"ಅವರು ಮಗು ಗರ್ಭದಲ್ಲಿಯೇ ತೀರಿಕೊಂಡಿದೆಯೆಂದು ಹೇಳಿದರು. ನಮಗೆ ಭಯವಾಯಿತು. ಅದರ ನಂತರ ನಮ್ಮನ್ನು ಬೇರೆ ಕಡೆಗೆ ಹೋಗುವಂತೆ ಹೇಳಿದರು. ಹಾಗಾಗಿ ನಾನು ನನ್ನ ಸೊಸೆಯನ್ನು ಪಟ್ಟಣದ ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಲು ನಿರ್ಧರಿಸಿದೆ." ಸುಖಿಯಾ ದೇವಿ ತನ್ನ ಸೊಸೆ ಕುಸುಮ್ ಜೊತೆ ವೈಶಾಲಿ ಜಿಲ್ಲಾ ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ತಮ್ಮೊಂದಿಗೆ ಹೇಗೆ ವರ್ತಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ.
ಅರವತ್ತೆರಡು ವರ್ಷದ ಕೃಷಿ ಕಾರ್ಮಿಕರಾದ ಅವರು ಬೆಳಗಿನ 10 ಗಂಟೆ ಸಮಯದಲ್ಲಿ, ಲಸಿಕೆ ಹಾಕಿಸಲೆಂದು ತನ್ನ ಒಂದು ದಿನದ ಮೊಮ್ಮಗಳನ್ನು ಎತ್ತಿಕೊಂಡು ಕಾಯುತ್ತಿದ್ದರು.
ಅವರ 28 ವರ್ಷದ ಸೊಸೆಗೆ ಹೆರಿಗೆ ನೋವು ಪ್ರಾರಂಭವಾದಾಗ, ಸುಖಿಯಾ ಅವರನ್ನು ವೈಶಾಲಿಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಮಗು ಹೊಟ್ಟೆಯಲ್ಲಿ ಸತ್ತಿದೆ ಎಂದು ಅಲ್ಲಿದ್ದ ಅಟೆಂಡೆಂಟ್ ಹೇಳಿದರು. ಇದರಿಂದ ಆಘಾತಕ್ಕೊಳಗಾದ ಸುಖಿಯಾ ತನ್ನ ಸೊಸೆ ಕುಸುಮ್ ಅವರನ್ನು ಕರೆದುಕೊಂಡು ಆಟೋದಲ್ಲಿ ಸುಮಾರು 15 ಕಿ.ಮೀ ದೂರದಲ್ಲಿರುವ ತಮ್ಮ ಊರಿಗೆ (ಹೆಸರು ಹೇಳದಂತೆ ವಿನಂತಿಸಿದರು) ಹೊರಟರು. "ನಾವು ನಮ್ಮ ಮನೆಗೆ ಹೋದೆವು." ಎಂದರು ಸುಖಿಯಾ. "ನಾವು ಕಾರು ಬಾಡಿಗೆಗೆ ತೆಗೆದುಕೊಂಡು ಮಹಿಳಾ ವೈದ್ಯರ (ಸ್ತ್ರೀರೋಗ ತಜ್ಞೆ) ಬಳಿಗೆ ಹೋಗುವುದೆಂದು ತೀರ್ಮಾನಿಸಿದೆ. ಆಗಿದ್ದ ಪರಿಸ್ಥಿತಿಯಲ್ಲಿ ಕಾರಿನ ಬಾಡಿಗೆ ಎಷ್ಟಾಗುತ್ತದೆಯೆಂದು ಸಹ ತಿಳಿಯಲು ಬಯಸಲಿಲ್ಲ. ನನಗೆ ಹೆರಿಗೆಯದ್ದೇ ಚಿಂತೆಯಾಗಿತ್ತು. ನಮ್ಮ ನೆರೆಹೊರೆಯ ಜನರ ಸಹಾಯದಿಂದ ನಾನು ನನ್ನ ಸೊಸೆಯನ್ನು ಗಾಡಿಯಲ್ಲಿ ಕುಳ್ಳಿರಿಸಿ ಕ್ಲಿನಿಕ್ಕಿಗೆ ಹೊರಟೆ."
