ಜಸ್‌ದೀಪ್ ಕೌರ್ ಅವರಿಗೆ ತನ್ನ ಓದಿನ ವಿಷಯಕ್ಕಾಗಿ ಒಂದು ಸ್ಮಾರ್ಟ್ ಫೋನ್ ಖರೀದಿಸಬೇಕಿತ್ತು. ಇದಕ್ಕಾಗಿ ಅವರ ಪೋಷಕರು ಅವರಿಗೆ 10,000 ರೂ.ಗಳನ್ನು ಸಾಲವಾಗಿ ನೀಡಿದರು.
ಪಂಜಾಬಿನ ಮುಕ್ತಸರ್ ಸಾಹಿಬ್ ಜಿಲ್ಲೆಯಲ್ಲಿ ಈ ದಲಿತ ಯುವತಿಯಂತೆಯೇ, ಹೀಗೆ ಕುಟುಂಬಕ್ಕೆ ನೆರವಾಗುವ ಸಲುವಾಗಿ ಹೊಲದಲ್ಲಿ ದುಡಿಯುವ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟಿದೆ.
"ನಾವೇನೋ ಖುಷಿಗಾಗಿ ಹೀಗೆ ಹೊಲದಲ್ಲಿ ದುಡಿಯುವುದಲ್ಲ, ನಮ್ಮ ಕುಟುಂಬದ ಅಸಹಾಯಕತೆ ನಮ್ಮನ್ನು ಹೀಗೆ ದುಡಿಯುವ ಅನಿವಾರ್ಯತೆಗೆ ನೂಕಿದೆ" ಎನ್ನುತ್ತಾರೆ ಜಸ್ದೀಪ್. ಅವರ ಕುಟುಂಬ ಮಜಹಬಿ ಸಿಖ್ ಎನ್ನುವ ಸಮುದಾಯಕ್ಕೆ ಸೇರಿದೆ. ಈ ಸಮುದಾಯವನ್ನು ಪಂಜಾಬಿನಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ. ಅವರ ಸಮುದಾಯದ ಬಹುತೇಕ ಜನರ ಬಳಿ ಸ್ವಂತ ಭೂಮಿಯಿಲ್ಲ, ಹೀಗಾಗಿ ಅವರು ಮೇಲ್ಜಾತಿಗರ ಭೂಮಿಯಲ್ಲಿ ಕೆಲಸ ಮಾಡುತ್ತಾರೆ.
ಜಸ್ದೀಪ್ ಅವರ ಪೋಷಕರು ಆಕೆಗೆ ನೀಡಿದ ಹಣವು ಮೈಕ್ರೋ ಫೈನಾನ್ಸ್ ಕಂಪನಿಯಿಂದ ಹಸು ಖರೀದಿಸಲು ಪಡೆದ 38,000 ರೂಪಾಯಿ ಸಾಲದ ಒಂದು ಭಾಗವಾಗಿತ್ತು. ಇಲ್ಲಿ ಹಸುವಿನ ಹಾಲನ್ನು ಮಾರಿದರೆ ಸುಮಾರು 40 ರೂಪಾಯಿಯ ತನಕ ದೊರೆಯುತ್ತದೆ. ಇದು ಕುಟುಂಬದ ಮನೆ ಖರ್ಚಿಗಾಗುತ್ತದೆ ಎನ್ನುವ ಯೋಚನೆಯಿಂದ ಕುಟುಂಬ ಹಸು ಖರೀದಿಸಲು ನಿರ್ಧರಿಸಿತು. ಮುಕ್ತಸರ್ ಸಾಹಿಬ್ ಜಿಲ್ಲೆಯಲ್ಲಿನ ಆಕೆಯ ಊರಾದ ಖುಂಡೆ ಹಲಾಲ್ ಗ್ರಾಮದಲ್ಲಿ ದುಡಿಮೆಯ ಅವಕಾಶಗಳು ಬಹಳ ಕಡಿಮೆ. ಹೀಗಾಗಿ ಇಲ್ಲಿನ ಶೇಕಡಾ 33ರಷ್ಟು ಜನರು ಕೃಷಿ ಕಾರ್ಮಿಕರು.
