ಜಮ್ಲೋಳಿಗೆ 12 ವರ್ಷ ವಯಸ್ಸಾಗಿತ್ತು. ಫೆಬ್ರವರಿಯಲ್ಲಿ, ಅವಳು ತೆಲಂಗಾಣದ ಮೆಣಸಿನಕಾಯಿ ಹೊಲಗಳಲ್ಲಿ ಕೆಲಸಕ್ಕೆ ಹೋಗಿದ್ದಳು. ಏಪ್ರಿಲ್ 18ರಂದು, ಲಾಕ್ಡೌನ್ ಸಮಯದಲ್ಲಿ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದ ಇತರ ಕಾರ್ಮಿಕರೊಂದಿಗೆ ನಿರಂತರವಾಗಿ ಮೂರು ದಿನಗಳ ಕಾಲ ನಡೆದ ನಂತರ, ಜಮ್ಲೋ ಕೊನೆಯುಸಿರೆಳೆದಳು.
“ಆಕೆ ನಮಗ ಏನೂ ತಿಳಿಸಲ್ದ ತನ್ನ ಸ್ನೇಹಿತರು ಮತ್ತು ಗ್ರಾಮಸ್ಥರ ಜೊತೆ ಊರ ಬಿಟ್ಟಾಳ್ರ್ರಿ.ನಮಗ ಮರುದಿನ ಗೊತ್ತಾಗಿದ್ದು” ಎಂದು ಆಕೆಯ ತಾಯಿ ಸುಕ್ಮತಿ ಮದ್ಕಮ್ ಹೇಳುತ್ತಿದ್ದರು.ಈ ಕುಟುಂಬವು ಆದಿವಾಸಿಗಳ ಮುರಿಯಾ ಸಮುದಾಯಕ್ಕೆ ಸೇರಿದೆ.
12 ವರ್ಷದ ಬಾಲಕಿ ಛತ್ತೀಸ್ ಗಡ್ ನಲ್ಲಿನ ಬಸ್ತಾರ್ ಪ್ರದೇಶದ ಬಿಜಾಪುರ ಜಿಲ್ಲೆಯ ಆದೇಡ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಳು.ಆಕೆಯ ಜೊತೆಗೆ ಇತರ 11 ಕಾರ್ಮಿಕರ ತಂಡವಿತ್ತು, ಅವರಲ್ಲಿ ಕೆಲವು ಮಕ್ಕಳು ತೆಲಂಗಾಣದ ಮುಲುಗು ಜಿಲ್ಲೆಯ ಕನ್ನೈಗುಡೆಮ್ ಹಳ್ಳಿಯ ಬಳಿಯ ಹೊಲಗಳಿಗೆ ಕೆಲಸಕ್ಕೆ ಹೋಗಿದ್ದರು. (ಮೇಲಿನ ಮುಖ ಚಿತ್ರವೂ ಮೇ 7 ರಂದು ರಸ್ತೆಯಲ್ಲಿ ಸಾಗುತ್ತಿದ್ದ ಅಂತಹ ತಂಡದ ಒಂದು ಫೋಟೋ) ಅಲ್ಲಿ, ಅವರು ಮೆಣಸಿನಕಾಯಿಗಳನ್ನು ಕೀಳುವುದರಿಂದ ಅವರಿಗೆ ಒಂದು ದಿನಕ್ಕೆ 200 ರೂಗಳಂತೆ, ಇಲ್ಲವೇ ಮೆಣಸಿಕಾಯಿ ಚೀಲಗಳಿಗೆ ನಿಗದಿಪಡಿಸಿದ ಪಾವತಿಯಂತೆ ದೊರೆಯುತ್ತಿತ್ತು.(ನೋಡಿ Children of the chilli fields)
ಜಮ್ಲೋ ತನ್ನ ಫ್ರೆಂಡ್ಸ್ ಮತ್ತ ಊರಿನವರ ಜೊತಿಗೆ ಕೆಲಸಕ್ಕ ಹೋಗಿದ್ಲು, ಕೆಲಸ ನಿಂತಿದ್ದರಿಂದ, ಅವರೆಲ್ಲಾ ಹೊಳ್ಳಿ ಊರಿಗೆ ಬರಾಕ್ ಹತ್ತಿದ್ರು. ಅವ್ರು (ಮುಳುಗು ಜಿಲ್ಲೆಯ) ಪೆರೂರ್ ಬಿಟ್ಟಾಗ ನನಗ ಆಕೆಯಿಂದ ಪೋನ್ ಬಂದಿತ್ತು, ಅದು ಬಿಟ್ರ ನನಗ ಒಮ್ಮಿಗೆ ಕೊನೆಯದಾಗಿ ಪೋನ್ ಕರೆ ಬಂದಿದ್ದು, ಇತರ ಗ್ರಾಮಸ್ಥರಿಂದ, ಅದೂ ನನ್ನ ಮಗುವಿನ ಸಾವಿನ ಸುದ್ದಿಯಾಗಿತ್ತು " ಎಂದು ತಂದೆ ಜಮ್ಲೋ ದುಃಖತಪ್ತರಾಗಿ ಹೇಳುತ್ತಿದ್ದರು. ಅವರು ಮತ್ತು ಸುಕ್ಮತಿ, ಆದೇಡ ಗ್ರಾಮದ ಬಹುತೇಕ ಎಲ್ಲ ಆದಿವಾಸಿ ನಿವಾಸಿಗಳಂತೆ ಅವರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದು, ಭತ್ತ, ಹುರಳಿ ಕಾಳು ಮತ್ತು ಇತರ ಬೆಳೆಗಳನ್ನು ಸಣ್ಣ ಭೂಮಿಯಲ್ಲಿ ಬೆಳೆಯುವುದು ಮತ್ತು ಕೃಷಿ ಕಾರ್ಮಿಕರಾಗಿ ಅಥವಾ ಮನರೇಗಾ ಕಾರ್ಯ ಕ್ಷೇತ್ರದಲ್ಲಿ ದುಡಿಯುತ್ತಾ ಜೀವನ ಸಾಗಿಸುತ್ತಾರೆ.
"ಸುಮಾರು ಎರಡು ತಿಂಗಳ ಹಿಂದೆ, ಜಮ್ಲೋ ತೆಲಂಗಾಣಕ್ಕೆ ಕಾರ್ಮಿಕಳಾಗಿ ಹೋಗಿದ್ದಳು.ಆದರೆ ಲಾಕ್ಡೌನ್ ಜಾರಿಯಾದ ನಂತರ ಕೆಲಸ ಸ್ಥಗಿತಗೊಂಡಿತು. ಇಂತಹ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಗ್ರಾಮಕ್ಕೆ ಮರಳಲು ಹತಾಶರಾಗಿದ್ದರು.ಈಗಾಗಲೇ ಅವರು ಇದುವರೆಗೆ ಉಳಿತಾಯ ಮಾಡಿದ್ದ ಹಣವೆಲ್ಲಾ ಖಾಲಿಯಾಗಿತ್ತು, ಹಾಗಾಗಿ ಅವರ ಗುತ್ತಿಗೆದಾರರು ಅವರಿಗೆ ತಮ್ಮ ಊರಿಗೆ ಹಿಂದಿರುಗಲು ಸೂಚಿಸಿದರು” ಎಂದು ಗೊಂಡ ಆದಿವಾಸಿ ಸಮುದಾಯದ ಮತ್ತು ಜಗದಲ್ಪುರದ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿರುವ ಬಿಜಾಪುರದ ಪತ್ರಕರ್ತೆ ಪುಷ್ಪಾ ಉಸೆಂಡಿ-ರೋಕಾಡೆ ಹೇಳುತ್ತಾರೆ.