ಅವರು ಒಂದಿಷ್ಟು ದೂರ ಹೋಗುತ್ತಿದ್ದಂತೆ ʼಗರ್ಭದಲ್ಲೇ ಸತ್ತು ಹೋಗಿದೆ ಎನ್ನಲಾಗಿದ್ದ ಮಗುʼ ಕಾರಿನಲ್ಲಿ ಜೀವಂತ ಜನಿಸಿತು.
"ಅವಳು ಗಾಡಿಯಲ್ಲೇ ಹುಟ್ಟಿದಳು" ಎಂದು ಸುಖಿಯಾ ಹೇಳುತ್ತಾರೆ. ಹೆರಿಗೆ ಸಾಕಷ್ಟು ಸರಾಗವಾಗಿ ನಡೆಯಿತೆಂದು ಅವರು ಹೇಳುತ್ತಾರೆ. ಅವರು ಮೊದಲೇ ಒಂದು ಸೀರೆ ತಂದಿದ್ದರು, ಅದನ್ನು ಅವರು ಹಾಸಲು ಬಳಸಿದರು, ಸ್ಥಳೀಯ ಮೆಡಿಕಲ್ ಶಾಪ್ ಮಾಲೀಕರು (ಅವರ ಜೊತೆಗಿದ್ದವರು) ವಾಹನದಲ್ಲಿ ಸ್ವಲ್ಪ ನೀರು ಇಟ್ಟುಕೊಂಡಿದ್ದರು. "ಆದರೆ ಇದೆಲ್ಲವೂ ಮುಗಿಯಲು ಬಹಳಷ್ಟು ಸಮಯ ತೆಗೆದುಕೊಂಡಿತು ..." ಸುಖಿಯಾ ಹೇಳುತ್ತಾರೆ.
ಜೊತೆಗೆ ಇದಕ್ಕೆ ಸಾಕಷ್ಟು ಹಣವೂ ಖರ್ಚಾಯಿತು. ಹೆಚ್ಚು ದೂರ ಸಾಗದೆಯೂ, ಕಾರ್ ಮಾಲೀಕರು ಕುಟುಂಬಕ್ಕೆ ಪ್ರಯಾಣಕ್ಕಾಗಿ 3,000 ರೂಪಾಯಿಗಳು- ಮತ್ತು ವಾಹನವನ್ನು ಯಾರಿಂದಲಾದರೂ ಕ್ಲೀನ್ ಮಾಡಿಸಲೆಂದು 1,000 ರೂಪಾಯಿಗಳ ಶುಲ್ಕವನ್ನು ವಿಧಿಸಿದರು.
ಹಾಗಾದರೆ ಆರೋಗ್ಯ ಕೇಂದ್ರದಲ್ಲಿ ಏನಾಯಿತು? ನಾವು ಹೋಗಿ ನೋಡಿದೆವು, ಅಲ್ಲಿ ಅಲ್ಟ್ರಾ ಸೌಂಡ್ ಮಷಿನ್ ಅಥವಾ ಬೇರೆ ಯಾವುದೇ ಯಂತ್ರ ಕೆಲಸ ಮಾಡುತ್ತಿರಲಿಲ್ಲ. ಮಗು ಹೊಟ್ಟೆಯಲ್ಲಿ ಸತ್ತಿದೆ ಎಂದು ಅವರು ಯಾವ ಆಧಾರದ ಮೇಲೆ ಹೇಳಿದರು? ಇದೆಲ್ಲವೂ ಯಾವುದೇ ಆಧಾರವಿಲ್ಲದೆ ಘೋಷಿಸಿದ ತೀರ್ಮಾನದಂತೆ ತೋರುತ್ತದೆ.
