ಗಂಗೂ ಬಾಯಿ ಚೌಹಾಣ್‌ ಅವರು ತಮ್ಮ ಪಾಲಿನ ನೀರು ಪಡೆಯಲು ಬೇಡಬೇಕು. “ಸರ್ಕಾರ್‌, ವಾಚ್‌ಮನ್‌ ಸಾಹಿಬ್!‌ ದಮ್ಮಯ್ಯ ಸ್ವಲ್ಪ ಕುಡಿಯಲು ಸ್ವಲ್ಪ ನೀರು ಕೊಡಿ. ನಾನು ಇಲ್ಲೇ ಇರುವುದು ಸರ್.”

ಆದರೆ ಹಾಗೆ ಬೇಡಿಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಅವರು “ನಾನು ಯಾವುದೇ ಕಾರಣಕ್ಕೂ ನಿಮ್ಮ ಪಾತ್ರೆ ಮುಟ್ಟುವುದಿಲ್ಲ” ಎನ್ನುವ ಭರವಸೆ ಕೊಡಬೇಕು.

ಗಂಗೂಬಾಯಿ (ಹೆಸರು ಬದಲಾಯಿಸಲಾಗಿದೆ) ನೀರಿಗಾಗಿ ಖಾಸಗಿ ಕೊಳಾಯಿಗಳು, ಟೀ ಅಂಗಡಿ, ಮತ್ತು ಮದುವೆ ಛತ್ರಗಳನ್ನು ಅವಲಂಬಿಸಿದ್ದಾರೆ. ನಾಂದೇಡ್‌ ನಗರದ ಗೋಕುಲನಗರ ಎನ್ನುವ ಏರಿಯಾದ ಫುಟ್‌ಪಾತ್‌ ಮೇಲೆ ʼಮನೆಯನ್ನುʼ ಹೊಂದಿರುವ ಅವರು ಅದರ ಎದುರಿಗಿರುವ ಹೋಟೆಲ್ಲಿನಂತಹ ಕಟ್ಟಡಗಳ ಕಾವಲುಗಾರರ ಬಳಿ ನೀರು ಕೊಡುವಂತೆ ಬೇಡುತ್ತಾರೆ. ಅವರು ನೀರು ಬೇಕಾದಾಗಲೆಲ್ಲ ಈ ರೀತಿ ಬೇಡಿಕೊಳ್ಳುತ್ತಾರೆ.

ಹೀಗೆ ನೀರು ಹುಡುಕುವುದು ಅವರ ಪಾಲಿಗೆ ದೈನಂದಿನ ಕೆಲಸ. ಒಂದು ಕಾಲದಲ್ಲಿ ʼಅಪರಾಧಿ ಬುಡಕಟ್ಟುಗಳʼ ಅಡಿ ಪಟ್ಟಿ ಮಾಡಲ್ಪಟ್ಟಿದ್ದ ಫಾನ್ಸೆ ಪಾರ್ಧಿ ಬುಡಕಟ್ಟಿನವರಾದ ಅವರಿಗೆ ತಮ್ಮ ಜಾತಿ ನೀರು ಹುಡುಕುವಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿದೆ. ವಸಾಹತುಶಾಹಿ ಕಾಲದಲ್ಲಿ ತಯಾರಿಸಲಾಗಿದ್ದ ಈ ಪಟ್ಟಿಯನ್ನು 1952ರಲ್ಲಿ ಭಾರತ ಸರ್ಕಾರ ರದ್ದುಪಡಿಸಿದೆ . ಆದರೆ ಈಗ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಗಂಗೂಬಾಯಿಯವರಂತಹ ಮಹಿಳೆಯರು ಇಂದಿಗೂ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರು ತಾನು ಕಳ್ಳಿಯಲ್ಲ ಎಂದು ಜನರಿಗೆ ಮನವರಿಕೆ ಮಾಡಿದರಷ್ಟೇ ಅವರ ನೀರಿನ ಬಿಂದಿಗೆ ತುಂಬುತ್ತದೆ.

“ʼನಾವು ನೀವು ಇಲ್ಲಿಟ್ಟಿರುವ ಯಾವುದೇ ಪಾತ್ರೆ-ಪಡಗಗಳನ್ನು ಮುಟ್ಟುವುದಿಲ್ಲʼ ಎನ್ನುವ ಭರವಸೆ ಕೊಟ್ಟರೆ ಮಾತ್ರ ನೀರು ಕೊಡುತ್ತಾರೆ” ಎನ್ನುತ್ತಾರೆ ಗಂಗೂಬಾಯಿ. ಒಮ್ಮೆ ನೀರು ಹಿಡಿದುಕೊಳ್ಳಲು ಅನುಮತಿ ಸಿಕ್ಕರೆ ಗಂಗೂಬಾಯಿ ತನ್ನಿಂದ ಸಾಧ್ಯವಿರುವಷ್ಟು ನೀರನ್ನು ಸಣ್ಣ ಡಬ್ಬಿಗಳು, ಪ್ಲಾಸ್ಟಿಕ್‌ ಡ್ರಮ್ಮುಗಳು ಮತ್ತು ನೀರಿನ ಬಾಟಲಿಗಳಿಗೆ ತುಂಬಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಅವರು ಕುಡಿಯಲು, ಅಡುಗೆಗೆ ಸೇರಿದಂತೆ ಮನೆಬಳಕೆಗೆ ಬೇಕಾಗುವಷ್ಟು ನೀರು ಪಡೆಯಲು ಕನಿಷ್ಟ ನಾಲ್ಕೈದು ಜನರ ಬಳಿ ಬೇಡಬೇಕಾಗುತ್ತಾದೆ.

A settlement of the Phanse Pardhi groups on the municipal grounds of Gokulnagar in Nanded. Migrants and transhumants live here on footpaths
PHOTO • Prakash Ransingh
A settlement of the Phanse Pardhi groups on the municipal grounds of Gokulnagar in Nanded. Migrants and transhumants live here on footpaths
PHOTO • Prakash Ransingh

ನಾಂದೇಡ್ ಪಟ್ಟಣದ ಗೋಕುಲನಗರದ ಮುನ್ಸಿಪಲ್ ಮೈದಾನದಲ್ಲಿ ಫಾನ್ಸೆ ಪಾರ್ಧಿ ಗುಂಪುಗಳ ನೆಲೆ. ವಲಸಿಗರು ಮತ್ತು ಅಲೆಮಾರಿಗಳು ಇಲ್ಲಿನ ಕಾಲುದಾರಿಗಳಲ್ಲಿ ವಾಸಿಸುತ್ತಿದ್ದಾರೆ

Left: Children taking a bath near the road settlements. Right: An enclosure created for men to bath
PHOTO • Prakash Ransingh
Left: Children taking a bath near the road settlements. Right: An enclosure created for men to bath
PHOTO • Prakash Ransingh

ಎಡ: ರಸ್ತೆ ವಸತಿಗಳ ಬಳಿ ಸ್ನಾನ ಮಾಡುತ್ತಿರುವ ಮಕ್ಕಳು. ಬಲ: ಪುರುಷರಿಗೆ ಸ್ನಾನ ಮಾಡಲೆಂದು ರಚಿಸಲಾಗಿರುವ ಆವರಣ

ಗಂಗೂಬಾಯಿಯವರಂತಹ ವಲಸಿಗರು ಸುತ್ತಲಿನ ಹಳ್ಳಿಗಳು ಮತ್ತು ಮಹಾರಾಷ್ಟ್ರದ ಇತರ ಜಿಲ್ಲೆಗಳಿಂದ ನಾಂದೇಡ್‌ ಪಟ್ಟಣಕ್ಕೆ ವಲಸೆ ಬರುತ್ತಾರೆ. “ನಾವು ಇಲ್ಲಿ (ನಾಂದೇಡ್‌ ನಗರದಲ್ಲಿ) ಎಂಟು ತಿಂಗಳ ಕಾಲ ಇರುತ್ತೇವೆ. ಮಳೆಗಾಲ ಆರಂಭಗೊಂಡ ನಂತರ ಮತ್ತೆ ಊರಿಗೆ ಹೋಗುತ್ತೇವೆ” ಎಂದು ಅವರು ವಿವರಿಸುತ್ತಾರೆ. ಹೀಗೆ ಹೊರಗೆ ಬಂದ ಕುಟುಂಬಗಳು ನಗರದ ತೆರೆದ ಮೈದಾನಗಳು, ಕಾಲುದಾರಿಗಳು, ಎತ್ತರಿಸಿದ ನೀರಿನ ತೊಟ್ಟಿಗಳಡಿ, ಮಣ್ಣು ಅಗೆದ ಹಳ್ಳಗಳು ಮತ್ತು ರೈಲ್ವೇ ಸ್ಟೇಷನ್ನುಗಳಲ್ಲಿ ತಾತ್ಕಾಲಿಕ ಡೇರೆಗಳನ್ನು ಸ್ಥಾಪಿಸಿಕೊಂಡು ವಾಸಿಸುತ್ತವೆ. ಅವರು ಇಲ್ಲಿರುವ ಅವಧಿಯಲ್ಲಿ ಕೆಲಸವನ್ನು ಹುಡುಕುವುದಷ್ಟೇ ಅವರ ವಲಸೆಯ ಗುರಿ. ಮತ್ತು ಅವರು ಅಗತ್ಯವನ್ನು ಅವಲಂಬಿಸಿ ಅಲ್ಲಿಂದ ಗುಳೇ ಹೋಗುತ್ತಾರೆ.

ಈ ನಗರದಲ್ಲಿ ಎಲ್ಲಿಯೂ ವಲಸಿಗರು ಮತ್ತು ಅಲೆಮಾರಿ ಪಶುಪಾಲಕರಿಗಾಗಿ ನೀರಿನ ಸೌಲಭ್ಯವನ್ನು ಒದಗಿಸಬಲ್ಲ ಶಾಶ್ವತ ವ್ಯವಸ್ಥೆ ಲಭ್ಯವಿಲ್ಲ. ಇದರಿಂದಾಗಿ ಇಲ್ಲಿ ಮಕ್ಕಳು, ಮಹಿಳೆಯರು ಮತ್ತು ವಿಶೇಷವಾಗಿ ಯುವತಿಯರು ನೀರಿನ ಹುಡುಕಾಟದಲ್ಲಿ ಅವಮಾನ ಮತ್ತು ಹಿಂಸೆಯನ್ನು ಸಹಿಸಬೇಕಾಗುತ್ತದೆ.

ಇವರಲ್ಲಿ ಹೆಚ್ಚಿನವರು ಗೋಕುಲನಗರ, ದೇಗ್ಲೂರ್‌ ನಾಕಾ, ಸಿಡ್ಕೊ ರಸ್ತೆ ಮತ್ತು ಹುಜೂರ್‌ ಸಾಹಿಬ್‌ ರೈಲ್ವೆ ನಿಲ್ದಾಣದ ಪ್ರದೇಶಗಳಲ್ಲಿ ಮುಂದಿನ ಊರಿಗೆ ಹೋಗುವ ತನಕ ಅಥವಾ ತಮ್ಮ ಊರಿಗೆ ಮರಳುವ ತನಕ ಕೆಲಸ ಹುಡುಕುತ್ತಿರುತ್ತಾರೆ.

ಇಲ್ಲಿರುವ ವಲಸಿಗರಲ್ಲಿ ಫಾನ್ಸೆ ಪಾರ್ಧಿ, ಘಿಸಾಡಿ ಮತ್ತು ವಡಾರ್‌ ಸಮುದಾಯಗಳಿಗೆ ಸೇರಿದವರಿದ್ದಾರೆ. ಹಾಗೆಯೇ ಉತ್ತರ ಪ್ರದೇಶದ ಲಕ್ನೋ ಮತ್ತು ಕರ್ನಾಟಕದ ಬೀದರ್; ತೆಲಂಗಾಣದಿಂದ ಮುಸ್ಲಿಮರು, ಚಮ್ಮಾರರು ಮತ್ತು ಜೋಗಿಗಳು ಇಲ್ಲಿಗೆ ವಲಸೆ ಬರುತ್ತಾರೆ. ಅವರು ಇಲ್ಲಿ ತಮ್ಮ ಸಾಂಪ್ರದಾಯಿಕ, ಜಾತಿಯಾಧಾರಿತ ಉದ್ಯೋಗಗಳನ್ನು ಅಭ್ಯಾಸ ಮಾಡುತ್ತಾರೆ ಜೊತೆಗೆ ಹೊಸ ಕೆಲಸದ ಅವಕಾಶಗಳನ್ನು ಸಹ ಹುಡುಕುತ್ತಾರೆ. ಅವರು ಕೈಯಿಂದ ತಯಾರಿಸಿದ ಕಬ್ಬಿಣದ ಉಪಕರಣಗಳು, ಪೆನ್ನುಗಳು, ಬಲೂನುಗಳು, ಚಾಪೆಗಳು, ಗಾಜಿನ ವಸ್ತುಗಳು ಮತ್ತು ಆಟಿಕೆಗಳನ್ನು ಸಹ ಮಾರಾಟ ಮಾಡುತ್ತಾರೆ ಮತ್ತು ಕೆಲವೊಮ್ಮೆ ಸಿಗ್ನಲ್ಲುಗಳಲ್ಲಿ ಭಿಕ್ಷೆ ಬೇಡುತ್ತಾರೆ ಅಥವಾ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ ಈ ಜನರು ಬದುಕು ನಡೆಸುವ ಸಲುವಾಗಿ ಯಾವ ಕೆಲಸ ಸಿಕ್ಕರೂ ಮಾಡಲು ತಯಾರಿರುತ್ತಾರೆ.

ಸಿಡ್ಕೊ ಎಂಐಡಿಸಿ ರಸ್ತೆಯಲ್ಲಿ ನೆಲೆಸಿರುವ ಘಿಸಾಡಿ ಕುಟುಂಬದ ಕಾಜಲ್ ಚವಾಣ್ ತಾನು ಸದಾ ನೀರಿನ ಹುಡುಕಾಟದಲ್ಲಿರುತ್ತೇನೆ ಎನ್ನುತ್ತಾರೆ. “ಕೆಲವೊಮ್ಮೆ ನಾವು ರಸ್ತೆಯಲ್ಲಿ ಹೋಗುವ ನೀರಿನ ಟ್ಯಾಂಕರುಗಳವರ ಬಳಿ ನೀರನ್ನು ಕೇಳುತ್ತೇವೆ. ಇದಕ್ಕೆ ಪ್ರತಿಯಾಗಿ, ನಾವು ಅವರಿಗೆ ಕೆಲಸ ಮಾಡಿಕೊಡಬೇಕು" ಎಂದು ಅವರು ಹೇಳುತ್ತಾರೆ. ಅವರಷ್ಟೇ ಅಲ್ಲ ಮುನ್ಸಿಪಲ್‌ ಮೈದಾನದಲ್ಲಿ ತಂಗಿರುವ ಎಲ್ಲರೂ ಖಾಸಗಿ ಕೊಳಾಯಿಗಳಿಂದ ನೀರು ತಂದರೆ ಪ್ರತಿಯಾಗಿ ಅವರಿಗೆ ಕೆಲಸ ಮಾಡಿಕೊಡುತ್ತೇವೆ ಎನ್ನುತ್ತಾರೆ.

ಈ ಜನರಿಗೆ ಕೊಳಾಯಿ ನೀರು ಸಿಗದಿದ್ದಾಗ ಬೇರೆ ಆಯ್ಕೆಗಳನ್ನು ಹುಡುಕಬೇಕಾಗುತ್ತದೆ. ಗೋಕುಲನಗರದ ಕಾಲದಾರಿಯಲ್ಲಿ ಮುನ್ಸಿಪಲ್‌ ನೀರಿನ ಪೈಪ್‌ ಲೈನಿನಲ್ಲಿ ಒಂದು ಚೇಂಬರ್‌ ಇದೆ. ಅಲ್ಲಿ ಪೈಪಿನಿಂದ ಸೋರಿಕೆಯಾಗುವ ನೀರು ಕೆಳಗಿರುವ ಹೊಂಡದಲ್ಲಿ ಸಂಗ್ರಹವಾಗುತ್ತದೆ. “ಆ ಚೇಂಬರಿಗೆ ವಾರಕ್ಕೆ ಎರಡು ಬಾರಿ ನೀರು ಸರಬರಾಜಾಗುತ್ತದೆ. ಆ ಚೇಂಬರಿನಲ್ಲಿ ನೀರಿದ್ದ ದಿನ ಹಬ್ಬದಂತೆ” ಎಂದು ಗೋಕುಲನಗರದ ಸ್ಥಳೀಯ ಕಬ್ಬಿನಹಾಲು ವ್ಯಾಪಾರಿ ಹೇಳುತ್ತಾರೆ.

A collection of containers lined up to collect water. Their temporary homes on the side of a road  (right)
PHOTO • Prakash Ransingh
A collection of containers lined up to collect water. Their temporary homes on the side of a road  (right).
PHOTO • Prakash Ransingh

ನೀರಿಗಾಗಿ ಬಾಯ್ದೆರೆದು ಕಾಯುತ್ತಿರುವ ವಿವಿಧ ಬಗೆ ಪಾತ್ರೆಗಳು. ರಸ್ತೆ ಬದಿಯಲ್ಲಿನ ಅವರ ತಾತ್ಕಾಲಿಕ ಡೇರೆಗಳು (ಬಲ)

A Ghisadi family (right) makes iron tools using different alloys (left)
PHOTO • Prakash Ransingh
A Ghisadi family (right) makes iron tools using different alloys (left)
PHOTO • Prakash Ransingh

ಘಿಸಾಡಿ ಕುಟುಂಬವೊಂದು ಬಗೆಬಗೆಯ ಲೋಹಗಳನ್ನು ಬಳಸಿ ಕಬ್ಬಿಣದ ಸಲಕರಣೆಗಳನ್ನು ತಯಾರಿಸುತ್ತಿರುವುದು

ಸಣ್ಣ ಮಕ್ಕಳು ಆ ಹೊಂಡದೊಳಗೆ ಇಳಿದು ನೀರು ತರಲು ಸಾಧ್ಯವಾಗುತ್ತದೆ. ಆದರೆ ಮಣ್ಣು ಮತ್ತು ಹತ್ತಿರದ ಹೋಟೆಲ್ಲಿನ ಕೊಳಚೆ ನೀರು ಆ ನೀರನ್ನು ಕಲುಷಿತಗೊಳಿಸಿರುತ್ತದೆ. ಆದರೆ ನೀರಿನ ಅಗತ್ಯವಿರುವ ಕುಟುಂಬಗಳು ಆ ನೀರನ್ನು ಸ್ನಾನ ಮತ್ತು ಬಟ್ಟೆ ಒಗೆಯುವ ಸಲುವಾಗಿ ಬಳಸುತ್ತವೆ. ಅವರಿಗೆ ಅದನ್ನು ಬಳಸದೆ ಬೇರೆ ದಾರಿಯಿಲ್ಲ. ಕನಿಷ್ಟ ಐವತ್ತು ಕುಟುಂಬಗಳು ಈ ಪೈಪ್‌ ಲೈನ್ ಚೇಂಬರಿನ ನೀರನ್ನು ಅವಲಂಬಿಸಿವೆ.‌ ಈ ಕಾಲುದಾರಿಯ ಮೇಲೆ ಇನ್ನೂ ಹೆಚ್ಚಿನ ಕುಟುಂಬಗಳಿವೆ. ಅವುಗಳನ್ನು ಲೆಕ್ಕ ಹಾಕುವುವುದು ಕಷ್ಟ.

2021ರ ವರದಿಯೊಂದರ ಪ್ರಕಾರ, ನಾಂದೇಡ್ ನಗರಕ್ಕೆ ತಲಾ 120 ಲೀಟರ್ ನೀರು ಸಿಗುತ್ತದೆ, ಪ್ರತಿದಿನ ಒಟ್ಟು 80 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಇದು ರಸ್ತೆಗಳಲ್ಲಿ ವಾಸಿಸುವವ ಜನರನ್ನು ತಲುಪುವುದಿಲ್ಲ.

*****

ಖಾನ್‌ ಅವರ ಕುಟುಂಬ ದೇಗ್ಲೂರ್‌ ನಾಕಾದಲ್ಲಿರುವ ಎತ್ತರಿಸಿದ ನೀರಿನ ತೊಟ್ಟಿಯ ಅಡಿ ಆಶ್ರಯ ಪಡೆದಿದೆ. ಅವರು ಮೂಲತಃ ಬೀಡ್‌ (ಬಿಡ್‌ ಎಂದೂ ಕರೆಯಲಾಗುತ್ತದೆ) ಜಿಲ್ಲೆಯ ಪಾರ್ಲಿಯವರು. ಅವರು ಆಗಾಗ ನಾಂದೇಡ್‌ ನಗರಕ್ಕೆ ಬರುತ್ತಿರುತ್ತಾರೆ. ಅದರಲ್ಲೂ ವಿಶೇಷವಾಗಿ ರಂಜಾನ್‌ ಸಮಯದಲ್ಲಿ ಹದಿನಾಲ್ಕು ದಿನ ಇಲ್ಲಿ ತಂಗುತ್ತಾರೆ.

ಸಿಮೆಂಟಿನಿಂದ ನಿರ್ಮಿಸಲಾಗಿರುವ ಎತ್ತರದ ನೀರಿನ ಟ್ಯಾಂಕ್‌ ಅಡಿಯ ಖಾಲಿ ಜಾಗ ಅವರ ಕುಟುಂಬಕ್ಕೆ ಆಶ್ರಯ ನೀಡಿದೆ. ಹತ್ತಿರದ ಹೋಟೆಲ್ಲುಗಳೇ ಅವರ ನೀರಿನ ಮೂಲ. ಜೊತೆಗೆ ಅಲ್ಲೇ ಇರುವ ಸರ್ಕಾರದ ಕ್ಲಿನಿಕ್‌ ಒಂದರಿಂದ ಕುಡಿಯಲು ಫಿಲ್ಟರ್‌ ನೀರನ್ನು ತರುತ್ತಾರೆ. ಆ ಕ್ಲಿನಿಕ್ಕಿಗೆ ರಜೆಯಿರುವ ದಿಣ ಫಿಲ್ಟರ್‌ ನೀರಿಗೂ ರಜೆ. 45 ವರ್ಷದ ಜಾವೆದ್‌ ಖಾನ್‌ “ಯಾವ ನೀರು ಸಿಗುತ್ತದೋ ಅದನ್ನು ಕುಡಿಯುತ್ತೇವೆ, ಅದು ಬೋರವೆಲ್‌ ನೀರಾದರೂ ಸರಿ ಅಥವಾ ನಲ್ಲಿ ನೀರಾದರೂ ಸರಿ. ಕೆಲವೊಮ್ಮೆ ಈ ನೀರಿನ ತೊಟ್ಟಿಯಿಂದ ತೊಟ್ಟಿಕ್ಕುವ ನೀರನ್ನೂ ಕುಡಿಯುತ್ತೇವೆ” ಎನ್ನುತ್ತಾರೆ.

ಈ ಜನರು ಹೀಗೆ ನೀರಿಗೆ ಪರದಾಡುತ್ತಿರುವ ಹೊತ್ತಿನಲ್ಲೇ, ಖಾಸಗಿಯಾಗಿ ನೀರು ಮಾರುವ ವಾಟರ್‌ ಫಿಲ್ಟರ್‌ ಘಟಕಗಳು ಎಲ್ಲೆಡೆ ಇವೆ. ಅಲ್ಲಿ ನೀವು 10 ರೂಪಾಯಿ ನೀಡಿದರೆ 5 ಲೀಟರ್‌ ನೀರು ಸಿಗುತ್ತದೆ. ತಣ್ಣಗಿನ ನೀರಿಗೆ ಹತ್ತು ರೂಪಾಯಿಯಾದರೆ, ಸಾದಾ ನೀರಿಗೆ ಐದು ರೂಪಾಯಿ.

ಸೋಲಾಪುರದಿಂದ ವಲಸೆ ಬಂದಿರುವ, 32 ವರ್ಷದ ನಯನಾ ಕಾಳೆ ಇದಕ್ಕೂ ಮೊದಲು ಮುಂಬಯಿ, ನಾಶಿಕ್‌ ಮತ್ತು ಪುಣೆಗಳಲ್ಲಿ ಇದ್ದ ಬಂದವರು. ಅವರು ಹೇಳುತ್ತಾರೆ, “ನಾವು 10 ರೂಪಾಯಿ ಕೊಟ್ಟು ಖರೀದಿಸುವ ಐದು ಲೀಟರ್ ನೀರಿನ ಬಾಟಲಿಯಲ್ಲೇ ಒಂದು ದಿನ ದೂಡಲು ಪ್ರಯತ್ನಿಸುತ್ತೇವೆ.”

Left: Some migrants get access to filtered tap water from a clinic.
PHOTO • Prakash Ransingh
Right: A water pot near Deglur Naka
PHOTO • Prakash Ransingh

ಎಡ: ಕೆಲವು ವಲಸಿಗರು ಕ್ಲಿನಿಕ್ಕಿನ ನೀರಿನ ಫಿಲ್ಟರ್‌ ಮೂಲಕ ನೀರು ಪಡೆಯುತ್ತಾರೆ. ಬಲ: ದೇಗ್ಲೂರ್‌ ನಾಕಾ ಬಳಿಯಿರುವ ನೀರಿನ ಮಡಿಕೆಗಳು

ಜನರು ದಿನವೂ ಫಿಲ್ಟರ್‌ ನೀರನ್ನು ಖರೀದಿಸಲು ಸಾಧ್ಯವಿಲ್ಲದ ಕಾರಣ ರಿವರ್ಸ್‌ ಒಸ್ಮೋಸಿಸ್ (ಆರ್‌ ಒ)ಫಿಲ್ಟರಿನಿಂದ ವ್ಯರ್ಥವಾಗಿ ಹೊರಗೆ ಬರುವ ನೀರನ್ನು ಖರೀದಿಸುತ್ತಾರೆ. ಮಾನವ ಬಳಕೆಗೆ ಅನರ್ಹವಾಗಿರುವ ಈ ನೀರನ್ನು ಈ ಜನರು ಕುಡಿಯಲು ಬಳಸುತ್ತಾರೆ.

“ನಾವು ಹೋಟೆಲ್ಲುಗಳವರ ಬಳಿ ನೀರು ಖರೀದಿಸಬೇಕಷ್ಟೇ, ಅವರ ಬಳಿ ಹಾಗೆಯೇ ನೀರು ಕೊಡುವಂತೆ ಕೇಳಿದರೆ ʼನಮ್ಮ ಗಿರಾಕಿಗಳಿಗೇ ನೀರಿಲ್ಲ, ನಿಮಗೆಲ್ಲಿಂದ ಕೊಡೋಣʼ ಎಂದು ಕೇಳುತ್ತಾರೆ” ಎನ್ನುತ್ತಾರೆ ಖಾತುನ್‌ ಪಟೇಲ್.‌ 30 ವರ್ಷ ವಯಸ್ಸಿನ ಅವರು ನಾಂದೇಡ್‌ ಸ್ಟೇಷನ್‌ ಬಳಿ ವಾಸಿಸುತ್ತಾರೆ.

“ನಮ್ಮಲ್ಲಿ ನೀರಿದೆ, ಆದರೆ ಅವರಿಗೆ ಕೊಡುವುದಿಲ್ಲ. ಅವರು ನೀರು ಕೇಳಿಕೊಂಡು ಬಂದಾಗ ನೀರಿಲ್ಲ ಹೋಗಿ ಎಂದು ಓಡಿಸುತ್ತೇವೆ” ಎಂದು ಗೋಕುಲನಗರದ ವಾಚ್‌ಮನ್‌ ಒಬ್ಬರು ಹೇಳುತ್ತಾರೆ.

ಕಲ್ಯಾಣ ಮಂಟಪದ ಮಾಲಿಕರೊಬ್ಬರು (ಅವರು ತಮ್ಮ ಹೆಸರನ್ನು ಹಂಚಿಕೊಳ್ಳಲು ಬಯಸಲಿಲ್ಲ) “ನಾವು ಅವರಿಗೆ [ಡೇರೆಗಳಲ್ಲಿರುವ ಜನರಿಗೆ] ಎರಡು ಕ್ಯಾನು ನೀರು ತೆಗೆದುಕೊಳ್ಳುವಂತೆ ಹೇಳಿದ್ದೇವೆ. ಆದರೆ ಅವರು ಬಂದು ಇನ್ನಷ್ಟು ನೀರು ಕೊಡಿ ಎಂದು ಕೇಳುತ್ತಲೇ ಇರುತ್ತಾರೆ. ನಮ್ಮಲ್ಲಿರುವುದು ಮೀಟರ್‌ ಆಳವಡಿಸಿರುವ ಕೊಳಾಯಿ. ಅದ್ಕಕಿಂತ ಹೆಚ್ಚು ನೀರು ಕೊಡುವುದು ನಮ್ಮಿಂದ ಸಾಧ್ಯವಿಲ್ಲ.” ಎನ್ನುತ್ತಾರೆ.

*****

ಇಲ್ಲಿ ಸಾಮಾನ್ಯವಾಗಿ ಹೆಂಗಸರು ಮತ್ತು ಯುವತಿಯರು ನೀರು ತರಲೆಂದು ಹೋಗುತ್ತಾರೆ. ಹಾಗೆ ಹೋದಾಗ ಅವರು ತೀವ್ರತರದ ನಿರಾಕರಣೆಯನ್ನು ಎದುರಿಸುತ್ತಾರೆ. ಅವರು ವಾಸಿಸುವ ಕಾಲುದಾರಿಗಳಲ್ಲಿ ಸದಾ ಜನರ ಓಡಾಟವಿರುತ್ತದೆ. ಜೊತೆಗೆ ಅವರಿಗೆ ಸಾರ್ವಜನಿಕ ಸ್ನಾನದ ಕೋಣೆಗಳ ಲಭ್ಯತೆಯೂ ಇಲ್ಲ. “ನಾವು ಬಟ್ಟೆ ಹಾಕಿಕೊಂಡೇ ಸ್ನಾನ ಮಾಡುತ್ತೇವೆ. ಸುತ್ತಮುತ್ತಲಿನ ಗಂಡಸರು ನೋಡುತ್ತಿರುತ್ತಾರೆ. ನಮಗೆ ನಾಚಿಕೆಯೆನ್ನಿಸುತ್ತದೆ. ಬೇರೆ ದಾರಿಯಿಲ್ಲದೆ ಬೇಗ ಬೇಗನೆ ಮಿಂದು ಬಟ್ಟೆಗಳನ್ನು ಕಳಚಿ ಒಗೆಯುತ್ತೇವೆ” ಎಂದು ಸಮೀರಾ ಜೋಗಿ ಹೇಳುತ್ತಾರೆ. 35 ವರ್ಷದ ಅವರು ಲಕ್ನೋ ಮೂಲದವರಾಗಿದ್ದು, ಉತ್ತರ ಪ್ರದೇಶದಲ್ಲಿ ಒಬಿಸಿ ಎಂದು ವರ್ಗೀಕರಿಸಲಾಗಿರುವ ಜೋಗಿ ಸಮುದಾಯಕ್ಕೆ ಸೇರಿದವರು.

ದೇಗ್ಲೂರ್‌ ನಾಕಾದಲ್ಲಿ ನೆಲೆಸಿರುವ ಪಾರ್ಧಿ ಮಹಿಳೆಯರು ಸಂಜೆ ಕತ್ತಲಾದ ನಂತರ ಸ್ನಾನ ಮಾಡುವುದಾಗಿ ಹೇಳುತ್ತಾರೆ. ಅವರು ನಿಂತಿರುವ ಲಾರಿಗಳ ಅಡ್ಡ ಸೀರೆಯನ್ನು ಸುತ್ತಲೂ ಕಟ್ಟಿ ಅದರ ಆವರಣದೊಳಗೆ ಸ್ನಾನ ಮಾಡುವುದಾಗಿ ಹೇಳುತ್ತಾರೆ.

ಸಿಡ್ಕೊ ರಸ್ತೆಯಲ್ಲಿ ನೆಲೆಸಿರುವ, ಕಾಜಲ್ ಚವಾಣ್ ನಮಗೆ ಹೇಳುತ್ತಾರೆ, "ನಾವು ರಸ್ತೆಯಲ್ಲಿ ವಾಸಿಸುತ್ತೇವೆ. ದಾರಿಹೋಕರು ನೋಡುತ್ತಲೇ ಇರುತ್ತಾರೆ. ಅದಕ್ಕಾಗಿಯೇ ನಾವು ಸ್ನಾನಕ್ಕಾಗಿ ಈ ಆವರಣವನ್ನು ಮಾಡಿಕೊಂಡಿದ್ದೇವೆ. ನನ್ನೊಂದಿಗೆ ಒಬ್ಬ ಚಿಕ್ಕ ಹುಡುಗಿ ಇದ್ದಾಳೆ, ಹೀಗಾಗಿ ನಾನು ಹೆಚ್ಚು ಜಾಗರೂಕಳಾಗಿರಬೇಕಾಗುತ್ತದೆ."

Left: The board at the public toilet with rate card for toilet use.
PHOTO • Prakash Ransingh
Right: Clothes create a private space for women to bathe
PHOTO • Prakash Ransingh

ಎಡ: ಸಾರ್ವಜನಿಕ ಶೌಚಾಲಯದಲ್ಲಿ ಶೌಚಾಲಯ ಬಳಕೆಯ ದರ ಪಟ್ಟಿ ಹೊಂದಿರುವ ಬೋರ್ಡ್. ಬಲ: ಮಹಿಳೆಯರು ಸ್ನಾನ ಮಾಡಲು ಬಟ್ಟೆಗಳನ್ನು ಕಟ್ಟಿದ ಆವರಣವನ್ನು ಬಳಸಲಾಗುತ್ತದೆ

ಗೋಕುಲನಗರದ ನಿವಾಸಿ ನಯನಾ ಕಾಳೆ ಬೇಗನೆ ಮತ್ತು ಗಡಿಬಿಡಿಯಿಂದ ಸ್ನಾನ ಮಾಡುತ್ತಾರೆ. ಅವರಿಗೆ ತಾನು ಸ್ನಾನ ಮಾಡುವುದನ್ನು ಯಾರಾದರೂ ನೋಡಬಹುದೆನ್ನುವ ಆತಂಕ ಸದಾ ಕಾಡುತ್ತಿರುತ್ತದೆ. “ಇಲ್ಲಿ ನೀರೂ ಸಿಗುವುದಿಲ್ಲ ಜೊತೆಗೆ ಸ್ನಾನ ಮಾಡಲು ಸರಿಯಾದ ವ್ಯವಸ್ಥೆಯೂ ಇಲ್ಲ. ಹೀಗಾಗಿ ನಾನು ವಾರಕ್ಕೆ ಎರಡು ಬಾರಿಯಷ್ಟೇ ಸ್ನಾನ ಮಾಡುತ್ತೇನೆ” ಎನ್ನುತ್ತಾರೆ ದೇಗ್ಲೂರ್‌ ನಾಕಾದ ನಲವತ್ತು ವರ್ಷದ ಇರ್ಫಾನಾ ಶೇಖ್.

“ಸಾರ್ವಜನಿಕ ಸ್ನಾನದ ಮನೆಗಳಲ್ಲಿ ಸ್ನಾನ ಮಾಡಬೇಕೆಂದರೆ ಒಂದು ಬಾರಿಗೆ 20 ರೂಪಾಯಿ ಕೊಡಬೇಕು. ನಮ್ಮಂತಹ ಕೈ-ಬಾಯಿ ಕಟ್ಟಿ ಬದುಕುವ ಜನ ಅಷ್ಟು ಹಣ ಕೊಟ್ಟು ಹೇಗೆ ಸ್ನಾನ ಮಾಡಲು ಸಾಧ್ಯ?” ಎಂದು ಕೇಳುತ್ತಾರೆ ಗಂಗೂ ಬಾಯಿ. “ನಮ್ಮ ಬಳಿ ಅಷ್ಟು ಹಣವಿಲ್ಲದ ದಿನ ನಾವು ಸ್ನಾನ ಮಾಡುವುದನ್ನೇ ತಪ್ಪಿಸುತ್ತೇವೆ.” ರೈಲ್ವೇ ಸ್ಟೇಷನ್‌ ಬಳಿ ವಾಸಿಸುತ್ತಿರುವ ಖಾತುನ್‌ ಪಟೇಲ್‌, “ನಮ್ಮ ಬಳಿ ಹಣವಿಲ್ಲದಿದ್ದಾಗ ನಾವು ಸ್ನಾನ ಮಾಡಲು ಹೊಳೆಗೆ ಹೋಗುತ್ತೇವೆ. ಅಲ್ಲಿ ಬಹಳಷ್ಟು ಗಂಡಸರು ತಿರುಗಾಡುತ್ತಿರುತ್ತಾರೆ. ಹೀಗಾಗಿ ಅಲ್ಲಿ ಸ್ನಾನ ಮಾಡುವುದು ಕೂಡಾ ಕಷ್ಟ ನಮಗೆ” ಎನ್ನುತ್ತಾರೆ.

ಗೋಕುಲನಗರದ ಚೇಂಬರಿನಲ್ಲಿ ನೀರು ಬಂದಾಗ ಸ್ನಾನ ಮಾಡುವ ಸಲುವಾಗಿ ಮಕ್ಕಳು ಅದರ ಸುತ್ತಲೂ ನೆರೆಯುತ್ತಾರೆ. ಹದಿಹರೆಯದ ಹೆಣ್ಣುಮಕ್ಕಳು ಬಟ್ಟೆ ಹಾಕಿಕೊಂಡೇ ಕಾಲುದಾರಿಯ ಬಳಿ ಸ್ನಾನ ಮಾಡುವುದನ್ನು ಇಲ್ಲಿ ಕಾಣಬಹುದು. ಮಹಿಳೆಯರು ಬಟ್ಟೆ ಉಟ್ಟುಕೊಂಡೇ ತಮ್ಮ ಮೇಲೆ ನೀರು ಸುರಿದುಕೊಳ್ಳುತ್ತಾರೆ. ಎಲ್ಲೋ ಒಂದು ಮರೆಯ ಜಾಗ ಹುಡುಕುವುದಕ್ಕಿಂತ ಹೀಗೆ ಉಟ್ಟ ಬಟ್ಟೆಯಲ್ಲೇ ಸ್ನಾನ ಮಾಡುವುದು ಅವರ ಪಾಲಿಗೆ ಹೆಚ್ಚು ಸುರಕ್ಷಿತವೆನ್ನಿಸುತ್ತದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಈ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಇರ್ಫಾನಾ ಹೇಳುತ್ತಾರೆ, “ನನಗೆ ಮುಟ್ಟಾದಾಗ ಶೌಚಾಲಯದ ನೆಪ ಹೇಳಿ ಅಲ್ಲೇ ಒಳಗೆ ಪ್ಯಾಡ್‌ ಬದಲಿಸುತ್ತೇನೆ. ಏಳನೇ ದಿನ ನಾವು ಸ್ನಾನ ಮಾಡಲೇಬೇಕು. ಆ ದಿನ ನಾನು ಸ್ನಾನ ಮಾಡಲು ಸಾರ್ವಜನಿಕ ಸ್ನಾನದ ಮನೆಗೆ 20 ರೂಪಾಯಿ ಹೊಂದಿಸಿಕೊಳ್ಳಬೇಕು.”

"ಈ ಭೈಯಾಗಳು (ಇತರ ರಾಜ್ಯಗಳ ಜನರು) ನಮ್ಮ ಮೇಲೆ ಕೂಗಾಡುತ್ತಲೇ ಇರುತ್ತಾರೆ, 'ಇಲ್ಲಿನ ಶೌಚಾಲಯಗಳನ್ನು ಬಳಸದಂತೆ ನಿಮ್ಮ ಜನರಿಗೆ ಹೇಳಿ ಎನ್ನುತ್ತಾರೆ'. ನಮ್ಮ ಜನರು ಪಾಟ್ / ಕಮೋಡ್ ಬಳಕೆಗೆ ಒಗ್ಗಿಕೊಂಡಿಲ್ಲ, ಹೀಗಾಗಿ ಅವರು ಕೆಲವೊಮ್ಮೆ ಅದನ್ನು ಕೊಳಕುಗೊಳಿಸುತ್ತಾರ ಈ ಕಾರಣಕ್ಕಾಗಿ ಅವರು ಅದನ್ನು ಬಳಸದಂತೆ ನಮ್ಮನ್ನು ನಿರ್ಬಂಧಿಸುತ್ತಾರೆ" ಎಂದು ಗಂಗೂಬಾಯಿ ಹೇಳುತ್ತಾರೆ.

Left: Requesting water from security guards of buildings doesn't always end well.
PHOTO • Prakash Ransingh

ಎಡ: ಕಟ್ಟಡಗಳ ಕಾವಲುಗಾರರ ಬಳಿ ನೀರು ಕೇಳಿದಾಗ ಸಿಕ್ಕಿಯೇ ಸಿಗುತ್ತದೆ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. ಬಲ: ವಲಸಿಗರೊಬ್ಬರು ಖಾಸಗಿ ಫಿಲ್ಟರ್‌ ಘಟಕದಿಂದ ನೀರು ತುಂಬಿಸಿಕೊಳ್ಳುತ್ತಿರುವುದು

ಸಾರ್ವಜನಿಕ ಶೌಚಾಲಯವನ್ನು ಒಮ್ಮೆ ಬಳಸಲು 10 ರೂಪಾಯಿ ಬೇಕಾಗುತ್ತದೆ. ದೊಡ್ಡ ಕುಟುಂಬಗಳಿರುವವರಿಗೆ ಇದು ಕೈಗೆಟುಕುವುದಿಲ್ಲ. ಅವರಿಗೆ ಬಯಲಿಗೆ ಹೋಗುವುದೇ ಉಳಿದ ದಾರಿ. "ಸಾರ್ವಜನಿಕ ಶೌಚಾಲಯವನ್ನು ರಾತ್ರಿ 10 ಗಂಟೆಯ ನಂತರ ಮುಚ್ಚಲಾಗುತ್ತದೆ. ನಂತರ ನಾವು ಬಯಲಿಗೆ ಹೋಗಬೇಕು, ಇನ್ನೇನು ಮಾಡಲು ಸಾಧ್ಯ?" ಎಂದು ಮುನ್ಸಿಪಲ್ ಮೈದಾನದಲ್ಲಿನ ಡೇರೆಯೊಂದರ ನಿವಾಸಿ 50 ವರ್ಷದ ರಮೇಶ್ ಪಟೋಡೆ ಹೇಳುತ್ತಾರೆ.

"ನಾವು ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತೇವೆ. ರಾತ್ರಿಯಲ್ಲಿ ಹೋಗಲು ಭಯವಾಗುತ್ತದೆ, ಹೀಗಾಗಿ ನಾವು ಎರಡು-ಮೂರು ಹುಡುಗಿಯರನ್ನು ಜೊತೆಗೆ ಕರೆದೊಯ್ಯುತ್ತೇವೆ" ಎಂದು ಗೋಕುಲನಗರದ ಮುನ್ಸಿಪಲ್ ಮೈದಾನದ ಬಳಿಯ ಫುಟ್ಪಾತಿಲ್ಲಿ ವಾಸಿಸುವ ನಯನಾ ಕಾಳೆ ಹೇಳುತ್ತಾರೆ. "ನಾವು ಬಯಲಿನಲ್ಲಿರುವಾಗ, ಗಂಡಸರು ನಮ್ಮನ್ನು ಕರೆದು ಗೇಲಿ ಮಾಡುತ್ತಾರೆ. ಕೆಲವೊಮ್ಮೆ ಅವರು ನಮ್ಮನ್ನು ಹಿಂಬಾಲಿಸುತ್ತಾರೆ. ನಾವು ಇದುವರೆ ಕನಿಷ್ಟ ನೂರು ಬಾರಿ ಈ ಕುರಿತು ಪೊಲೀಸರಿಗೆ ದೂರು ನೀಡಿರಬಹುದು".

ಸಿಡ್ಕೊ ರಸ್ತೆ ಪ್ರದೇಶದ ಕಾಜಲ್ ಚವಾಣ್ ಅವರ ಪಾಲಿಗೆ ಶೌಚಾಲಯಗಳೆಂದರೆ “ರಸ್ತೆಗಳ ಮೂಲೆಗಳು.”

2011-12ರಲ್ಲಿ, ನಾಂದೇಡ್ ನಲ್ಲಿ ಸಂಪೂರ್ಣ ನೈರ್ಮಲ್ಯ ಅಭಿಯಾನದ ಅಡಿಯಲ್ಲಿ ನಗರ ನೈರ್ಮಲ್ಯ ಯೋಜನೆಯನ್ನು ಸಿದ್ಧಪಡಿಸಲಾಯಿತು. ಆ ಸಮಯದಲ್ಲಿ, ನಗರದ ಜನಸಂಖ್ಯೆಯ ಸುಮಾರು 20 ಪ್ರತಿಶತದಷ್ಟು ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದರು. 2014-15ರಲ್ಲಿ ನಾಂದೇಡ್ ನಗರದಲ್ಲಿ ಕೇವಲ 214 ಆಸನಗಳಿದ್ದ 23 ಸಾರ್ವಜನಿಕ ಶೌಚಾಲಯಗಳಿದ್ದು, 4100ಕ್ಕೂ ಹೆಚ್ಚು ಆಸನಗಳ ಕೊರತೆಯಿದೆ ಎಂದು ವರದಿಯೊಂದು ಹೇಳುತ್ತದೆ. ಆಗಿನ ಮುನ್ಸಿಪಲ್ ಕಮಿಷನರ್ ನಿಪುಣ್ ವಿನಾಯಕ್ ಸಮುದಾಯ ನೇತೃತ್ವದ ಸಂಪೂರ್ಣ ನೈರ್ಮಲ್ಯ ಕಾರ್ಯಕ್ರಮದ ಅಡಿಯಲ್ಲಿ ಸುಧಾರಿತ ನೈರ್ಮಲ್ಯ, ತ್ಯಾಜ್ಯ ನೀರು ಮತ್ತು ತ್ಯಾಜ್ಯ ನಿರ್ವಹಣೆಗಾಗಿ ಸಹಭಾಗಿತ್ವದ ಯೋಜನೆಯನ್ನು ಜಾರಿಗೆ ತಂದರು. 2021ರಲ್ಲಿ, ವಾಘಲಾ ಮುನ್ಸಿಪಲ್ ಕಾರ್ಪೊರೇಷನ್ ಒಡಿಎಫ್ + ಮತ್ತು ಒಡಿಎಫ್++ (ಬಯಲು ಮಲವಿಸರ್ಜನೆ ಮುಕ್ತ) ಪ್ರಮಾಣಪತ್ರಗಳನ್ನು ಪಡೆಯಿತು.

ಆದಾಗ್ಯೂ, ನಗರದ ಅಂಚಿನಲ್ಲಿರುವ ವಲಸಿಗ ಸಮುದಾಯಗಳಿಗೆ, ಕುಡಿಯುವ ನೀರು ಮತ್ತು ಶುದ್ಧ ಮತ್ತು ಸುರಕ್ಷಿತ ನೈರ್ಮಲ್ಯವು ಇನ್ನೂ ದೂರದ ಕನಸಾಗಿದೆ, ಜಾವೇದ್ ಖಾನ್ ಹೇಳುತ್ತಾರೆ, "ಶುದ್ಧ, ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಯಾವುದೇ ಖಾತರಿಯಿಲ್ಲ."

ವರದಿಗಾರರು ಪುಣೆಯ ಎಸ್‌ಒಪಿಪಿಇಸಿಒಎಮ್‌ ಸಂಸ್ಥೆಯ ಸೀಮಾ ಕುಲಕರ್ಣಿ, ಪಲ್ಲವಿ ಹರ್ಷೆ, ಅನಿತಾ ಗೋಡಬೋಲೆ ಮತ್ತು ಡಾ. ಬೋಸ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ. ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ (ಐಡಿಎಸ್) ಸಹಯೋಗದೊಂದಿಗೆ ನಡೆಸಿದ 'ಟುವರ್ಡ್ಸ್‌  ಬ್ರೌನ್‌ ಗೋಲ್ಡ್‌ ರಿ-ಇಮ್ಯಾಜಿನಿಂಗ್ ಸ್ಯಾನಿಟೇಷನ್‌ ಇನ್ ರ್ಯಾಪಿಡ್ಲಿ ಅರ್ಬನೈಸಿಂಗ್‌ ಏರಿಯಾಸ್‌ ಇನ್‌ ಏಷಿಯಾ ಎಂಡ್‌ ಆಫ್ರಿಕಾ' ಎಂಬ ಶೀರ್ಷಿಕೆಯ ಅಧ್ಯಯನವನ್ನು ಆಧರಿಸಿ ಈ ಸಂಶೋಧನೆ ನಡೆಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Prakash Ransingh

ପ୍ରକାଶ ରଣସିଂହ, ପୁଣେର ସୋସାଇଟି ଫର ପ୍ରମୋଟିଂ ପାର୍ଟିସିପେଟିଭ୍‌ ଇକୋସିଷ୍ଟମ ମ୍ୟାନେଜମେଣ୍ଟ (SOPPECOM) ରେ ଜଣେ ସହାୟକ ଗବେଷକ ରୂପେ କାର୍ଯ୍ୟରତ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Prakash Ransingh
Editor : Medha Kale

ମେଧା କାଲେ ପୁନେରେ ରହନ୍ତି ଏବଂ ମହିଳା ଓ ସ୍ଵାସ୍ଥ୍ୟ କ୍ଷେତ୍ରରେ କାମ କରିଛନ୍ତି । ସେ ମଧ୍ୟ PARIର ଜଣେ ଅନୁବାଦକ ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ମେଧା କାଲେ
Editor : Priti David

ପ୍ରୀତି ଡେଭିଡ୍‌ ପରୀର କାର୍ଯ୍ୟନିର୍ବାହୀ ସମ୍ପାଦିକା। ସେ ଜଣେ ସାମ୍ବାଦିକା ଓ ଶିକ୍ଷୟିତ୍ରୀ, ସେ ପରୀର ଶିକ୍ଷା ବିଭାଗର ମୁଖ୍ୟ ଅଛନ୍ତି ଏବଂ ଗ୍ରାମୀଣ ପ୍ରସଙ୍ଗଗୁଡ଼ିକୁ ପାଠ୍ୟକ୍ରମ ଓ ଶ୍ରେଣୀଗୃହକୁ ଆଣିବା ଲାଗି ସ୍କୁଲ ଓ କଲେଜ ସହିତ କାର୍ଯ୍ୟ କରିଥାନ୍ତି ତଥା ଆମ ସମୟର ପ୍ରସଙ୍ଗଗୁଡ଼ିକର ଦସ୍ତାବିଜ ପ୍ରସ୍ତୁତ କରିବା ଲାଗି ଯୁବପିଢ଼ିଙ୍କ ସହ ମିଶି କାମ କରୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru