"ಇಂದು ಬಾಬಾ ನನ್ನ ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.." ಪ್ರಿಯಾಂಕಾ ಮೊಂಡಲ್ ಇಳಿದನಿಯಲ್ಲಿ ಹೇಳಿದರು. ಪ್ರಕಾಶಮಾನವಾದ ಕೆಂಪು ಮತ್ತು ಚಿನ್ನದ ಬಣ್ಣದ ಉಡುಪನ್ನು ಧರಿಸಿ, ತೊಡೆಯ ಮೇಲೆ ಹೂವಿನ ಹೂಗೊಂಚಲು ಇರಿಸಿಕೊಂಡು, ನೀಲಿ-ಗುಲಾಬಿ ಬಣ್ಣದ ಪಲ್ಲಕ್ಕಿಯ ಮೇಲೆ ಕುಳಿತು ತನ್ನ ಮಾವನ ಮನೆಗೆ ಹೋಗಲು ತಯಾರಾಗಿದ್ದ ಪ್ರಿಯಾಂಕಾ ತನ್ನ ತಂದೆಯ ನೆನಪಿನಲ್ಲಿ ಬೇಯುತ್ತಿದ್ದರು.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಈ ಹಳ್ಳಿಯ ನಿವಾಸಿಯಾದ ಪ್ರಿಯಾಂಕಾ (23) 2020ರ ಡಿಸೆಂಬರ್ 6ರಂದು 26 ವರ್ಷದ ಹಿರಣ್ಮಯ್ ಮೊಂಡಲ್ ಅವರನ್ನು ವಿವಾಹವಾದರು. ಹಿರಣ್ಮಯ್ ಅವರ ನೆರೆ ಮನೆಯವರಾಗಿದ್ದು ಕೊಲ್ಕತ್ತಾದ ಬಟ್ಟೆಯಂಗಡಿಯೊಂದರಲ್ಲಿ ಫ್ಲೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಅವರು 2019ರಲ್ಲಿ ಮದುವೆಯಾಗಲು ನಿರ್ಧರಿಸಿದರು.
ಆದರೆ 2019ರ ಜುಲೈ 29ರಂದು ಹುಲಿ ದಾಳಿಯಲ್ಲಿ ಪ್ರಿಯಾಂಕಾ ಅವರ ತಂದೆ ಅರ್ಜುನ್ ಮೊಂಡಲ್ (45) ನಿಧನರಾದ ನಂತರ, ಪ್ರೇಮಿಗಳು ಲಹಿರಿಪುರ ಗ್ರಾಮ ಪಂಚಾಯತ್ನ ಹಳ್ಳಿಯಲ್ಲಿ ನಡೆಯಬೇಕಿದ್ದ ತಮ್ಮ ಮದುವೆಯನ್ನು ಮುಂದೂಡಿದರು. ಅರ್ಜುನ್, ವೃತ್ತಿಯಲ್ಲಿ ಮೀನುಗಾರನಾಗಿದ್ದು, ಏಡಿಗಳನ್ನು ಹಿಡಿಯಲು ನಿಯಮಿತವಾಗಿ ಅತ್ಯಂತ ಮುಖ್ಯ ಪ್ರದೇಶವಾದ ಪಿರ್ಖಾಲಿ ಗಾಜಿ ಅರಣ್ಯದಲ್ಲಿರುವ ಸುಂದರ್ಬನ್ಸ್ ಹುಲಿ ಸಂರಕ್ಷಣಾ ಯೋಜನೆ ಪ್ರದೇಶಕ್ಕೆ ಹೋಗುತ್ತಿದ್ದರು. ಅಲ್ಲಿ ಹುಲಿಗೆ ಬಲಿಯಾದ ಅವರ ದೇಹದ ಅವಶೇಷಗಳು ಇಂದಿಗೂ ಪತ್ತೆಯಾಗಿಲ್ಲ.
ಅರ್ಜುನ್, ಏಡಿ ಹಿಡಿಯಲು ಕಾಡಿಗೆ ಹೋದಾಗಲೆಲ್ಲಾ, ಅವರು ಸುರಕ್ಷಿತವಾಗಿ ಮನೆಗೆ ಮರಳುವವರೆಗೂ ಮನೆಯಲ್ಲಿ ಎಲ್ಲರೂ ಭಯಭೀತರಾಗಿರುತ್ತಿದ್ದರು. ಜುಲೈ 2019ರಲ್ಲಿ ಅರ್ಜುನ್ ಏಡಿ ಹಿಡಿಯಲು ಹೋದಾಗ, ತನ್ನ ಮಗಳ ಮದುವೆಯ ಯೋಚನೆಯಲ್ಲಿದ್ದರು. ಆದರೆ ಅದೇ ಅವರ ಕೊನೆಯ ಏಡಿ ಬೇಟೆಯಾಯಿತು.
"ಪ್ರಿಯಾಂಕಾಳ ಮದುವೆ ಖರ್ಚಿಗಾಗಿ ನಮಗೆ ಹಣ ಬೇಕಿತ್ತು, ಹೀಗಾಗಿ ಅವರಿಗೆ ಕಾಡಿಗೆ ಹೋಗದೆ ಬೇರೆ ದಾರಿಯಿರಲಿಲ್ಲ, ಆದರೆ ಏನೋ ಕೆಟ್ಟದ್ದು ಸಂಭವಿಸಲಿದೆಯೆನ್ನುವ ಸಂಶಯ ಅವರ ಮನಸಿನಲ್ಲಿ ಸುಳಿದಾಡುತ್ತಿತ್ತು" ಎಂದು ಅವರ ಪತ್ನಿ ಪುಷ್ಪಾ ಹೇಳಿದರು.

