"ನಾವು [ಪಿಎಚ್‌ಸಿ] ಆಸ್ಪತ್ರೆಗೆ ಬಂದಾಗ, ತಡರಾತ್ರಿಯಾಗಿತ್ತು" ಎಂದು ಸುಖಿಯಾ ಹೇಳುತ್ತಾರೆ. "ಅವರು ಅವಳನ್ನು ಹೆರಿಗೆ ಕೊಠಡಿಗೆ ಕರೆದುಕೊಂಡು ಹೋದರು. ಹಾಗೆ ಹೋದ ಐದು ನಿಮಿಷಗಳ ನಂತರ, ಅವರಲ್ಲಿ ಒಬ್ಬರು ಹಿಂತಿರುಗಿ ಇದು ಬಹಳ ಗಂಭೀರ ಪ್ರಕರವಾಗಿರುವುದರಿಂದ ನಾವು ಖಾಸಗಿ ಆಸ್ಪತ್ರೆಗೆ ಹೋಗುವುದು ಉತ್ತಮವೆಂದು ನನ್ನ ಬಳಿ ಹೇಳಿದರು. ನನ್ನ ಪ್ರಕಾರ ನಂತರ ಹೊರಬಂದಿದ್ದು ದಾಯ್ [ಹೆರಿಗೆ ಸಹಾಯಕಿ] ಮತ್ತು ಆಕೆ ಮಗು ಗರ್ಭದೊಳಗೆ ಸತ್ತಿದೆ ಎಂದು ಹೇಳಿದರು. ಆಗ ರಾತ್ರಿ 11 ಗಂಟೆಯಾಗಿದ್ದರಿಂದ ನಾವು ನಮ್ಮ ಸ್ಥಳೀಯ ಆಶಾ ಕಾರ್ಯಕರ್ತೆಯೊಂದಿಗೆ ಬಂದಿರಲಿಲ್ಲ. ಹಾಗಾಗಿ ನಾನು ಮನೆಗೆ ಹಿಂದಿರುಗಿ ನನ್ನ ನೆರೆಹೊರೆಯವರ ಸಹಾಯದಿಂದ ಬೊಲೆರೊ ವಾಹನವೊಂದನ್ನು ಬಾಡಿಗೆಗೆ ಪಡೆದೆ. ವಾಹನವು ಹಳ್ಳಿಯ ಒಬ್ಬರಿಗೆ ಸೇರಿದ್ದು, ಆದ್ದರಿಂದ ನಾವು ಅದನ್ನು 15 ನಿಮಿಷಗಳಲ್ಲಿ ಪಡೆಯುವಲ್ಲಿ ಯಶಸ್ವಿಯಾದೆವು. ಇಲ್ಲದೆ ಹೋಗಿದ್ದರೆ ಏನಾಗುತ್ತಿತ್ತೋ ದೇವರಿಗಷ್ಟೇ ಗೊತ್ತು.”
ಗಾಡಿಯ ಬಾಡಿಗೆ (ಮತ್ತು ಅದರ ಕ್ಲೀನಿಂಗ್) 4,000 ರೂಪಾಯಿಗಳಾಗಬಹುದೆಂದು ಸುಖಿಯಾ ಊಹಿಸಿಯೂ ಇರಲಿಲ್ಲ. “ಗಾಡಿ ವ್ಯವಸ್ಥೆಯಾದ ತಕ್ಷಣ ನಾವು ನಮ್ಮ ಹಳ್ಳಿಯ ಹತ್ತಿರದ ಮೆಡಿಕಲ್ ಶಾಪ್ ಮಾಲಿಕರೊಬ್ಬರನ್ನು ಕರೆದುಕೊಂಡು ಡಾಕ್ಟರ್ ಬಳಿಗೆಂದು ಹೊರಟೆವು. ಅವರು ಕುಸುಮ್‌ಗೆ ಒಂದು ಬಾಟಲಿಯನ್ನು ಹಾಕಿದರು [ಒಂದು ಇಂಜೆಕ್ಷನ್ ಮತ್ತು ಡ್ರಿಪ್] ನಂತರ ನನ್ನ ಸೊಸೆ ಮಗುವಿಗೆ ಜನ್ಮ ನೀಡಿದಳು. ಇದಾದ ಮೇಲೆ ಅಲ್ಲಿಂದ [ಗಾಡಿಯಲ್ಲಿ] ಮನೆಗೆ ಮರಳಿದೆವು.” ಇದೆಲ್ಲ ಮುಗಿಯುವ ಹೊತ್ತಿಗೆ ಮಧ್ಯರಾತ್ರಿ ಕಳೆದಿತ್ತು.
