"ತಲೆಗೆ ಬಣ್ಣ ಹಚ್ಚುವುದರಿಂದ ಕೂದಲು ಇನ್ನಷ್ಟು ಬಿಳಿಯಾಗುತ್ತದೆ" ಎಂದು ಪುಷ್ಪವಲ್ಲಿ ಘೋಷಿಸಿದರು. "ಈ ರೀತಿ" ಎನ್ನುತ್ತಾ ಅವರು ಬಿಳಿ-ನೀಲಿ ಚೌಕಗಳ ನೆಲದ ಟೈಲ್ಸ್ ತೋರಿಸುತ್ತಾ ಹೇಳಿದರು. ಅರವತ್ತರ ಪ್ರಾಯದ ಅವರ ತಲೆಯ ಕೂದಲು ಎಲ್ಲೋ ಕೆಲವಷ್ಟೇ ಬಿಳಿಯಾಗಿದ್ದವು. ನಾನು ಬಳಸುವುದು "ತೆಂಗಿನ ಎಣ್ಣೆ, ಲೈಫ್ ಬಾಯ್ ಸೋಪ್ ಓನ್ಲಿ" 'ಓನ್ಲಿ' ಎಂಬ ಪದವನ್ನು ಇಂಗ್ಲಿಷಿನಲ್ಲಿ ಒತ್ತಿ ಹೇಳಿದರು.
ಆ ಮಧ್ಯಾಹ್ನ ಅವರು ಟೈಲ್ಸ್ ಹಾಕಿದ ನೆಲದ ಮೇಲೆ ಕುಳಿತು ಭೂತ ಮತ್ತು ವರ್ತಮಾನವನ್ನು ನೆನಪಿಸಿಕೊಂಡರು. "ನನ್ನ ತಾಯಿಯ ಕಾಲದಲ್ಲಿ" ಅವರು ಹೇಳಲು ಪ್ರಾರಂಭಿಸಿದರು. "ನನ್ನ ತಾಯಿಯ ಅತ್ತೆ ತಾಯಿಗೆ ತೆಂಗಿನಕಾಯಿ ತುಂಡನ್ನು ನೀಡುತ್ತಿದ್ದರು. ನನ್ನ ತಾಯಿ ತುಂಡನ್ನು ಅಗಿದು ಅದನ್ನು ತಲೆಗೆ ತಿಕ್ಕಿಕೊಳ್ಳುತ್ತಿದ್ದರು. ಅದು ಅವರ ಪಾಲಿನ ತೆಂಗಿನ ಎಣ್ಣೆ."
ಪಕ್ಕದಲ್ಲಿ ಕುಳಿತಿದ್ದ ವಸಂತಿ ಪಿಳ್ಳೈ ಪುಷ್ಪಾ ವೇಣಿಯವರ ಮಾತನ್ನು ಒಪ್ಪಿದರು. ಇಬ್ಬರು ಮಹಿಳೆಯರು (ದೂರದ ಸಂಬಂಧಿಕರು ಸಹ) ಧಾರಾವಿಯ ಒಂದೇ ಓಣಿಯಲ್ಲಿ ಒಂದೇ ಕೋಣೆಯ ಮನೆಗಳಲ್ಲಿ ಸುಮಾರು 50 ವರ್ಷಗಳನ್ನು ಕಳೆದಿದ್ದಾರೆ. ಅವರ ಧ್ವನಿಯಲ್ಲಿ ಸಂತೃಪ್ತಿಯ ಅಪರೂಪದ ಅಭಿವ್ಯಕ್ತಿ ಅವರ ಜೀವನದ ಬಗ್ಗೆ ಹೇಳಿತು. ಇಬ್ಬರೂ ದಶಕಗಳಿಂದ ಸ್ನೇಹಿತರು. ಇಬ್ಬರಲ್ಲೂ ಬದಲಾದ ಪ್ರಪಂಚದ ನೆನಪುಗಳಿವೆ.
ಪುಷ್ಪಾ ವೇಣಿ 14-15ನೇ ವಯಸ್ಸಿನಲ್ಲಿ ಹೊಸ ಮದುಮಗಳಾಗಿ ಧಾರಾವಿಗೆ ಕಾಲಿಟ್ಟರು. ಮದುಮಗ ಧಾರಾವಿಯಲ್ಲಿ ವಾಸಿಸುತ್ತಿದ್ದ. ಅಲ್ಲಿನ ಖಾಲಿ ಜಾಗದಲ್ಲಿ ತಯಾರಿಸಲಾಗಿದ್ದ ಮಂಟಪದಲ್ಲಿ ಮದುವೆ ನಡೆಯಿತು. ಆಗ ಮದುಮಗನಿಗೆ 40 ವರ್ಷ ವಯಸ್ಸಾಗಿತ್ತು" ಎಂದು ಪುಷ್ಪವೇಣಿ ಹೇಳಿದರು. ಅವನು ಅಷ್ಟು ದೊಡ್ಡವರೇ? "ಹೌದು. ಆದರೂ ಆ ದಿನಗಳಲ್ಲಿ ಯಾರೂ ಈ ಬಗ್ಗೆಯೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮದುವೆಯ ನಂತರ ಅನ್ನ, ಸಾರನ್ನು ಮದುವೆಯ ಊಟವಾಗಿ ಬಡಿಸಲಾಯಿತು. ತರಕಾರಿ ಊಟ" ಎಂದು ಅವರು ನೆನಪಿಸಿಕೊಂಡರು.
ಮದುವೆಯ ನಂತರ ಆಕೆ ಪತಿ ಚಿನ್ನಸಾಮಿ ಕೋಣೆಗೆ ತೆರಳಿದರು. ಚಿನ್ನಸಾಮಿ ಈ ಕೋಣೆಯನ್ನು 500 ರೂಪಾಯಿಗೆ ಖರೀದಿಸಿದ್ದರು. ಆ ದಿನಗಳಲ್ಲಿ ಇದು ಬಹಳ ದೊಡ್ಡ ಮೊತ್ತವಾಗಿತ್ತು. ಅವರು ಹತ್ತಿರದ ವರ್ಕ್‌ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಶಸ್ತ್ರಚಿಕಿತ್ಸೆ ಇತ್ಯಾದಿಗಳಲ್ಲಿ ಬಳಸುವ ದಾರ ಮತ್ತು ವಯರುಗಳನ್ನು ತಯಾರಿಸಲಾಗುತ್ತಿತ್ತು. ಆರಂಭದಲ್ಲಿದ್ದ 60 ರೂಪಾಯಿ ಸಂಬಳವು 1990ರ ದಶಕದಲ್ಲಿ ಅವರು ನಿವೃತ್ತರಾಗುವ ಹೊತ್ತಿಗೆ 25,000ಕ್ಕೆ ಏರಿತ್ತು.







