“ಒಂದು ವೇಳೆ ನಾವು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಇಡೀ ದೇಶ ಬೇಸರಗೊಳ್ಳುತ್ತದೆ.”
"ಕ್ರಿಕೆಟ್ ಖೇಲ್ನೆ ಕೋ ನಹೀ ಮಿಲೇಗಾ ಕಿಸಿಕೋ ಭೀ [ಯಾರೂ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ] ಎನ್ನುವಾಗ ಬಾಬು ಲಾಲ್ ಅವರ ಮೇಲಿನ ಮಾತಿನ ಅರ್ಥವನ್ನು ಚೆನ್ನಾಗಿ ತಿಳಿಯಬಹುದು.
ಕೆಂಪು ಮತ್ತು ಬಿಳಿ ಬಣ್ಣದ ಕ್ರಿಕೆಟ್ ಚೆಂಡೆಂದರೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಪ್ರೀತಿ ಮತ್ತು ಭಯ ಎರಡೂ ಇದೆ. ಈ ಆಟಕ್ಕೆ ಲಕ್ಷಾಂತರ ಜನ ಪ್ರೇಕ್ಷಕರೂ ಇದ್ದಾರೆ. ಇದನ್ನು ಉತ್ತರ ಪ್ರದೇಶದ ಮೀರತ್ ನಗರದ ಕೊಳೆಗೇರಿ ಶೋಭಾಪುರದಲ್ಲಿ ಪ್ರಕ್ರಿಯೆಗೊಳ್ಳುವ ಚರ್ಮದಿಂದ ತಯಾರಿಸಲಾಗುತ್ತದೆ. ಕ್ರಿಕೆಟ್ ಚೆಂಡು ಉದ್ಯಮಕ್ಕೆ ಅಗತ್ಯವಾದ ಕಚ್ಚಾ ವಸ್ತುವನ್ನು ತಯಾರಿಸಲು ಚರ್ಮ-ಕಾರ್ಮಿಕರು ಅಲುಮ್-ಟ್ಯಾನಿಂಗ್ ವಿಧಾನವನ್ನು ಬಳಸಿಕೊಂಡು ಕಚ್ಚಾ ಚರ್ಮವನ್ನು ಸಂಸ್ಕರಿಸುವ ನಗರದ ಏಕೈಕ ಪ್ರದೇಶ ಇದಾಗಿದೆ. 'ಟ್ಯಾನಿಂಗ್' ಎಂದರೆ ಕಚ್ಚಾ ಚರ್ಮವನ್ನು ಸಿದ್ಧಪಡಿಸಿದ ಚರ್ಮವಾಗಿ ಪರಿವರ್ತಿಸುವ ಪ್ರಕ್ರಿಯೆ.
"ಅಲುಮ್ ಟ್ಯಾನಿಂಗ್ ಪ್ರಕ್ರಿಯೆಯಿಂದ ಮಾತ್ರವೇ ಚರ್ಮದ ಕಣಗಳನ್ನು ತೆರೆಯಲು ಸಾಧ್ಯ ಮತ್ತು ಅದರ ಮೂಲಕ ರಂಗ್ [ಬಣ್ಣ] ಸುಲಭವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ" ಎಂದು ಬಾಬು ಲಾಲ್ ಹೇಳುತ್ತಾರೆ. ಅವರ ಹೇಳಿಕೆಯನ್ನು ಅರವತ್ತರ ದಶಕದಲ್ಲಿ ಸೆಂಟ್ರಲ್ ಲೆದರ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಸಂಶೋಧನೆಯು ಬೆಂಬಲಿಸುತ್ತದೆ, ಇದು ಬೌಲರ್ ಕ್ರಿಕೆಟ್ ಚೆಂಡನ್ನು ಹೊಳೆಯುವಂತೆ ಮಾಡಲು ಬೆವರು / ಲಾಲಾರಸವನ್ನು ಹಚ್ಚಿದಾಗ ಚೆಂಡಿಗೆ ಹಾನಿಯಾಗುವುದಿಲ್ಲ ಮತ್ತು ಬೌಲರ್ ಚೆಂಡನ್ನು ಎಸೆಯಲು ಕಾರಣವಾಗುತ್ತದೆ ಎಂದು ಅದು ಹೇಳುತ್ತದೆ.
62 ವರ್ಷದ ಅವರು ಶೋಭಾಪುರದಲ್ಲಿ ತಮ್ಮ ಒಡೆತನದ ಟ್ಯಾನರಿಯ ಒಂದು ಮೂಲೆಯಲ್ಲಿ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತಿದ್ದಾರೆ; ಸುಣ್ಣ ಬಳಿದ ಬಿಳಿಬಣ್ಣದ ನೆಲವು ಹೊಳೆಯುತ್ತಿದೆ. "ನಮ್ಮ ಪೂರ್ವಜರು ಇಲ್ಲಿ 200 ವರ್ಷಗಳಿಂದ ಚರ್ಮವನ್ನು ತಯಾರಿಸುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ.
ನಾವು ಮಾತನಾಡುತ್ತಿರುವಾಗ, ಭರತ್ ಭೂಷಣ್ ಎಂಬ ಇನ್ನೊಬ್ಬ ಟ್ಯಾನರ್ ಒಳಗೆ ಬಂದರು. 43 ವರ್ಷದ ಅವರು ತಮ್ಮ 13ನೇ ವಯಸ್ಸಿನಿಂದ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಪರಸ್ಪರ "ಜೈ ಭೀಮ್! (ಅಂಬೇಡ್ಕರ್ ಅವರಿಗೆ ಜಯವಾಗಲಿ) ಎನ್ನುತ್ತಾ ವಂದಿಸಿಕೊಂಡರು.
ಭರತ್ ಒಂದು ಕುರ್ಚಿಯನ್ನು ಎಳೆದುಕೊಂಡು ನಮ್ಮೊಡನೆ ಸೇರಿಕೊಂಡರು. ಬಾಬು ಲಾಲ್ ನನ್ನನ್ನು ಮೆಲ್ಲನೆ ಕೇಳಿದರು, "ಗಂದ್ ನಹೀ ಆ ರಹೀ [ನಿಮಗೆ ದುರ್ವಾಸನೆ ಬರುತ್ತಿಲ್ಲವೆ]?" ಅವರು ನಮ್ಮ ಸುತ್ತಲಿದ್ದ ಗುಂಡಿಗಳಲ್ಲಿ ನೆನೆಸಿದ ಚರ್ಮದ ಬಲವಾದ ವಾಸನೆ ಕುರಿತು ಕೇಳುತ್ತಿದ್ದರು. ಚರ್ಮದ ಕೆಲಸ ಮಾಡುವವರ ಮೇಲೆ ಹೇರಲಾಗುವ ಕಳಂಕ ಮತ್ತು ಆಕ್ರಮಣಶೀಲತೆಯನ್ನು ಉಲ್ಲೇಖಿಸುತ್ತಾ, ಭರತ್ ಹೇಳುತ್ತಾರೆ, "ವಿಷಯ ಏನಂದ್ರೆ, ಕೆಲವು ಜನರು ಉಳಿದವರಿಗಿಂತ ಉದ್ದದ ಮೂಗುಗಳನ್ನು ಹೊಂದಿದ್ದಾರೆ - ಅವರು ಚರ್ಮದ ಕೆಲಸದ ವಾಸನೆಯನ್ನು ಬಹಳ ದೂರದಿಂದ ಸಹ ಗ್ರಹಿಸಬಲ್ಲರು."
"ಕಳೆದ ಐದರಿಂದ ಏಳು ವರ್ಷಗಳಲ್ಲಿ, ನಮ್ಮ ಉದ್ಯೋಗದಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ" ಎಂದು ಬಾಬು ಲಾಲ್ ಭರತ್ ಅವರ ಹೇಳಿಕೆಯ ಹಿಂದಿನ ನೋವನ್ನು ವಿವರಿಸಿದರು.
ಚರ್ಮೋದ್ಯಮವು ಭಾರತದ ಅತ್ಯಂತ ಹಳೆಯ ಉತ್ಪಾದನಾ ಕೈಗಾರಿಕೆಗಳಲ್ಲಿ ಒಂದಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೌನ್ಸಿಲ್ ಫಾರ್ ಲೆದರ್ ಎಕ್ಸ್ಪೋರ್ಟ್ಸ್ ಪ್ರಕಾರ , ಇದು ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತದೆ ಮತ್ತು 2021-2022ರ ವೇಳೆಗೆ ವಿಶ್ವದ ಚರ್ಮ ಉತ್ಪಾದನೆಯ ಸುಮಾರು 13 ಪ್ರತಿಶತವನ್ನು ಉತ್ಪಾದಿಸುತ್ತದೆ.
ಶೋಭಾಪುರದ ಬಹುತೇಕ ಎಲ್ಲಾ ಟ್ಯಾನರಿ ಮಾಲೀಕರು ಮತ್ತು ಕಾರ್ಮಿಕರು ಜಾಟವ ಸಮುದಾಯಕ್ಕೆ ಸೇರಿದವರು (ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯಡಿ ಪಟ್ಟಿ ಮಾಡಲಾಗಿದೆ). ಭರತ್ ಅಂದಾಜಿನ ಪ್ರಕಾರ, ಈ ಪ್ರದೇಶದಲ್ಲಿ 3,000 ಜಾಟವ ಕುಟುಂಬಗಳು ವಾಸಿಸುತ್ತಿವೆ ಮತ್ತು ಸುಮಾರು 100 ಕುಟುಂಬಗಳು ಈ ಕೆಲಸದಲ್ಲಿವೆ. ಶೋಭಾಪುರ ವಾರ್ಡ್ ಸಂಖ್ಯೆ 12ರ ಅಡಿಯಲ್ಲಿ ಬರುತ್ತದೆ, ಇದು 16,931 ಜನಸಂಖ್ಯೆಯನ್ನು ಹೊಂದಿದೆ, ಮತ್ತು ವಾರ್ಡ್ ನಿವಾಸಿಗಳಲ್ಲಿ ಸರಿಸುಮಾರು ಅರ್ಧದಷ್ಟು ಎಸ್ಸಿ ಸಮುದಾಯಗಳ ಸದಸ್ಯರು (ಜನಗಣತಿ 2011).
ಮೀರತ್ ನಗರದ ಪಶ್ಚಿಮ ಭಾಗದಲ್ಲಿರುವ ಶೋಭಾಪುರ ಕೊಳೆಗೇರಿಯ ಎಂಟು ಟ್ಯಾನರಿಗಳಲ್ಲಿ ಒಂದು ಬಾಬು ಲಾಲ್ ಅವರಿಗೆ ಸೇರಿದೆ. "ನಾವು ತಯಾರಿಸುವ ಅಂತಿಮ ಉತ್ಪನ್ನವನ್ನು ಸಫೇದ್ ಕಾ ಪುಟ್ಟಾ [ಚರ್ಮದ ಬಿಳಿಗೊಳಿಸಿದ ಭಾಗ] ಎಂದು ಕರೆಯಲಾಗುತ್ತದೆ. ಚರ್ಮದ ಕ್ರಿಕೆಟ್ ಚೆಂಡುಗಳ ಹೊರ ಹೊದಿಕೆಯನ್ನು ತಯಾರಿಸಲು ಇವುಗಳನ್ನು ಬಳಸಲಾಗುತ್ತದೆ" ಎಂದು ಭರತ್ ಹೇಳುತ್ತಾರೆ. ಸ್ಥಳೀಯವಾಗಿ ಫಿತ್ಕರಿ ಎಂದು ಕರೆಯಲ್ಪಡುವ ಪೊಟ್ಯಾಸಿಯಮ್ ಅಲ್ಯೂಮಿನಿಯಂ ಸಲ್ಫೇಟ್ ಅನ್ನು ಚರ್ಮವನ್ನು ಸಂಸ್ಕರಿಸಲು ಬಳಸಲಾಗುತ್ತದೆ.
ದೇಶ ವಿಭಜನೆಯ ನಂತರ ಪಾಕಿಸ್ಥಾನದ ಸಿಯಾಲ್ ಕೋಟ್‌ನಲ್ಲಿದ್ದ ಕ್ರೀಡಾ ಸರಕುಗಳ ತಯಾರಿಕೆ ಉದ್ಯಮವನ್ನು ಮೀರತ್ ನಗರಕ್ಕೆ ಸ್ಥಳಾಂತರಿಸಲಾಯಿತು. 1950ರ ದಶಕದಲ್ಲಿ ಜಿಲ್ಲೆಯ ಕೈಗಾರಿಕಾ ಇಲಾಖೆಯಿಂದ ಕ್ರೀಡಾ ಸರಕುಗಳ ಉದ್ಯಮಕ್ಕೆ ಸಹಾಯ ಮಾಡಲು ಬಾಬು ಲಾಲ್ ಅವರು ಹೆದ್ದಾರಿ ಕಡೆಗೆ ತೋರಿಸುತ್ತಾ ಅಲ್ಲಿ ಚರ್ಮ ಟ್ಯಾನಿಂಗ್ ಮಾಡುವ ತರಬೇತಿ ಕೇಂದ್ರವನ್ನು ತೆರೆಯಲಾಯಿತು ಎಂದರು.
ಭರತ್ ಹೇಳುವಂತೆ, ಕೆಲವು ಟ್ಯಾನರುಗಳು ಒಗ್ಗೂಡಿ "21 ಸದಸ್ಯರ ಶೋಭಾಪುರ್ ಟ್ಯಾನರ್ಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನ ಸೊಸೈಟಿಯನ್ನು ರಚಿಸಿದರು. ನಾವು ಕೇಂದ್ರವನ್ನು ಬಳಸಿ ಅದನ್ನು ನಡೆಸುವ ಖರ್ಚನ್ನು ಹಂಚಿಕೊಳ್ಳುತ್ತೇವೆ ಏಕೆಂದರೆ ಖಾಸಗಿಯಾಗಿ ಘಟಕಗಳನ್ನು ನಡೆಸಲು ಸಾಧ್ಯವಿಲ್ಲ.
*****
ಭರತ್ ತನ್ನ ವ್ಯವಹಾರಕ್ಕಾಗಿ ಕಚ್ಚಾ ವಸ್ತುಗಳನ್ನು ಖರೀದಿಸಲು ಮುಂಜಾನೆ ಬೇಗನೆ ಏಳುತ್ತಾರೆ. ಅವರು ಮೀರತ್ ನಿಲ್ದಾಣವನ್ನು ತಲುಪಲು ಶೇರ್ ಆಟೋವನ್ನು ಹಿಡಿದು ಐದು ಕಿಲೋಮೀಟರ್ ಪ್ರಯಾಣಿಸುತ್ತಾರೆ ಮತ್ತು ಅಲ್ಲಿಂದ ಬೆಳಗ್ಗೆ 5:30ಕ್ಕೆ ಖುರ್ಜಾ ಜಂಕ್ಷನ್ ಎಕ್ಸ್ಪ್ರೆಸ್ ರೈಲನ್ನು ಹಿಡಿದು ಹಾಪುರ ಎನ್ನುವಲ್ಲಿಗೆ ಹೋಗುತ್ತಾರೆ. "ನಾವು ಭಾನುವಾರಗಳಂದು ಹಾಪುರ್ ಚಮ್ಡಾ ಪೇಟ್ [ಹಸಿ ಚರ್ಮದ ಮಾರುಕಟ್ಟೆ] ಯಿಂದ ಚರ್ಮವನ್ನು ಖರೀದಿಸುತ್ತೇವೆ, ಅಲ್ಲಿಗೆ ದೇಶದೆಲ್ಲೆಡೆಯಿಂದ ಚರ್ಮ ಬರುತ್ತದೆ" ಎಂದು ಅವರು ಹೇಳುತ್ತಾರೆ.
ಹಾಪುರ್ ಜಿಲ್ಲೆಯ ಈ ವಾರದ ಮಾರುಕಟ್ಟೆಯು ಶೋಭಾಪುರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ ಮತ್ತು ಮಾರ್ಚ್ 2023 ರಲ್ಲಿ, ಇಲ್ಲಿ ಒಂದು ತುಂಡು ಹಸುವಿನ ತೊಗಲಿನ ಬೆಲೆ ರೂ. ಅದರ ಗುಣಮಟ್ಟವನ್ನು ಅವಲಂಬಿಸಿ 500ರಿಂದ 1,200 ರೂಗಳಷ್ಟಿತ್ತು.
ಜಾನುವಾರುಗಳ ಆಹಾರ, ರೋಗ ಮತ್ತು ಇತ್ಯಾದಿ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ ಎಂದು ಬಾಬು ಲಾಲ್ ಹೇಳುತ್ತಾರೆ. "ರಾಜಸ್ಥಾನದ ಚರ್ಮಗಳು ಸಾಮಾನ್ಯವಾಗಿ ಕೀಕರ್ ಮರದ ಮುಳ್ಳುಗಳ ಗುರುತುಗಳನ್ನು ಹೊಂದಿರುತ್ತವೆ ಮತ್ತು ಹರಿಯಾಣದ ಚರ್ಮವು ಉಣ್ಣಿ ಗರುತುಗಳನ್ನು ಹೊಂದಿರುತ್ತದೆ. ಇವು ಎರಡನೇ ದರ್ಜೆಯವು."
2022-23ರಲ್ಲಿ 1.84 ಲಕ್ಷ ಜಾನುವಾರುಗಳು ಚರ್ಮರೋಗದಿಂದ ಸಾವನ್ನಪ್ಪಿವೆ. ಚರ್ಮಗಳು ಇದ್ದಕ್ಕಿದ್ದಂತೆ ಹೇರಳವಾಗಿ ಲಭ್ಯವಾದವು. ಆದರೆ ಭರತ್ ಹೇಳುತ್ತಾರೆ, "ಅವು ದೊಡ್ಡ ಕಲೆಗಳನ್ನು ಹೊಂದಿದ್ದರಿಂದ ಮತ್ತು ಕ್ರಿಕೆಟ್ ಚೆಂಡು ತಯಾರಕರು ಸಹ ಅವುಗಳನ್ನು ಬಳಸಲು ನಿರಾಕರಿಸಿದ್ದರಿಂದ ನಮಗೆ ಅವುಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ."
ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುವಂತೆ ಮಾರ್ಚ್ 2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಿಂದ ತಮಗೆ ತೊಂದರೆಯಾಗಿದೆ ಎಂದು ಚರ್ಮೋದ್ಯಮದ ಕಾರ್ಮಿಕರು ಹೇಳುತ್ತಾರೆ. ಇದಾದ ಸ್ವಲ್ಪ ಸಮಯದ ನಂತರ ಕೇಂದ್ರ ಸರ್ಕಾರದ ಅಧಿಸೂಚನೆಯು ವಧೆಗಾಗಿ ಜಾನುವಾರು ಮಾರುಕಟ್ಟೆಗಳಲ್ಲಿ ಜಾನುವಾರುಗಳ ಮಾರಾಟ ಮತ್ತು ಖರೀದಿಯನ್ನು ನಿರ್ಬಂಧಿಸಿತು. ಇದರ ಪರಿಣಾಮವಾಗಿ, ಭರತ್ ಹೇಳುವಂತೆ, "ಮಾರುಕಟ್ಟೆಯು ಅದರ [ಹಿಂದಿನ] ಗಾತ್ರದ ಅರ್ಧಕ್ಕೆ ಇಳಿದಿದೆ. ಕೆಲವೊಮ್ಮೆ, ಭಾನುವಾರಗಳಂದು ವ್ಯವಹಾರ ಇರುವುದಿಲ್ಲ."
ಗೋರಕ್ಷಕರು ಜಾನುವಾರುಗಳು ಮತ್ತು ಚರ್ಮ ಸಾಗಿಸದಂತೆ ಜನರನ್ನು ಹೆದರಿಸಿದ್ದಾರೆ. "ನೋಂದಾಯಿತ ಅಂತರರಾಜ್ಯ ಸಾರಿಗೆದಾರರು ಸಹ ಇತ್ತೀಚಿನ ದಿನಗಳಲ್ಲಿ ಕಚ್ಚಾ ವಸ್ತುಗಳನ್ನು ಸಾಗಿಸಲು ಹೆದರುತ್ತಾರೆ. ಪರಿಸ್ಥಿತಿ ಹೀಗಿದೆ" ಎಂದು ಬಾಬು ಲಾಲ್ ಹೇಳುತ್ತಾರೆ. ಮೀರತ್ ಮತ್ತು ಜಲಂಧರ್‌ನ ಅತಿದೊಡ್ಡ ಕ್ರಿಕೆಟ್ ಕಂಪನಿಗಳಿಗೆ 50 ವರ್ಷಗಳಿಂದ ಪ್ರಮುಖ ಪೂರೈಕೆದಾರರಾಗಿದ್ದರೂ, ಅವರ ಬದುಕು ಅಪಾಯದಲ್ಲಿದೆ ಮತ್ತು ಸಂಪಾದನೆ ಕಡಿಮೆಯಾಗಿದೆ. "ತೊಂದರೆಯ ಸಮಯದಲ್ಲಿ ಯಾರೂ ನಮ್ಮೊಂದಿಗೆ ನಿಲ್ಲುವುದಿಲ್ಲ. ಹಮೇ ಅಕೇಲೇ ಹೀ ಸಂಭಾಲ್ನಾ ಪಡ್ತಾ ಹೈ [ನಾವು ಏಕಾಂಗಿಯಾಗಿ ಹೋರಾಡಬೇಕಾಗಿದೆ]” ಎಂದು ಅವರು ಹೇಳುತ್ತಾರೆ.
2019ರಲ್ಲಿ, ಭಾರತದಲ್ಲಿ ಹಿಂಸಾತ್ಮಕ ಗೋರಕ್ಷಣೆ, ಗೋರಕ್ಷಕರ ದಾಳಿಯ ಬಗ್ಗೆ ಹ್ಯೂಮನ್ ರೈಟ್ಸ್ ವಾಚ್ ವರದಿಯು, "ಮೇ 2015 ಮತ್ತು ಡಿಸೆಂಬರ್ 2018ರ ನಡುವೆ, ಭಾರತದ 12 ರಾಜ್ಯಗಳಲ್ಲಿ ಕನಿಷ್ಠ 44 ಜನರು (ಅವರಲ್ಲಿ 36 ಮುಸ್ಲಿಮರು ) ಕೊಲ್ಲಲ್ಪಟ್ಟಿದ್ದಾರೆ. ಇದೇ ಅವಧಿಯಲ್ಲಿ, 20 ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ವಿವಿಧ ಘಟನೆಗಳಲ್ಲಿ ಸುಮಾರು 280 ಜನರು ಗಾಯಗೊಂಡಿದ್ದಾರೆ.” ಎನ್ನುತ್ತದೆ.
"ನನ್ನ ವ್ಯವಹಾರವು ಸಂಪೂರ್ಣ ಕಾನೂನುಬದ್ಧ ಮತ್ತು ರಸೀದಿ ಆಧಾರಿತ. ಆದರೂ ಅವರಿಗೆ ಈ ಕುರಿತು ಆಕೇಪಗಳಿವೆ" ಎಂದು ಬಾಬು ಲಾಲ್ ಹೇಳುತ್ತಾರೆ.
2020ರ ಜನವರಿಯಲ್ಲಿ, ಶೋಭಾಪುರದ ಟ್ಯಾನರ್‌ಗಳು ಮತ್ತೊಂದು ಗೂಗ್ಲಿಗೆ ಬಲಿಯಾದರು - ಮಾಲಿನ್ಯವನ್ನು ಉಂಟುಮಾಡಿದ್ದಕ್ಕಾಗಿ ಅವರ ವಿರುದ್ಧ ಪಿಐಎಲ್ ದಾಖಲಿಸಲಾಗಿದೆ. "ಹೆದ್ದಾರಿಗೆ ಯಾವುದೇ ಚರ್ಮದ ಕೆಲಸಗಳು ಗೋಚರಿಸಬಾರದು ಎಂದು ಅವರು ಮತ್ತೊಂದು ಷರತ್ತನ್ನು ವಿಧಿಸಿದ್ದಾರೆ" ಎಂದು ಭರತ್ ಹೇಳುತ್ತಾರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದಂತೆ ಸರ್ಕಾರವು ಈ ಕೇಂದ್ರಗಳನ್ನು ಸ್ಥಳಾಂತರಿಸುವುದರ ಬದಲು ಇಲ್ಲಿನ ಎಲ್ಲಾ ಟ್ಯಾನರಿಗಳಿಗೆ ಸ್ಥಳೀಯ ಪೊಲೀಸರ ಮೂಲಕ ಮುಚ್ಚುವಂತೆ ನೋಟೀಸ್ ನೀಡಿದೆ.
“ಸರ್ಕಾರ್ ಹಮೇ ವ್ಯವಸ್ಥಾ ಬನಾಕೆ ದೇ ಅಗರ್ ದಿಕ್ಕತ್ ಹೇ ತೋ. ಜೈಸೇ ಡುಂಗರ್ ಮೇ ಬನಾಯಿ ಹೇ 2003-4 ಮೇ [ನಮ್ಮಿಂದ ಸಮಸ್ಯೆಯಾಗುತ್ತಿದ್ದಲ್ಲಿ ಸರ್ಕಾರವು 2003-4ರಲ್ಲಿ ಡುಂಗರ್ ಗ್ರಾಮದಲ್ಲಿ ಟ್ಯಾನಿಂಗ್ ಸೌಲಭ್ಯವನ್ನು ನಿರ್ಮಿಸಿದಂತೆ ನಮಗೆ ಸರಿಯಾದ ವ್ಯವಸ್ಥೆ ಮಾಡಬೇಕು],” ಎಂದು ಬಾಬು ಲಾಲ್ ಹೇಳುತ್ತಾರೆ.
"ಮಹಾನಗರ ಪಾಲಿಕೆಯು ಚರಂಡಿಗಳನ್ನು ಹಾಕುವ ಕೆಲಸವನ್ನು ಪೂರ್ಣಗೊಳಿಸಿಲ್ಲ ಎಂಬುದು ನಮ್ಮ ಕಳವಳವಾಗಿದೆ" ಎಂದು ಭರತ್ ಹೇಳುತ್ತಾರೆ. ಈ ಪ್ರದೇಶವು ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ ಬಂದು 30 ವರ್ಷಗಳಾಗಿವೆ. "ಮಳೆಗಾಲದಲ್ಲಿ ಸಮತಟ್ಟುಗೊಳಿಸದ ತಗ್ಗಿನಲ್ಲಿರು ವಸತಿ ನಿವೇಶನಗಳಲ್ಲಿ ನೀರು ಸ್ವಾಭಾವಿಕವಾಗಿ ಸಂಗ್ರಹವಾಗುತ್ತದೆ."
*****
ಶೋಭಾಪುರದ ಎಂಟು ಟ್ಯಾನರಿಗಳು ಕ್ರಿಕೆಟ್ ಚೆಂಡುಗಳನ್ನು ತಯಾರಿಸಲು ಬಳಸುವ ನೂರಾರು ಬಿಳಿ ಚರ್ಮವನ್ನು ತಯಾರಿಸುತ್ತವೆ. ಟ್ಯಾನರಿ ಕೆಲಸಗಾರರು ಮೊದಲು ಚರ್ಮದಲ್ಲಿರುವ ಕೊಳಕು, ಧೂಳು ಮತ್ತು ಮಣ್ಣನ್ನು ತೊಳೆದು ತೆಗೆದುಹಾಕುತ್ತಾರೆ ಮತ್ತು ಅವರು ಸಂಸ್ಕರಿಸುವ ಪ್ರತಿ ಚರ್ಮಕ್ಕೆ ಸುಮಾರು 300 ರೂ.ಗಳನ್ನು ಕೂಲಿಯಾಗಿ ಗಳಿಸುತ್ತಾರೆ.
"ಚರ್ಮವನ್ನು ಸ್ವಚ್ಛಗೊಳಿಸಿದ ಮತ್ತು ಮರುಜಲೀಕರಣ ಮಾಡಿದ ನಂತರ, ಅವುಗಳ ಗುಣಮಟ್ಟದ ಆಧಾರದ ಮೇಲೆ, ವಿಶೇಷವಾಗಿ ಅವುಗಳ ದಪ್ಪದ ಆಧಾರದ ಮೇಲೆ ನಾವು ಅವುಗಳನ್ನು ಬೇರ್ಪಡಿಸುತ್ತೇವೆ" ಎಂದು ಬಾಬು ಲಾಲ್ ಹೇಳುತ್ತಾರೆ. ತೆಳುವಾದ ಚರ್ಮವನ್ನು 24 ದಿನಗಳಲ್ಲಿ ವೆಜಿಟೇಬಲ್-ಟ್ಯಾನ್ ಮಾಡಲಾಗುತ್ತದೆ. "ಅವುಗಳನ್ನು ಲಾಟ್‌ಗಳ (lots) ಲೆಕ್ಕದಲ್ಲಿ ಸಂಸ್ಕರಿಸಲಾಗುತ್ತದೆ, ಈ ಮೂಲಕ ಚರ್ಮದ ಬ್ಯಾಚ್ ಪ್ರತಿದಿನ ಸಿದ್ಧವಾಗಿರುತ್ತದೆ."
ನಂತರ ಚರ್ಮವನ್ನು ಸುಣ್ಣ ಮತ್ತು ಸೋಡಿಯಂ ಸಲ್ಫೈಡ್ ಬೆರೆಸಿದ ನೀರಿನ ಹೊಂಡಗಳಲ್ಲಿ ಮೂರು ದಿನಗಳವರೆಗೆ ನೆನೆಸಲಾಗುತ್ತದೆ. ಅದಾದ ನಂತರ ಪ್ರತಿ ತೊಗಲಿನ ತುಂಡನ್ನು ಸಮತಟ್ಟಾದ ನೆಲದ ಮೇಲೆ ಹರಡಲಾಗುತ್ತದೆ ಮತ್ತು ಅದರಲ್ಲಿರುವ ಕೂದಲುಗಳನ್ನು ಮೊಂಡು ಕಬ್ಬಿಣದ ಸಾಧನದಿಂದ ತೆಗೆದುಹಾಕಲಾಗುತ್ತದೆ - ಈ ಪ್ರಕ್ರಿಯೆಯನ್ನು ಸುಟಾಯ್ ಎಂದು ಕರೆಯಲಾಗುತ್ತದೆ. "ಕೂದಲಿನ ಬುಡ ಊದಿಕೊಂಡಿರುವುದರಿಂದ, ಕೂದಲು ಸರಾಗವಾಗಿ ಹೊರಬರುತ್ತದೆ" ಎಂದು ಭರತ್ ಹೇಳುತ್ತಾರೆ. ಅವುಗಳನ್ನು ದಪ್ಪವಾಗಿಸಲು ಚರ್ಮವನ್ನು ಮತ್ತೆ ನೆನೆಸಲಾಗುತ್ತದೆ.
ಬಾಬು ಲಾಲ್ ಅವರ ಮಾಸ್ಟರ್ ಕಾರಿಗಾರ್ (ಕುಶಲಕರ್ಮಿ) 44 ವರ್ಷದ ತಾರಾಚಂದ್, ಅವರು ರಫಾ ಅಥವಾ ಚಾಕುವನ್ನು ಬಳಸಿ ಕಷ್ಟಪಟ್ಟು ಮತ್ತು ಸೂಕ್ಷ್ಮವಾಗಿ ಕೆಳಭಾಗದ ಮಾಂಸವನ್ನು ಸುಲಿಯುತ್ತಾರೆ. ನಂತರ ಚರ್ಮದಲ್ಲಿರುವ ಸುಣ್ಣದ ಕುರುಹುಗಳನ್ನು ತೆಗೆದುಹಾಕಲು ಮೂರು ದಿನಗಳ ಕಾಲ ಸಾದಾ ನೀರಿನಲ್ಲಿ ನೆನೆಸಿ, ನಂತರ ರಾತ್ರಿಯಿಡೀ ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿದ ನೀರಿನಲ್ಲಿ ನೆನೆಸಲಾಗುತ್ತದೆ. ಇದನ್ನು ಸೋಂಕುರಹಿತವಾಗಿಸಲು ಮತ್ತು ಬ್ಲೀಚ್ ಮಾಡಲು ಮಾಡಲಾಗುತ್ತದೆ ಎಂದು ಬಾಬು ಲಾಲ್ ಹೇಳುತ್ತಾರೆ. "ಏಕ್ ಏಕ್ ಕರ್ಕೆ ಸಾರಿ ಗಂದ್-ಗಂದಗಿ ನಿಕಾಲಿ ಜಾತಿ ಹೈ [ಹಂತ ಹಂತವಾಗಿ, ಎಲ್ಲಾ ವಾಸನೆ ಮತ್ತು ಕೊಳೆಯನ್ನು ತೆಗೆದುಹಾಕಲಾಗುತ್ತದೆ] ಎಂದು ಅವರು ಹೇಳುತ್ತಾರೆ.
"ಚೆಂಡು ತಯಾರಕರನ್ನು ತಲುಪುವುದು ಬಹಳ ಶುದ್ಧ ಉತ್ಪನ್ನ" ಎಂದು ಭರತ್ ಹೇಳುತ್ತಾರೆ.
ಒಂದು ಸಂಸ್ಕರಿಸಿದ ಚರ್ಮವನ್ನು ಕ್ರಿಕೆಟ್ ಚೆಂಡು ತಯಾರಕರಿಗೆ 1,700 ರೂ.ಗೆ ಮಾರಾಟ ಮಾಡಲಾಗುತ್ತದೆ. ಚರ್ಮದ ಪೃಷ್ಟದ ಭಾಗವನ್ನು ತೋರಿಸುತ್ತಾ ಭರತ್ ವಿವರಿಸುತ್ತಾರೆ, "18-24 ಉನ್ನತ ಅಥವಾ ಮೊದಲ ಗುಣಮಟ್ಟದ ಕ್ರಿಕೆಟ್ ಚೆಂಡುಗಳನ್ನು ಇಲ್ಲಿಂದ ತಯಾರಿಸಲಾಗುತ್ತದೆ, ಏಕೆಂದರೆ ಇದು ಬಲವಾದ ಭಾಗವಾಗಿದೆ. ಈ ಚೆಂಡುಗಳನ್ನು ಬಿಲಾಯತಿ ಗೇಂದ್ [ವಿದೇಶಿ ಚೆಂಡುಗಳು] ಎಂದು ಕರೆಯಲಾಗುತ್ತದೆ ಮತ್ತು ಪ್ರತಿಯೊಂದೂ 2,500 ರೂ.ಗಿಂತ ಹೆಚ್ಚಿನ ಬೆಲೆಗೆ [ಚಿಲ್ಲರೆ ಮಾರುಕಟ್ಟೆಯಲ್ಲಿ] ಮಾರಾಟವಾಗುತ್ತದೆ."
"ಇತರ ಭಾಗಗಳು ಅಷ್ಟು ಬಲವಾಗಿರುವುದಿಲ್ಲ ಮತ್ತು ತೆಳ್ಳಗಿರುವುದಿಲ್ಲ, ಹೀಗಾಗಿ ಈ ಭಾಗಗಳಿಂದ ತಯಾರಿಸಿದ ಚೆಂಡುಗಳು ಅಗ್ಗದ ಬೆಲೆಗೆ ಸಿಗುತ್ತವೆ, ಅವು ವೇಗವಾಗಿ ಆಕಾರವನ್ನು ಕಳೆದುಕೊಳ್ಳುವುದರಿಂದ ಕಡಿಮೆ ಓವರ್ ಪಂದ್ಯಗಳನ್ನು ಇವುಗಳನ್ನು ಬಳಸಿ ಆಡಲಾಗುತ್ತದೆ" ಎಂದು ಬಾಬು ಲಾಲ್ ಹೇಳುತ್ತಾರೆ. "ವಿವಿಧ ಗುಣಮಟ್ಟ ಒಟ್ಟು 100 ಚೆಂಡುಗಳು ಒಂದು ಇಡೀ ಪುಟ್ಟದಿಂದ ಹೊರಬರುತ್ತವೆ. ಪ್ರತಿ ಚೆಂಡನ್ನು 150 ರೂ.ಗೆ ಮಾರಾಟ ಮಾಡಿದರೂ, ಚೆಂಡು ತಯಾರಕರು ಪ್ರತಿ ಪುಟ್ ಮೂಲಕ ಕನಿಷ್ಠ 15,000 ರೂ.ಗಳನ್ನು ಗಳಿಸುತ್ತಾರೆ" ಎಂದು ಭರತ್ ಕುಳಿತಲ್ಲೇ ಲೆಕ್ಕಹಾಕುತ್ತಾರೆ.
"ಆದರೆ ಅದರಿಂದ ನಮಗೆ ಸಿಗುವುದೇನು?" ಭರತ್ ಬಾಬುಲಾಲ್ ಕಡೆ ನೋಡುತ್ತಾರೆ. ಅವರಿಗೆ ಒಂದು ತುಂಡು ಚರ್ಮ ಮಾರಾಟವಾದರೆ 150 ರೂಪಾಯಿ ಸಿಗುತ್ತದೆ. "ನನ್ನ ಕಾರಿಗಾರರ ವಾರದ ಬಟವಾಡೆ ಮತ್ತು ಕಚ್ಚಾ ಸಾಮಗ್ರಿಗಳಿಗಾಗಿ ಸುಮಾರು 700 ರೂ.ಗಳನ್ನು ಖರ್ಚು ಮಾಡಲಾಗುತ್ತದೆ" ಎಂದು ಭರತ್ ಹೇಳುತ್ತಾರೆ. "ಈ ಕ್ರಿಕೆಟ್ ಚೆಂಡುಗಳ ಚರ್ಮವನ್ನು ನಮ್ಮ ಕೈ ಮತ್ತು ಕಾಲುಗಳಿಂದ ತಯಾರಿಸಲಾಗುತ್ತದೆ. ಆದರೆ ದೊಡ್ಡ ಕಂಪನಿಗಳ ಹೆಸರುಗಳ ಜೊತೆಗೆ, ಚೆಂಡಿನ ಮೇಲೆ ಇನ್ನೂ ಬೇರೇನು ವಿವರವಿರುತ್ತದೆ ಗೊತ್ತೇ? 'ಅಲುಮ್-ಟ್ಯಾನ್ಡ್ ಲೆದರ್'. ಅದರ ಅರ್ಥವೇನೆಂದು ಆಟಗಾರರಿಗೆ ತಿಳಿದಿದೆಯೇ ಎನ್ನುವುದರ ಕುರಿತು ನನಗೆ ಅನುಮಾನವಿದೆ.”
*****
"ಮಾಲಿನ್ಯ, ವಾಸನೆ, ದೃಷ್ಟಿ [ಉದ್ಯಮದಲ್ಲಿ] ನಿಜವಾದ ಸಮಸ್ಯೆಗಳು ಎಂದು ನಿಜಕ್ಕೂ ನಿಮಗನ್ನಿಸುತ್ತದೆಯೇ?"
ಪಶ್ಚಿಮ ಉತ್ತರಪ್ರದೇಶದ ಕಬ್ಬಿನ ಗದ್ದೆಗಳ ಹಿಂದಿನ ದಿಗಂತದಲ್ಲಿ ಸೂರ್ಯ ಮುಳುಗಲಾರಂಭಿಸಿದ್ದ. ಟ್ಯಾನರಿ ಕೆಲಸಗಾರರು ತಮ್ಮ ಕೆಲಸದ ಸ್ಥಳದಲ್ಲಿ ಗಡಿಬಿಡಿಯಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ಮನೆಗೆ ಹೋಗುವ ಮೊದಲು ತಮ್ಮ ಕೆಲಸದ ಬಟ್ಟೆಗಳನ್ನು ಬದಲಾಯಿಸುತ್ತಿದ್ದರು.
"ನನ್ನ ಮಗನ ಮೊದಲಕ್ಷರಗಳ ಆಧಾರದಲ್ಲಿ ನಮ್ಮ ಬಳಿ ತಯಾರಾದ ಚರ್ಮದ ಮೇಲೆ 'ಎಬಿ' ಎಂದು ಗುರುತು ಹಾಕುತ್ತೇನೆ" ಎಂದು ಭರತ್ ದೃಢವಾಗಿ ಹೇಳುತ್ತಾರೆ, "ಚರ್ಮದ ಕೆಲಸವನ್ನು ಮಾಡಲು ನಾನು ಅವನಿಗೆ ಅವಕಾಶ ನೀಡುವುದಿಲ್ಲ. ಮುಂದಿನ ತಲೆಮಾರು ಶಿಕ್ಷಣ ಪಡೆಯುತ್ತಿದೆ. ಅವು ಮುಂದುವರಿಯಲಿವೆ ಮತ್ತು ಅಲ್ಲಿಗೆ ಚರ್ಮದ ಕೆಲಸವು ಕೊನೆಗೊಳ್ಳುತ್ತದೆ."
ನಾವು ಹೆದ್ದಾರಿಯ ಕಡೆಗೆ ನಡೆಯುತ್ತಿರುವಾಗ, ಭರತ್ ಹೇಳುತ್ತಾರೆ, "ನಾವು ಚರ್ಮದ ಕೆಲಸದ ಕುರಿತು ಯಾವುದೇ ಉತ್ಸಾಹ ಹೊಂದಿಲ್ಲ, ಏಕೆಂದರೆ ಇದು ಯಾರೋ ಕ್ರಿಕೆಟ್ ಆಡುವ ಸಲುವಾಗಿ ತಯಾರಾಗುತ್ತದೆ, ಆದರೆ [ಈ ಕೆಲಸ] ನಮಗೆ ಹೊಟ್ಟಪಾಡು; ನಮಗೆ ಬೇರೆ ಕೆಲಸ ಗೊತ್ತಿಲ್ಲದ ಕಾರಣ ಅನಿವಾರ್ಯವಾಗಿ ಇದನ್ನು ಮಾಡುತ್ತಿದ್ದೇವೆ ಅಷ್ಟೇ.”
ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದಕ್ಕಾಗಿ ಮತ್ತು ಈ ಕಥೆಯನ್ನು ವರದಿ ಮಾಡುವಲ್ಲಿ ಎಲ್ಲಾ ಹಂತಗಳಲ್ಲಿ ಸಹಾಯ ಮಾಡಿದ್ದಕ್ಕಾಗಿ ವರದಿಗಾರರು ಪ್ರವೀಣ್ ಕುಮಾರ್ ಮತ್ತು ಭರತ್ ಭೂಷಣ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲದೊಂದಿಗೆ ತಯಾರಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು