ಅಸ್ಸಾಮಿ ಖೋಲ್ ಡೋಲುಗಳು ಬಂಗಾಳಿ ಖೋಲ್ಗಿಂತ ಕಡಿಮೆ (ಬಾಸ್) ಸದ್ದು ಹೊಮ್ಮಿಸುತ್ತವೆ. ಈ ಡೋಲಿನ ಪಿಚ್ ನೆಗೆರಾಕ್ಕಿಂತ ಹೆಚ್ಚು. ಗಿರಿಪೋದ್ ಬಾದಯೋಕರ್ ಅವರಿಗೆ ಇದು ಚೆನ್ನಾಗಿ ಗೊತ್ತಿದೆ. ಇದು ತಾಳವಾದ್ಯಗಳ ತಯಾರಕರಾಗಿರುವ ಇವರು ತಮ್ಮ ದಿನನಿತ್ಯದ ಕೆಲಸದಲ್ಲಿ ಬಳಸುವ ಸಾಮಾನ್ಯ ಜ್ಞಾನವಾಗಿದೆ.
"ಹರೆಯದ ಹುಡುಗರು ನನಗೆ ಸ್ಮಾರ್ಟ್ಫೋನ್ಗಳನ್ನು ತೋರಿಸಿ, ಟ್ಯೂನಿಂಗನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊಂದಿಸಿಕೊಡಲು ಹೇಳುತ್ತಾರೆ. ನಮಗೆ ಯಾವುದೇ ಆಪ್ನ ಆಗತ್ಯವಿಲ್ಲ," ಎಂದು ಅಸ್ಸಾಂನ ಮಜುಲಿ ಮೂಲದ ನುರಿತ ಕುಶಲಕರ್ಮಿ ಗಿರಿಪೋದ್ ಹೇಳುತ್ತಾರೆ.
ಟ್ಯೂನರ್ ಆಪ್ಗಳಲ್ಲೂ ಕೂಡ ಈ ಪ್ರಕ್ರಿಯೆ ಒಂದು ರೀತಿಯ ಟ್ರಯಲ್ ಆಂಡ್ ಎರರ್ ಎಂದು ಗಿರಿಪೋದ್ ವಿವರಿಸುತ್ತಾರೆ. ಅದಕ್ಕಾಗಿಯೇ ತಾಳವಾದ್ಯದ ಚರ್ಮವನ್ನು ಸರಿಯಾಗಿ ಜೋಡಿಸಬೇಕು, ಬಿಗಿಗೊಳಿಸಬೇಕು. "ಆಗ ಮಾತ್ರ ಟ್ಯೂನರ್ ಆಪ್ ಕೆಲಸ ಮಾಡುತ್ತದೆ,” ಎಂದು ಅವರು ಹೇಳುತ್ತಾರೆ.
ಗಿರಿಪೋದ್ ಮತ್ತು ಅವರ ಮಗ ಪೊದುಮ್ ಬಾದ್ಯೋಕಾರರ (ಅಥವಾ ಬಾದ್ಯಕಾರ್) ಸುದೀರ್ಘ ಪರಂಪರೆಯಿಂದ ಬಂದವರು. ಸಂಗೀತ ವಾದ್ಯಗಳನ್ನು ತಯಾರಿಸುವುದರಲ್ಲಿ ಮತ್ತು ರಿಪೇರಿ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಸಮುದಾಯಕ್ಕೆ ಸೇರಿದ ಇವರನ್ನು ಧೂಲಿ ಅಥವಾ ಸಬ್ದಕಾರ್ ಎಂದೂ ಕರೆಯುತ್ತಾರೆ. ಈ ಸಮುದಾಯವನ್ನು ತ್ರಿಪುರಾದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿದೆ.
ಪೊದುಮ್ ಮತ್ತು ಗಿರಿಪೊದ್ ಮುಖ್ಯವಾಗಿ ಡೋಲ್, ಖೋಲ್ ಮತ್ತು ತಬಲಾವನ್ನು ತಯಾರಿಸುತ್ತಾರೆ. "ಸತ್ರಗಳು ಇಲ್ಲಿರುವುದರಿಂದ, ನಮಗೆ ವರ್ಷಪೂರ್ತಿ ಕೆಲಸ ಸಿಗುತ್ತದೆ. ನಮಗೆ ಬೇಕಾದಷ್ಟು ಸಿಗುವಂತೆ ಮಾಡಬಹುದು," ಎಂದು ಪೊದುಮ್ ಹೇಳುತ್ತಾರೆ.