ಅದಾದ ಮರುದಿನವೇ ನಾನು ಸುಖಿಯಾರನ್ನು ಆರೋಗ್ಯ ಕೇಂದ್ರದಲ್ಲಿ ಭೇಟಿಯಾದೆ. ಮಗುವಿಗೆ ಲಸಿಕೆ ಹಾಕಿಸಲು ಮತ್ತು ಮಗುವಿನ ಜನನ ಪ್ರಮಾಣಪತ್ರವನ್ನು ಪಡೆಯಲೆಂದು ಅವುರು ಅಲ್ಲಿಗೆ ಬಂದಿದ್ದರು. "ಈ ಜನರು ಹಣ ಕೊಡದಿದ್ದರೆ, ಕಾಗದಪತ್ರಗಳನ್ನು ತಯಾರಿಸುವುದಿಲ್ಲ ಎಂದು ಹೇಳುತ್ತಾರೆ," ಎಂದು ಅವರು ಹೇಳಿದರು.
ವಿಪರ್ಯಾಸವೆಂದರೆ, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಿಂದಿನ ದಿನ ಯಾವ ಮಗು ಗರ್ಭದಲ್ಲಿ ಸತ್ತಿದೆಯೆಂದು ಘೋಷಿಸಿದ್ದರೋ ಅದೇ ಮಗುವಿನ ಜನನ ಪ್ರಮಾಣಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು.
ʼಅವರು ಅವಳನ್ನು ಹೆರಿಗೆ ಕೊಠಡಿಗೆ ಕರೆದುಕೊಂಡು ಹೋದರು. ಹಾಗೆ ಹೋದ ಐದು ನಿಮಿಷಗಳ ನಂತರ, ಅವರಲ್ಲಿ ಒಬ್ಬರು ಹಿಂತಿರುಗಿ ಇದು ಬಹಳ ಗಂಭೀರ ಪ್ರಕರವಾಗಿರುವುದರಿಂದ ನಾವು ಖಾಸಗಿ ಆಸ್ಪತ್ರೆಗೆ ಹೋಗುವುದು ಉತ್ತಮವೆಂದು ನನ್ನ ಬಳಿ ಹೇಳಿದರುʼ
"ಇಲ್ಲಿ ಪ್ರತಿಯೊಬ್ಬರೂ ಹಣವನ್ನು ಬಯಸುತ್ತಾರೆ. ಅವರ ಮನಸ್ಸಿಗೆ ಬಂದಂತೆ ಹಣಕ್ಕೆ ಬೇಡಿಕೆಯಿಡುತ್ತಾರೆ. ನಾನು ಒಬ್ಬ ವ್ಯಕ್ತಿಗೆ 100 ರೂಪಾಯಿಗಳನ್ನು ನೀಡಿದ್ದೇನೆ, ನಂತರ 300 ಇನ್ನೊಬ್ಬರಿಗೆ ಪೇಪರ್ [ಜನನ ಪ್ರಮಾಣಪತ್ರ] ತಯಾರಿಸಲು. ನಂತರ ನಾನು ಇನ್ನೊಬ್ಬ ಮಹಿಳೆಗೆ ಇನ್ನೂ 350 ರೂಪಾಯಿಗಳನ್ನು ನೀಡಬೇಕಾಯಿತು,” ಎಂದು ಅವರು ಹೇಳುತ್ತಾರೆ. "ಮೊದಲು, ಕೆಂಪು ಸೀರೆ ಧರಿಸಿದ ಈ ಸಿಸ್ಟರ್," ಹತ್ತಿರದಲ್ಲಿದ್ದ ಸಹಾಯಕ ನರ್ಸ್ ಮಿಡ್‌ವೈಫ್ (ಎಎನ್ಎಂ) ಕಡೆಗೆ ತೋರಿಸಿ, "ಅವಳು 500 ರೂಪಾಯಿಗಳಿಗೆ ಬೇಡಿಕೆಯಿಟ್ಟದ್ದಳು. ಹಣ ನೀಡದಿದ್ದರೆ ಪೇಪರ್ ಸಿಗುವುದಿಲ್ಲ ಎಂದಿದ್ದಳು" ಸುಖಿಯಾ, ಕೊನೆಗೆ, ಇತರರಿಗೆ ಹಣವನ್ನು ನೀಡಿದರು.
“ನೋಡಿ ನನಗೆ ಈ ಪೇಪರ್‌ಗಳ ಬಗ್ಗೆ ಹೆಚ್ಚು ಗೊತ್ತಿಲ್ಲ. ನನಗೆ ಮೂರು ಮಕ್ಕಳಿವೆ ಆದರೆ ಒಬ್ಬರಿಗೂ ಇದನ್ನು ಮಾಡಿಸಿಲ್ಲ. ಆದರೆ ಈಗ ಇದು ಬಹಳ ಮುಖ್ಯವಾದುದೆಂದು ಜನರು ಹೇಳುತ್ತಾರೆ.” ಎನ್ನುತ್ತಾರೆ ಸುಖಿಯಾ.
“ನನಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಇದು ಹಿರಿಯ ಮಗನ ಮಗು. ಎರಡನೇ ಮಗನ ಮದುವೆಯ ಮಾತುಕತೆಗಳು ಮುಗಿದಿವೆ. ಮತ್ತು ಮಗಳು ಎಲ್ಲರಿಗಿಂತಲೂ ಸಣ್ಣವಳು. ಅವಳಿಗಿನ್ನೂ ಮದುವೆಯಾಗಿಲ್ಲ. ಅವಳು ನಮ್ಮೊಡನೆ ವಾಸಿಸುತ್ತಿದ್ದಾಳೆ. ಅವರ ತಂದೆ [ಕೃಷಿಕೂಲಿ ಕಾರ್ಮಿಕ] ಇವರೆಲ್ಲೂ ಚಿಕ್ಕವರಿರುವಾಗಲೇ ತೀರಿಕೊಂಡರು” ಎನ್ನುತ್ತಾ ಸುಖಿಯಾ ಬಾಗಿ ಅವರು ಇಷ್ಟು ಚಿಕ್ಕವರಿದ್ದರೆಂದು ತಮ್ಮ ಕೈಗಳ ಮೂಲಕ ತೋರಿಸಿದರು.
“ನಾನು ನನ್ನ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಹಲವು ವರ್ಷಗಳ ಕಾಲ ಬೇರೆಯವರ ಹೊಲಗಳಲ್ಲಿ ಕೂಲಿ ಮಾಡುತ್ತಿದ್ದೆ.” ಎನ್ನುತ್ತಾರೆ ಸುಖಿಯಾ. ಈಗ ಅವರ ಗಂಡು ಮಕ್ಕಳು ಹಣ ಕಳುಹಿಸುತ್ತಾರೆ. ಮತ್ತು ಅವರು ಮನೆಯಲ್ಲಿ ಮೊಮ್ಮಕ್ಕಳ ಇಬ್ಬರು ಮೊಮ್ಮಕ್ಕಳ (ಈಗ ಜನಿಸಿರುವುದೂ ಸೇರಿ) ಲಾಲನೆ ಪಾಲನೆ ಮಾಡುತ್ತಾರೆ. ಮಕ್ಕಳ ತಾಯಿ ಕುಸುಮ್ ಗೃಹಿಣಿ. ಮಗಳು ಕೂಡಾ ಮನೆಯಲ್ಲಿದ್ದಾರೆ.
"ನನ್ನ ಗಂಡುಮಕ್ಕಳಿಬ್ಬರೂ ಖಾಸಗಿ ಗುತ್ತಿಗೆದಾರರಡಿ 'ಕಂಪನಿಯಲ್ಲಿ' ಕೆಲಸ ಮಾಡುತ್ತಾರೆ. ಕಿರಿಯವ ಮುಂಬೈನಲ್ಲಿ ವಾಸಿಸುತ್ತಿದ್ದಾನೆ ಮತ್ತು ಅಲ್ಲಿ ವಿದ್ಯುತ್ ಬೋರ್ಡ್‌ಗಳನ್ನು ತಯಾರಿಸುತ್ತಾನೆ. ಮತ್ತು ಈ ಮಗುವಿನ ತಂದೆ [34 ವರ್ಷ] ಪಂಜಾಬ್‌ನಲ್ಲಿ ಒಳಾಂಗಣವನ್ನು ನಿರ್ಮಿಸಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಕೆಲಸ ಮಾಡುವ ಕುಶಲಕರ್ಮಿಯಾಗಿ ಕೆಲಸ ಮಾಡುತ್ತಾನೆ. ಲಾಕ್‌ಡೌನ್ ಸಮಯದಲ್ಲಿ ನನ್ನ ಪುತ್ರರಿಬ್ಬರೂ ಮನೆಗೆ ಬರಲು ಸಾಧ್ಯವಾಗಲಿಲ್ಲ,” ಎನ್ನುತ್ತಾ ಸುಖಿಯಾರ ಧ್ವನಿ ಭಾರವಾಯಿತು. ಅವರು ಒಂದಷ್ಟು ಹೊತ್ತು ಮೌನದ ಮೊರೆಹೋದರು.
"ನನ್ನ ಹಿರಿಯ ಮಗನಿಗೆ ಐದು ವರ್ಷಗಳ ಹಿಂದೆ ಮದುವೆಯಾಯಿತು. ಇದು ಅವನ ಎರಡನೇ ಮಗು. ನನ್ನ ಹಿರಿಯ ಮೊಮ್ಮಗನಿಗೆ ಈಗ ಮೂರೂವರೆ ವರ್ಷ,” ಎಂದು ಅದೇ ಆರೋಗ್ಯ ಕೇಂದ್ರದಲ್ಲಿ ಜನಿಸಿದ ಕುಸುಮ್ ಅವರ ಮೊದಲ ಮಗು ಪ್ರಭಾತ್ ಕುರಿತು ಅವರು ಹೇಳುತ್ತಾರೆ. ಸುಖಿಯಾ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಂತಿದ್ದರೆ ಕುಸುಮ್ ಪ್ರಸವ ನಂತರದ ಆರೈಕೆ ಕೊಠಡಿಯಲ್ಲಿ ಮಲಗಿದ್ದರು. ಕುಸುಮ್ ಎಡಭಾಗದಲ್ಲಿ ಬಿಳಿ ಗೋಡೆಯಿದೆ. ಅದು ಪಾನ್‌ನಿಂದ ಅರ್ಧ-ಕೆಂಪು ಬಣ್ಣಕ್ಕೆ ತಿರುಗಿದ್ದು, ಜನರು ಯುಗಾಂತರಗಳಿಂದ ಅಲ್ಲಿ ಉಗುಳುತ್ತಿದ್ದಾರೆ. ಫೋಟೋಗ್ರಫಿಯನ್ನು ವಾರ್ಡ್‌ನಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕುಸುಮ್ ಮಲಗಿದ್ದ ಬರಿಯ ಹಾಸಿಗೆಯ ಬಲಭಾಗದಲ್ಲಿ ಅಲ್ಟ್ರಾಸೌಂಡ್ ಯಂತ್ರವಿದ್ದು ಅದು ಈಗ ಜೇಡಗಳಿಗೆ ನೆಲೆಯಾಗಿದೆ. ಇದು ಕಳೆದ ವಾರ ಕೆಲಸ ಮಾಡುವುದನ್ನು ನಿಲ್ಲಿಸಿತು ಮತ್ತು ಸ್ವೀಪರ್ ಅದನ್ನು ಸ್ವಚ್ಛಗೊಳಿಸಿಲ್ಲ" ಎಂದು ಕರ್ತವ್ಯದಲ್ಲಿರುವ ಎಎನ್ಎಂ ಹೇಳುತ್ತಾರೆ.
ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿ, ಕುಸುಮ್ ಖಾಸಗಿ ಆಸ್ಪತ್ರೆಗೆ ಅಲ್ಟ್ರಾಸೌಂಡ್ ತಪಾಸಣೆಗಾಗಿ ಹೋಗಿದ್ದರು - ಪಿಎಚ್‌ಸಿಯ ಸಿಬ್ಬಂದಿಯ ಸಲಹೆಯ ಮೇರೆಗೆ. ಆದರೆ "ನಂತರ, ನಾವು ಹೆರಿಗೆಗಾಗಿ ಇಲ್ಲಿಗೆ ಬಂದಾಗ, ಅವರು ನಮ್ಮನ್ನು ಕಳುಹಿಸಿದರು, ಇದರಿಂದ ನಮಗೆ ಬಹಳ ಕಷ್ಟವಾಯಿತು" ಎಂದು ಸುಖಿಯಾ ಹೇಳುತ್ತಾರೆ. ನಮ್ಮ ಸಂಭಾಷಣೆಯಲ್ಲಿ ಯಾವುದೇ ನಡುವೆ ಕುಸುಮ್ ಆಘಾತದಿಂದಾಗಿ ನಮ್ಮೊಂದಿಗೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಸುಖಿಯಾ, ಫೈಲೇರಿಯಾಸಿಸ್ ನಿಂದ ಬಳಲುತ್ತಿದ್ದು (ಅವಳ ಒಂದು ಕಾಲು ಇನ್ನೊಂದರ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚು ಊದಿಕೊಂಡಿದೆ), ಅವರು ಹೀಗೆ ಹೇಳುತ್ತಾರೆ: “ಇದು ಯಾವಾಗಲೂ ಹೀಗೇ ಇರುತ್ತದೆ. ದೀರ್ಘಕಾಲ ನಿಲ್ಲುವುದು ನನಗೆ ಸವಾಲಿನ ಕೆಲಸ. ನಾನು ಹೆಚ್ಚು ನಡೆಯಲು ಸಾಧ್ಯವಿಲ್ಲ. ನಾನು ಔಷಧಿ ಸೇವಿಸಿದಾಗಲಷ್ಟೇ ನೋವು ಕಡಿಮೆಯಿರುತ್ತದೆ. ಆದರೆ ನಾನು ಈ ಕಾಲುಗಳಿಂದ ಎಲ್ಲವನ್ನೂ ಮಾಡಬೇಕು. ಈಗ ನಾನು ಇಲ್ಲಿದ್ದೇನೆ, ನನಗೂ ಒಂದಿಷ್ಟು ಔಷಧಿಗಳನ್ನು ತೆಗೆದುಕೊಳ್ಳಬೇಕಿವೆ. ಔಷಧಿಗಳು ಖಾಲಿಯಾಗಿವೆ.”
ನಂತರ ತನ್ನ ಹಿರಿಯ ಮೊಮ್ಮಗುವನ್ನು ತನ್ನ ತೋಳುಗಳಲ್ಲಿಟ್ಟುಕೊಂಡು, ಅವರು ಆರೋಗ್ಯ ಕೇಂದ್ರದ ದವಾ ವಿತರಣ ಕೇಂದ್ರದ (ಔಷಧ ವಿತರಣಾ ಕೇಂದ್ರ) ಕಡೆಗೆ ಕುಂಟುತ್ತಾ ನಡೆದರು.
ಗ್ರಾಮೀಣ ಭಾರತದಲ್ಲಿ ಹದಿಹರೆಯದ ಹುಡುಗಿಯರು ಮತ್ತು ಯುವತಿಯರ ಬಗ್ಗೆ ಪರಿ ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ನ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಸಾಮಾನ್ಯ ಜನರ ಧ್ವನಿಗಳು ಮತ್ತು ಜೀವಂತ ಅನುಭವದ ಮೂಲಕ ಈ ಪ್ರಮುಖ ಆದರೆ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ ಬೆಂಬಲಿತ ಉಪಕ್ರಮದ ಭಾಗವಾಗಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ
ಜಿಗ್ಯಾಸಾ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.
ಅನುವಾದ: ಶಂಕರ ಎನ್. ಕೆಂಚನೂರು