"ನಮ್ಮ ಪೂರ್ವಜರ ಆತ್ಮಗಳು ಇಲ್ಲಿ ವಾಸಿಸುತ್ತವೆ" ಬಿದಿರಿನ ಛಾವಣಿ, ನೆಲ ಗೋಡೆಗಳ ನಡುವೆ ಜೇಡ್ ಮಣ್ಣಿನ ತಳವನ್ನು ಹೊಂದಿದ್ದ ಅಡುಗೆ ಮನೆಯನ್ನು ತೋರಿಸುತ್ತಾ ಮೊಂಜಿತ್ ರಿಸಾಂಗ್ ಹೇಳುತ್ತಾರೆ.
ಒಲೆಯು ಒಂದು ಅಡಿ ಎತ್ತರವಿದೆ. ಅದರಲ್ಲಿ ಸೌದೆ ಹಾಕಿ ಅಡುಗೆ ಮಾಡಲಾಗುತ್ತದೆ. "ಇದನ್ನು ಮಾರೋಮ್ ಎಂದು ಕರೆಯಲಾಗುತ್ತದೆ ಮತ್ತು ಇದು ನಮ್ಮ ದೇವರ ಕೋಣೆಯಿದ್ದಂತೆ. ಇದು ಮಿಸಿಂಗ್ ಸಮುದಾಯದ ಎಲ್ಲವೂ ಹೌದು” ಎಂದು ಅವರು ಹೇಳುತ್ತಾರೆ.
ಮೊಂಜಿತ್ ಮತ್ತು ಅವರ ಪತ್ನಿ, ನಯನ್ಮೋನಿ ರಿಸಾಂಗ್ ಅವರು ಇಂದು ರಾತ್ರಿಯ ಔತಣವನ್ನು ಆಯೋಜಿಸುತ್ತಿದ್ದಾರೆ, ಇದು ಸಾಂಪ್ರದಾಯಿಕ ಮಿಸಿಂಗ್ ತಿನಿಸುಗಳನ್ನು ಒಳಗೊಂಡಿದೆ. ದಂಪತಿಗಳು ಮಿಸಿಂಗ್ ಸಮುದಾಯಕ್ಕೆ ಸೇರಿದವರು (ಅಸ್ಸಾಂನಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿಮಾಡಲಾಗಿದೆ) ಮತ್ತು ಒಟ್ಟಿಗೆ ರಿಸಾಂಗ್ಸ್ ಕಿಚನ್ ನಡೆಸುತ್ತಾರೆ - ಅಸ್ಸಾಂನ ಮಜುಲಿ ನದಿ ದ್ವೀಪದಲ್ಲಿರುವ ಗರಮೂರ್‌ನಲ್ಲಿರುವ ಅವರ ಮನೆಯಲ್ಲಿ.
ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಸುಮಾರು 352 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮಜುಲಿ ಭಾರತದ ಅತಿದೊಡ್ಡ ನದಿ ದ್ವೀಪವಾಗಿದೆ. ಇದರ ಭೌಗೋಳಿಕತೆಯು ಹಸಿರು ಭತ್ತ, ಸಣ್ಣ ಸರೋವರಗಳು, ಕಾಡು ಬಿದಿರು ಮತ್ತು ಜವುಗು ಸಸ್ಯವರ್ಗದಿಂದ ನಿರೂಪಿಸಲ್ಪಟ್ಟಿದೆ. ಭಾರಿ ಮಾನ್ಸೂನ್ ಮತ್ತು ನಂತರದ ಪ್ರವಾಹವನ್ನು ತಡೆದುಕೊಳ್ಳಲು ಮನೆಗಳನ್ನು ಊರುಗಂಬಗಳ ಮೇಲೆ ನಿರ್ಮಿಸಲಾಗುತ್ತದೆ. ಈ ದ್ವೀಪವು ಕೊಕ್ಕರೆಗಳು, ಕಿಂಗ್ ಫಿಶರ್ ಮತ್ತು ನೇರಳೆ ಬಣ್ಣದ ನೀರುಹಕ್ಕಿಯಂತಹ ವಲಸೆ ಹಕ್ಕಿಗಳ ವೀಕ್ಷಣೆಗೆ ಹೆಸರುವಾಸಿಯಾಗಿದೆ. ರಮಣೀಯ ಜಿಲ್ಲೆಯು ಪ್ರತಿವರ್ಷ ಪ್ರಪಂಚದಾದ್ಯಂತದ ಸ್ಥಿರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.
















