ಅಜಯ್ ಮಹತೋ ಮೊಣಕಾಲಿನವರೆಗೆ ಲುಂಗಿ ಸುತ್ತಿಕೊಂಡು 30 ಸೆಕೆಂಡುಗಳಲ್ಲಿ 40 ಅಡಿ ಎತ್ತರದ ತಾಳೆ ಮರದ ಅರ್ಧಭಾಗವನ್ನು ಕ್ರಮಿಸಬಲ್ಲರು.
ಇದನ್ನು ಅವರು ದಿನವೂ ಮಾಡುತ್ತಾರೆ – ಕೆಳಗೆ ನೋಡಿದರೆ ತಲೆ ತಿರುಗುವಷ್ಟು ಎತ್ತರದ ತಾಳೆ ಮರವನ್ನು ಹತ್ತಿ ಅದರ ಗರಿಗಳ ಬಳಿ ತಲುಪಿ ಅದರ ಹೊಂಬಾಳೆಯ ಮೊಗ್ಗಿನ ರಸವನ್ನು ಸಂಗ್ರಹಿಸುತ್ತಾರೆ.
ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ 27 ವರ್ಷದ ಅಜಯ್ ಮಹತೋ ಶೇಂದಿ ಇಳಿಸುವ ಕೆಲಸ ಮಾಡುತ್ತಾರೆ. ಮೇ ತಿಂಗಳ ಒಂದು ಬೆಳಗ್ಗೆ ನಾವು ಅವರ ಭೇಟಿಗೆಂದು ಹೋದಾಗ ಅವರು ಎಳೆ ಬಿಸಿಲಿನಲ್ಲಿ ಮರ ಹತ್ತುವ ತಯಾರಿಯಲ್ಲಿದ್ದರು. ತನ್ನ ಎರಡೂ ಕೈಗಳ ಮೇಲಿನ ಗುರುತುಗಳನ್ನು ತೋರಿಸುತ್ತಾ, “ಈಗ ಇವು ತಾಳೆ ಮರಗಳಷ್ಟೇ ಗಟ್ಟಿಯಾಗಿವೆ. ಕಾಂಟಾ ಭಿ ನಾಯಾ ಭೋಕೈಯ್ತಾಯ್. [ಇವು ಈಗ ತಾಳೆ ಮರದಂತೆ ಗಟ್ಟಿಯಾಗಿವೆ. ಮುಳ್ಳು ಕೂಡಾ ಚುಚ್ಚಲು ಸಾಧ್ಯವಿಲ್ಲ] ಎಂದರು.
“ಮರ ಹತ್ತುವಾಗ ಮರವನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು. ಮರವನ್ನು ಕೈ-ಕಾಲು ಎರಡರಿಂದಲೂ ಬಿಗಿದಪ್ಪಿಕೊಳ್ಳಬೇಕು.” ಎನ್ನುವ ಅಜಯ್, ಮರವನ್ನು ಬಿಗಿದು ಹಿಡಿದುಕೊಳ್ಳುವಾಗ ಬೆರಳುಗಳನ್ನು ಹೇಗೆ ಹೆಣೇದುಕೊಳ್ಳಬೇಕೆನ್ನುವುದನ್ನು ತೋರಿಸುತ್ತಾರೆ. ಈ ತೆಳು ಮತ್ತು ಒರಟಾದ ಸಿಬಿರುಗಳನ್ನು ಹೊಂದಿರುವ ಈ ಮರವನ್ನು ಹತ್ತಿ ಹತ್ತಿ ಅವರ ಕೈ-ಕಾಲು ಮತ್ತು ಎದೆಯ ಮೇಲೆ ಕಪ್ಪಗಿನ ಗುರುತುಗಳಾಗಿರುವುದನ್ನು ಅವರು ತೋರಿಸಿದರು.