ಸ್ಮಾರ್ಟ್ ಫೋನ್ ಎನ್ನುವುದು ಜಸ್ದೀಪ್ ಪಾಲಿಗೆ ಅಮೂಲ್ಯ ವಸ್ತುವಾಗಿ ಒದಗಿದೆ. ಅವರು ತನ್ನ ಗದ್ದೆ ಕೆಲಸದ ನಡುವೆ ದೊರೆತ ಎರಡು ಗಂಟೆಗಳ ಕಾಲದ ವಿರಾಮದ ಸಮಯದಲ್ಲಿ - ಜೂನ್ ತಿಂಗಳಲ್ಲಿ - ತನ್ನ ಕಾಲೇಜು ಪರೀಕ್ಷೆಗೆ ಈ ಫೋನ್ ಮೂಲಕವೇ ಹಾಜರಾದರು. "ನಾನು ಕೆಲಸ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ. ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರೆ ನನ್ನ ಒಂದು ದಿನದ ಸಂಪಾದನೆ ಕಳೆದುಕೊಳ್ಳಲು ತಯಾರಿರಬೇಕಿತ್ತು. ಅದು ನನ್ನಿಂದ ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ಪಂಜಾಬಿನ ಮುಕ್ತಸರ್ ಸಾಹಿಬ್ ಜಿಲ್ಲೆಯ ಸರ್ಕಾರಿ ಕಾಲೇಜಿನ ವಾಣಿಜ್ಯ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಜಸ್ದೀಪ್ ಪಾಲಿಗೆ ಕೃಷಿ ಕೆಲಸ ಹೊಸದೇನಲ್ಲ. ಅವರು ತನ್ನ 15ನೇ ವಯಸ್ಸಿನಿಂದಲೇ ತನ್ನ ಪೋಷಕರೊಡನೆ ಸೇರಿ ದುಡಿಯುತ್ತಿದ್ದಾರೆ.
"ಬೇಸಗೆರಜೆಯ ಸಮಯದಲ್ಲಿ ಬೇರೆ ಮಕ್ಕಳು ತಮ್ಮ ಪೋಷಕರ ಜೊತೆ ನಾನಿ ಪಿಂದ್ [ಅಮ್ಮನ ತವರು] ಮನೆಗೆ ಹೋದರೆ, ನಾವು ಇಲ್ಲಿನ ಭತ್ತದ ಗದ್ದೆಗಳಲ್ಲಿ ನಾಟಿ ಮಾಡುತ್ತಾ ಶ್ರಮಪಡುತ್ತಿರುತ್ತೇವೆ" ಎಂದು ಆಕೆ ನಗುತ್ತಾ ಹೇಳುತ್ತಾರೆ.
ಜಸ್ದೀಪ್ ಮೊದಲಿಗೆ ದುಡಿಯಲು ಆರಂಭಿಸಿದ್ದು ಕುಟುಂಬ ಮೈಕ್ರೋ ಫೈನಾನ್ಸ್ ಕಂಪನಿಯಿಂದ ಪಡೆದಿದ್ದ ಒಂದು ಲಕ್ಷ ರೂಪಾಯಿ ಮೊತ್ತದ ಎರಡು ಸಾಲವನ್ನು ತೀರಿಸಲು ಸಹಾಯ ಮಾಡಲು. ಈ ಎರಡೂ ಸಾಲಗಳನ್ನು 2019ರಲ್ಲಿ ಆಕೆಯ ತಂದೆ ಜಸ್ವಿಂದರ್ ಅವರಿಗೆ ಮೋಟಾರ್ ಬೈಕ್ ಖರೀದಿಸಲು ಪಡೆಯಲಾಗಿತ್ತು. ಕುಟುಂಬವು ಒಂದು ಸಾಲಕ್ಕೆ 17,000 ರೂ. ಬಡ್ಡಿ ಕಟ್ಟಿದ್ದರೆ ಇನ್ನೊಂದು ಸಾಲಕ್ಕೆ 12,000 ರೂ. ಬಡ್ಡಿ ಕಟ್ಟಿತ್ತು.
ಜಸ್ದೀಪ್ ಅವರ ಇಬ್ಬರು 17 ವರ್ಷದ ತಮ್ಮಂದಿರಾದ ಮಂಗಲ್ ಮತ್ತು ಜೈದೀಪ್ ಇಬ್ಬರೂ ತಮ್ಮ 15 ಹದಿನೈದನೇ ವಯಸ್ಸಿನಲ್ಲಿ ಗದ್ದೆಗಳಲ್ಲಿ ದುಡಿಯಲು ಆರಂಭಿಸಿದರು. ಇಲ್ಲಿನ ಕೃಷಿ ಕಾರ್ಮಿಕ ಪೋಷಕರು ತಮ್ಮ ಮಕ್ಕಳಿಗೆ ಏಳೆಂಟು ವರ್ಷವಿರುವಾಗಲೇ ಗದ್ದೆ ಕೆಲಸಕ್ಕೆ ಹೋಗುವಾಗ ತಾವು ಕೆಲಸ ಮಾಡುವುದನ್ನು ಅವರೂ ನೋಡಲೆಂದು ತಮ್ಮೊಂದಿಗೆ ಕರೆದೊಯ್ಯುತ್ತಾರೆ. "ಮುಂದೆ ಮಕ್ಕಳಿಗೆ ಕೃಷಿ ಕೆಲಸ ಮಾಡುವಾಗ ಅದು ಕಷ್ಟವೆನ್ನಿಸಬಾರದು ಎನ್ನುವುದು ಇದರ ಹಿಂದಿನ ಉದ್ದೇಶ" ಎನ್ನುತ್ತಾರೆ ಜಸ್ದೀಪ್ ಅವರ ತಾಯಿ, 38 ವರ್ಷದ ರಾಜವೀರ ಕೌರ್.
