"ತೋಡಾ ಕಸೂತಿ'ಯ ಕುರಿತು ತಿಳಿಸುತ್ತಿರುವ ಕುರ್ತಾದ ಮೇಲಿರುವ ಟ್ಯಾಗ್‌ನ ಈ ಫೋಟೋ ಗಮನಿಸಿ (ದೊಡ್ಡ ಬ್ರ್ಯಾಂಡ್‌ನಿಂದ ಮಾರಲ್ಪಡುತ್ತಿರುವ). ಇದು ಬಟ್ಟೆಯ ಮೇಲೆ ಅಚ್ಚೊತ್ತಿರುವ ಪ್ರಿಂಟ್! ಅವರು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳಲು ಸಹ ಪ್ರಯತ್ನಿಸಿಲ್ಲ. ಕಸೂತಿಯನ್ನು ‘ಪುಖೂರ್’ ಎಂಬುದಾಗಿ ಮತ್ತು ನಮ್ಮ ಭಾಷೆಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಪದಗಳಿಂದ ಹೆಸರಿಸುತ್ತಾರೆ,” ಎಂದರು ವಾಸಮಲ್ಲಿ ಕೆ.
ತೋಡಾ ಭಾಷೆಯಲ್ಲಿ, ಆ ಸಮುದಾಯದ ಕಸೂತಿಯನ್ನು ಪೊಹೊರ್ ಎಂದು ಕರೆಯಲಾಗುತ್ತದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುಂದಾ ತಾಲೂಕಿನ ಕರಿಕಡ್ಮಂಡ್ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ 60ರ ವಯಸ್ಸಿನ ವಾಸಮಲ್ಲಿ ಅವರು ಅನುಭವಿ ಕಸೂತಿಗಾರರು. ಸುಮಾರು 16 ಕಿಲೋಮೀಟರ್ ದೂರದಲ್ಲಿ, ಊಟಿ (ಉದಗಮಂಡಲಂ) ಪಟ್ಟಣದಲ್ಲಿ, ತೋಡಾ ಕಸೂತಿ ಉತ್ಪನ್ನಗಳ ಮಳಿಗೆಯನ್ನು ನಡೆಸುತ್ತಿರುವ ಶೀಲಾ ಪೊವೆಲ್ ಅವರಿಗೆ, ಆನ್‌ಲೈನ್‌ನಲ್ಲಿ ಕೇವಲ 2,500 eರೂ.ಗೆ ಇನ್ನೊಬ್ಬ ಪ್ರಸಿದ್ಧ ಚಿಲ್ಲರೆ ವ್ಯಾಪಾರಿಯು 'ತೋಡಾ' ಸೀರೆಯನ್ನು ಮಾರುವುದನ್ನು ನೋಡಿದಾಗ ನಂಬಲಾಗಲಿಲ್ಲ. ಅವರು ತಕ್ಷಣ ಇದರ ಖರೀದಿಗೆ ಆರ್ಡರ್ ಮಾಡಿದರು. "ತಮಿಳುನಾಡಿನ ಮಹಿಳೆಯರು ಕೌಶಲ್ಯಪೂರ್ಣವಾಗಿ ಕೈಯಿಂದ ಕಸೂತಿ ಮಾಡಿದ ತೋಡಾ ಕಸೂತಿ ಸೀರೆ" ಎಂಬುದಾಗಿ ಅದಕ್ಕೆ ಜಾಹೀರಾತು ನೀಡಲಾಗಿತ್ತು. ಅವರು ಅದನ್ನು ಹೇಗೆ ಅಷ್ಟು ಕಡಿಮೆ ಬೆಲೆಗೆ ನೀಡುತ್ತಾರೆ ಮತ್ತು ಅದನ್ನು ಎಲ್ಲಿ ಮಾಡಲಾಗಿದೆ ಎಂದು ಅವರು ತಿಳಿಯ ಬಯಸಿದರು.
ಕೆಲವೇ ದಿನಗಳಲ್ಲಿ ನನಗೆ ಸೀರೆಯು ತಲುಪಿತು. "ಇದು ಯಂತ್ರದಿಂದ ಮಾಡಿದ ಕಸೂತಿಯಾಗಿದ್ದು, ಅವ್ಯವಸ್ಥಿತವಾಗಿದ್ದ ಎಳೆಗಳನ್ನು ಮರೆಮಾಡಲು ಹಿಂದಿನ ಭಾಗವನ್ನು ಬಟ್ಟೆಯ ಪಟ್ಟಿಯಿಂದ ಮುಚ್ಚಿರುವುದನ್ನು ನಾನು ಗಮನಿಸಿದೆ." ಎಂದರು ಶೀಲಾ. ಕಸೂತಿಯು ಕಪ್ಪು ಮತ್ತು ಕೆಂಪು ಬಣ್ಣದಲ್ಲಿದ್ದು, ಬಣ್ಣದಲ್ಲಿ ಮಾತ್ರ ಅದು ತೋಡ ಕಸೂತಿಯನ್ನು ಹೋಲುತ್ತಿತ್ತು.
ತೋಡಾ ಸಮುದಾಯದ ಮಹಿಳೆಯರು ಮಾಡುವ ಪಾರಂಪರಿಕ ಕಸೂತಿಯು, ಬಿಳಿ ಬಣ್ಣದ ಕೋರಾ ಹತ್ತಿ ಬಟ್ಟೆಯ ಮೇಲೆ ಜ್ಯಾಮಿತೀಯ ವಿನ್ಯಾಸದಲ್ಲಿ ವಿಶಿಷ್ಟವಾದ ಕೆಂಪು ಮತ್ತು ಕಪ್ಪು (ಆಗಾಗ ನೀಲಿ) ದಾರದ ಕಸೂತಿಯನ್ನು ಹೊಂದಿರುತ್ತದೆ. ಪುಟುಕುಳಿಯೆಂಬ ವಿಶಿಷ್ಟವಾದ ಶಾಲು, ಪಾರಂಪರಿಕ ತೋಡಾ ಉಡುಗೆಯೆನಿಸಿದೆ. ಭವ್ಯವಾದ ಉಡುಪೆಂದು ಪರಿಗಣಿಸಲ್ಪಟ್ಟಿರುವ ಇದನ್ನು ದೇವಾಲಯದ ಭೇಟಿಗಳು, ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಹಾಗೂ ಹೊದಿಕೆಯಂತೆ ಧರಿಸಲಾಗುತ್ತದೆ. 1940ರ ದಶಕದ ಸುಮಾರಿಗೆ, ತೋಡಾ ಮಹಿಳೆಯರು ಬ್ರಿಟಿಷ್ ಖರೀದಿದಾರರಿಗೆ ಅವರ ಖರೀದಿಗೆ ಅನುಸಾರವಾಗಿ ಮೇಜಿಗೆ ಹೊದಿಸುವ ಬಟ್ಟೆಗಳು, ಚೀಲಗಳು ಮತ್ತು ಇತರ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು. ಮುಂದಿನ ಹಲವು ದಶಕಗಳವರೆಗೆ, ಮಾರಾಟವು ವಸ್ತುಗಳನ್ನು ವಿನಂತಿಸಿದವರಿಗೆ ಸೀಮಿತವಾಗಿತ್ತು. ಈ ಹಿಂದೆ ಹತ್ತಿಯ ದಾರವನ್ನು ಮಾತ್ರ ಬಳಸಲಾಗುತ್ತಿತ್ತು, ಈಗ ಹೆಚ್ಚಿನ ತೋಡಾ ಮಹಿಳೆಯರು ಉಣ್ಣೆಯ ದಾರವನ್ನು ಬಳಸುತ್ತಾರೆ. ಅದು ಹೆಚ್ಚು ವೆಚ್ಚದಾಯಕವಲ್ಲ ಹಾಗೂ ಅದರೊಂದಿಗೆ ವೇಗವಾಗಿ ಕೆಲಸವನ್ನು ನಿರ್ವಹಿಸಬಹುದೆಂದು ಈ ಮಹಿಳೆಯರು ತಿಳಿಸುತ್ತಾರೆ.
"ಆದಾಗ್ಯೂ, ಇದು ತುಂಬಾ ಜಟಿಲವಾಗಿದ್ದು [ಕೆಲಸ], ಕಣ್ಣನ್ನು ಆಯಾಸಗೊಳಿಸುತ್ತದೆ, ಆದ್ದರಿಂದ ಒಬ್ಬರು ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬಹುದು" ಎನ್ನುತ್ತಾರೆ ವಾಸಮಲ್ಲಿ ಅವರ ಅತ್ತಿಗೆ 54 ವರ್ಷದ ಸಿಮ್ಮವಾಣಿ ಪಿ. ಈ ಇದರಲ್ಲಿ ಪ್ರತಿಮಾಡಿದ ಯಾವುದೇ ವಿನ್ಯಾಸಗಳಿಲ್ಲ, ಮತ್ತು ಬಟ್ಟೆಯಲ್ಲಿನ ದಾರದ ಎಳೆ ಮತ್ತು ನೇಯ್ಗೆಯನ್ನು ಕಸೂತಿ ಮಾಡಲು ಗ್ರಿಡ್ (ಓರಣ ಬಲೆ) ಆಗಿ ಬಳಸಲಾಗುತ್ತದೆ. ಕೆಲವು ಹೊಲಿಗೆಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲಾಗುತ್ತದೆ, ಇತರೆ ಹೊಲಿಗೆಗಳು ವಿನ್ಯಾಸದ ಭಾಗವಾಗಿ ನೇತಾಡುವ ದಾರದ ಕುಣಿಕೆಗಳನ್ನು ಹೊಂದಿರುತ್ತವೆ. ತೋಡಾ ಕಸೂತಿಯ ತುಣುಕಿನಲ್ಲಿ ಯಾವುದೇ ಹಿಮ್ಮುಖವಿಲ್ಲ, ಎರಡೂ ಕಡೆಯ ಕೆಲಸವು ಅಚ್ಚುಕಟ್ಟಾಗಿದ್ದು, ಕುಶಲಕರ್ಮಿಗಳಿಗೆ ಬಹಳ ಹೆಮ್ಮೆಯ ವಿಷಯವಾಗಿದೆ.
“ಆರು ಮೀಟರ್ ಸೀರೆಯಲ್ಲಿ ಕಸೂತಿ ಮಾಡಲು ಕನಿಷ್ಠ ಆರು ವಾರಗಳು ಬೇಕಾಗುತ್ತದೆ. ಇದು ಕನಿಷ್ಠ 7000 ರೂ.ಗೆ ಮಾರಾಟವಾಗುತ್ತದೆ. ಅಸಲಿ ತುಣುಕನ್ನು 2,500-3,000 ರೂ.ಗೆ ಮಾರಲು ಆರ್ಥಿಕವಾಗಿ ಸಾಧ್ಯವಿಲ್ಲ. ಎಂದು ಶೀಲಾ ವಿವರಿಸುತ್ತಾರೆ
ದೊಡ್ಡ ಬ್ರ್ಯಾಂಡ್‌ಗಳ ವಿವರಣೆಗಳು ತಪ್ಪುದಾರಿಗೆಳೆಯುವುದು ಮಾತ್ರವಲ್ಲ, ಅವು ಉಲ್ಲಂಘನೆಯೂ ಆಗಿರಬಹುದು. ತೋಡಾ ಕಸೂತಿಯು 2013ರಲ್ಲಿ ಜಿಐ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಸಮುದಾಯದ ಅಥವಾ ನಿರ್ದಿಷ್ಟ ಆಹಾರಗಳ, ವ್ಯಾಪಾರಗಳ ಮತ್ತು ಕರಕುಶಲ ಉತ್ಪಾದಕರ ಪಾರಂಪರಿಕ ಜ್ಞಾನವನ್ನು ರಕ್ಷಿಸಲು ಸರ್ಕಾರವು ಜಿಐ ಅನ್ನು ನೀಡುತ್ತದೆ. ಇದು ಬೌದ್ಧಿಕ ಆಸ್ತಿಯ ಹಕ್ಕಿನಂತಿದೆ. ತೋಡಾ ಕಸೂತಿಗೆ ಜಿಐ ಸ್ಥಾನಮಾನ ಎಂದರೆ ನೀಲಗಿರಿ ಜಿಲ್ಲೆಯ ಹೊರಗೆ ಯಾವುದನ್ನು ರೂಪಿಸಿದರೂ, ಕೈಯಿಂದ ನಿರ್ವಹಿಸದ ಯಾವುದೇ ಉತ್ಪಾದನಾ ವಿಧಾನದಂತೆ, ಉಲ್ಲಂಘನೆಯೆನಿಸುತ್ತದೆ. ಪೊಂಪುಹಾರ್ (ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮ), ಕೀಸ್ಟೋನ್ ಫೌಂಡೇಶನ್ (ನೀಲಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ) ಮತ್ತು ಕೆಲವು ತೋಡಾ ಕುಶಲಕರ್ಮಿಗಳ ಸಂಸ್ಥೆ ಮತ್ತು ಕೂನೂರ್ ಮೂಲದ ತೋಡಾ ಅಲ್ಲದ ದಂತ ಚಿಕಿತ್ಸಕರ ನಿಕಾಯವೆನಿಸಿದ ತೋಡಾ ನಲವಾಜ್ವು ಸಂಗಮ್‌ಗಳು, ತೋಡಾ ಕಸೂತಿಯ ಜಿಐ ಸಂಯುಕ್ತ ಸ್ವಾಮಿತ್ವವನ್ನು ಹೊಂದಿವೆ.
ವಾಸಮಲ್ಲಿ ಹೀಗೆನ್ನುತ್ತಾರೆ: “ಜಿಐ ಹೊರತಾಗಿಯೂ, ನೀಲಗಿರಿಯ ಹೊರಗಿನ ದೊಡ್ಡ ಕಂಪನಿಗಳು ನಮ್ಮ ಕಸೂತಿಯನ್ನು ಯಂತ್ರಗಳನ್ನು ಬಳಸಿ ಅಥವಾ ಮುದ್ರಿಸಿ ನಕಲು ಮಾಡುತ್ತಿವೆಯಲ್ಲದೆ, ಅದನ್ನು ‘ತೋಡಾ ಕಸೂತಿ’ ಎಂದು ಕರೆಯುತ್ತಿವೆ. ಅವರು ಇದನ್ನು ಮಾಡಬಹುದೇ? ”
ಕೇವಲ ದೊಡ್ಡ ಕಂಪನಿಗಳಷ್ಟೇ ಅಲ್ಲದೆ, ಇತರ ಕುಶಲಕರ್ಮಿಗಳು ಸಹ ಉಲ್ಲಂಘಿಸುತ್ತಿದ್ದಾರೆ. ಜೈಪುರದಲ್ಲಿ ನಡೆದ ಕರಕುಶಲ ವಸ್ತುಪ್ರದರ್ಶನವೊಂದರಲ್ಲಿ, ವಾಸಮಲ್ಲಿ ಮತ್ತೊಂದು ಸ್ಟಾಲ್‌ನಲ್ಲಿ ಉಣ್ಣೆಯ ಶಾಲುಗಳ ಮೇಲೆ ತೋಡಾ ವಿನ್ಯಾಸಗಳನ್ನು ಕಂಡರು. "ಅವರು ಇದೇ ವಸ್ತುವನ್ನು ಅರ್ಧದಷ್ಟು ಬೆಲೆಗೆ ಮಾರಾಟ ಮಾಡುತ್ತಿರುವಾಗ ನಿಮ್ಮ ವಸ್ತುಗಳು ಏಕೆ ದುಬಾರಿಯಾಗಿವೆ? ಎಂಬುದಾಗಿ ಗ್ರಾಹಕರೊಬ್ಬರು ನನ್ನೊಂದಿಗೆ ಜಗಳವಾಡಲು ಬಂದರು ಎಂದರಾಕೆ. "ಅದರ [ಇತರ ಸ್ಟಾಲ್‌ನ ಐಟಂ] ಕಸೂತಿಯನ್ನು ಕೈಯಿಂದ ಹೆಣೆಯದೆ, ಮುದ್ರಿತ ರೂಪದಲ್ಲಿದ್ದ ಕಾರಣ, ಅದು ಹೆಚ್ಚು ಅಗ್ಗವಾಗಿದೆ."
ನೀಲಗಿರಿಯಲ್ಲಿ ತೋಡಾ ಸಮುದಾಯದ ಸುಮಾರು 125 ಸಣ್ಣ ಗ್ರಾಮಗಳಲ್ಲಿನ 538 ಮನೆಗಳಲ್ಲಿ ಇವರ ಜನಸಂಖ್ಯೆಯು ಕೇವಲ 2002 (ಜನಗಣತಿ 2011). ಜನಸಂಖ್ಯೆಯು ಅಲ್ಪ ಪ್ರಮಾಣದಲ್ಲಿರುವ ಕಾರಣ, ತೋಡರಲ್ಲದ ಸಮುದಾಯದವರು ಕಸೂತಿಯ ಕೌಶಲ್ಯವನ್ನು ಪಡೆದುಕೊಳ್ಳುವ ಭಯವೂ ಇವರಿಗಿದೆ. ಅವರ ಸ್ವಂತ ಅಂದಾಜಿನ ಪ್ರಕಾರ, ಈ ಸಮುದಾಯದ ಸುಮಾರು 300 ಮಹಿಳೆಯರು ಪೊಹೊರ್ ಅಭ್ಯಾಸ ಮಾಡುತ್ತಾರೆ. ಆದಾಗ್ಯೂ, ಕಿರಿಯ ಮಹಿಳೆಯರಲ್ಲಿ ಆಸಕ್ತಿಯು ಕ್ಷೀಣಿಸುತ್ತಿದ್ದು, ಈ ಕೌಶಲ್ಯದ ಭವಿಷ್ಯವನ್ನು ಅಪಾಯಕ್ಕೆ ತಳ್ಳಿದೆ.
