ಫೆಬ್ರವರಿ 13, 2024 ರಂದು ಪಂಜಾಬ್‌ನ ಸಮಾಜಶಾಸ್ತ್ರದ ವಿದ್ಯಾರ್ಥಿ ದೇವಿಂದರ್ ಸಿಂಗ್ ಭಂಗು ತಮ್ಮ ಸ್ನೇಹಿತರೊಂದಿಗೆ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಶಂಭು ಗಡಿಗೆ ಹೋದರು. ಅವರು ತಲುಪುವಾಗ ಸುಮಾರು 2 ಗಂಟೆಗೆ ಆಗಿತ್ತು. ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಮತ್ತು ಪೊಲೀಸರು ಹರಿಯಾಣದ ಗಡಿಯಲ್ಲಿ ಆಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದರು.
ದೇವಿಂದರ್ ಅವರ ಸ್ನೇಹಿತ ತರಣ್‌ವೀರ್ ಸಿಂಗ್, “ನಾವು ಶಾಂತಿಯುತವಾಗಿ ಗುಂಪಾಗಿ ನಿಂತಿದ್ದಾಗ ದೇವಿಂದರ್ ಎಡಗಣ್ಣಿಗೆ ರಬ್ಬರ್ ಗುಂಡೊಂದು ಬಂದು ಬಡಿಯಿತು. ತಕ್ಷಣ ಅವನು ಬಿದ್ದ. ನಾವು ಅವನನ್ನು ಎತ್ತಲು ಪ್ರಯತ್ನಿಸುವಾಗ, ಪೊಲೀಸರು ನಮ್ಮ ಮೇಲೆ ಮೂರ್ನಾಲ್ಕು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು,” ಎಂದು ಹೇಳುತ್ತಾರೆ. ಅವರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಒಂದು ಗಂಟೆಯೊಳಗೆ, ಅಂದರೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಎಲ್ಲವೂ ನಡೆದುಹೋಯ್ತು.
2024 ರ ಫೆಬ್ರವರಿ 13 ರಂದು ಕಾನೂನಾತ್ಮಕವಾಗಿ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಜಾರಿ ಮಾಡುವ ಬೇಡಿಕೆ ಇಟ್ಟು, ತಮ್ಮ ಇತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರೈತರು ದೆಹಲಿಗೆ ಕಡೆಗೆ ಶಾಂತಿಯುತ ಮೆರವಣಿಗೆಯನ್ನು ಆರಂಭಿಸಿದರು. ಅವರನ್ನು ಪಂಜಾಬ್ ಮತ್ತು ಹರಿಯಾಣ ನಡುವೆ ಇರುವ ಶಂಭು ಗಡಿಯಲ್ಲಿ ಪೊಲೀಸರು ಮತ್ತು ಆರ್‌ಎಎಫ್ ಸಿಬ್ಬಂದಿ ತಡೆದರು. ಮೆರವಣಿಗೆ ಮುಂದುವರಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿದರು. ರೈತರು ಈ ತಡೆಯನ್ನು ಹತ್ತಿಕ್ಕಿ ಮೆರವಣಿಗೆ ಮುಂದುವರಿಸಲು ಯತ್ನಿಸಿದಾಗ, ಅವರ ಮೇಲೆ ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಪೆಲೆಟ್‌ಗಳಿಂದ ದಾಳಿ ಮಾಡಲಾಯಿತು (ಇದನ್ನೂ ಓದಿ: 'ನಾನು ಶಂಭು ಗಡಿಯಲ್ಲಿ ಬಂಧಿಯಾಗಿದ್ದೇನೆ').
ಅಶ್ರುವಾಯು ಶೆಲ್‌ಗಳಿಂದ ಹೊರ ಬರುತ್ತಿದ್ದ ಕಮಟು ಹೊಗೆಯನ್ನು ತಡೆದುಕೊಂಡು ದೇವಿಂದರ್‌ನ ಸ್ನೇಹಿತರು ತೀವ್ರವಾಗಿ ರಕ್ತಸ್ರಾವವಾಗುತ್ತಾ ಬಿದ್ದಿದ್ದ ಅವರನ್ನು ಎತ್ತಿಕೊಂಡರು. 22 ವರ್ಷ ಪ್ರಾಯದ ಯುವಕ ದೇವೀಂದರ್‌ನನ್ನು 20 ಕಿಲೋಮೀಟರ್ ದೂರದಲ್ಲಿರುವ ಬಾಣೂರಿನ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು. ಅಲ್ಲಿಂದ ವೈದ್ಯರು ಅವರನ್ನು ಚಂಡೀಗಢದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಫೆಬ್ರವರಿ 15 ರಂದು ಅವರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಯಿತು. ವೈದ್ಯರು ಅವರ ಎಡಗಣ್ಣಿನ ದೃಷ್ಟಿ ಮತ್ತೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳುತ್ತಾರೆ.
ದೇವಿಂದರ್ ತಂದೆ ಮಂಜಿತ್ ಸಿಂಗ್ ಓರ್ವ ರೈತ. ತಮ್ಮ ಮಗ ವಿದೇಶಕ್ಕೆ ಹೋಗದೆ, ಇಲ್ಲೇ ಇದ್ದು ಪೊಲೀಸ್ ಆಗಲು ತಯಾರಿ ನಡೆಸುತ್ತಿದ್ದ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.






















