“ನನ್ನ ವಿದ್ಯಾರ್ಥಿಗಳ ಕುರಿತು ಬೇಷರತ್ತಾದ ಪ್ರೀತಿ ಮತ್ತು ಸಂಪೂರ್ಣ ಸ್ವೀಕಾರ. ನಾನು ಓರ್ವ ಶಿಕ್ಷಕಿಯಾಗಿ ಕಲಿತಿದ್ದು ಇದನ್ನೇ!”
ಮೇಧಾ ತೇಂಗ್ಶೆ ಯಾವುದೇ ಉದ್ವೇಗವಿಲ್ಲದೆ ತಣ್ಣಗೆ ತಮ್ಮ ತತ್ವವನ್ನು ವಿವರಿಸುತ್ತಾರೆ. ವಿಶೇಷ ಶಿಕ್ಷಕರಾಗಿರುವ ಅವರು, ಸಾಧನಾ ವಿಲೇಜ್ ಎನ್ನುವ ವಿಶೇಷ ಶಾಲೆಯ ಸ್ಥಾಪಕ ಸದಸ್ಯರೂ ಹೌದು. ಇಲ್ಲಿ ವಿವಿಧ ವಯಸ್ಸಿನ ಮತ್ತು ವಿವಿಧ ಮಟ್ಟದ ಬೌದ್ಧಿಕ ಸಾಮರ್ಥ್ಯಗಳನ್ನು ಹೊಂದಿರುವ 30ಕ್ಕೂ ಹೆಚ್ಚು ಜನರಿಗೆ ಕೆಲವು ಕಲೆ, ಸಂಗೀತ ಮತ್ತು ನೃತ್ಯದ ಜೊತೆಗೆ ಮೂಲಭೂತ ಜೀವನ ಕೌಶಲಗಳನ್ನು ಕಲಿಸಲಾಗುತ್ತದೆ.
ಸಾಧನಾ ಗ್ರಾಮವು ಪುಣೆ ಜಿಲ್ಲೆಯ ಮುಲ್ಶಿ ವಿಭಾಗದಲ್ಲಿದೆ. ಇದೊಂದು ಬೌದ್ಧಿಕ ಅಶಕ್ತತೆ ಹೊಂದಿರುವ ವಯಸ್ಕರಿಗಾಗಿ ಕಟ್ಟಲಾಗಿರುವ ವಸತಿ ಸಂಸ್ಥೆಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳನ್ನು 'ವಿಶೇಷ ಸ್ನೇಹಿತರು' ಎಂದು ಕರೆಯಲಾಗುತ್ತದೆ ಮತ್ತು ತರಬೇತಿಯಿಂದ ಪತ್ರಕರ್ತೆಯಾಗಿರುವ ಮೇಧಾ ತಾಯಿ, ಇಲ್ಲಿನ 10 ನಿವಾಸಿಗಳಿಗೆ ಗೃಹ ಮಾತಾ (ಮನೆ ತಾಯಿ) ಆಗಿ ಗುರುತಿಸಿಕೊಂಡಿದ್ದಾರೆ. ಗೃಹ ಮಾತಾ ಪದವನ್ನು "ಶಿಕ್ಷಕಿಯೂ ಆಗಿರುವ ತಾಯಿ" ಎಂದು ಅವರು ವ್ಯಾಖ್ಯಾನಿಸುತ್ತಾರೆ.