ಕೂನೂರು ತಾಲೂಕಿನ ತೋಡಾ ಗ್ರಾಮ ನೆಡಿಮಂಡ್‌ನಲ್ಲಿ, 23 ವರ್ಷದ ಕುಶಲಕರ್ಮಿ ಎನ್. ಸತ್ಯಸಿನ್ ಅವರ ಸಂಕಟವು ತನ್ನಂತಹ ಇತರ ಕಠಿಣ ಪರಿಸ್ಥಿತಿಯನ್ನು ಸಹ ತಿಳಿಸುತ್ತದೆ: “ಇದರ ಕೆಲಸವು ಹೆಚ್ಚು. ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಚಹಾ ಎಸ್ಟೇಟ್‌ನಲ್ಲಿ ಕೂಲಿಯಾಗಿ ನಾನು ದಿನಕ್ಕೆ 300 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಪಡೆಯಬಹುದು. ಈ ಕೆಲಸಕ್ಕಾಗಿ ನಾನು ದಿನಕ್ಕೆ ಎರಡರಿಂದ ಆರು ಗಂಟೆಗಳನ್ನು ವ್ಯಯಿಸುತ್ತೇನೆ ಮತ್ತು ತಿಂಗಳ ಕೊನೆಯಲ್ಲಿ ಕೇವಲ 2,000 ರೂಪಾಯಿಗಳನ್ನು ಪಡೆಯುತ್ತೇನೆ.
ಸತ್ಯಸಿನ್, ತೋಡಾ ಸಮುದಾಯದವರಲ್ಲದ ಶೀಲಾ ಎಂಬಾಕೆಯು ನಡೆಸುತ್ತಿರುವ ಟೋಡಾ ಉತ್ಪನ್ನಗಳ ಮಳಿಗೆ ಶಾಲೋಮ್‌ನಲ್ಲಿ ಕೆಲಸ ಮಾಡುತ್ತಾರೆ. ತೋಡ ಸಮುದಾಯದವರಲ್ಲದ ಮಹಿಳೆಯರನ್ನು ನೇಮಿಸಿಕೊಂಡಿರುವ ಕಾರಣ, ಶಾಲೋಮ್ ಕೂಡ ಕೆಲವು ತೋಡಾಗಳಿಂದ ಟೀಕೆಗೊಳಗಾಗಿದೆ. "ಅವರು ಹೊಲಿಗೆ, ಮಣಿಗಳು ಮತ್ತು ಟಸೆಲ್‌ಗಳನ್ನು ಜೋಡಿಸುವಂತಹ ಪೂರಕ ಕೆಲಸವನ್ನು ಮಾಡುತ್ತಾರೆ, ಆದರೆ ಕಸೂತಿಯನ್ನಲ್ಲ," ಎಂದು ಅದನ್ನು ಅಲ್ಲಗಳೆಯುತ್ತಾರೆ, ಶೀಲಾ. "ಯಾರಾದರೂ ಅದರಲ್ಲಿ ತೊಡಗಿದ್ದೇ ಆದರೆ, ಕಸೂತಿಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಅದು ತುಂಬಾ ಕಡಿಮೆಯಿರುವುದರಿಂದ, ಇದೀಗ ಅದು ಅಮೂಲ್ಯ ವಸ್ತುವಾಗಿದೆ. ವರ್ಷಕ್ಕೆ ಕೇವಲ ಕೆಲವು ತುಣುಕುಗಳು. ಪ್ರತಿ ತುಣುಕು ಅನನ್ಯವಾದುದು. ಆದರೆ ಈ ಕೆಲಸವನ್ನು ಮಾಡಿಸುವುದು ಮತ್ತು ಅದನ್ನು ಮುಂದುವರಿಸುವುದು ದೊಡ್ಡ ಸವಾಲು.
ಮಳಿಗೆಯನ್ನು 2005ರಲ್ಲಿ ಪ್ರಾರಂಭಿಸಲಾಯಿತು. ಸೀರೆಗಳು, ಶಾಲುಗಳು, ಚೀಲಗಳು ಮತ್ತು ಲಿನೆನ್‌ನಂತಹ ಉತ್ಪನ್ನಗಳಾಗಿ ಪರಿವರ್ತನೆಗೊಳ್ಳುವ ತುಣುಕುಗಳಿಗೆ ಕಸೂತಿ ಹಾಕುವ 220 ತೋಡಾ ಮಹಿಳೆಯರು ದಸ್ತಾವೇಜಿನಲ್ಲಿದ್ದಾರೆ. ರೂ. 7,000ಕ್ಕೆ ಮಾರಲ್ಪಡುವ ಪ್ರತಿ ಸೀರೆಗೆ, ಸುಮಾರು 5,000 ರೂ.ಗಳು ಕುಶಲಕರ್ಮಿಗಳಿಗೆ ಸಲ್ಲುತ್ತದೆ. ಉಳಿದದ್ದು ಸರಕು ಮತ್ತು ಮಾರುಕಟ್ಟೆಗೆ ಬಳಸಲ್ಪಡುತ್ತದೆ ಎನ್ನುತ್ತಾರೆ ಶೀಲಾ. ಅನುಭವಿ ಕುಶಲಕರ್ಮಿಗಳಲ್ಲಿ ಹೆಚ್ಚಿನವರು ತಾವು ಮಾಡುವ ಕೆಲಸದ ಪ್ರಮಾಣವನ್ನು ಅವಲಂಬಿಸಿ ತಿಂಗಳಿಗೆ ಸರಾಸರಿ 4,000 ರೂ.ಗಳಿಂದ 16,000 ರೂ.ಗಳವರೆಗೆ ಸಂಪಾದಿಸುತ್ತಾರೆ. ಶಾಲೋಮ್ನ ವಹಿವಾಟು 2017-2018ರಲ್ಲಿ 35 ಲಕ್ಷ ರೂ.ಗಳು ಮತ್ತು ನೀಲಗಿರಿಯಲ್ಲಿ ಅನೇಕರು ಈ ಉತ್ಪನ್ನಗಳ ಮಾರುಕಟ್ಟೆಯು ಬೆಳೆಯಲು ಸಹಾಯಮಾಡಿದ ಶ್ರೇಯಸ್ಸನ್ನು ಇದಕ್ಕೆ ನೀಡಿದ್ದಾರೆ.
ವಾಸಮಲ್ಲಿ ಹೆಗಲು ಹಾರಿಸುತ್ತ, ಅನಿವಾರ್ಯತೆಯನ್ನು ಒಪ್ಪಿಕೊಂಡರು. “ತೋಡರಲ್ಲದವರು ಅದನ್ನು ಮಾಡಿದರೆ, ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಆದರೆ ಸಾಕಷ್ಟು ಜನರು ಅದನ್ನು ಮಾಡದಿದ್ದರೆ, ಸಂಪೂರ್ಣವಾಗಿ ಮರೆಯಾಗುತ್ತದೆ.
84 ಪ್ರತಿಶತದಷ್ಟು ಹೆಚ್ಚಿನ ಸಾಕ್ಷರತಾ ಪ್ರಮಾಣದೊಂದಿಗೆ, ತೋಡಾಗಳು ಈಗ ಬ್ಯಾಂಕ್‌ಗಳು ಮತ್ತು ಇತರ ಸೇವೆಗಳಲ್ಲಿ ಉದ್ಯೋಗಗಳನ್ನು ಪಡೆದಿದ್ದು, ಸಾಕಷ್ಟು ಸುಸ್ಥಿತಿಯಲ್ಲಿದ್ದಾರೆಂದು ಪರಿಗಣಿಸಲಾಗಿದೆ. ವಾಸಮಲ್ಲಿ ಕೂಡ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ, ಇವರು ತಮಿಳುನಾಡು ಬುಡಕಟ್ಟು ಕಲ್ಯಾಣ ಮಂಡಳಿಯ ಸದಸ್ಯರಷ್ಟೇ ಅಲ್ಲದೆ, ಸಾಹಿತ್ಯ ಅಕಾಡೆಮಿಯ ಪ್ರಕಾಶಿತ ಲೇಖಕರಾಗಿದ್ದಾರೆ.
“ಇದು ತೋಡಾ ಹೆಂಗಸರ ತಲೆನೋವು! ಯಾರು ಕಸೂತಿ ಮಾಡುತ್ತಾರೆ ಮತ್ತು ಯಾರು ನಕಲು ಮಾಡುತ್ತಾರೆ ಎಂದು ಪುರುಷರು ತಲೆಕೆಡಿಸಿಕೊಳ್ಳುವುದಿಲ್ಲ,” ಎನ್ನುತ್ತಾರೆ ಆಕೆ. “ನಮ್ಮ ಕೈಕಸೂತಿಯನ್ನು ಮಾರಾಟ ಮತ್ತು ವ್ಯಾಪಾರ ಮಾಡುವುದು ನಮ್ಮ ಸಂಸ್ಕೃತಿಯ ಪಾರಂಪರಿಕ ವಿಷಯವಲ್ಲ, ಆದ್ದರಿಂದ ಪುರುಷರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಹಿಳೆಯರಾದ ನಾವು ನಮ್ಮ ಸಾಂಸ್ಕೃತಿಕ ಹಕ್ಕನ್ನು ರಕ್ಷಿಸಬೇಕಲ್ಲದೆ, ಆರ್ಥಿಕ ನಷ್ಟವನ್ನು ಸಹ ಅನುಭವಿಸಬಾರದು.
ಈ ಸಮಸ್ಯೆಗಳನ್ನು ಪರಿಹರಿಸಲು ತೋಡಾ ಕುಶಲಕರ್ಮಿಗಳ ಯಾವುದೇ ಒಂದು ವ್ಯಾಪಕ ನಿಕಾಯವಿಲ್ಲದ ಕಾರಣ, ತೋಡಾ ಕಸೂತಿಯ ಸಮಸ್ಯೆಗೆ ಸಹಾಯವು ದೊರೆತಿರುವುದಿಲ್ಲ. "ನಾವು ಒಂದು ಸಮುದಾಯವಾಗಿ ಚದುರಿಹೋಗಿದ್ದೇವೆ. ಬಹು ನಿಕಾಯಗಳಿವೆಯಾದರೂ, ಅಲ್ಲಿ ಹೆಚ್ಚಿನ ರಾಜಕಾರಣವಿದೆ. ನಾನು ಅನೇಕ ಸಂಸ್ಥೆಗಳ ಸದಸ್ಯಳಾಗಿದ್ದಾಗ್ಯೂ ಎಲ್ಲರನ್ನು ಒಟ್ಟುಗೂಡಿಸಲು ಸಾಧ್ಯವಾಗುತ್ತಿಲ್ಲ. ನಮಗೆ ಸಹಾಯ ಬೇಕು” ಎನ್ನುತ್ತಾರೆ ವಾಸಮಲ್ಲಿ.
ಏತನ್ಮಧ್ಯೆ, ಬೌದ್ಧಿಕ ಆಸ್ತಿ ಹಕ್ಕುಗಳು, ಪೇಟೆಂಟ್‌ಗಳು ಮತ್ತು ಹಕ್ಕುಸ್ವಾಮ್ಯಗಳಲ್ಲಿ ಪರಿಣತಿ ಹೊಂದಿರುವ ಮತ್ತು ತೋಡಾ ಕಸೂತಿಯ ʼಜಿಐʼಗಾಗಿ ಕೀಸ್ಟೋನ್ ಫೌಂಡೇಶನ್‌ನಿಂದ ನಿಯೋಜಿಸಲ್ಪಟ್ಟ ಬೆಂಗಳೂರು ಮೂಲದ ವಕೀಲರಾದ ಜಹೇದಾ ಮುಲ್ಲಾ ಅವರಿಗೆ, ಇದು ಕಾನೂನಿನ ವಿಷಯವೆಂಬುದರಲ್ಲಿ ಸಂದೇಹವಿಲ್ಲ. "ಕೈಯಿಂದ ಹೆಣೆಯುವ ಕಸೂತಿ ಮಾತ್ರವೇ ತೋಡಾ ಕಸೂತಿಯ ವಿಧಾನವಾಗಿದೆ" ಎಂದು ಅವರು ಹೇಳುತ್ತಾರೆ. “ಈ ಕಸೂತಿಯನ್ನು ಯಂತ್ರದ ಮೂಲಕ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮಾಡಿದರೆ, ಅದನ್ನು ‘ತೋಡಾ ಕಸೂತಿ’ ಎಂದು ಕರೆಯುವುದು ಸರಿಯಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, 'ತೋಡಾ ಕಸೂತಿ' ಎಂದು ಮಾರಾಟವಾಗುವ ಯಂತ್ರದ ಕಸೂತಿ ಉತ್ಪನ್ನಗಳು ಉಲ್ಲಂಘನೆಯೆನಿಸುತ್ತವೆ. ನೋಂದಣಿ ಪ್ರಕ್ರಿಯೆಯ ಭಾಗವಾಗಿ, ಕೆಲವು ವಿಶಿಷ್ಟ ವಿನ್ಯಾಸಗಳನ್ನು ಸಹ ನೋಂದಾಯಿಸಲಾಗಿದೆ.
ಆದಾಗ್ಯೂ, "ಅಂತಿಮ ಗ್ರಾಹಕರಲ್ಲಿ ಜಾಗೃತಿಯನ್ನು ಉಂಟುಮಾಡಲು ಮತ್ತು ಪ್ರಚಾರಮಾಡಲು ನಿಮಗೆ ತಾಕತ್ತು ಬೇಕು. ಜಿಐ ಪ್ರಮಾಣಪತ್ರದಲ್ಲಿ 'ಅಧಿಕೃತ ಬಳಕೆದಾರರು' ಎಂದು ಕರೆಯಲ್ಪಡುವ, ನೈಜ ಉತ್ಪಾದಕರು ಹಾಗೂ ಜಿಐ ಅನ್ನು ಹೊಂದಿರುವವರು ನಕಲಿ ಮಾರಾಟದ ಪರಿಣಾಮಕ್ಕೀಡಾಗಿದ್ದಲ್ಲಿ ಉಲ್ಲಂಘನೆಯ ಮೊಕದ್ದಮೆಯನ್ನು [ಆ ನ್ಯಾಯವ್ಯಾಪ್ತಿಯ ಉಚ್ಚ ನ್ಯಾಯಾಲಯದಲ್ಲಿ] ಹೂಡುವ ಮೂಲಕ ಕಾನೂನು ಪರಿಹಾರವನ್ನು ಪಡೆಯಬೇಕು” ಎನ್ನುತ್ತಾರವರು.
ಈ ಕಥಾನಕದಲ್ಲಿ ಉಲ್ಲೇಖಿಸಲಾಗಿದ್ದು, ಉತ್ಪನ್ನಗಳನ್ನು ತೋಡಾ ಕಸೂತಿಯೆಂಬ ಹೆಸರಿನಿಂದ ಮಾರಾಟಮಾಡುತ್ತಿರುವ ಎರಡು ಬ್ರ್ಯಾಂಡ್‌ಗಳೆಂದರೆ, ರಿಲಯನ್ಸ್ ಟ್ರೆಂಡ್ಸ್‌ನ ಸಿಯಾಹಿ ಮತ್ತು Tjori.com. ವೆಬ್‌ಸೈಟ್‌ನಲ್ಲಿ ನೀಡಿರುವ ಉತ್ಪನ್ನ ಹಾಗೂ ಅದರ ವಿವರಣೆಯ ಬಗ್ಗೆ ಸ್ಪಷ್ಟತೆಯನ್ನು ಕೋರಿದ ಪುನರಾವರ್ತಿತ ಇಮೇಲ್‌ಗಳಿಗೆ ಟ್ಜೋರಿಯಿಂದ ಪ್ರತಿಕ್ರಿಯೆಯಿಲ್ಲ.
ಈ ವರದಿಗಾರರು ಕಳುಹಿಸಿದ ಇಮೇಲ್‌ಗೆ ಪ್ರತಿಕ್ರಿಯೆಯಾಗಿ, [email protected]ನಲ್ಲಿ ಹೀಗೆ ಬರೆಯಲಾಗಿದೆ: “ಸಿಯಾಹಿ ಸಾಂಪ್ರದಾಯಿಕ ಭಾರತೀಯ ಕರ ಕೌಶಲಗಳಿಂದ ಸ್ಫೂರ್ತಿ ಪಡೆಯುವ ಬ್ರ್ಯಾಂಡ್ ಆಗಿದೆ. ನಾವು ಕುಶಲಕರ್ಮಿಗಳು ಉತ್ಪಾದಿಸುವ ಮೂಲ ಉತ್ಪನ್ನಗಳನ್ನು ಮಾಡುವುದಿಲ್ಲ. ಕಸೂತಿಗಳೆಲ್ಲವನ್ನೂ ಯಂತ್ರದಿಂದ ಮಾಡಲಾಗುತ್ತದೆ. ಕಾರ್ಖಾನೆಗಳಲ್ಲಿ ಕಂಪ್ಯೂಟರ್ ಕಸೂತಿ ಯಂತ್ರಗಳಲ್ಲಿ ಕಸೂತಿಗಳನ್ನು ಮಾಡಲಾಗುತ್ತದೆ. ತೋಡಾ ಶಾಲುಗಳಿಂದ ಸ್ಫೂರ್ತಿಯನ್ನು ಪಡೆಯಲಾಗಿದೆ.”
ಆದರೆ ವಾಸಮಲ್ಲಿ ಅವರಿಗೆ ಸಮಾಧಾನವಿಲ್ಲ. "ನಮ್ಮ ವಿನ್ಯಾಸಗಳನ್ನು ನಕಲಿಸುವುದು ಮತ್ತು ನಮ್ಮ ಹೆಸರನ್ನು ಬಳಸುವುದು ಸರಿಯಲ್ಲ" ಎಂದು ಅವರು ಹೇಳುತ್ತಾರೆ.
ಅನುವಾದ: ಶೈಲಜಾ ಜಿ.ಪಿ