ನಾನು ಅವರನ್ನು ಭೇಟಿಯಾದ ಸಂದರ್ಭ ಅವರಿಗೆ 104 ವರ್ಷ. ಆಗಲೂ ಅವರು ತನ್ನನ್ನು ಕೋಣೆಯಿಂದ ಹೊರಗೆ ಕರೆ ತರಲು ಸಹಾಯ ಮಾಡುತ್ತಿದ್ದ ಕೈಗಳನ್ನು ಅಸಹನೆಯಿಂದ ಹಿಂದಕ್ಕೆ ತಳ್ಳುತ್ತಿದ್ದರು. ತನ್ನ ಊರುಗೋಲಿನ ಹೊರತು ಉಳಿದ ಎಲ್ಲಾ ಸಹಾಯಗಳನ್ನು ಅವರು ಅಂದು ನಿರಾಕರಿಸಿದ್ದರು. ಆ ವಯಸ್ಸಿನಲ್ಲೂ ಅವರು ನಡೆಯಬಲ್ಲವರಾಗಿದ್ದರು, ತಾನೇ ನಿಲ್ಲುತ್ತಿದ್ದ ಅವರು, ಯಾರ ಸಹಾಯವನ್ನೂ ಪಡೆಯದೆ ಕುಳಿತುಕೊಂಡಿದ್ದರು. ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಚೆಪುವಾ ಗ್ರಾಮದಲ್ಲಿನ ಅವರ ವಿಶಾಲ ಅವಿಭಕ್ತ ಕುಟುಂಬದ ತಲೆಮಾರುಗಳು ಬಹುತೇಕ ತಮ್ಮ ಭವಿಷ್ಯದ ಕೇಂದ್ರವಾಗಿದ್ದ ಈ ಗೃಹಿಣಿ ಮತ್ತು ರೈತ ಮಹಿಳೆಯನ್ನು ಅವಲಂಬಿಸಿದ್ದವು.

ಸ್ವಾತಂತ್ರ್ಯ ಹೋರಾಟಗಾರರಾದ ಭ(ಬಾ)ವಾನಿ ಮಹತೋ ಆಗಸ್ಟ್ 29-30, 2024ರ ಮಧ್ಯರಾತ್ರಿಯ ನಡುವೆ ನಿದ್ರೆಯಲ್ಲೇ ಶಾಂತವಾಗಿ ಈ ಲೋಕವನ್ನು ಬಿಟ್ಟು ತೆರಳಿದರು. ಅವರಿಗೆ 106 ವರ್ಷ ವಯಸ್ಸಾಗಿತ್ತು. ಇವರ ನಿಧನದೊಂದಿಗೆ ನನ್ನ ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ (ಪೆಂಗ್ವಿನ್ ನವೆಂಬರ್ 2022) ಪುಸ್ತಕದ 16 ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೇವಲ ನಾಲ್ವರು ಮಾತ್ರ ಈಗ ಜೀವಂತವಾಗಿದ್ದಾರೆ. ಹಾಗೆ ನೋಡಿದರೆ ಪರಿ ಸ್ವಾತಂತ್ರ್ಯ ಹೋರಾಟಗಾರರ ವಿಭಾಗದಲ್ಲಿ ದಾಖಲಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರರಲ್ಲೇ ಭವಾನಿ ಮಹತೋ ಭಿನ್ನರು. ಅವರು ನಮ್ಮೊಂದಿಗೆ ಗಂಟೆಗಳ ಕಾಲ ಮಾತನಾಡಿದ್ದರು. ಆದರೆ ಮಹಾಕಾವ್ಯದಂತಹ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಬಲವಾಗಿ ಹೇಳುವ ಮೂಲಕ ಅವರು ಹೋರಾಟದ ಕ್ರೆಡಿಟ್‌ ನಿರಾಕರಿಸಿದ್ದರು. 2022ರಲ್ಲಿ ನಾವು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು “ಸ್ವಾತಂತ್ರ್ಯ ಹೋರಾಟಕ್ಕೂ ನನಗೂ ಏನು ಸಂಬಂಧ? ಅಥವಾ ಅಂತಹ ಹೋರಾಟಗಳಲ್ಲಿ ನನ್ನ ಪಾತ್ರ ಏನಿದೆ?” ಎಂದು ಅವರು ನಮ್ಮನ್ನು ಕೇಳಿದರು. ಓದಿ: ಕ್ರಾಂತಿಗೆ ಕೈತುತ್ತು ನೀಡಿದ ಭವಾನಿ ಮಹತೊ

1940ರ ದಶಕದಲ್ಲಿ ಆಗಿನ ಮಹಾ ಬಂಗಾಳ ಕ್ಷಾಮದ ಸಮಯದಲ್ಲಿ ಅವರು ಬಹಳ ದೊಡ್ಡ ಹೊರೆಯನ್ನು ಹೊತ್ತಿದ್ದರು. ಆ ಸಮಯದಲ್ಲಿ ಅವರು ಅನುಭವಿಸಿದ ಕಷ್ಟಗಳು ಕಲ್ಪನೆಗೂ ಮೀರಿದ್ದು

ವಿಡಿಯೋ ನೋಡಿ: ಭವಾನಿ ಮಹತೋ – ಪುರುಲಿಯಾದ ಅಘೋಷಿತ ಸ್ವಾತಂತ್ರ್ಯ ಹೋರಾಟಗಾರರು

ಮಾನ್ ಮಾಜಾರ್‌ ಬ್ಲಾಕಿನಲ್ಲಿರುವ ಅವರ ಮನೆಗೆ ನಾನು ನನ್ನ ಸಹೋದ್ಯೋಗಿ ಸ್ಮಿತಾ ಖಾಟೊರ್‌ ಅವರೊಂದಿಗೆ ಭೇಟಿ ನೀಡಿದ್ದೆ. ಆ ಸಮಯಕ್ಕೆ ಅವರ ಪತಿ ಸ್ವಾತಂತ್ರ್ಯ ಹೋರಾಟಗಾರ ಬೈದ್ಯನಾಥ್ ಮಹತೋ ತೀರಿಕೊಂಡು 20 ವರ್ಷ ಕಳೆದಿತ್ತು. ಹಾಗೆ ನೋಡಿದರೆ, ಭವಾನಿ ಮಹತೋ ತನ್ನ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರನಿಗಿಂತಲೂ ಹೆಚ್ಚು ಸ್ವಾತಂತ್ರ್ಯ ಹೋರಾಟದೊಂದಿಗೆ ಸಂಬಂಧ ಹೊಂದಿದ್ದರು. ನಾನು ಮತ್ತು ಸ್ಮಿತಾ ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದಾಗ ಭವಾನಿ ಮಹತೋ ಅದನ್ನು ಬಲವಾಗಿ ನಿರಾಕರಿಸಿದ್ದರು. ಮತ್ತು ಅದಕ್ಕೆ ಕಾರಣ ತಿಳಿಯಲು ನಮಗೆ ಕೆಲವು ಗಂಟೆಗಳೇ ಬೇಕಾದವು.

1980 ರ ಸ್ವತಂತ್ರ ಸೈನಿಕ ಸಮ್ಮಾನ್ ಯೋಜನೆ ಯೋಜನೆಯಲ್ಲಿ ನೀಡಲಾದ 'ಸ್ವಾತಂತ್ರ್ಯ ಹೋರಾಟಗಾರರ' ಕುರಿತಾದ ವ್ಯಾಖ್ಯಾನಕ್ಕೆ ಅವರು ಪ್ರಾಮಾಣಿಕವಾಗಿ ಬದ್ಧರಾಗಿದ್ದರು. ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಮಹಿಳೆಯರು ಮತ್ತು ಅವರ ಕಾರ್ಯಗಳನ್ನು ಬಹುತೇಕ ಹೊರಗಿಡುವ ಈ ವ್ಯಾಖ್ಯಾನ ಬಹುತೇಕ ಜೈಲು ಶಿಕ್ಷೆಯ ಸುತ್ತಲೇ ಕೇಂದ್ರೀಕೃತವಾಗಿದೆ. ಮತ್ತು ಆ ಮೂಲಕ ಅದು ದೊಡ್ಡ ಮಟ್ಟದ ಕ್ರಾಂತಿಕಾರಿ ಹೋರಾಟಗಳನ್ನು ಹೋರಾಟದ ವ್ಯಾಖ್ಯಾನದಿಂದ ದೂರವಿಟ್ಟಿದೆ. ಇದಕ್ಕಿಂತಲೂ ವಿಪರ್ಯಾಸದ ಸಂಗತಿಯೆಂದರೆ ಇದು ಭೂಗತ ಹೋರಾಟದಲ್ಲಿದ್ದವರ ಬಳಿ ಅವರನ್ನು ಘೋಷಿತ ಅಪರಾಧಿಗಳೆಂದು ಗುರುತಿಸುವ ʼಪುರಾವೆʼ ನೀಡುವಂತೆ ಕೇಳುತ್ತಿತ್ತು. ಎಂದರೆ ಅದು ಹೋರಾಟಗಾರರಿಂದ ಬ್ರಿಟಿಷ್‌ ಸರ್ಕಾರ ನೀಡಿರುವ ಸರ್ಟಿಫಿಕೇಟುಗಳನ್ನು ಎದುರುನೋಡುತ್ತಿತ್ತು!

ನಾವು ಬೇರೆ ಕೋನದಿಂದ ನೋಡಿದಾಗ, ವಿಷಯಗಳನ್ನು ಇನ್ನೊಂದು ನಿಟ್ಟಿನಲ್ಲಿ ಚರ್ಚಿಸಿದಾಗ ಭವಾನಿ ಮಹತೋ ಅವರ ತ್ಯಾಗದ ಎತ್ತರ ನಮ್ಮನ್ನು ಅಚ್ಚರಿಗೆ ದೂಡಿತ್ತು. ಅವರು ಪುರುಲಿಯಾದ ಕಾಡುಗಳಲ್ಲಿ ಅಡಗಿದ್ದ ಕ್ರಾಂತಿಕಾರಿಗಳಿಗೆ ಆಹಾರ ನೀಡಲು ತಮ್ಮ ಜೀವದ ಹಂಗನ್ನು ತೊರೆದು ಹೋಗುತ್ತಿದ್ದರು. ಅವರು ಆ ಸಮಯದಲ್ಲಿ ಮನೆಯಲ್ಲಿನ 25 ಜನರಿಗೆ ಅಡುಗೆ ಮಾಡುವುದಲ್ಲದೆ, ಕಾಡಿನಲ್ಲಿದ್ದ 20 ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕ್ರಾಂತಿಕಾರಿಗಳಿಗೂ ಅಡುಗೆ ಮಾಡಬೇಕಿತ್ತು. ಅಲ್ಲದೆ 1942-43ರಲ್ಲಿ ಬಂಗಾಳ ಬರಗಾಲದಲ್ಲಿ ಬೇಯುತ್ತಿರುವಾಗ ಅವರು ಆಹಾರ ಧಾನ್ಯವನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದು ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟ ನಂಬಲಸಾಧ್ಯವಾದ ಅತಿ ದೊಡ್ಡ ಕೊಡುಗೆಯೆಂದರೆ ಅತಿಶಯೋಕ್ತಿಯಲ್ಲ!

ನೀವು ನಮ್ಮ ನೆನಪುಗಳಲ್ಲಿ ಬದುಕಿರುತ್ತೀರಿ ಭವಾನಿ ಧೀ.

PHOTO • P. Sainath
PHOTO • P. Sainath
PHOTO • P. Sainath

2022 ರಲ್ಲಿ ಪಿ ಸಾಯಿನಾಥ್ ಅವರನ್ನು ಭೇಟಿಯಾ ಗುವ ಹೊತ್ತಿಗೆ ಭಬಾನಿ ಮಹತೋ ಅವರ ವಯಸ್ಸು 101 ಮತ್ತು 104 ರ ನಡುವೆ ಇತ್ತು. 70 ಪ್ರಾಯದ ಅವರ ಮಗ ಶ್ಯಾಮ್ ಸುಂದರ್ ಮಹತೋ ಅವರೊಂದಿಗೆ (ಎಡಕ್ಕೆ) ಭವಾನಿ ಮಹತೋ

PHOTO • Courtesy: the Mahato family

1980ರ ದಶಕದಲ್ಲಿ ಭಬಾನಿ ಮಹತೋ (ಮಧ್ಯ) ತನ್ನ ಪತಿ ಬೈದ್ಯನಾಥ್ ಮತ್ತು ಸಹೋದರಿ ಊರ್ಮಿಳಾ ಅವರೊಂದಿಗೆ. ಇದಕ್ಕೂ ಹಿಂದಿನ ಅವಧಿಯ ಕುಟುಂಬದ ಯಾವುದೇ ಚಿತ್ರಗಳು ಲಭ್ಯವಿಲ್ಲ

PHOTO • Pranab Kumar Mahato

ಸ್ವಾತಂತ್ರ್ಯ ಹೋರಾಟಗಾರರಾದ ಭವಾನಿ ಮಹತೋ 2024ರಲ್ಲಿ ಮತ ಚಲಾಯಿಸುತ್ತಿರುವುದು

PHOTO • P. Sainath

ಭವಾನಿ ಮಹತೋ ತನ್ನ ಮೊಮ್ಮಗ ಪಾರ್ಥ ಸಾರಥಿ ಮಹತೋ ಸೇರಿದಂತೆ ತನ್ನ ಮನೆಯ ಇತರ 13 ಸದಸ್ಯರೊಂದಿಗೆ. ಫೋಟೋ ತೆಗೆದ ಸಂದರ್ಭದಲ್ಲಿ ಕುಟುಂಬದ ಕೆಲವು ಸದಸ್ಯರು ಅಲ್ಲಿರಲಿಲ್ಲ

ಅನುವಾದ: ಶಂಕರ. ಎನ್. ಕೆಂಚನೂರು

P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru