ಲಾಕ್ಡೌನ್ ಕಾರಣದಿಂದಾಗಿ ಸತ್ತಾರ್, ಬೆಂಗಳೂರನ್ನು ತೊರೆದು ನಾಲ್ಕು ತಿಂಗಳಿಗೂ ಹೆಚ್ಚಿನ ದಿನಗಳು ಕಳೆದಿವೆ.
“ನಾವು ಹೇಗಾದರೂ ಮಾಡಿ, ಇಲ್ಲಿಂದ ತೆರಳುತ್ತೇವೆ. ತಡವಾದರೂ ಸರಿಯೇ” ಎಂದು ಅವರು ತಿಳಿಸಿದ್ದರು. ಇದು, ಅಂಫನ್ ಚಂಡಮಾರುತವು ಮೇ ೨೦ರಂದು ಭೂಕುಸಿತವನ್ನು ಉಂಟುಮಾಡುವುದಕ್ಕೂ ಮೊದಲು. ಇಂತಹ ಸಂದರ್ಭದಲ್ಲಿಯೂ, ಅಬ್ದುಲ್ ಹಾಗೂ ಆತನ ಸ್ನೇಹಿತರು ೧,೮೦೦ ಕಿ.ಮೀ.ಗಳ ದೀರ್ಘ ಪ್ರಯಾಣವನ್ನು ಕೈಗೊಂಡು, ಪಶ್ಚಿಮ ಬಂಗಾಳದಲ್ಲಿನ ಪಶ್ಚಿಮ ಮೇದಿನಿಪುರ್ ಜಿಲ್ಲೆಯಲ್ಲಿನ ತಮ್ಮ ಚಕ್ ಲಚ್ಛೀಪುರ್ ಊರಿಗೆ ತೆರಳುವ ಸಾಹಸಕ್ಕೆ ಸಿದ್ಧರಿದ್ದರು.
ಅಬ್ದುಲ್ ಅವರು ಮುಂಬೈನಿಂದ ಜನವರಿ ಅಥವಾ ಫೆಬ್ರುವರಿ ತಿಂಗಳಿನಲ್ಲಿ ಬೆಂಗಳೂರಿಗೆ ಬಂದಿದ್ದು, ಕೇವಲ ಕೆಲವು ತಿಂಗಳುಗಳಷ್ಟೇ ಕಳೆದಿವೆ. ಇವರ ಪತ್ನಿ 32ರ ಗೃಹಿಣಿ ಹಮೀದ ಬೇಗಂ, ಹಾಗೂ ಅವರ ಮಕ್ಕಳಾದ 13ರ ವಯಸ್ಸಿನ ಸಲ್ಮಾ ಖಾತುನ್, ಮತ್ತು 12ರ ವಯಸ್ಸಿನ ಯಾಸಿರ್ ಹಮೀದ್, ಘಟಲ್ ತಾಲ್ಲೂಕಿನ ತಮ್ಮ ಹಳ್ಳಿಯಲ್ಲಿನ ಮೂರು ಕೋಣೆಗಳ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಕುಟುಂಬವು, ೨೪ ಡಿಸ್ಮಿಲ್ (ಕಾಲು ಎಕರೆ) ಭೂಮಿಯನ್ನು ಹೊಂದಿದ್ದು, ಅದರಲ್ಲಿ ಇವರ ಸಹೋದರ ಭತ್ತವನ್ನು ಬೆಳೆಯುತ್ತಿದ್ದಾರೆ.
೮ನೇ ತರಗತಿಯ ನಂತರ ಶಾಲೆಯನ್ನು ತೊರೆದ ಅಬ್ದುಲ್, ತಮ್ಮ ಹಳ್ಳಿಯಲ್ಲಿನ ಅನೇಕರಂತೆ ಕಸೂತಿಯನ್ನು ಕಲಿಯಲಾರಂಭಿಸಿದರು. ಆಗಿನಿಂದಲೂ, ಅವರು ವಿಭಿನ್ನ ಸ್ಥಳಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿ ಕೆಲವು ವರ್ಷಗಳವರೆಗೆ ಕೆಲಸಕ್ಕಿದ್ದ ಅವರು, ನಂತರ ಮುಂಬೈಗೆ ತೆರಳಿದರು. 5-6 ತಿಂಗಳಿಗೊಮ್ಮೆ ಇವರು ಮನೆಗೆ ಭೇಟಿ ನೀಡುತ್ತಿದ್ದರು. “ನಾನು ಯಂತ್ರದಿಂದ ಕಸೂತಿಯನ್ನು ಮಾಡುತ್ತೇನೆ. ಮುಂಬೈಯಲ್ಲಿ ನನಗೆ ಸಾಕಷ್ಟು ಕೆಲಸವು ದೊರೆಯುತ್ತಿರಲಿಲ್ಲವಾದ್ದರಿಂದ ನನ್ನ ಸಂಬಂಧಿಯೊಬ್ಬರ ಜೊತೆಗೂಡಿ ಕೆಲಸದಲ್ಲಿ ತೊಡಗಲು ನಿಶ್ಚಯಿಸಿದೆ.”
ಬೆಂಗಳೂರಿನ ದಕ್ಷಿಣ ಭಾಗದಲ್ಲಿ, 33 ವರ್ಷದ ತನ್ನ ಸಂಬಂಧಿ, ಹಸನುಲ್ಲಾ ಖಾನ್ (ಇವರ ಆಧಾರ್ ಕಾರ್ಡಿನಲ್ಲಿರುವ ಹೆಸರು) ಪ್ರಾರಂಭಿಸಿರುವ ಚಿಕ್ಕ ಹೊಲಿಗೆ ಉದ್ಯಮದಲ್ಲಿ 40ರ ವಯಸ್ಸಿನ ಅಬ್ದುಲ್ ಸಹ ಜೊತೆಯಾದರು. ಐದು ಜನ ಇತರರೊಂದಿಗೆ ಇವರು ಕೋಣೆಯೊಂದನ್ನು ಹಂಚಿಕೊಂಡಿದ್ದರು. ಚಕ್ ಲಚ್ಛಿಪುರ್ ಊರಿನವರಾದ ಈ ಆರು ಜನರು ಹಸನ್ ಅವರ ಅಂಗಡಿಯಲ್ಲಿ ಹೊಲಿಗೆ ಹಾಗೂ ಕಸೂತಿಯ ಕೆಲಸವನ್ನು ನಿರ್ವಹಿಸುತ್ತಿದ್ದರು.