ಪುಣೆಯ ಧಯಾರಿ ಸ್ಕೂಲ್ ಫಾರ್ ಹಿಯರಿಂಗ್ ಇಂಪೇರ್ಡ್ ಸಂಸ್ಥೆಯ ವಿಶೇಷ ಶಿಕ್ಷಕಿ ಸತ್ಯಭಾಮಾ ಅಲ್ಹತ್ ಇದನ್ನು ಒಪ್ಪುತ್ತಾರೆ. "ನಮ್ಮಂತಹ ವಸತಿ ಶಾಲೆಯಲ್ಲಿನ ಶಿಕ್ಷಕಿಯರು ತಾಯಿಯ ಪಾತ್ರವನ್ನೂ ವಹಿಸುತ್ತೇವೆ. ನಮ್ಮ ಮಕ್ಕಳು ಮನೆಯ ನೆನಪಿನಲ್ಲಿ ಕೊರಗಬಾರದು ಎನ್ನುವುದು ಇದರ ಉದ್ದೇಶ" ಎಂದು ಅವರು ಪರಿಗೆ ಹೇಳಿದರು. ಅಂದು ಶ್ರಾವಣದ ಐದನೇ ದಿನದಂದು ಆಚರಿಸಲಾಗುವ ಹಬ್ಬ ನಾಗರ ಪಂಚಮಿಯಾಗಿದ್ದ ಕಾರಣ ಅವರು ಸಾಂಪ್ರದಾಯಿಕ ಆಟವಾದ ಫುಗಾಡಿಯನ್ನು ಹೇಗೆ ಆಡಬೇಕೆಂದು ಕೆಲವು ಹುಡುಗಿಯರಿಗೆ ಕಲಿಸಲು ಹೊರಟರು. 40 ನಿವಾಸಿ ವಿದ್ಯಾರ್ಥಿಗಳು ಮತ್ತು ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ಕೆಲವು ಭಾಗಗಳಿಂದ ಬಂದಿರುವ ಹಗಲಿನಲ್ಲಿ ಇಲ್ಲಿ ಕೆಲಸ ಮಾಡುವ 12 ವಿದ್ವಾಂಸರನ್ನು ಹೊಂದಿರುವ ಧಯಾರಿ ಒಂದು ಪ್ರಾಥಮಿಕ ಶಾಲೆಯಾಗಿದೆ.
ಇಲ್ಲಿಂದ ಹೋದ ಮಕ್ಕಳು ನಮ್ಮ ಸಂಸ್ಥೆಯಲ್ಲಿನ ಶಿಕ್ಷಕರು ಮತ್ತು ಸೌಲಭ್ಯಗಳ ಕುರಿತು ಆಡುವ ಒಳ್ಳೆಯ ಮಾತುಗಳನ್ನು ಕೇಳಿ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆದು ತರುತ್ತಾರೆ ಎಂದು ಸತ್ಯಭಾಮ ಪರಿಗೆ ತಿಳಿಸಿದರು. ಇಲ್ಲಿ ಸೇರಲು ಯಾವುದೇ ಶುಲ್ಕವಿಲ್ಲದಿರುವುದು ಇನ್ನೊಂದು ಆಕರ್ಷಕ ಸಂಗತಿ. ನಾಲ್ಕೂವರೆ ವರ್ಷದ ಮಕ್ಕಳನ್ನೂ ಇಲ್ಲಿಗೆ ಸೇರಿಸಲು ಕರೆದುಕೊಂಡು ಬರುತ್ತಾರೆ. ವಿಶೇಷವೆನ್ನುವಂತೆ ಇಲ್ಲಿಗೆ ಬರುವ ವಿಚಾರಣ ಕರೆಗಳಲ್ಲಿ ಎಲ್ಲವೂ ಶ್ರವಣ ದೋಷವುಳ್ಳ ಮಕ್ಕಳ ಪೋಷಕರದ್ದಾಗಿರುವುದಿಲ್ಲ. “ಕಿವಿ ಸರಿಯಾಗಿ ಕೇಳಿಸುವ ಮಕ್ಕಳ ಪೋಷಕರೂ ಇಲ್ಲಿಗೆ ಬಂದು ಪ್ರವೇಶಾತಿಗಾಗಿ ವಿಚಾರಿಸುತ್ತಾರೆ. ಆದರೆ ನಮಗೆ ಅವರನ್ನು ಬರಿಗೈಯಲ್ಲಿ ಕಳುಹಿಸದೆ ವಿಧಿಯಿಲ್ಲ” ಎನ್ನುತ್ತಾರೆ ಸತ್ಯಭಾಮ.
ವಿಶೇಷ ವ್ಯಕ್ತಿಗಳಿಗೆ ಕಲಿಸುವವರುನ್ನು ʼವಿಶೇಷ ಶಿಕ್ಷಕರುʼ (special educators) ಎಂದು ಕರೆಯಲಾಗುತ್ತದೆ. ಅವರು ವಿದ್ಯಾರ್ಥಿಗಳ ವೈಯಕ್ತಿಕ ವ್ಯತ್ಯಾಸಗಳು, ಅಶಕ್ತತೆ ಮತ್ತು ವಿಶೇಷ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಾರೆ. ಇವರಲ್ಲಿನ ಬಹುತೇಕ ಶಿಕ್ಷಕರು ಹಾಗೂ ಮಾರ್ಗದರ್ಶಕರು ವಿಶೇಷ ಶಿಕ್ಷಣವೆನ್ನುವುದು ತಂತ್ರಗಳು ಮತ್ತು ವಿಧಾನಗಳನ್ನು ಮೀರಿದ್ದು ಎನ್ನುತ್ತಾರೆ. ಇದಕ್ಕೆ ಮುಖ್ಯವಾಗಿ ಬೇಕಿರುವುದು ಶಿಕ್ಷಕ ಮತ್ತು ಮಗುವಿನ ನಡುವಿನ ನಂಬಿಕೆ ಮತ್ತು ಬಾಂಧವ್ಯ.
2018-19ರಲ್ಲಿ ಮಹಾರಾಷ್ಟ್ರದಲ್ಲಿ 1ರಿಂದ 12ನೇ ತರಗತಿಗೆ 3,00,467 ವಿಶೇಷ ಅಗತ್ಯವುಳ್ಳ ಮಕ್ಕಳು (ಸಿಡಬ್ಲೂಎಸ್‌ಎನ್) ದಾಖಲಾಗಿದ್ದಾರೆ. ಮಹಾರಾಷ್ಟ್ರದಲ್ಲಿ 1,600 ವಿಶೇಷ ಶಾಲೆಗಳಿವೆ. 2018ರ ವಿಕಲಚೇತನರ ರಾಜ್ಯ ನೀತಿಯು ವಿಶೇಷ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಲು ಪ್ರತಿ ಶಾಲೆಯಲ್ಲಿ ಕನಿಷ್ಠ ಓರ್ವ ವಿಶೇಷ ಶಿಕ್ಷಕರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆದರೆ ಮೇಧಾ ತಾಯಿಯವರ ಪ್ರಕಾರ, 96 ಗ್ರಾಮಗಳನ್ನು ಹೊಂದಿರುವ ಇಡೀ ಮುಲ್ಶಿ ವಿಭಾಗಕ್ಕೆ 2018ರಲ್ಲಿ ಕೇವಲ ಒಂಬತ್ತು ವಿಶೇಷ ಶಿಕ್ಷಕರನ್ನು ನೇಮಿಸಲಾಗಿದೆ.
ಈ ಶಿಕ್ಷಕರು ವಿದ್ಯಾರ್ಥಿಗಳ ವೈಯಕ್ತಿಕ ವ್ಯತ್ಯಾಸಗಳು, ಅಶಕ್ತತೆ ಮತ್ತು ವಿಶೇಷ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಾರೆ
*****
ವಿಶೇಷ ಶಿಕ್ಷಕರಿಗೆ ವಿಶೇಷ ಬೋಧನಾ ಕೌಶಲಗಳು ಬೇಕಾಗುತ್ತವೆ. ಇದು ಸುಲಭದ ಕೆಲಸವಲ್ಲ, "ಅದರಲ್ಲೂ ವಿದ್ಯಾರ್ಥಿಗಳು ನಿಮ್ಮ ಪೋಷಕರ ವಯಸ್ಸಿನವರಾಗಿರುವಾಗ" ಎಂದು ವಾರ್ಧಾದ 26 ವರ್ಷದ ಸಾಮಾಜಿಕ ಕಾರ್ಯಕರ್ತ ರಾಹುಲ್ ವಾಂಖೆಡೆ ಹೇಳುತ್ತಾರೆ. ಅವರ ಹಿರಿಯ ಸಹೋದ್ಯೋಗಿ, ವಾರ್ಧಾದ 27 ವರ್ಷದ ಕಾಂಚನ್ ಯೇಸಂಕರ್ ಕೂಡ ಐದು ವರ್ಷಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಕಳೆದಿದ್ದಾರೆ. ಈ ವೃತ್ತಿಯು ನನಗೆ ಸದಾ ಸಂತೋಷದಲ್ಲಿರುವುದನ್ನು ಕಲಿಸಿದೆ ಎನ್ನುತ್ತಾರೆ ಅವರು.
ಇಪ್ಪತ್ತು ವರ್ಷದ ಕುನಾಲ್ ಗುಜರ್ ಬಾರ್ಡರ್ ಲೈನ್ ಇಂಟಲಿಜೆನ್ಸ್ ಸಮಸ್ಯೆ (ಹೊಸ ಕೌಶಲಗಳನ್ನು ಕಲಿಯಲು ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳಲು ಕಷ್ಟವಾಗುವುದು) ಹಾಗೂ ಎಡಗೈಯಲ್ಲಿ ದೌರ್ಬಲ್ಯವನ್ನು ಹೊಂದಿದ್ದಾರೆ. 34 ವರ್ಷದ ಸಮುದಾಯ ಕಾರ್ಯಕರ್ತರಾದ ಮಯೂರಿ ಗಾಯಕ್ವಾಡ್ ಮತ್ತು ಅವರ ಸಹೋದ್ಯೋಗಿಗಳು ಕುನಾಲ್ ಮತ್ತು ಇತರ ಏಳು ವಿಶೇಷ ವಿದ್ಯಾರ್ಥಿಗಳಿಗಾಗಿ ತರಗತಿಗಳನ್ನು ನಡೆಸಿದರು. “ಆಕೆ ನನಗೆ ಹಾಡುಗಳು, ಮಗ್ಗಿ ಮತ್ತು ವ್ಯಾಯಾಮಗಳನ್ನು ಕಲಿಸಿದರು. ಹಾತ್ ಅಸೆ ಕರಯಾಚೆ, ಮಗ್ ಅಸೆ, ಮಗ್ ತಸೆ [ನಿಮ್ಮ ಕೈಗಳನ್ನು ಹೀಗೆ ಆಡಿಸಿ, ಮತ್ತೆ ಹೀಗೆ]” ಎನ್ನುತ್ತಾ ಕುನಾಲ್ ಪುಣೆ ಬಳಿಯ ಹಾದ್ಶಿಯ ಕಾಲೇಕರ್ ವಾಡಿಯಲ್ಲಿರುವ ದೇವ್ರಾಯ್ ಕೇಂದ್ರದ ಶಿಕ್ಷಕರು ತನಗೆ ಕಲಿಸಿದ ಕುರಿತು ಹೇಳುತ್ತಾರೆ.
ಈ ಕೆಲಸದಲ್ಲಿ ಮಕ್ಕಳೆಡೆಗೆ ಪ್ರೀತಿ ಮತ್ತು ಅವರೊಡನೆ ಬೆರೆಯುವ ಮನಸ್ಥಿತಿ ಬಹಳ ಅಗತ್ಯ ಎನ್ನುತ್ತಾರೆ ಕತ್ಕರಿ ಆದಿವಾಸಿ ಮಕ್ಕಳೊಂದಿಗೆ ಕೆಲಸ ಮಾಡುವ ಮತ್ತು ಗ್ರಂಥಾಲಯಗಳನ್ನು ನಡೆಸುತ್ತಿರುವ ಮಯೂರಿ. ಬೇಸಾಯಗಾರರು ಮತ್ತು ಸಮುದಾಯ ಕಾರ್ಯಕರ್ತರಾಗಿರುವ ಅವರನ್ನು ವಿಶೇಷ ಮಕ್ಕಳೆಡೆಗಿನ ಅದಮ್ಯ ಪ್ರೀತಿ ಮತ್ತು ಆ ಮಕ್ಕಳೊಡನೆ ಬೆರೆಯುವ ಗುಣವು ದೇವ್ರಾಯ್ ಕೇಂದ್ರದಲ್ಲಿ ಶಿಕ್ಷಕಿಯನ್ನಾಗಿ ಮಾಡಿಸಿತು.
ಸಂಗೀತಾ ಕಾಳೇಕರ್ ಅವರ ಮಗ ಸೋಹಮ್ ಅಪಸ್ಮಾರದಿಂದ ಬಳಲುತ್ತಿದ್ದಾನೆ, ಮತ್ತು ಅವರು ಅವನ ಏಕೈಕ ಶಿಕ್ಷಕಿಯಾಗಿದ್ದು, ಕುಳಿತುಕೊಳ್ಳುವುದರಿಂದ ಹಿಡಿದು ಮಾತನಾಡುವವರೆಗೆ ಎಲ್ಲವನ್ನೂ ಕಲಿಸುತ್ತಾರೆ. "ಅವನು ಈಗ 'ಆಯಿ, ಆಯಿ' ಎಂದು ಹೇಳಬಲ್ಲ" ಎಂದು ಅವರು ಹೇಳುತ್ತಾರೆ. ಅವನ ತಾಯಿ ನಮ್ಮೊಡನೆ ಮಾತನಾಡುತ್ತಿದ್ದರೆ, ಹತ್ತು ವರ್ಷದ ಸೋಹಮ್ ಕೀಲಿಯೊಂದಿಗೆ ಆಟವಾಡುತ್ತ, ಅದು ನೆಲಕ್ಕೆ ಬೀಳುವುದನ್ನು ನೋಡುತ್ತಾ ಶಬ್ದಗಳನ್ನು ಮಾಡುತ್ತಿದ್ದ.
ಪುಣೆಯ ಇನ್ನೊಂದು ವಸತಿ ಶಾಲೆಯಾದ, ಧಯಾರಿ ಸ್ಕೂಲ್ ಫಾರ್ ಹಿಯರಿಂಗ್ ಇಂಪೇರ್ಡ್ ಶಾಲೆಯಲ್ಲಿನ ಶಿಕ್ಷಕರು ಹೇಳುವಂತೆ, ಅವರ ತರಗತಿಯಲ್ಲಿನ ಮಗು ಪ್ರತಿ ಬಾರಿ ಒಂದು ಸದ್ದು ಮಾಡಿದಾಗ ಅದು ಮಾತನಾಡುವ ಪ್ರಯತ್ನದ ಕಡೆಗೆ ಒಂದು ಹೆಜ್ಜೆಯನ್ನಿಡುತ್ತದೆ. ಈ ಶಬ್ಧಗಳು ಮತ್ತು ಸನ್ನೆಗಳನ್ನು ಹೊರತುಪಡಿಸಿದರೆ “ಅವರು ಇತರ ʼಸಾಮಾನ್ಯʼ ಮಕ್ಕಳಿಗಿಂತ ಭಿನ್ನರೇನಲ್ಲ” ಎನ್ನುತ್ತಾರೆ ಸತ್ಯಭಾಮ ಅಲ್ಹತ್. ಅವರು ಕಳೆದ 24 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ 50 ವರ್ಷಗಳಿಂದ ವಿಶೇಷ ಶಿಕ್ಷಕರಿಗೆ ತರಬೇತಿ ನೀಡುವ ಪುಣೆ ಮೂಲದ ಸಂಸ್ಥೆ ಸುಹೃದ್ ಮಂಡಲ್ ಪ್ರಾರಂಭಿಸಿದ ಶ್ರವಣದೋಷವುಳ್ಳವರಿಗಾಗಿನ 38 ಶಾಲೆಗಳಲ್ಲಿ ಈ ಶಾಲೆಯೂ ಒಂದಾಗಿದೆ. ಈ ಶಿಕ್ಷಕರು ಬಿಎಡ್ (ಶ್ರವಣದೋಷದ ವಿಷಯದಲ್ಲಿ) ಅಥವಾ ಡಿಪ್ಲೊಮಾ ಕೋರ್ಸುಗಳನ್ನು ಮಾಡಿದ್ದಾರೆ ಮತ್ತು ಪ್ರಜ್ಞಾಪೂರ್ವಕವಾಗಿ ವಿಶೇಷ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇಲ್ಲಿನ 4ನೇ ತರಗತಿಯ ತರಗತಿಯ ಕಪ್ಪು ಹಲಗೆಯು ಮೋಹನ್ ಕಾನೇಕರ್ ತಮ್ಮ ವಿದ್ಯಾರ್ಥಿಗಳಿಗೆ ಕಲಿಸಲು ಬಯಸುವ ಪದಗಳೊಂದಿಗೆ, ಕಟ್ಟಡ, ಕುದುರೆ, ನಾಯಿ ಮತ್ತು ಕೊಳದ ಸುಂದರವಾದ ರೇಖಾಚಿತ್ರಗಳಿಂದ ತುಂಬಿದೆ. 21 ವರ್ಷಗಳ ಅನುಭವ ಹೊಂದಿರುವ ತರಬೇತಿ ಪಡೆದ ಶಿಕ್ಷಕರಾದ 54 ವರ್ಷದ ಅವರು ಟೋಟಲ್ ಕಮ್ಯುನಿಕೇಷನ್ ಅನ್ನು ಅನುಸರಿಸುತ್ತಾರೆ - ಇದು ಶ್ರವಣದೋಷವುಳ್ಳವರಿಗೆ ಕಲಿಸುವಾಗ ಮಾತು, ತುಟಿ ಓದುವಿಕೆ, ಚಿಹ್ನೆ ಮತ್ತು ಬರವಣಿಗೆಯನ್ನು ಸಂಯೋಜಿಸುವ ವಿಧಾನವಾಗಿದೆ. ಅವರ ವಿದ್ಯಾರ್ಥಿಗಳು ಪ್ರತಿ ಚಿಹ್ನೆಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಪದಗಳನ್ನು ವಿಭಿನ್ನ ಸ್ವರಗಳು ಮತ್ತು ಸ್ಥರಗಳಲ್ಲಿ ಪುನರಾವರ್ತಿಸಲು ಪ್ರಯತ್ನಿಸುತ್ತಾರೆ. ಅವರು ಉಚ್ಛರಿಸುವ ಶಬ್ದಗಳು ಕನೇಕರ್ ಅವರ ಮುಖದಲ್ಲಿ ನಗುವನ್ನು ತರುತ್ತವೆ, ಮತ್ತು ಅವರು ಪ್ರತಿ ಮಗುವಿನ ಉಚ್ಚಾರಣೆಯನ್ನು ಸರಿಪಡಿಸುತ್ತಾರೆ.
ಇನ್ನೊಂದು ತರಗತಿಯಲ್ಲಿ ಅದಿತಿ ಸಾಠೆಯವರು ʼಸ್ಟೆಪ್ 3ʼ ತರಗತಿಯ ಮಕ್ಕಳಿಗೆ ಕಲಿಸುತ್ತಾರೆ. ಇವರು ವಾಕ್ ದೌರ್ಬಲ್ಯವನ್ನು ಮೆಟ್ಟಿನಿಂತು ಇಂದು ಶಿಕ್ಷಕಿಯಾಗಿದ್ದಾರೆ. ಅವರು ಈ ಶಾಲೆಯಲ್ಲಿ 1999ನೇ ಇಸವಿಯಿಂದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಈ ತರಗತಿಯಲ್ಲಿನ ಮಕ್ಕಳು ಎಬ್ಬಿಸುತ್ತಿದ್ದ ʼಗದ್ದಲದʼ ಕುರಿತು ಅದೇ ಸಭಾಂಗಣದ ಇನ್ನೊಂದೆಡೆ ತರಗತಿಯಲ್ಲಿದ್ದ ಸುನೀತಾ ಝಿನೆ ಮತ್ತು ಅವರ ಪುಟ್ಟ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹಾಸ್ಟೆಲ್ ಅಧೀಕ್ಷಕರಾಗಿರುವ 47 ವರ್ಷದ ಅವರು ಮಕ್ಕಳಿಗೆ ಬಣ್ಣದ ಕುರಿತು ಕಲಿಸುತ್ತಿದ್ದರೆ, ಅವರ ವಿದ್ಯಾರ್ಥಿಗಳು ಬಣ್ಣಗಳನ್ನು ಹುಡುಕುತ್ತಾ ಸಭಾಂಗಣದಲ್ಲಿ ಮುಕ್ತವಾಗಿ ಓಡಾಡುತ್ತಿದ್ದರು. ನೀಲಿ ಚೀಲ, ಕೆಂಪು ಸೀರೆ, ಕಪ್ಪು ಕೂದಲು, ಹಳದಿ ಹೂವುಗಳು... ಹೀಗೆ ವಿದ್ಯಾರ್ಥಿಗಳು ಸಂಭ್ರಮದಿಂದ ಕಿರುಚುತ್ತಾರೆ. ಕೆಲವು ಮಕ್ಕಳು ಸದ್ದು ಮಾಡುತ್ತಿದ್ದರೆ, ಇನ್ನೂ ಕೆಲವರು ಕೇವಲ ತಮ್ಮ ಕೈಗಳನ್ನು ಆಡಿಸುತ್ತಿದ್ದರು. ತರಬೇತಿ ಪಡೆದ ಶಿಕ್ಷಕಿಯ ಅಭಿವ್ಯಕ್ತಿಶೀಲ ಮುಖಭಾವವು ಮಕ್ಕಳೊಡನೆ ಸಂಭಾಷಣೆ ನಡೆಸುತ್ತಿತ್ತು.
"ಇಂದು, ಸಮಾಜದಲ್ಲಿ ಮತ್ತು ಶಾಲೆಗಳಲ್ಲಿ ಹಿಂಸಾಚಾರ ಮತ್ತು ಆಕ್ರಮಣಶೀಲತೆ ಹೆಚ್ಚುತ್ತಿರುವಾಗ, ನಾವು ಬುದ್ಧಿವಂತಿಕೆ ಮತ್ತು ಯಶಸ್ಸಿನ ಕುರಿತಾದ ನಮ್ಮ ಕಲ್ಪನೆಗಳನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಶಿಸ್ತು ಮತ್ತು ಶಿಕ್ಷೆಯ ಬಗ್ಗೆ" ಎಂದು ಮೇಧಾತಾಯಿ ಹೇಳುತ್ತಾರೆ. "ಸೌಮ್ಯ ಮಾತುಗಳಿಂದ ಏನನ್ನು ಸಾಧಿಸಬಹುದು" ಎಂಬುದನ್ನು ನೋಡಲು ಕನಿಷ್ಠ ಒಂದು ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡುವಂತೆ ಅವರು ಎಲ್ಲಾ ಶಿಕ್ಷಕರಿಗೆ ಮನವಿ ಮಾಡುತ್ತಿದ್ದಾರೆ.
ಈ ವರದಿಯನ್ನು ವರದಿ ಮಾಡುವಾಗ ನೀಡಿದ ಪೂರ್ಣ ಬೆಂಬಲಕ್ಕಾಗಿ ವರದಿಗಾರರು ಸುಹೃದ್ ಮಂಡಲದ ಡಾ.ಅನುರಾಧಾ ಫತರ್ಫೋಡ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಅನುವಾದ:
ಶಂಕರ. ಎನ್.
ಕೆಂಚನೂರು