ಇದು ಸ್ವಾತಂತ್ರ್ಯ, ಪ್ರತಿರೋಧ ಮತ್ತು ದೃಢತೆಯ ಸಂಗೀತವಾಗಿದೆ, ಇದನ್ನು ಪ್ರಸಿದ್ಧ ಗರ್ಬಾ ಸಂಗೀತ ರಾಗಕ್ಕೆ ಅಲಂಕರಿಸಲಾಗಿದೆ. ಇದು ನಿಜವಾಗಿಯೂ ಉತ್ತರಾಧಿಕಾರ ಮತ್ತು ಸಂಸ್ಕೃತಿಯ ಆದೇಶಗಳನ್ನು ಪ್ರಶ್ನಿಸದೆ ಪಾಲಿಸಲು ಸಿದ್ಧವಿಲ್ಲದ ಗ್ರಾಮೀಣ ಮಹಿಳೆಯರ ಧ್ವನಿಯಾಗಿದೆ.
ಕಛ್‌ನಲ್ಲಿ ಮಾತನಾಡುವ ಹಲವು ಭಾಷೆಗಳಲ್ಲಿ ಒಂದಾದ ಗುಜರಾತಿಯಲ್ಲಿ ಬರೆಯಲಾಗಿರುವ ಈ ಜಾನಪದ ಗೀತೆಯನ್ನು ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಗ್ರಾಮೀಣ ಮಹಿಳೆಯರು ಬರೆದಿದ್ದಾರೆ.
ಇದನ್ನು ಯಾವಾಗ ಬರೆಯಲಾಗಿದೆ ಅಥವಾ ಅದನ್ನು ರಚಿಸಿದ ಮಹಿಳೆಯರು ಯಾರು ಎಂದು ಕಂಡುಹಿಡಿಯುವುದು ಕಷ್ಟ. ಆದರೆ ಈ ಜನಪದ ಗೀತೆಯನ್ನು ಕೇಳುವವರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕೇಳುವ ಹೆಣ್ಣಿನ ಗಟ್ಟಿ ದನಿ ಕೇಳಿಸುತ್ತದೆ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು.
ಈ ಜಾನಪದ ಗೀತೆಯನ್ನು ರಚಿಸಿರುವ ನಿಖರವಾದ ಸಂದರ್ಭ ಮತ್ತು ಉದ್ದೇಶದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲವಾದರೂ, ಗುಜರಾತ್‌ನಾದ್ಯಂತ 2003ರ ಸುಮಾರಿಗೆ ಹಲವಾರು ಹಾಡುಗಳನ್ನು ಬರೆಯಲಾಗಿದೆ, ವಿಶೇಷವಾಗಿ ಕಛ್‌ನಲ್ಲಿ ನಡೆದ ಮಹಿಳೆಯರ ಭೂ ಮಾಲೀಕತ್ವ ಮತ್ತು ಜೀವನೋಪಾಯದ ಸಮಸ್ಯೆಗಳ ಮೇಲಿನ ಚರ್ಚೆಗಳು ಮತ್ತು ಕಾರ್ಯಾಗಾರಗಳ ದಾಖಲೆಗಳಲ್ಲಿ. ಆ ಅವಧಿಯಲ್ಲಿ, ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಗಳು ಸಾಮಾನ್ಯವಾಗಿ ಕೃಷಿ ಉತ್ಪಾದನೆಗೆ ಮಹಿಳೆಯರ ಕೊಡುಗೆ ಮತ್ತು ಭೂಮಿಯ ಮೇಲಿನ ಮಹಿಳೆಯರ ಮಾಲೀಕತ್ವದ ಕೊರತೆಯಂತಹ ವಿಷಯಗಳನ್ನು ಚರ್ಚಿಸಿದವು. ಈ ಚರ್ಚೆಗಳ ಫಲವಾಗಿ ಈ ಜಾನಪದ ಗೀತೆ ಹುಟ್ಟಿದೆ ಎಂದು ನಾವು ಸ್ಪಷ್ಟವಾಗಿ ಹೇಳಲಾಗುವುದಿಲ್ಲ.
ಆದಾಗ್ಯೂ, ಈ ಜಾನಪದ ಹಾಡು ಈ ಪ್ರದೇಶದೊಳಗೆ ಮತ್ತು ಹೊರಗೆ ಎಲ್ಲೆಡೆ ತನ್ನ ಹೆಜ್ಜೆಗಳನ್ನು ಹರಡಿದೆ. ಈ ಪಯಣದಲ್ಲಿ ಯಾವುದೇ ಜಾನಪದ ಗೀತೆಯಂತೆ ಕೆಲವು ಸಾಲುಗಳನ್ನು ಸೇರಿಸಿ, ಕೆಲವನ್ನು ಬದಲಿಸಿ, ಕೇಳುಗರಿಗೆ ಇಷ್ಟವಾಗುವಂತೆ ಗೀತರಚನೆಕಾರರು ಇದನ್ನು ತಿರುಚಿದ್ದಾರೆ. ಇಲ್ಲಿ ಪ್ರಸ್ತುತಪಡಿಸಲಾದ ಈ ಜಾನಪದ ಗೀತೆಗೆ ನಖತ್ರಾ ತಾಲೂಕಿನ ನಂದುಬಾ ಜಡೇಜಾ ಧ್ವನಿ ನೀಡಿದ್ದಾರೆ.
ಸೂರ್ವಾಣಿ ಧ್ವನಿಮುದ್ರಿಸಿದ 341 ಹಾಡುಗಳಲ್ಲಿ ಇದೂ ಒಂದು. ಸೂರ್ವಾಣಿ ಒಂದು ಸಮುದಾಯ ರೇಡಿಯೋ ಕೇಂದ್ರವಾಗಿದ್ದು, ಇದು 2008ರಲ್ಲಿ ಪ್ರಾರಂಭವಾಯಿತು. ಕಛ್ ಮಹಿಳಾ ವಿಕಾಸ್ ಸಂಘಟನೆಯ ಮೂಲಕ ಸಂಗ್ರಹವು ಪರಿಗೆ ತಲುಪಿದೆ, ಇದು ಈ ಪ್ರದೇಶದ ಸಂಸ್ಕೃತಿ, ಭಾಷೆ ಮತ್ತು ಸಂಗೀತದ ವೈವಿಧ್ಯಮಯ ಪರಂಪರೆಯನ್ನು ತನ್ನ ಹಾಡುಗಳಲ್ಲಿ ಬಿಂಬಿಸುತ್ತದೆ. ಈ ಸಂಕಲನವು ಕಛ್‌ನ ಸಂಗೀತ ಸಂಪ್ರದಾಯವನ್ನು ಸಂರಕ್ಷಿಸಲು ಕೊಡುಗೆ ನೀಡಿದೆ, ಅದು ಈಗ ಅವನತಿಯತ್ತ ಸಾಗುತ್ತಿದೆ. ಈ ಸಂಪ್ರದಾಯವು ಮರುಭೂಮಿಯ ಜೌಗು ಪ್ರದೇಶದಲ್ಲಿ ಮುಳುಗುತ್ತಿದೆ ಎಂದು ತೋರುತ್ತದೆ.



