2022ರ ಅಕ್ಟೋಬರ್ ತಿಂಗಳ ಒಂದು ಸಂಜೆ, ಬಳ್ಳಾರಿಯ ವಡ್ಡು ಗ್ರಾಮದ ಸಮುದಾಯ ಕೇಂದ್ರದ ಜಗುಲಿಯಲ್ಲಿ ಹಿರಿಯ ಮಹಿಳೆಯೊಬ್ಬರು ತನ್ನ ಬಡಕಲು ಬೆನ್ನನ್ನು ಕಂಬಕ್ಕೆ ಒರಗಿಸಿ ಕಾಲು ಚಾಚಿ ವಿಶ್ರಾಂತಿ ಪಡೆಯುತ್ತಿದ್ದರು. ಅವರು ಆ ದಿನ ಸಂಡೂರು ತಾಲ್ಲೂಕಿನ ಗುಡ್ಡಗಾಡು ರಸ್ತೆಗಳಲ್ಲಿ 28 ಕಿಲೋಮೀಟರ್ ನಡೆದು ದಣಿದಿದ್ದರು. ಅಲ್ಲದೆ ಅವರು ಮರುದಿನ ಇನ್ನೂ 42 ಕಿಲೋಮೀಟರ್ ದೂರ ನಡೆಯುವುದಿತ್ತು.
ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘ (ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘ) ಆಯೋಜಿಸಿರುವ ಎರಡು ದಿನಗಳ ಪಾದಯಾತ್ರೆಯಲ್ಲಿ ಸಂಡೂರಿನ ಸುಶೀಲಾನಗರ ಗ್ರಾಮದ ಗಣಿ ಕಾರ್ಮಿಕರಾದ ಹನುಮಕ್ಕ ರಂಗಣ್ಣ ಕೂಡಾ ಭಾಗವಹಿಸಿದ್ದಾರೆ. ಉತ್ತರ ಕರ್ನಾಟಕದ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಈ ಪ್ರತಿಭಟನಾಕಾರರು 70 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಇದು ಹದಿನಾರನೇ ಬಾರಿಗೆ ಅವರು ಇತರ ಗಣಿ ಕಾರ್ಮಿಕರೊಂದಿಗೆ ಈ ರೀತಿ ಬೀದಿಗಿಳಿದಿರುವುದು. ಸಾಕಷ್ಟು ಪರಿಹಾರ ಮತ್ತು ಪರ್ಯಾಯ ಜೀವನೋಪಾಯ ಒದಗಿಸಬೇಕೆನ್ನುವುದು ಅವರ ಬೇಡಿಕೆ.
1990ರ ದಶಕದ ಉತ್ತರಾರ್ಧದಲ್ಲಿ ಕೆಲಸದಿಂದ ಹೊರಹಾಕಲ್ಪಟ್ಟ ಬಳ್ಳಾರಿಯ ನೂರಾರು ಮಹಿಳಾ ಕೂಲಿಕಾರ್ಮಿಕರಲ್ಲಿ ಇವರೂ ಒಬ್ಬರು. "ಈಗ ನಂಗೆ 65 ವರ್ಷ ಆಗಿದೆ ಅನ್ಕೊ… ಮಷಿನರಿಗಳು ಬಂದ್ಬಿಟ್ಟೋ. ಆವಾಗ ನಾವು ಕೆಲಸ ಬಿಟ್ವಿ… ಈಗ ನಾವು ಕೆಲಸ ಬಿಟ್ಟು ಹತ್ತು ಹದಿನೈದು ವರ್ಷ ಆಗಿರಬಹುದು ನೋಡು…" ಎಂದು ಅವರು ಹೇಳುತ್ತಾರೆ. " ಇದೇ ರೊಕ್ಕ ರೊಕ್ಕ [ಪರಿಹಾರ] ಅಂತ ಇದ್ದವ್ರೆಲ್ಲಾ ಸತ್ತೋಗ್ಬಿಟ್ರು. ಈಗ್ ಬರ್ತೈತಿ ಆಗ್ ಬರ್ತೈತಿ ಅಂತ..ನಮ್ ಯಜಮಾನ ಹೋಗ್ಬಿಟ್ಟಾ... ಈಗ್ ನಾವ್ ಉಳ್ಕೊಂಡ್ವಿ... ಪಾಪಿಗಳು. ಈ ಪಾಪಿಗೆ ಸಿಗ್ತೈತೋ...ನಾವೂ ಕೂಡ ಹೋಗ್ತೀವೋ ಗೊತ್ತಿಲ್ಲ.”
"ನಾವು ಪ್ರತಿಭಟಿಸಲು ಬಂದಿದ್ದೇವೆ. ಎಲ್ಲೆಲ್ಲಿ ಸಭೆ ಇರುತ್ತದೋ ಅಲ್ಲಿ ನಾನು ಭಾಗವಹಿಸುತ್ತೇನೆ. ಈ ಸಲ ಕೊನೆಯದಾಗಿ ಒಮ್ಮೆ ಪ್ರಯತ್ನಿಸಿ ನೋಡೋಣವೆಂದು ಬಂದಿದ್ದೇವೆ” ಎಂದು ಅವರು ಹೇಳುತ್ತಾರೆ.















