"ಇದೆಲ್ಲವೂ ಒಂದೇ ನೂಲಿನಿಂದ ಅರಂಭವಾಗಿ ಒಂದೇ ನೂಲಿನಿಂದ ಕೊನೆಗೊಳ್ಳುತ್ತದೆ," ಎಂದು ರೇಖಾ ಬೆನ್ ವಘೇಲಾರವರು ನೋವು ತುಂಬಿದ ನಗುವಿನೊಂದಿಗೆ ಹೇಳುತ್ತಾರೆ. ಗುಜರಾತಿನ ಮೋಟಾ ಟಿಂಬ್ಲಾ ಗ್ರಾಮದ ತಮ್ಮ ಮನೆಯಲ್ಲಿರುವ ತಮ್ಮದೇ ಕೈಮಗ್ಗದಲ್ಲಿ ಸಿಂಗಲ್ ಇಕ್ಕತ್‌ನ ಪಟೋಲವನ್ನು ನೇಯುತ್ತಿದ್ದಾರೆ. "ಮೊದಲು ನಾವು ಬಾಬಿನ್‌ಗೆ ಒಂದು ನೂಲನ್ನು ಸುತ್ತುತ್ತೇವೆ. ಕೊನೆಯಲ್ಲಿ ನಾವು ಈಗಷ್ಟೇ ಡೈ ಮಾಡಲಾಗಿರುವ ನೂಲನ್ನು ಬಾಬಿನ್‌ಗೆ ಹಾಕುತ್ತೇವೆ," ಎಂದು ವೆಫ್ಟ್ ನೂಲು ಮಾಡಲು ಬಾಬಿನ್‌ಗಳು ಸಿದ್ಧವಾಗುವ ಮತ್ತು ವಾರ್ಪ್ ನೂಲನ್ನು ಮಗ್ಗದ ಮೇಲೆ ಹೊಂದಿಸುವ ಮೊದಲು ಬರುವ ಪಟೋಲಾ ತಯಾರಿಕೆಯ ಹಲವು ಪ್ರಕ್ರಿಯೆಗಳನ್ನು ರೇಖಾ ಬೆನ್ ವಿವರಿಸುತ್ತಾರೆ.
ಇವರು ವಾಸಿಸುತ್ತಿರುವ ಸುರೇಂದ್ರನಗರ ಜಿಲ್ಲೆಯ ಈ ಹಳ್ಳಿಯರುವ ಅನೇಕ ವಂಕರ್ವಾಗಳು ಪಟೋಲು ಎಂಬ ಪ್ರಸಿದ್ಧ ರೇಷ್ಮೆ ಸೀರೆಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದ ಒಂದಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ 40ರ ಹರೆಯದ ರೇಖಾ ಬೆನ್ ಅವರು ಸಿಂಗಲ್ ಮತ್ತು ಡಬಲ್ ಇಕ್ಕತ್ ಪಟೋಲ ನೇಯುವ ಲಿಂಬ್ಡಿ ತಾಲೂಕಿನ ಏಕಮಾತ್ರ ದಲಿತ ಪಟೋಲ ನೇಕಾರರು. (ಓದಿ: ರೇಖಾ ಬೆನ್ ಬದುಕಿನ ಸೀರೆಯ ಅಡ್ಡ ಮತ್ತು ನೇರ ಎಳೆಗಳು ).
ಸುರೇಂದ್ರನಗರದ ಪಟೋಲವನ್ನು 'ಝಲವಾಡಿ' ಪಟೋಲಾ ಎಂದು ಕರೆಯುತ್ತಾರೆ. ಇದು ಪಟಾನ್‌ನಲ್ಲಿ ತಯಾರಿಸಲ್ಪಡುವ ಪಟೋಲಾಕ್ಕಿಂತ ಅಗ್ಗ. ಮೂಲತಃ ಸಿಂಗಲ್ ಇಕ್ಕತ್ ಪಟೋಲಾಗೆ ಹೆಸರುವಾಸಿಯಾಗಿದ್ದ ಝಲವಾಡ್‌ನಲ್ಲಿ ವಂಕರ್‌ಗಳು (ನೇಕಾರರು) ಈಗ ಡಬಲ್ ಇಕ್ಕತ್‌ಗಳನ್ನು ನೇಯುತ್ತಾರೆ. “ಸಿಂಗಲ್ ಇಕ್ಕತ್‌ನಲ್ಲಿ ಡಿಸೈನ್ ಅಡ್ಡನೂಲಿನ ನೇಯ್ಗೆ (ವೆಪ್ಟ್) ಮೇಲೆ ಮಾತ್ರ ಇರುತ್ತದೆ. ಡಬಲ್ ಇಕ್ಕತ್‌ನಲ್ಲಿ ಉದ್ದ (ವಾರ್ಪ್) ಮತ್ತು ಅಡ್ಡ (ವೆಪ್ಟ್) ನೇಯ್ಗೆ ಎರಡರ ಮೇಲೂ ಡಿಸೈನ್ ಇರುತ್ತದೆ,” ಎಂದು ರೇಖಾ ಬೆನ್‌ರವರು ಎರಡು ಬಗೆಯ ಪಟೋಲಗಳ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾರೆ.
ಈ ವಿನ್ಯಾಸವೇ ತಯಾರಿಕೆಯ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುವುದು. ರೇಖಾ ಬೆನ್ ಆ ಬಗ್ಗೆ ಮತ್ತೊಮ್ಮೆ ವಿವರಿಸಲು ಪ್ರಯತ್ನಿಸುತ್ತಾರೆ. "ಒಂದು ಸಿಂಗಲ್ ಇಕ್ಕತ್ ಪಟೋಲು 3500 ಉದ್ದ (ವಾರ್ಪ್) ನೂಲುಗಳನ್ನೂ, 13750 ಅಡ್ಡ (ವೆಪ್ಟ್) ನೇಯ್ಗೆ ನೂಲುಗಳನ್ನೂ ಹೊಂದಿರುತ್ತದೆ. ಡಬಲ್ ಇಕ್ಕತ್ ಪಟೋಲುವಿನಲ್ಲಿ 2220 ಉದ್ದ ನೂಲುಗಳೂ, 9870 ಅಡ್ಡ ನೂಲುಗಳು ಇರುತ್ತವೆ,” ಎಂದು ಅವರು ಬಾಬಿನಿನಲ್ಲಿರುವ ವೆಫ್ಟ್ ನೂಲನ್ನು ಶಟಲ್‌ಗೆ ಹಾಕುತ್ತಾ ಹೇಳುತ್ತಾರೆ.
ಬಾಬಿನ್‌ನ ಮೇಲಿದ್ದ ನನ್ನ ನೋಟ 55 ವರ್ಷದ ಗಂಗಾ ಬೆನ್ ಪರ್ಮಾರ್ ಅವರ ಮೇಲೆ ಬೀಳುತ್ತದೆ. “ನಾವು ಮೊದಲು ಮರದಿಂದ ಮಾಡಿದ ದೊಡ್ಡ ಸ್ಪೂಲ್‌ನಲ್ಲಿ ನೂಲಿನ ಉಂಡೆಯನ್ನು ಅನ್ನು ಸುತ್ತುತ್ತೇವೆ. ನಂತರ ಅಲ್ಲಿಂದ ಚರಕವನ್ನು ಬಳಸಿ ಬೋಬಿನ್‌ಗೆ ಸುತ್ತಿ ತೆಗೆದುಕೊಳ್ಳುತ್ತೇವೆ. ಚರಕವಿಲ್ಲದೆ ಬಾಬಿನ್‌ಗೆ ನೂಲನ್ನು ಸುತ್ತಲು ನಿಮಗೆ ಸಾಧ್ಯವಿಲ್ಲ,” ಎಂದು ಲಿಂಬ್ಡಿಯ ಘಘ್ರೇಟಿಯಾ ಗ್ರಾಮದ ತಮ್ಮ ಮನೆಯಲ್ಲಿ ಕೆಲಸ ಅವರು ಮಾಡುತ್ತಾ ಹೇಳುತ್ತಾರೆ.
"ನೀವು ಎಲ್ಲಿ ಕಳೆದು ಹೋದಿರಿ?" ಎಂದು ರೇಖಾ ಬೆನ್ ಅವರು ಪಟೋಲಾ ನೂಲುಗಳ ನಮ್ಮ ಚರ್ಚೆಗೆ ಮತ್ತೆ ನನ್ನನ್ನು ಎಳೆದು ತಂದರು. ಈ ಸಂಕೀರ್ಣ ಪ್ರಕ್ರಿಯೆಯ ಬಗ್ಗೆ ಆ ದಿನ ನನಗೆ ಅವರು ಅನೇಕ ಬಾರಿ ವಿವರಿಸಿದ್ದರು. "ಬರೆದುಕೊಳ್ಳಿ," ಎಂದು ಅವರು ನನ್ನ ನೋಟ್‌ಬುಕ್ ಕಡೆಗೆ ನೋಡುತ್ತಾ ಆದೇಶ ನೀಡಿದರು. ಅವರು ಸ್ವಲ್ಪ ಹೊತ್ತು ನೇಯ್ಗೆ ನಿಲ್ಲಿಸಿ, ನಾನು ಈ ಪ್ರಕ್ರಿಯೆಯ ಬಗ್ಗೆ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ನಾನು ಪ್ರಕ್ರಿಯೆಯ ಪ್ರತೀ ಹಂತಗಳ ಬಗ್ಗೆ ಬರೆದುಕೊಂಡೆ. ಒಂದು ಡಜನ್‌ಗಿಂತಲೂ ಹೆಚ್ಚು ಹಂತಗಳಿರುವ ಈ ತಯಾರಿಕಾ ಪ್ರಕ್ರಿಯೆ ತುಂಬಾ ಜಟಿಲವಾಗಿದೆ, ಮತ್ತು ಅದು ಅನೇಕ ವಾರಗಳವರೆಗೆ ನಡೆಯುತ್ತದೆ. ನೇಕಾರರು ಮಾತ್ರವಲ್ಲದೇ ಇನ್ನೂ ಹೆಚ್ಚಿನ ಕೆಲಸಗಾರರು ಇದಕ್ಕೆ ಬೇಕಾಗುತ್ತಾರೆ. ರೇಷ್ಮೆ ನೂಲಿನಿಂದ ಆರಂಭವಾಗುವ ಈ ಪ್ರಕ್ರಿಯೆಯು 252-ಇಂಚಿನ ಉದ್ದದ ಪಟೋಲಾ ಸೀರೆಗೆ ರೂಪ ನೀಡಿ ಕೊನೆಯ ನೂಲಿನೊಂದಿಗೆ ಅಂತ್ಯವಾಗುತ್ತದೆ. ಇದು ಆರು ತಿಂಗಳು ತೆಗೆದುಕೊಳ್ಳುವ ಶ್ರಮದ ಕೆಲಸ .
"ಯಾವುದೇ ಹಂತದಲ್ಲಿ ಒಂದೇ ಒಂದು ತಪ್ಪು ನಡೆದರೂ ನೀವು ಮಾಡುತ್ತಿರುವ ಪಟೋಲು ಹಾಳಾಗುವುದು ಖಚಿತ," ಎಂದು ಅವರು ಎಚ್ಚರಿಸುತ್ತಾರೆ.
ಅನುವಾದ: ಚರಣ್ ಐವರ್ನಾಡು