“15 ಸಾಲ್ ಕೇ ರಹಿಯಾ ತಹಿಯೇ ಸೇ ಸ್ಟಾರ್ಟ್ ಕಾ ದೇಲಿಯಾಯಿ [[ನಾನು 15 ವರ್ಷದವನಿದ್ದಾಗ ತಾಳೆ ಮರಗಳನ್ನು ಹತ್ತಲು ಪ್ರಾರಂಭಿಸಿದೆ]" ಕಳೆದ ಹನ್ನೆರಡು ವರ್ಷಗಳಿಂದ ಈ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಹೇಳುತ್ತಾರೆ.
ರಸೂಲ್ಪುರ್ ಗ್ರಾಮದ ನಿವಾಸಿಯಾದ ಅಜಯ್, ಪಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಅಜಯ್ ಅವರ ಕುಟುಂಬವು ಕನಿಷ್ಠ ಮೂರು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಶೇಂದಿ ಇಳಿಸುವ ಕೆಲಸ ಮಾಡುತ್ತಿದೆ.
"ಆರಂಭದಲ್ಲಿ ನಾನು ಮರವನ್ನು ಅರ್ಧದಷ್ಟು ಹತ್ತಿ ನಂತರ ಕೆಳಗೆ ಬರುತ್ತಿದ್ದೆ" ಎಂದು ಅವರು ಹೇಳುತ್ತಾರೆ, ಅವರು ಚಿಕ್ಕವರಾಗಿದ್ದಾಗ, ಅವರ ತಂದೆ ಈ ಕೌಶಲವನ್ನು ಕಲಿಯಲು ಪ್ರೋತ್ಸಾಹಿಸುತ್ತಿದ್ದರು. "ಆಗ ನಾನು ತಾಳೆಮರಗಳ ಮೇಲಿನಿಂದ ಕೆಳಗೆ ನೋಡಿದಾಗ, ಜೀವ ಬಂದಂತಾಗಿತ್ತು."
ಮರವನ್ನು ಹತ್ತುವಾಗ ಮತ್ತು ಇಳಿಯುವಾಗ ಮರದ ಕಾಂಡಕ್ಕೆ ದೇಹ ಉಜ್ಜಿ ದೇಹದ ಮೇಲೆ ಆದ ಗಾಯಗಳ ಬಗ್ಗೆ ಅಜಯ್ ಹೇಳುತ್ತಾರೆ, “ನಾನು ಮೊದಲ ಬಾರಿಗೆ ತಾಳೆ ಮರವನ್ನು ಏರಿದಾಗ, ನನ್ನ ಎದೆ, ಕೈ ಮತ್ತು ಕಾಲುಗಳಲ್ಲಿ ರಕ್ತ ಬಂದಿತ್ತು. ಕ್ರಮೇಣ ಈ ಭಾಗಗಳ ಚರ್ಮವು ಗಟ್ಟಿಯಾಯಿತು."
ಮಧ್ಯಾಹ್ನದ ಬಿಸಿಲಿನಿಂದ ಪಾರಾಗಲು, ಅಜಯ್ ಬೆಳಿಗ್ಗೆ ಸರಾಸರಿ ಐದು ತಾಳೆ ಮರಗಳನ್ನು ಮತ್ತು ಸಂಜೆ ಐದು ತಾಳೆ ಮರಗಳನ್ನು ಹತ್ತಿ ಮಧ್ಯಾಹ್ನದ ಸುಮಾರಿಗೆ ವಿಶ್ರಾಂತಿ ಪಡೆಯುತ್ತಾರೆ. ಅವರು ರಸೂಲ್ಪುರದಲ್ಲಿ 10 ಮರಗಳನ್ನು ಗುತ್ತಿಗೆಗೆ ಪಡೆದಿದ್ದಾರೆ ಮತ್ತು ಪ್ರತಿ ಮರಕ್ಕೆ ವಾರ್ಷಿಕವಾಗಿ 500 ರೂ.ಗಳನ್ನು ಭೂಮಾಲೀಕರಿಗೆ ಪಾವತಿಸುತ್ತಾರೆ, ಅಥವಾ ಅದೇ ಬೆಲೆಗೆ ಸಮಾನವಾದ ತಾಳೆ ರಸವನ್ನು ಕೊಡುತ್ತಾರೆ.
“ಬೈಸಾಖ್ (ಎಪ್ರಿಲ್-ಜೂನ್) ಮೇ ಎಗೊ ತಾಡ್ ಸೇ 10 ಬಾಟಲ್ ತಾಡಿ ನಿಕ್ಲೇಚಾಯ್. ಓಕ್ರಾ ಬಾದ್ ಕಮ್ ಹೊಯಿ ಲಗಾಯಿ ಛಾಯಿ. [ಬೈಸಾಖ್ ಸಮಯದಲ್ಲಿ ಒಂದು ಮರದಿಂದ 10 ಬಾಟಲ್ ಶೇಂದಿ ಸಿಗುತ್ತದೆ. ಸೀಜನ್ ಮುಗಿಯುತ್ತಿದ್ದಂತೆ ಇಳುವರಿ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ.” ಎನ್ನುತ್ತಾರೆ ಅಜಯ್.
ಸಾಮಾನ್ಯವಾಗಿ ಈ ರಸವನ್ನು ಬೆಲ್ಲ ತಯಾರಿಸಲು ಅಥವಾ ತಾಡಿ (ಶೇಂದಿ) ಎನ್ನುವ ಮತ್ತು ಬರಿಸುವ ಪಾನೀಯವಾಗಿ ತಯಾರಿಸಲಾಗುತ್ತದೆ. “ನಾವು ಇಳಿಸಿದ ನೀರಾವನ್ನು ಪೈಕರ್ [ಸಗಟು ವ್ಯಾಪಾರಿ] ಗೆ ಕೊಡುತ್ತೇವೆ. ಅವರು ಒಂದು ಬಾಟಲಿಗೆ ಹತ್ತು ರೂಪಾಯಿಯಂತೆ ಖರೀದಿಸುತ್ತಾರೆ. ಎಂದು ಅಜಯ್ ಹೇಳುತ್ತಾರೆ. ಪ್ರತಿ ಬಾಟಲಿಯಲ್ಲಿ ಸುಮಾರು 750 ಮಿಲಿ ನೀರಾ ಇರುತ್ತದೆ. ಬೈಸಾಖಿಯಲ್ಲಿ ಅಜಯ್ ದಿನವೊಂದಕ್ಕೆ 1,000 ರೂ.ಗಳವರೆಗೆ ಸಂಪಾದಿಸಬಹುದು, ಆದರೆ ಮುಂದಿನ ಒಂಬತ್ತು ತಿಂಗಳಲ್ಲಿ ಅವರ ಗಳಿಕೆಯು ಗಣನೀಯವಾಗಿ ಕುಸಿಯುತ್ತದೆ - ಸುಮಾರು 60 ರಿಂದ 70 ಪ್ರತಿಶತದಷ್ಟು.
ಅಜಯ್ ಬೆಳಿಗ್ಗೆ ಐದು ಮತ್ತು ಸಂಜೆ ಐದು ತಾಳೆ ಮರಗಳನ್ನು ಏರುತ್ತಾರೆ, ನಡು ಹಗಲಿನಲ್ಲಿ ಬಿಸಿಲಿನ ಕಾರಣ ವಿಶ್ರಾಂತಿ ಪಡೆಯುತ್ತಾರೆ
ಇಳುವರಿ ಕಡಿಮೆಯಿರುವ ಸಮಯದಲ್ಲಿ ಅಜಯ್ ತಾವು ಇಳಿಸಿದ ನೀರಾವನ್ನು ಮನೆಯ ಬಳಿಯಲ್ಲೇ ಒಂದು ಬಾಟಲಿಗೆ 20 ರೂಪಾಯಿಗಳಂತೆ ನೇರವಾಗಿ ಮಾರುತ್ತಾರೆ. ಇದರಿಂದ ಬರುವ ಆದಾಯದಿಂದಲೇ ಅವರ ಪತ್ನಿ ಮತ್ತು ಮೂರು ಮಕ್ಕಳ ಕುಟುಂಬದ ಯೋಗಕ್ಷೇಮವನ್ನು ಅವರು ನೋಡಿಕೊಳ್ಳಬೇಕು.
ಸಮಸ್ತಿಪುರವು ಭಾರತದ ಹೆಚ್ಚು ಪುರುಷ ವಲಸೆಯನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಆದರೆ ಇಲ್ಲಿನ ಜನರ ಪ್ರವೃತ್ತಿಯಂತೆ ವಲಸೆ ಹೋಗದೆ, ಅಜಯ್ ತಾನು ಊರಿನಲ್ಲೇ ಉಳಿದುಕೊಂಡು ಈ ಶ್ರಮದಾಯಕ ಕೆಲಸವನ್ನು ಮಾಡುತ್ತಿದ್ದಾರೆ.
*****
ಮರವನ್ನು ಏರುವ ಮೊದಲು ಅಜಯ್ ಸೊಂಟಕ್ಕೆ ದರ್ಬಾಸ್ ಎಂದು ಕರೆಯಲಾಗುವ ನೈಲಾನ್ ಬೆಲ್ಟನ್ನು ಕಟ್ಟಿಕೊಳ್ಳುತ್ತಾರೆ. ನಂತರ ಅಕುರಾ ಎನ್ನುವ ಹೆಸರಿರುವ ಕಬ್ಬಿಣ ಕೊಕ್ಕೆಯೊಂದನ್ನು ಅದಕ್ಕೆ ಸಿಕ್ಕಿಸುತ್ತಾರೆ. ಅದರ ಜೊತೆಗೆ ಹನ್ಸುವಾ (ಕುಡುಗೋಲು) ಮತ್ತು ಪ್ಲಾಸ್ಟಿಕ್ ಜಾರ್ ಒಂದನ್ನು ಸೊಂಟಕ್ಕೆ ನೇತು ಹಾಕಿಕೊಳ್ಳುತ್ತಾರೆ. “ದರ್ಬಾಸನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಕಾದ್ದು ಬಹಳ ಮುಖ್ಯ. ಏಕೆಂದರೆ ಹತ್ತು ಲೀಟರ್ ನೀರಾ ಅದಕ್ಕೆ ನೇತು ಹಾಕಿದರೂ ಅದು ಬಿಚ್ಚಿಕೊಳ್ಳುವಂತಿರಬಾರದು” ಎಂದು ಅಜಯ್ ವಿವರಿಸುತ್ತಾರೆ.
ಅವರು ಕನಿಷ್ಠ 40 ಅಡಿ ಎತ್ತರದ ತಾಳೆ ಮರವನ್ನು ಏರುತ್ತಾರೆ ಮತ್ತು ಮರದ ಜಾರುವ ಮೇಲ್ಭಾಗವನ್ನು ತಲುಪುತ್ತಿದ್ದಂತೆ, ಅವರು ಪಕಾಸಿಯಿಂದ ತನ್ನ ಹಿಡಿತವನ್ನು ಬಿಗಿಗೊಳಿಸುವುದನ್ನು ನಾನು ನೋಡಿದೆ. ಇದು ಚರ್ಮ ಅಥವಾ ರೆಕ್ಸಿನ್ ಪಟ್ಟಿಯಾಗಿದ್ದು, ಇದು ಅವರ ಪಾದಗಳ ನಡುವೆ ಇರುತ್ತದೆ.
ಹಿಂದಿನ ಸಂಜೆ ಗೊನೆಯೊಂದನ್ನು ಕಡಿದು ಅದಕ್ಕೆ ಲಬಾನಿ (ಮಡಕೆ) ಕಟ್ಟಿಟ್ಟಿದ್ದರು ಅಜಯ್. ಒಂದು ಲಬಾನಿಯನ್ನು ಕಟ್ಟಿದ ಹನ್ನೆರಡು ಗಂಟೆಗಳ ನಂತರ ಮತ್ತೆ ಮರ ಹತ್ತಿ ಅದರಲ್ಲಿ ಸಂಗ್ರಹವಾಗಿರುವ ಸುಮಾರು ಐದು ಲೀಟರುಗಳಷ್ಟು ನೀರಾವನ್ನು ತಮ್ಮ ಪಾತ್ರಗೆ ಸುರಿದುಕೊಳ್ಳುತ್ತಾರೆ. ಸಂಗ್ರಹವಾಗಿರುವ ರಸವನ್ನು ಕುಡಿಯಲು ಬರಬಹುದಾದ ಕಣಜ, ಜೇನು ಮತ್ತು ಇರುವೆಗಳನ್ನು ದೂರವಿರಿಸುವ ಸಲುವಾಗಿ ಮಡಕೆಯ ಬುಡಕ್ಕೆ ಕೀಟ ನಾಶಕ ಸವರುವುದಾಗಿ ಅಜಯ್ ನಂತರ ತಿಳಿಸಿದರು.
ಎತ್ತರದ ಮರದ ಗರಿಗಳ ಮೇಲೆ ಕುಳಿತು ಅಜಯ್ ಗೊನೆಯನ್ನು ಕುಡುಗೋಲು ಬಳಸಿ ಕತ್ತರಿಸುತ್ತಾರೆ. ನಂತರ ಅದಕ್ಕೆ ಲಬಾನಿ ಕಟ್ಟಿ ಕೆಳಗಿಳಿಯುತ್ತಾರೆ. ಈ ಪೂರ್ಣ ಪ್ರಕ್ರಿಯೆ ಹತ್ತು ನಿಮಿಷಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.
ಮರದಿಂದ ಇಳಿಸಿದ ನೀರಾ ಹೊತ್ತು ಕಳೆಯುತ್ತಿದ್ದಂತೆ ಗಟ್ಟಿಯಾಗುತ್ತಾ ಹುಳಿಯಾಗತೊಡಗುತ್ತದೆ ಎಂದು ಎಚ್ಚರಿಸಿದ ಅಜಯ್ “ತಾಡ್ ಕೇ ತಾಡಿ ಕೋ ಪೇಡ್ ಕೇ ಪಾಸ್ ಹೀ ಪೀ ಜಾನಾ ಚಾಹಿಯೇ, ತಬ್ ಹೀ ಫಾಯ್ದಾ ಹೋತಾ ಹೇ. [ನೀರಾವನ್ನು ಮರದಿಂದ ಇಳಿಸಿದ ತಕ್ಷಣವೇ ಕುಡಿಯಬೇಕು. ಆಗಲೇ ಅದರ ಪ್ರಯೋಜನ ದೊರೆಯುವುದು.” ಎಂದರು.
ಶೇಂದಿ ಇಳಿಸುವ ಕೆಲಸವು ಅಪಾಯಕಾರಿ ಜೀವನೋಪಾಯವಾಗಿದ್ದು, ಮರ ಹತ್ತುವಾಗ ಚೂರು ಸಮತೋಲನ ತಪ್ಪಿದರೂ ಸಾಯುವ ಅಥವಾ ಶಾಶ್ವತ ಅಂಗ ವೈಕಲ್ಯಕ್ಕೆ ಈಡಾಗುವ ಸಾಧ್ಯತೆಯಿರುತ್ತದೆ.
ಮಾರ್ಚ್ ತಿಂಗಳಿನಲ್ಲಿ ಅಜಯ್ ಗಾಯಗೊಂಡಿದ್ದರು. "ನನ್ನ ಕೈಗೆ ಮರ ತರಚಿದ್ದರಿಂದಾಗಿ ಬಿದ್ದಿದ್ದೆ. ಕೈಗೆ ಏಟಾಗಿತ್ತು." ನಂತರ ಸುಮಾರು ಒಂದು ತಿಂಗಳ ಕಾಲ ಮರ ಹತ್ತುವುದನ್ನು ನಿಲ್ಲಿಸಬೇಕಾಯಿತು. ಈ ವರ್ಷದ ಆರಂಭದಲ್ಲಿ, ಅಜಯ್ ಅವರ ಸೋದರಸಂಬಂಧಿಯೊಬ್ಬರು, ಶೇಂದಿ ಇಳಿಸುವಾಗ ಮರದಿಂದ ಬಿದ್ದು ಸೊಂಟ ಮತ್ತು ಕಾಲುಗಳನ್ನು ಮುರಿದುಕೊಂಡಿದ್ದರು.
ಅಜಯ್ ಇನ್ನೊಂದು ಕೈಯನ್ನು ಎತ್ತಿ ಕೆಲವು ತಾಳೆ ಕಾಯಿಗಳನ್ನು ಕೆಳಗೆ ಎಸೆದರು. ಹಣ್ಣಿನ ಗಟ್ಟಿಯಾದ ಹೊರ ಚರ್ಮವನ್ನು ಕುಡಗೋಲಿನಿಂದ ಕೆತ್ತಿ ಒಳಗಿನ ತಿರುಳನ್ನು (ತಾಟಿನಿಂಗು) ನನಗೆ ನೀಡಿದರು.
"ಲೀಜಿಯೇ, ತಾಜಾ-ತಾಜಾ ಫಲ್ ಖಾಯಿಯೇ. ಶಹರ್ ಮೇ 15 ರುಪಾಯಿ ಮೇನ್ ಏಕ್ ಆಂಖ್ ಮಿಲ್ತಾ ಹೋಗಾ [ತೆಗೆದುಕೊಳ್ಳಿ, ಒಂದಷ್ಟು ತಾಜಾ ಹಣ್ಣುಗಳನ್ನು ತಿನ್ನಿ. ನಗರಗಳಲ್ಲಿ, ಒಂದು ತೊಳೆಗೆ 15 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತದೆ", ಎಂದು ಅವರು ನಗುತ್ತಾ ಹೇಳುತ್ತಾರೆ.
ಅಜಯ್ ನಗರದಲ್ಲಿ ಕೂಡ ಸ್ವಲ್ಪ ಸಮಯ ಕಳೆದಿದ್ದಾರೆ, ಮತ್ತು ಅವರ ಪ್ರಕಾರ, ಅಲ್ಲಿನ ಅನುಭವ ಕೆಟ್ಟದಾಗಿತ್ತು. ಕೆಲವು ವರ್ಷಗಳ ಹಿಂದೆ, ಅವರು ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ದೆಹಲಿ ಮತ್ತು ಸೂರತ್ ನಗರಗಳಿಗೆ ಹೋಗಿದ್ದರು. ಅಲ್ಲಿ ಅವರು ದಿನಕ್ಕೆ 200-250 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. "ನನಗೆ ಅಲ್ಲಿ ಕೆಲಸ ಮಾಡಬೇಕು ಅನಿಸಲಿಲ್ಲ. ಆದಾಯವೂ ಕಡಿಮೆಯಿತ್ತು."
ಈಗ ಶೇಂದಿ ಇಳಿಸುವ ಮೂಲಕ ಗಳಿಸುತ್ತಿರುವ ಸಂಪಾದನೆಯಿಂದ ತನಗೆ ತೃಪ್ತಿಯಿದೆ ಎನ್ನುತ್ತಾರೆ ಅವರು.
ಈ ವೃತ್ತಿಯಲ್ಲಿ ಪೊಲೀಸ್ ದಾಳಿಗಳು ಸಹ ಸ್ವಾಭಾವಿಕ. ಬಿಹಾರ ನಿಷೇಧ ಮತ್ತು ಅಬಕಾರಿ ಕಾಯ್ದೆ, 2016ರ ಪ್ರಕಾರ, ಫೋಮಿಂಗ್ ಶೇಂದಿ ಸೇರಿದಂತೆ ಯಾವುದೇ ರೀತಿಯ ಮದ್ಯ ಅಥವಾ ಮಾದಕವಸ್ತುವನ್ನು "ತಯಾರಿಸಲು, ಬಾಟಲಿಯಲ್ಲಿ, ವಿತರಿಸಲು, ಸಾಗಿಸಲು, ಸಂಗ್ರಹಿಸಲು, ಹೊಂದಲು, ಖರೀದಿಸಲು, ಮಾರಾಟ ಮಾಡಲು ಅಥವಾ ಬಳಸಲು" ಅನುಮತಿಯಿಲ್ಲ. ಈವರೆಗೆ ಪೊಲೀಸರು ರಸೂಲ್ಪುರದಲ್ಲಿ ದಾಳಿ ನಡೆಸಿಲ್ಲ. ಆದಾಗ್ಯೂ, ಅಜಯ್ ಹೇಳುತ್ತಾರೆ, "ಅವರು ಇನ್ನೂ ಬಂದಿಲ್ಲ ಎಂದ ಮಾತ್ರಕ್ಕೆ ಅವರು ಮುಂದೆ ಬರುವುದಿಲ್ಲ ಎಂದು ಅರ್ಥವಲ್ಲ."
ಅವರಿಗೆ ಹೆದರಿಕೆಯಿರುವುದು ಪೊಲೀಸರು ಅನೇಕರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳ ಕುರಿತು. “ಅವರು ಯಾವಾಗ ಬೇಕಿದ್ದರೂ ಬರಬಹುದು.”
ಅಂತಹ ಅಪಾಯಗಳನ್ನು ಎದುರಿಸಲು ಅವರು ಸಿದ್ಧವಿದ್ದಾರೆ. "ಇಲ್ಲಿ ರಸೂಲ್ಪುರದಲ್ಲಿ, ನಾನು ನನ್ನ ಕುಟುಂಬದೊಂದಿಗೆ ಬದುಕಬೇಕಾಗಿದೆ" ಎಂದು ಅವರು ಅಂಗೈಯಲ್ಲಿ ಖೈನಿ (ತಂಬಾಕು) ಉಜ್ಜುತ್ತಾ ಹೇಳುತ್ತಾರೆ.
ಅಜಯ್ ಬಿದಿರಿನ ಕೋಲಿನ ಮೇಲೆ ಮರಳನ್ನು ಹಾಕಿ ತನ್ನ ಕುಡಗೋಲನ್ನು ತಿಕ್ಕುವ ಮೂಲಕ ಅದನ್ನು ಹರಿತಗೊಳಿಸಿದರು. ತನ್ನ ಉಪಕರಣಗಳನ್ನು ಸಿದ್ಧಪಡಿಸಿಕೊಂಡ ಅವರು ಇನ್ನೊಂದು ತಾಳೆ ಮರದತ್ತ ಹೆಜ್ಜೆ ಹಾಕತೊಡಗಿದರು.
ಈ ವರದಿಗೆ ರಾಜ್ಯದ ಅಂಚಿನಲ್ಲಿರುವ ಜನರ ಹೋರಾಟಗಳನ್ನು ಮುನ್ನಡೆಸಿದ ಬಿಹಾರದ ಟ್ರೇಡ್ ಯೂನಿಯನ್ ಹೋರಾಟಗಾರರ ಸ್ಮರಣಾರ್ಥ ಫೆಲೋಶಿಪ್ ಸಹಾಯ ಪಡೆಯಲಾಗಿರುತ್ತದೆ .
ಅನುವಾದ: ಶಂಕರ. ಎನ್. ಕೆಂಚನೂರು