಭರಿತ ಕುತೂಹಲ ತಾತನ ಕಣ್ಣಿಗೆ ಬಿತ್ತು. ಅವರು ಪದ್ಯಗಳನ್ನು ಕಲಿಸಿಕೊಡುವುದಾಗಿ ಹೇಳಿದರು” ಎನ್ನುತ್ತಾರೆ 33 ವರ್ಷದ ರಜಿತಾ.
ರಜಿತಾ ಪುಲವರ್ ಶೋರನೂರಿನಲ್ಲಿರುವ ಕುಟುಂಬದ ಚಿತ್ರಶಾಲೆಯಲ್ಲಿನ ಮರದ ಬೆಂಚ್ ಮೇಲೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಇದೇ ಚಿತ್ರಶಾಲೆಯಲ್ಲಿ ಗೊಂಬೆಗಳಿಗೆ ಮುಖವರ್ಣಿಕೆಗಳನ್ನು ಬರೆಯಲಾಗುತ್ತದೆ. ಅವರ ಮುಂದಿದ್ದ ಮೇಜಿನ ಮೇಲೆ ದಬ್ಬಳ, ಉಳಿ ಮತ್ತು ಸುತ್ತಿಗೆಯಂತಹ ಸಲಕರಣೆಗಳು ಬಿದ್ದಿದ್ದವು.
ಅಂದು ಮಧ್ಯಾಹ್ನ ಹೊತ್ತು ಚಿತ್ರಶಾಲೆಯಲ್ಲಿ ಎಲ್ಲರೂ ವಿರಾಮದಲ್ಲಿದ್ದರು. ಬೊಂಬೆಗಳನ್ನು ತಯಾರಿಸುವ ಶೆಡ್ಡಿನಲ್ಲಿ ರಜಿತಾ ಅವರ ಪಕ್ಕದಲ್ಲಿದ್ದ ಫ್ಯಾನಿನ ಸದ್ದನ್ನು ಹೊರತುಪಡಿಸಿದರೆ ಬೇರೆ ಸದ್ದು ಕೇಳುತ್ತಿರಲಿಲ್ಲ. ಹೊರಗಿನ ತೆರೆದ ಟೆರೇಸ್ ಮೇಲೆ ಚರ್ಮದ ಹಾಳೆಗಳನ್ನು ಒಣಗಲು ಹಾಕಲಾಗಿತ್ತು. ನಂತರ ಅವುಗಳನ್ನು ಕತ್ತರಿಸಿ ಗೊಂಬೆಗಳನ್ನು ಮಾಡಲಾಗುತ್ತದೆ.
“ಇವು ನಾವು ಆಧುನಿಕ ಕತೆಗಳನ್ನು ಪ್ರಸ್ತುತಪಡಿಸಲು ಬಳಸುವ ಕೈಗೊಂಬೆಗಳು” ಎಂದು ತಾನು ಕೆಲಸ ಮಾಡುತ್ತಿದ್ದ ಗೊಂಬೆಯೊಂದರತ್ತ ತೋರಿಸುತ್ತಾ ರಜಿತಾ ಹೇಳಿದರು. ತೊಲ್ಪಾವಕೂತು ಬೊಂಬೆಯಾಟವು ಭಾರತದ ಮಲಬಾರ್ ಕರಾವಳಿಯ ಸಾಂಪ್ರದಾಯಿಕ ಕಲಾ ಪ್ರಕಾರವಾಗಿದ್ದು, ಮೂಲತಃ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವದ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾಗುತ್ತದೆ.














