ಅವರು ಸಾವಿರಾರು ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅವರು ಪ್ರತಿದಿನ, ಕಾಲ್ನಡಿಗೆಯಲ್ಲಿ, ಬೈಸಿಕಲ್‌ಗಳಲ್ಲಿ, ಟ್ರಕ್‌ಗಳಲ್ಲಿ, ಬಸ್‌ಗಳಲ್ಲಿ, ಅಥವಾ ಅವರಿಗೆ ಸಿಗುವ ಯಾವುದೇ ವಾಹನಗಳ ಒಳಗೆ ಅಥವಾ ಅದರ ಮೇಲೆ ಕುಳಿತು ಬರುತ್ತಿದ್ದಾರೆ. ಆಯಾಸ, ದಣಿವು ಹಾಗು ಮನೆಯನ್ನು ತಲುಪುವ ನಿರೀಕ್ಷೆಯಲ್ಲಿ ಎಲ್ಲಾ ವಯಸ್ಸಿನ ಪುರುಷರು, ಮಹಿಳೆಯರು ಮತ್ತು ಅನೇಕ ಮಕ್ಕಳು ಸಹ ಕಾತರಿಸುತ್ತಿದ್ದಾರೆ
ಈ ಜನರು ಹೈದರಾಬಾದ್ ಮತ್ತು ಅದರಾಚೆಯಿಂದ, ಮುಂಬೈ ಮತ್ತು ಗುಜರಾತ್‌ನಿಂದ, ವಿದರ್ಭದಾದ್ಯಂತ ಮತ್ತು ಪಶ್ಚಿಮ ಮಹಾರಾಷ್ಟ್ರದಿಂದ, ಉತ್ತರ ಅಥವಾ ಪೂರ್ವದಿಂದ - ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕಡೆಗೆ ನಡೆಯುತ್ತಿದ್ದಾರೆ.
ಲಾಕ್‌ಡೌನ್ ಹೊಡೆತದಿಂದಾಗಿ ದೇಶದಾದ್ಯಂತ ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತಗೊಂಡಿದೆ, ಜೀವನೋಪಾಯಗಳು ಸ್ಥಗಿತಗೊಂಡಿವೆ ಇಂತಹ ಸಂದರ್ಭಲ್ಲಿ ಅವರ ಆಸೆ ಕೇವಲ ಒಂದೇ: ಅವರ ಹಳ್ಳಿಗಳಿಗೆ, ಅವರ ಕುಟುಂಬಗಳಿಗೆ ಮತ್ತು ಅವರ ಪ್ರೀತಿಪಾತ್ರರ ಬಳಿ ಹಿಂತಿರುಗುವುದು. ಪ್ರಯಾಣ ಎಷ್ಟೇ ಕಠಿಣವಾಗಿದ್ದರೂ ಅವರಿಗೆ ಈ ಮಾರ್ಗವೇ ಉತ್ತಮವೆನಿಸಿದೆ.
ಅವರಲ್ಲಿ ಹಲವರು ದೇಶದ ಭೌಗೋಳಿಕ ಕೇಂದ್ರವಾಗಿರುವ ಹಾಗು ಸಾಮಾನ್ಯ ಸಮಯದಲ್ಲಿ ದೇಶದ ಪ್ರಮುಖ ರೈಲು ಜಂಕ್ಷನ್ ಆಗಿರುವ ನಾಗ್ಪುರದ ಮೂಲಕ ಹೋಗುತ್ತಿದ್ದಾರೆ. ಈ ಪ್ರಯತ್ನಗಳು ಮೇ ತಿಂಗಳಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೆಲವು ವಲಸಿಗರನ್ನು ಬಸ್‌ಗಳು ಮತ್ತು ರೈಲುಗಳಲ್ಲಿ ಸಾಗಿಸಲು ಪ್ರಾರಂಭಿಸುವ ತನಕ ಮುಂದುವರಿಸಿದರು, ಆದರೆ ಸೀಟು ಸಿಗದ ಸಾವಿರಾರು ಜನರು ತಮ್ಮ ದೂರದ ಊರಿಗೆ ಪ್ರಯಾಣಿಸುವ ಪ್ರಯತ್ನದಲ್ಲಿ ತಮಗೆ ಕಂಡ ಎಲ್ಲಾ ರೀತಿಯಲ್ಲೂ ಮುಂದುವರಿಸಿದರು.
