ಈ ಕುಟುಂಬದ ನೆರೆ ಮನೆಯಲ್ಲೂ ಇಂತಹದ್ದೇ ಸನ್ನಿವೇಶವಿದೆ. ಈ ಕುಟುಂಬದಲ್ಲಿ ನಾಲ್ವರು ಅಕ್ಕ ತಂಗಿಯರು ಮತ್ತು ಅವರ ವಿಧವೆ ತಾಯಿಯಿದ್ದಾರೆ. ಅವರಲ್ಲಿ ಒಬ್ಬರಾದ ನೀರೂ (22), "ನನ್ನ ತಾಯಿ ಗದ್ದೆಗಳಲ್ಲಿ ನಾಟಿ ಮಾಡುವಾಗ ಬಹಳ ಕಷ್ಟ ಎದುರಿಸುತ್ತಾರೆ. ಯಾಕೆಂದರೆ ಅವರಿಗೆ ಕಾಲಾ ಪೆಲಿಯಾ [ಹೆಪಟೈಟಿಸ್ ಸಿ] ಇದೆ" ಎನ್ನುತ್ತಾರೆ. ಇದೇ ಕಾರಣದಿಂದಾಗಿ ಅವರಿಗೆ ಊರಿನ ಹೊರಗೆ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. 2022ರಲ್ಲಿ ಅವರಿಗೆ ತಗುಲಿದ ಈ ರೋಗವು 40 ವರ್ಷದ ಸುರೀಂದರ್ ಕೌರ್ ಅವರನ್ನು ಬಿಸಿಲಿಗೆ ಹೋಗದಂತೆ ಮಾಡುವುದರ ಜೊತೆಗೆ ಜ್ವರ ಮತ್ತು ಟೈಫಾಯಿಡ್‌ಗೆ ಗುರಿಯಾಗುವಂತೆ ಮಾಡಿದೆ. ಅವರಿಗೆ ಮಾಸಿಕ ಪಿಂಚಣಿಯಾಗಿ ರೂ. 1,500, ವಿಧವಾ ವೇತನ ದೊರೆಯುತ್ತದೆ, ಆದರೆ ಅದು ಮನೆ ನಡೆಸಲು ಸಾಕಾಗುವುದಿಲ್ಲ.
ಹೀಗಾಗಿ 15ನೇ ವಯಸ್ಸಿನಿಂದ ನೀರು ಮತ್ತು ಆಕೆಯ ಸಹೋದರಿಯರು ಭತ್ತದ ನಾಟಿ, ಕಳೆ ತೆಗೆಯುವುದು, ಹತ್ತಿ ಕೀಳುವುದು ಇಂತಹ ಕೃಷಿ ಕೆಲಸಗಳನ್ನು ಮಾಡುತ್ತಿದ್ದರು. ಇದು ಈ ಭೂರಹಿತ ಮಝಬಿ ಸಿಖ್ಖರ ಕುಟುಂಬಕ್ಕೆ ಇರುವ ಏಕೈಕ ಆದಾಯದ ಮೂಲವಾಗಿದೆ. “ನಾವು ನಮ್ಮ ಪೂರ್ತಿ ರಜಾದಿನಗಳು ಹೊಲಗಳಲ್ಲಿ ಕೆಲಸ ಮಾಡುತ್ತಲೇ ಕಳೆದುಹೋಗುತ್ತವೆ. ರಜಾಕಾಲದ ಶಾಲೆಯ ಮನೆಗೆಲಸಗಳನ್ನು ಮುಗಿಸುವ ಸಲುವಾಗಿ ಕೇವಲ ಒಂದು ವಾರವಷ್ಟೇ ಬಿಡುವು ಮಾಡಿಕೊಳ್ಳುತ್ತೇವೆ” ಎಂದು ನೀರು ಹೇಳುತ್ತಾರೆ.
ಆದರೆ ಇಲ್ಲಿ ಕೆಲಸದ ಪರಿಸ್ಥಿತಿ ಬಹಳ ಕಠಿಣವಿರುತ್ತದೆ. ಅದರಲ್ಲೂ ದೀರ್ಘ ಬೇಸಗೆಯ ದಿನಗಳಲ್ಲಿ. ಈ ಸಮಯದಲ್ಲಿ ಗದ್ದೆಯಲ್ಲಿನ ನೀರು ಬಿಸಿಲಿಗೆ ಬಿಸಿಯಾಗತೊಡಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೆಂಗಸರು ಮತ್ತು ಹುಡುಗಿಯರು ಬಿಸಿಲು ತಣಿಯುವ ತನಕ ಎಂದರೆ ಸಂಜೆ ನಾಲ್ಕು ಗಂಟೆಯವರೆಗೆ ನೆರಳಿನಲ್ಲಿದ್ದು ನಂತರ ಕೆಲಸ ಆರಂಭಿಸುತ್ತಾರೆ. ಇದು ಬಹಳವಾಗಿ ದೇಹವನ್ನು ದಣಿಯುವಂತೆ ಮಾಡುವ ಕೆಲಸ. ಆದರೆ ತೀರಿಸಬೇಕಾದ ಸಾಲಗಳಿರುವುದರಿಂದಾಗಿ ಜಸ್ದೀಪ್ ಮತ್ತು ನೀರುವಿಗೆ ದುಡಿಯದೆ ಬೇರೆ ದಾರಿಯೇ ಇಲ್ಲ.
ಪ್ರತಿ ವರ್ಷ ಹೊಸ ಪುಸ್ತಕ, ಶಾಲೆಯ ಫೀಸು, ಹೊಸ ಯೂನಿಫಾರ್ಮ್ ಎಲ್ಲವನ್ನೂ ಖರೀದಿಸಲು ಮಾಡಬೇಕಿರುವ ಖರ್ಚುಗಳನ್ನು ಉಲ್ಲೇಖಿಸುತ್ತಾ, "ನಮ್ಮ ಸಂಪಾದನೆಯೆಲ್ಲವೂ ಅವರ ಖರ್ಚಿಗೇ ಆದರೆ ನಾವು ಮನೆ ನಡೆಸುವುದು ಹೇಗೆ?" ಎಂದು ಕೇಳುತ್ತಾರೆ ರಾಜವೀರ್.
"ಅವರಲ್ಲಿ ಇಬ್ಬರು ಶಾಲೆಗೆ ಹೋಗಬೇಕು!" ಎಂದ ಅವರು, ನಮ್ಮೊಂದಿಗೆ ತಮ್ಮ ಪಕ್ಕಾ ಮನೆಯೆದುರಿಗಿದ್ದ ಮಾಂಜಿ ಎಂದು ಕರೆಯಲ್ಪಡುವ ಹಗ್ಗದ ಮಂಚದ ಮೇಲೆ ಕುಳಿತು ಮಾತನಾಡುತ್ತಿದ್ದರು. ಜಗದೀಪ್ ಪ್ರಸ್ತುತ ಅವರ ಊರಿನಿಂದ 13 ಕಿಲೋಮೀಟರ್ ದೂರದಲ್ಲಿರುವ ಲಾಖೆವಾಲದ ಸರ್ಕಾರಿ ಬಾಲಕಿಯರ ಸೀನಿಯರ್ ಸೆಕೆಂಡರಿ ಸ್ಮಾರ್ಟ್ ಶಾಲೆಯಲ್ಲಿ ಓದುತ್ತಿದ್ದಾರೆ.
"ನಮ್ಮ ಹುಡುಗಿ ಹೋಗುವ ಶಾಲೆಗೆ ಕಳುಹಿಸಲು ತಿಂಗಳಿಗೆ 1,200 ರೂ ವ್ಯಾನ್ ಬಾಡಿಗೆ ಕೊಡಬೇಕು. ಅದರ ಜೊತೆಗೆ ಅವರ ಅಸೈನ್ಮೆಂಟ್ ಕೆಲಸಗಳಿಗೂ ಒಂದಷ್ಟು ಖರ್ಚು ಮಾಡಬೇಕು. ಒಟ್ಟಿನಲ್ಲಿ ವರ್ಷವಿಡೀ ಏನಾದರೊಂದು ಖರ್ಚು ಇದ್ದೇ ಇರುತ್ತದೆ" ಎಂದು ಬೇಸರದಿಂದ ಹೇಳುತ್ತಾರೆ ಜಸ್ದೀಪ್.
ಬೇಸಗೆ ರಜೆ ಮುಗಿದ ನಂತರ, ಜೂನ್ ತಿಂಗಳಿನಲ್ಲಿ ಮಂಗಲ್ ಮತ್ತು ಜಗದೀಪ್ ತಮ್ಮ ಶಾಲಾ ಪರೀಕ್ಷೆಗಳನ್ನು ಎದುರಿಸಬೇಕಿದೆ. ಹೀಗಾಗಿ ಕುಟುಂಬವು ಅವರಿಬ್ಬರಿಗೂ ಓದಿಕೊಳ್ಳಲೆಂದು ರಜಾಕಾಲದ ಕೊನೆಯಲ್ಲಿ ಒಂದಷ್ಟು ದಿನಗಳ ಕಾಲ ವಿರಾಮ ನೀಡಲು ನಿರ್ಧರಿಸಿದೆ.
ಜಸ್ದೀಪ್ ಅವರಿಗೆ ತಮ್ಮ ಒಡಹುಟ್ಟಿದವರಿಬ್ಬರೂ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಬಲ್ಲರು ಎನ್ನುವ ವಿಶ್ವಾಸವಿದೆ. ಆದರೆ ಊರಿನ ಇತರ ಮಕ್ಕಳ ವಿಷಯದಲ್ಲಿ ಇದನ್ನೇ ಹೇಳುವಂತಿಲ್ಲ. "ಆ ಮಕ್ಕಳಿಗೆ ಕಷ್ಟವಾಗುತ್ತದೆ, ಇದು ಅವರನ್ನು ಚಿಂತೆಗೆ ದೂಡುತ್ತದೆ" ಎಂದು ಅವರು ಹೇಳುತ್ತಾರೆ. ಅವರು ಮಾಂಜಿಯ ಮೇಲೆ ತನ್ನ ತಾಯಿಯೊಂದಿಗೆ ಕುಳಿತು ಮಾತನಾಡುತ್ತಿದ್ದರು. ಈ ನಿಟ್ಟಿನಲ್ಲಿ ಈ ಯುವತಿ ಒಂದಷ್ಟು ಕೆಲಸ ಮಾಡುತ್ತಿದ್ದಾರೆ. ಊರಿನ ಕಾಲೇಜಿಗೆ ಹೋಗುವ ಯುವಜನರ ಗುಂಪಿನೊಂದಿಗೆ ಸೇರಿ ಅಲ್ಲಿನ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಾರೆ. ಸಂಜೆ ಹೊತ್ತು ಈ ತರಗತಿ ನಡೆಯುತ್ತದೆ. ಈ ತರಗತಿಗಳು ಜೂನ್ ತಿಂಗಳಲ್ಲಿ ನಿಯಮಿತವಾಗಿ ನಡೆಯುವುದಿಲ್ಲ, ಏಕೆಂದರೆ ಆ ಸಮಯದಲ್ಲಿ ಸಂಜೆ 4ರಿಂದ 7 ಗಂಟೆಯವರೆಗೆ ಬಹುತೇಕ ವಿದ್ಯಾರ್ಥಿಗಳು ಗದ್ದೆ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ.
*****
ಗದ್ದೆ ನಾಟಿ ಕೆಲಸವು ಈ ಭಾಗದ ಕಾರ್ಮಿಕ ಕುಟುಂಬಗಳಿಗೆ ಸಿಗುವ ಕೆಲವು ಹಂಗಾಮಿ ಕೆಲಸಗಳಲ್ಲಿ ಒಂದು. ಈ ಕೆಲಸಕ್ಕೆ ಒಂದು ಭೂರಹಿತ ಕಾರ್ಮಿಕರ ಕುಟುಂಬಕ್ಕೆ ಒಂದು ಎಕರೆ ಭೂಮಿಯಲ್ಲಿ ನಾಟಿ ಮಾಡಿದರೆ 3,500 ರೂ. ಸಿಗುತ್ತದೆ. ಜೊತೆಗೆ ಭತ್ತದ ಸಸಿಯನ್ನು ಬಿತ್ತನೆ ಮಾಡಿರುವ ಗದ್ದೆಯು ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದ್ದರೆ ಹೆಚ್ಚುವರಿ 300 ರೂಪಾಯಿಗಳ ಕೂಲಿ ನೀಡಲಾಗುತ್ತದೆ. ಒಂದು ವೇಳೆ ಎರಡು ಅಥವಾ ಅದಕ್ಕಿಂತ ಹೆಚ್ಚು ಕುಟುಂಬಗಳನ್ನು ಒಟ್ಟಿಗೆ ಕೆಲಸಕ್ಕೆ ತೆಗೆದುಕೊಂಡಲ್ಲಿ ಒಬ್ಬೊಬ್ಬರಿಗೆ ತಲಾ 400ರಿಂದ 500 ರೂಪಾಯಿಗಳ ತನಕ ಕೂಲಿ ದೊರೆಯುತ್ತದೆ.
ಅದೇನೇ ಇದ್ದರೂ, ಖುಂಡೇ ಹಲಾಲ್ ಗ್ರಾಮದ ಜನರು ಈಗೀಗ ಖಾರಿಫ್ ಹಂಗಾಮಿನಲ್ಲಿ ಕೆಲಸ ಸಿಗುವುದು ಕಡಿಮೆಯಾಗಿದೆ ಎನ್ನುತ್ತಾರೆ. ಉದಾಹರಣೆಗೆ ಜಸ್ದೀಪ್ ಅವರ ಕುಟುಂಬ ಈ ಬಾರಿ 25 ಎಕರೆ ಭೂಮಿಯಲ್ಲಿ ನಾಟಿ ಮಾಡಿದ್ದಾರೆ. ಇದು ಕಳೆದ ವರ್ಷಕ್ಕಿಂತ ಐದು ಎಕರೆ ಕಡಿಮೆ. ಅವರ ಕುಟುಂಬದ ಮೂರು ಜನ ಈ ಹಂಗಾಮಿನಲ್ಲಿ ತಲಾ 15,000 ರೂ. ಸಂಪಾದಿಸಿದ್ದಾರೆ. ಕಿರಿಯರಿಬ್ಬರು ತಲಾ 10,000 ರೂ. ಗಳಿಸಿದ್ದಾರೆ.
ಇಲ್ಲಿ ಲಭ್ಯವಿರುವ ಇನ್ನೊಂದು ಕೆಲಸದ ಆಯ್ಕೆಯೆಂದರೆ ಚಳಿಗಾಲದಲ್ಲಿ ಹತ್ತಿ ಕೀಳುವುದು. ಆದರೆ ಈ ಕೆಲಸದ ಲಭ್ಯತೆಯು ಕೂಡಾ ಮೊದಲಿನಂತಿಲ್ಲ ಎನ್ನುತ್ತಾರೆ ಜಸ್ದೀಪ್. "ಕೀಟ ಬಾಧೆ ಮತ್ತು ಅಂತರ್ಜಲ ಮಟ್ಟದ ಕುಸಿತದಿಂದಾಗಿ ಕಳೆದ ಹತ್ತು ವರ್ಷಗಳಿಂದ ಹತ್ತಿ ಬಿತ್ತನೆ ಸತತವಾಗಿ ಕಡಿಮೆಯಾಗುತ್ತಿದೆ."
ಕೆಲಸದ ಲಭ್ಯತೆ ಕಡಿಮೆಯಾಗಿರುವುದರಿಂದ ಕೆಲವು ಕಾರ್ಮಿಕರು ಬೇರೆ ಕೆಲಸಗಳೆಡೆ ಮುಖ ಮಾಡುತ್ತಿದ್ದಾರೆ. ಜಸ್ದೀಪ್ ಅವರ ತಂದೆ ಈ ಹಿಂದೆ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ಅವರ ಸೊಂಟದ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರು ಈ ಕೆಲಸವನ್ನು ಬಿಡಬೇಕಾಯಿತು. 40 ವರ್ಷ ಪ್ರಾಯದ ಅವರು 2023ರ ಜುಲೈ ತಿಂಗಳಲ್ಲಿ ಖಾಸಗಿ ಬ್ಯಾಂಕೊಂದರಿಂದ ಸಾಲ ಪಡೆದು ಮಹೀಂದ್ರಾ ಬೊಲೆರೋ ಕಾರ್ ಖರೀದಿಸಿದರು. ಪ್ರಸ್ತುತ ಆ ಕಾರಿನಲ್ಲಿ ಬಾಡಿಗೆಗೆ ಹೋಗುತ್ತಾರೆ. ಇದರೊಂದಿಗೆ ಕೃಷಿ ಕಾರ್ಮಿನಾಗಿಯೂ ಕೆಲಸ ಮಾಡುತ್ತಿದ್ದಾರೆ. ಕುಟುಂಬವು ಮುಂದಿನ ಐದು ವರ್ಷಗಳ ಕಾಲ ಕಾರಿನ ಸಾಲದ ಕಂತು ತುಂಬಬೇಕಿದೆ.
ಹಿಂದಿನ ಎರಡು ವರ್ಷಗಳ ತನಕವೂ ನೀರೂವಿನ ಕುಟುಂಬ ಬೇಸಿಗೆ ರಜೆಯ ಸಂಧರ್ಭದಲ್ಲಿ ಕನಿಷ್ಠ 15 ಎಕರೆ ಭೂಮಿಯಲ್ಲಿ ನಾಟಿ ಕೆಲಸ ಮಾಡುತ್ತಿತ್ತು. ಈ ವರ್ಷ ಅವರು ಕೇವಲ ಎರಡು ಎಕರೆ ಭೂಮಿಯಲ್ಲಿ ಕೆಲಸ ಮಾಡಿದ್ದು ಅದರ ಬದಲಿಗೆ ತಮ್ಮ ಜಾನುವಾರುಗಳಿಗಾಗಿ ಒಣ ಮೇವಿನ ಹುಲ್ಲನ್ನು ಪಡೆದಿದ್ದಾರೆ.
2022ರಲ್ಲಿ, ನೀರು ಅವರ ಅಕ್ಕ, 25 ವರ್ಷದ ಶಿಖಾಶ್ 26 ಕಿಮೀ ದೂರದಲ್ಲಿರುವ ದೋಡಾದಲ್ಲಿ ವೈದ್ಯಕೀಯ ಪ್ರಯೋಗಾಲಯದಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಅವರಿಗೆ ಈಗ ತಿಂಗಳಿಗೆ ರೂ. 24,000 ಸಂಬಳ ದೊರೆಯುತ್ತದೆ. ಇದರಲ್ಲಿ ಒಂದು ಹಸು ಮತ್ತು ಎಮ್ಮೆ ಖರೀದಿಸಿದ ನಂತರ ಕುಟುಂಬಕ್ಕೆ ಒಂದಷ್ಟು ಸಮಾಧಾನ ದೊರಕಿತು; ಈ ಹುಡುಗಿಯರು ಕಡಿಮೆ ದೂರದ ಪ್ರಯಾಣಕ್ಕಾಗಿ ಸೆಕೆಂಡ್ ಹ್ಯಾಂಡ್ ಮೋಟಾರುಬೈಕ್ ಒಂದನ್ನು ಸಹ ಖರೀದಿಸಿದರು. ನೀರೂ ಕೂಡ ತನ್ನ ಅಕ್ಕನಂತೆ ಲ್ಯಾಬ್ ಅಸಿಸ್ಟೆಂಟ್ ತರಬೇತಿ ಪಡೆಯುತ್ತಿದ್ದು, ಆಕೆಯ ಶುಲ್ಕವನ್ನು ಗ್ರಾಮದ ಕ್ಷೇಮಾಭಿವೃದ್ಧಿ ಸಂಘದವರು ಭರಿಸುತ್ತಿದ್ದಾರೆ.
ಅವರ ತಂಗಿ 14 ವರ್ಷದ ಕಮಲ್ ಕೂಡಾ ಹೊಲದಲ್ಲಿ ಕುಟುಂಬದೊಂದಿಗೆ ದುಡಿಯುತ್ತಿದ್ದಾಳೆ. ಜಗದೀಪ್ ಓದುತ್ತಿರುವ ಶಾಲೆಯಲ್ಲಿಯೇ ಓದುತ್ತಿರುವ ಈ 11ನೇ ತರಗತಿಯ ವಿದ್ಯಾರ್ಥಿ, ತಾನು ಕೂಲಿ ಕೆಲಸ ಮತ್ತು ತನ್ನ ಶಾಲೆಯ ಕೆಲಸದ ನಡುವೆ ಪರದಾಡುತ್ತಿದ್ದಾಳೆ.
*****
"ಊರಿನ ಕೃಷಿ ಕಾರ್ಮಿಕರಿಗೆ ಈಗ ಹಂಗಾಮಿನಲ್ಲಿ ಕೇವಲ 15 ದಿನಗಳ ಕೆಲಸ ಮಾತ್ರ ಲಭ್ಯವಿರುತ್ತದೆ, ಏಕೆಂದರೆ ರೈತರು ಹೆಚ್ಚು ಡಿಎಸ್‌ಆರ್ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ" ಎಂದು ಪಂಜಾಬ್ ಖೇತ್ ಮಜ್ದೂರ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ತಾರ್ಸೆಮ್ ಸಿಂಗ್ ಹೇಳುತ್ತಾರೆ. ಈ ಮಾತನ್ನು ಜಸ್ದೀಪ್ ಸಹ ಒಪ್ಪುತ್ತಾರೆ, ಒಂದು ಕಾಲದಲ್ಲಿ ನಾಟಿ ಕೆಲಸದ ಮೂಲಕ ಪ್ರತಿಯೊಬ್ಬರೂ 25,000 ರೂಪಾಯಿಗಳವರೆಗೆ ಗಳಿಸಬಹುದಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಆದರೆ ಈಗ, "ಬಹಳಷ್ಟು ರೈತರು ಸೀದಿ ಬಿಜಾಯಿ [ಭತ್ತದ. ನೇರ ಬಿತ್ತನೆ ಅಥವಾ ಡಿಎಸ್‌ಆರ್] ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಈ ಯಂತ್ರಗಳು ನಮ್ಮ ಮಜ್ದೂರಿಯನ್ನು [ಕೂಲಿ] ಕಿತ್ತುಕೊಂಡಿವೆ" ಎಂದು ನಿಟ್ಟುಸಿರು ಬಿಡುತ್ತಾರೆ ಜಸ್ದೀಪ್ ಅವರ ತಾಯಿ ರಾಜವೀರ್.
ನೀರೂ ಮುಂದುವರೆದು ಹೇಳುತ್ತಾರೆ, "ಇದೇ ಕಾರಣದಿಂದ ಬಹಳಷ್ಟು ಗ್ರಾಮಸ್ಥರು ಈಗ ಕೆಲಸ ಹುಡುಕಿಕೊಂಡು ದೂರದ ಊರುಗಳತ್ತ ಹೋಗುತ್ತಿದ್ದಾರೆ." ಕೆಲವು ಕಾರ್ಮಿಕರ ಪ್ರಕಾರ ರಾಜ್ಯ ಸರ್ಕಾರವು ಡಿಎಸ್‌ಆರ್ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತರಿಗೆ ಎಕರೆಗೆ 1,500 ಸಹಾಯ ಧನ ನೀಡಲು ಆರಂಭಿಸಿದ ನಂತರ ರೈತರು ಈ ಯಂತ್ರದ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದ್ದಾರೆ.
ಖುಂಡೇ ಹಲಾಲ್ ಗ್ರಾಮದಲ್ಲಿ 43 ಎಕರೆ ಭೂಮಿಯನ್ನು ಹೊಂದಿರುವ ಗುರ್ಪಿಂದರ್ ಸಿಂಗ್ ಅವರು ಕಳೆದ ಎರಡು ಹಂಗಾಮಿನಿಂದ ಡಿಎಸ್‌ಆರ್ ಪದ್ದತಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಅವರು ಹೇಳುವಂತೆ, "ನೇರ ನಾಟಿ ಮತ್ತು ಮಾನವ ನಾಟಿಯ ನಡುವೆ ಖರ್ಚಿನಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ. ಡಿಎಸ್‌ಆರ್ ಪದ್ಧತಿಯಡಿ ಸಾಕಷ್ಟು ನೀರು ಉಳಿತಾಯವಾಗುತ್ತದೆ ಅಷ್ಟೇ, ಇದರಡಿಯಲ್ಲಿ ಹಣವೇನೂ ಉಳಿತಾಯವಾಗುವುದಿಲ್ಲ."
ಮತ್ತು ಈ 53 ವರ್ಷದ ಹಿರಿಯ ರೈತ ತಾನು ಡಿಎಸ್ಆರ್ ಬಳಸಿ ಎರಡು ಪಟ್ಟು ಬೀಜ ಬಿತ್ತಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ.
ಆದರೆ, ಈ ವಿಧಾನವು ಗದ್ದೆಗಳನ್ನು ಒಣಗಿಸುತ್ತದೆ, ಇದರಿಂದಾಗಿ ಇಲಿಗಳು ಗದ್ದೆಗೆ ಪ್ರವೇಶಿಸಿ ಬೆಳೆಯನ್ನು ನಾಶಪಡಿಸುತ್ತವೆ ಎಂದು ಅವರು ಒಪ್ಪಿಕೊಳ್ಳುತ್ತಾರೆ. "ಹೆಚ್ಚಿನ ಕಳೆ ಬಾಧೆಯಿಂದಾಗಿ ಡಿಎಸ್ಆರ್ ಬಳಸುವಾಗ ಹೆಚ್ಚಿನ ಕಳೆನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ಕಾರ್ಮಿಕರಿಂದ ಭತ್ತವನ್ನು ನಾಟಿ ಮಾಡಿಸುವಾಗ ಕಳೆ ಬಾಧೆ ಕಡಿಮೆಯಿತ್ತು" ಎಂದು ಅವರು ಹೇಳುತ್ತಾರೆ.
ಹೀಗಾಗಿ, ಗುರ್ಪಿಂದರ್ ಅವರಂತಹ ರೈತರು ಕಳೆ ತೆಗೆಸಲು ಮತ್ತೆ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ.
"ಹೊಸ ತಂತ್ರವನ್ನು ಅಳವಡಿಸಿಕೊಳ್ಳುವುದರಿಂದ ಯಾವುದೇ ಲಾಭವಿಲ್ಲದಿದ್ದಲ್ಲಿ ರೈತರು ಕೆಲಸಕ್ಕೆ ಕೃಷಿ ಕಾರ್ಮಿಕರನ್ನು ಏಕೆ ನೇಮಿಸಿಕೊಳ್ಳಬಾರದು?" ಎಂದು ಮಜಾಬಿ ಸಿಖ್ ಸೇರಿದವರಾದ ತಾರ್ಸೆಮ್ ಕೇಳುತ್ತಾರೆ. ಕೀಟನಾಶಕ ಕಂಪನಿಗಳ ಜೇಬುಗಳನ್ನು ತುಂಬಿಸುವಲ್ಲಿ ರೈತರಿಗೆ ಸಮಸ್ಯೆಯಿಲಲ್, ಆದರೆ, "ಮಜ್ದೂರಾ ದೇ ತನ್ ಕಲ್ಲೆ ಹಾತ್ ಹೀ ಹೈ, ಆವಿ ಯೆ ಖಾಲಿ ಕರಣ್'ಚ್ ಲಗೇ ಹೈ [ಕಾರ್ಮಿಕರನ್ನು ಕೆಲಸದಿಂದ ವಂಚಿತರನ್ನಾಗಿಸುತ್ತಾರೆ]" ಎಂದು ಅವರು ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು