ರೇಖಾಳಿಗೆ ಮದುವೆಯಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲವೆಂದು ತಿಳಿದು 10 ದಿನಗಳಾಯಿತು. ಅವಳು 15 ವರ್ಷ ವಯಸ್ಸಿನ ಹುಡುಗಿಯೊಬ್ಬಳು ವಿರೋಧಿಸಲು ಸಾಧ್ಯವಾವಿರುವಷ್ಟು ವಿರೋಧಿಸಿದಳು ಆದರೆ ಆಕೆಯ ಪೋಷಕರು ಯಾವುದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. "ಅವಳು ನಾನು ಇನ್ನೂ ಓದಬೇಕೆಂದು ಅಳುತ್ತಾಳೆ" ಎಂದು ಆಕೆಯ ತಾಯಿ ಭಾಗ್ಯಶ್ರೀ ಹೇಳುತ್ತಾರೆ.

ತಮ್ಮ 30ರ ಹರೆಯದ ಕೊನೆಯಲ್ಲಿರುವ ಭಾಗ್ಯಶ್ರೀ ಮತ್ತು ಆಕೆಯ ಪತಿ, ಅಮರ್,  ತಮ್ಮ ಮಕ್ಕಳೊಂದಿಗೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬಡ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ವರ್ಷ ನವೆಂಬರ್‌ನಲ್ಲಿ ಅವರು ಕಬ್ಬು ಕತ್ತರಿಸುವ ಕೆಲಸಕ್ಕಾಗಿ ಪಶ್ಚಿಮ ಮಹಾರಾಷ್ಟ್ರ ಅಥವಾ ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ. ಅಲ್ಲಿನ ಹೊಲಗಳಲ್ಲಿ ಆರು ತಿಂಗಳ ಕಠಿಣ ಶ್ರಮದ ನಂತರ, ಅವರು ಇಬ್ಬರ ನಡುವೆ 80,000 ಸಂಪಾದಿಸುತ್ತಾರೆ. ಅವರ ಹೆಸರಿನಲ್ಲಿ ಭೂಮಿ ಇಲ್ಲದ ಕಾರಣ, ದಲಿತ ಸಮುದಾಯದ ಮಾತಂಗ್ ಜಾತಿಗೆ ಸೇರಿದ ಈ ಕುಟುಂಬಕ್ಕೆ ಕಬ್ಬು ಕಟಾವು ಮಾಡುವುದೇ ಆದಾಯದ ಮೂಲವಾಗಿದೆ.

ಪ್ರತಿ ಬಾರಿ ಆಕೆಯ ಪೋಷಕರು ವಲಸೆ ಹೋದಾಗ, ರೇಖಾ ಮತ್ತು  12 ಹಾಗೂ 8 ವರ್ಷ ವಯಸ್ಸಿನ ಆಕೆಯ ಒಡಹುಟ್ಟಿದವರು, ತಮ್ಮ ಅಜ್ಜಿಯ ಆರೈಕೆಯಲ್ಲಿ ಉಳಿಯುತ್ತಿದ್ದರು (ಆಕೆ ಕಳೆದ ವರ್ಷ ಮೇ ತಿಂಗಳಲ್ಲಿ ನಿಧನರಾದರು). ಅವರು ತಮ್ಮ ಹಳ್ಳಿಯಿಂದ ಸ್ವಲ್ಪವೇ ದೂರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಆದರೆ ಸಾಂಕ್ರಾಮಿಕ ಪಿಡುಗು ಮಾರ್ಚ್ 2020ರಲ್ಲಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ತಂದಾಗ, 9ನೇ ತರಗತಿಯಲ್ಲಿದ್ದ ರೇಖಾ ಮನೆಯಲ್ಲೇ ಇರಬೇಕಾಯಿತು. 500ಕ್ಕೂ ಹೆಚ್ಚು ದಿನಗಳಿಂದ ಬೀಡ್‌ನಲ್ಲಿರುವ ಶಾಲೆಗಳು ಮುಚ್ಚಿವೆ.

"ಶಾಲೆಗಳು ಕೂಡಲೇ ಕಾರ್ಯಾರಂಭ ಮಾಡುವುದಿಲ್ಲವೆಂದು ನಮಗೆ ಅರಿವಾಯಿತು" ಎಂದು ಭಾಗ್ಯಶ್ರೀ ಹೇಳುತ್ತಾರೆ. "ಶಾಲೆ ತೆರೆದಿರುತ್ತಿದ್ದ ಸಮಯದಲ್ಲಿ, ಸುತ್ತಲೂ ಶಿಕ್ಷಕರು ಮತ್ತು ಮಕ್ಕಳು ಇರುತ್ತಿದ್ದರು. ಊರು ವ್ಯಸ್ಥವಾಗಿರುತ್ತಿತ್ತು. ಶಾಲೆ ಮುಚ್ಚಿದ ನಂತರ ಸುರಕ್ಷತೆಯ ಕಾರಣದಿಂದಾಗಿ ನಾವು ಅವಳನ್ನು ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿರಲಿಲ್ಲ.“

ಹಾಗಾಗಿ ಭಾಗ್ಯಶ್ರೀ ಮತ್ತು ಅಮರ್ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ರೇಖಾಳನ್ನು 22 ವರ್ಷದ ಆದಿತ್ಯನೊಂದಿಗೆ ಮದುವೆ ಮಾಡಿಸಿದರು. ಆದಿತ್ಯನ ಕುಟುಂಬವು 30 ಕಿಲೋಮೀಟರ್ ದೂರದ ಹಳ್ಳಿಯಿಂದ ಬಂದಿತ್ತು, ಮತ್ತು ಅವರು ಕೆಲಸದ ಹಂಗಾಮು ಅವಲಂಬಿತ ವಲಸೆ ಕಾರ್ಮಿಕರಾಗಿದ್ದರು. ನವೆಂಬರ್ 2020ರಲ್ಲಿ, ಕಬ್ಬಿನ ಕಟಾವು ಆರಂಭವಾಗುತ್ತಿದ್ದಂತೆ, ರೇಖಾ ಮತ್ತು ಆದಿತ್ಯ ಪಶ್ಚಿಮ ಮಹಾರಾಷ್ಟ್ರಕ್ಕೆ ವಲಸೆ ಹೋದರು- ಅವಳ ಹೆಸರು ಶಾಲೆಯ ರಿಜಿಸ್ಟರಿನಲ್ಲಿ ಮಾತ್ರ ಉಳಿಯಿತು.

ಈ ಕೊರೋನಾ ಮಹಾಮಾರಿಯಿಂದಾಗಿ ರೇಖಾಳಂತಹ ಹದಿಹರೆಯದ ಹುಡುಗಿಯರು ಮದುವೆಯಾಗಲೇಬೇಕಾದ ಅನಿವಾರ್ಯತೆಗೆ ತಳ್ಳಲ್ಪಡುತ್ತಿದ್ದಾರೆ. ಮಾರ್ಚ್ 2021ರಲ್ಲಿ ಬಿಡುಗಡೆಗೊಂಡ COVID-19: A threat to progress against child marriage ಶೀರ್ಷಿಕೆಯ ಯುನಿಸೆಫ್ ವರದಿ ಪ್ರಕಾರ: ಈ ದಶಕದ ಅಂತ್ಯದ ವೇಳೆಗೆ ಜಾಗತಿಕವಾಗಿ ಹೆಚ್ಚುವರಿಯಾಗಿ 10 ಮಿಲಿಯನ್ ಹುಡುಗಿಯರು ಬಾಲ ವಧುವಾಗುವ ಅಪಾಯವಿದೆ. ಬಾಲ್ಯವಿವಾಹದ ವಿರುದ್ಧದ ಹೋರಾಟದ ಪ್ರಗತಿಗೆ ಇದು ಅಪಾಯಕಾರಿಯಾಗಿದೆ. ಕೋವಿಡ್ -19ರ ಪರಿಣಾಮವಾಗಿ ಶಾಲೆಗಳ ಮುಚ್ಚುವಿಕೆ, ಹೆಚ್ಚುತ್ತಿರುವ ಬಡತನ, ಪೋಷಕರ ಸಾವುಗಳು ಮತ್ತು ಇತರ ಅಂಶಗಳು "ಲಕ್ಷಾಂತರ ಹುಡುಗಿಯರನ್ನು ಈಗಾಗಲೇ ಸಂಕಷ್ಟಕ್ಕೆ ದೂಡಿದೆ" ಎಂದು ವರದಿ ಹೇಳುತ್ತದೆ.

ಕಳೆದ 10 ವರ್ಷಗಳಲ್ಲಿ, ಬಾಲ್ಯ ವಿವಾಹವಾದ ಯುವತಿಯರ ಪ್ರಮಾಣವು ಶೇಕಡಾ 15ರಷ್ಟು ಕಡಿಮೆಯಾಗಿದೆ ಮತ್ತು ಪ್ರಪಂಚದಾದ್ಯಂತ ಸುಮಾರು 25 ಮಿಲಿಯನ್ ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಯುನಿಸೆಫ್ ವರದಿಯು ಸೇರಿಸುತ್ತದೆ. ಈ ಸಾಂಕ್ರಾಮಿಕ ಪಿಡುಗು ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಪ್ರಗತಿಗೆ ಬೆದರಿಕೆಯಾಗಿದೆ, ಮಹಾರಾಷ್ಟ್ರದಲ್ಲಿ ಕೂಡ.

Activists and the police intercepting a child marriage in Beed
PHOTO • Courtesy: Tatwashil Kamble and Ashok Tangde

ಕಾರ್ಯಕರ್ತರು ಮತ್ತು ಪೊಲೀಸರು ಬೀಡ್‌ನಲ್ಲಿ ಬಾಲ್ಯ ವಿವಾಹವನ್ನು ತಡೆಯುತ್ತಿರುವುದು

ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 780 ಬಾಲ್ಯವಿವಾಹಗಳನ್ನು ತಡೆದಿರುವುದಾಗಿ ದಾಖಲಿಸಿದ್ದು, ಇದು ಏಪ್ರಿಲ್ 2020ರಿಂದ ಜೂನ್ 2021ರವರೆಗಿನ ಅಂಕಿ-ಸಂಖ್ಯೆಯಾಗಿದೆ. ಇದು ಸರ್ಕಾರಿ ಸಾಂಪ್ರದಾಯಿಕ ಅಂದಾಜು ಎಂದು ತಾಂಗ್ಡೆ ಮತ್ತು ಕಾಂಬ್ಳೆ ಹೇಳುತ್ತಾರೆ

2015 ಮತ್ತು 2020ರ ನಡುವೆ, ಮಹಾರಾಷ್ಟ್ರದಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹದಲ್ಲಿ ಶೇಕಡಾ 4ರಷ್ಟು ಇಳಿಕೆಯಾಗಿದೆ. 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ( NFHS-4 ) 20-24 ವಯಸ್ಸಿನ ಸುಮಾರು 26 ಪ್ರತಿಶತದಷ್ಟು ಮಹಿಳೆಯರು ಕಾನೂನುಬದ್ಧ ಕನಿಷ್ಠ ಮದುವೆಯ ವಯಸ್ಸಾದ 18 ವರ್ಷ ತುಂಬುವ ಮೊದಲೇ ಮದುವೆಯಾಗಿದ್ದರು. 2019-20 ರಲ್ಲಿ ( NFHS-5 ) ಸಮೀಕ್ಷೆಯ ಸಮಯದಲ್ಲಿ ಈ ಅನುಪಾತವು ಶೇಕಡಾ 22 ರಷ್ಟಿತ್ತು. ಅದೇ ಸಮಯದಲ್ಲಿ, 25-29 ವಯೋಮಾನದ ಪುರುಷರಲ್ಲಿ ಕೇವಲ 10.5 ಪ್ರತಿಶತದಷ್ಟು ಜನರು ಕಾನೂನುಬದ್ಧ ಕನಿಷ್ಠ ವಿವಾಹ ವಯಸ್ಸಾದ 21 ವರ್ಷ ತುಂಬುವ ಮೊದಲೇ ವಿವಾಹವಾಗಿದ್ದರು.

ಬೀಡ್‌ನ 34 ವರ್ಷದ ಸಾಮಾಜಿಕ ಕಾರ್ಯಕರ್ತ ತತ್ವಶೀಲ್ ಕಾಂಬ್ಳೆ ಹೇಳುತ್ತಾರೆ, ಮಕ್ಕಳು ಮತ್ತು ಯುವಕರ ವಿಷಯಕ್ಕೆ ಬಂದಾಗ, ರಾಜ್ಯ ಸರ್ಕಾರವು  ಆನ್‌ಲೈನ್ ತರಗತಿಗಳತ್ತ ಗಮನ ಹರಿಸುತ್ತಿದೆ, ಸ್ಮಾರ್ಟ್‌ಫೋನ್ ಮತ್ತು ಒಂದು ರೀತಿಯ ಸವಲತ್ತುಗಳನ್ನು ಹೊಂದಿರುವ  ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ ಹೊಂದಿರುವ ಪೋಷಕರ ಮಕ್ಕಳಿಗೆ ಮಾತ್ರ ಇದರಿಂದ ಪ್ರಯೋಜನವಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಕೇವಲ 18.5ರಷ್ಟು ಗ್ರಾಮೀಣ ಕುಟುಂಬಗಳು ಇಂಟರ್ನೆಟ್ ಸೌಲಭ್ಯವನ್ನು ಹೊಂದಿವೆಯೆಂದು 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಸುಮಾರು 17 ಪ್ರತಿಶತದಷ್ಟು ಜನರು (5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) "ಇಂಟರ್ನೆಟ್ ಬಳಸುವ ಸಾಮರ್ಥ್ಯ" ಹೊಂದಿದ್ದಾರೆ ಎಂದು ವರದಿ ಹೇಳಿದೆ, ಆದರೆ ಈ ಅನುಪಾತವು ಮಹಿಳೆಯರಲ್ಲಿ 11 ಪ್ರತಿಶತವಾಗಿದೆ.

ಇಂಟರ್ನೆಟ್ ಪ್ರವೇಶದ ಕೊರತೆಯಿರುವ ಬಹುತೇಕ ಮಕ್ಕಳು ಅಂಚಿನಲ್ಲಿರುವ ಸಮುದಾಯಗಳಿಂದ ಬಂದವರಾಗಿದ್ದು, ಬಡತನ ಮತ್ತು ಅಗತ್ಯ ವಸ್ತುಗಳ ಕೊರತೆ ಈಗಾಗಲೇ ಬಾಲಕಿಯರನ್ನು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಬೇಕಾದ ಪರಿಸ್ಥಿತಿಗೆ ದೂಡುತ್ತಿತ್ತು. ಮತ್ತು ಶಾಲೆಗಳ ಮುಚ್ಚುವಿಕೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ, ಇದು ಬೀಡ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಬೀಡ್‌ನಲ್ಲಿ 20-24 ವಯಸ್ಸಿನ ಸುಮಾರು 44 ಪ್ರತಿಶತದಷ್ಟು ಮಹಿಳೆಯರು 2019-20ರಲ್ಲಿ 18 ವರ್ಷ ತುಂಬುವ ಮೊದಲೇ ಮದುವೆಯಾಗಿದ್ದರು ಎಂದು ವರದಿಯೊಂದು ಹೇಳುತ್ತದೆ ( NFHS-5 ). ಇಂತಹ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಜಿಲ್ಲೆಯಲ್ಲಿನ ಬರ ಮತ್ತು ಕೃಷಿ ಸಂಕಷ್ಟದ ಪರಿಸ್ಥಿತಿ ಪರಿಸ್ಥಿತಿ. ವಿಶೇಷವಾಗಿ ಕಬ್ಬು ಕಟಾವಿನಂತಹ ವಲಸೆ ಕೆಲಸದ ಮೇಲಿನ ಜನರ ಅವಲಂಬನೆ.

ಕಬ್ಬಿನ ಹೊಲಗಳಿಗೆ ಕಟಾವಿನ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳುವವವರು ವಿವಾಹಿತ ದಂಪತಿಗಳನ್ನು ನೇಮಿಸಿಕೊಳ್ಳಲು ಬಯಸುತ್ತಾರೆ ಏಕೆಂದರೆ ಈ ಕೆಲಸದಲ್ಲಿ ಇಬ್ಬರು ವ್ಯಕ್ತಿಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ - ಒಬ್ಬರು ಕಬ್ಬನ್ನು ಕತ್ತರಿಸಲು ಮತ್ತು ಇನ್ನೊಬ್ಬರು ಕಟ್ಟು ಕಟ್ಟಿ ಅವುಗಳನ್ನು ಟ್ರಾಕ್ಟರ್‌ನಲ್ಲಿ ತುಂಬಲು. ದಂಪತಿಗಳನ್ನು ಒಂದು ಘಟಕವೆಂದು ಪರಿಗಣಿಸಲಾಗುತ್ತದೆ, ಇದು ಅವರಿಗೆ ಕೂಲಿ ನೀಡುವ ಕೆಲಸವನ್ನು ಸುಲಭವಾಗಿಸುತ್ತದೆ ಮತ್ತು ಪರಸ್ಪರ ಸಂಬಂಧವಿಲ್ಲದ ಇಬ್ಬರು ಕೆಲಸಗಾರರ ನಡುವಿನ ಸಂಘರ್ಷವನ್ನು ತಪ್ಪಿಸುತ್ತದೆ. ಮದುವೆಯಾದ ನಂತರ ಹುಡುಗಿ ತನ್ನ ಸಂಗಾತಿಯೊಂದಿಗೆ ಪ್ರಯಾಣಿಸಿ ಗಳಿಸಬಹುದು. ಆ ರೀತಿಯಲ್ಲಿ, ಆಕೆ ತನ್ನ ಪತಿಯೊಂದಿಗೆ ಸುರಕ್ಷಿತವಾಗಿರುತ್ತಾಳೆ ಮತ್ತು ಅದೇ ಸಮಯದಲ್ಲಿ ಅವರ ಆರ್ಥಿಕ ಹೊರೆಯನ್ನೂ ಇದು ತಗ್ಗಿಸುತ್ತದೆ ಎಂದು ಪೋಷಕರು ಭಾವಿಸುತ್ತಾರೆ.

ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಆರ್ಥಿಕವಾಗಿ ಹೆಣಗಾಡುತ್ತಿರುವ ಪೋಷಕರು ತಮ್ಮ ಮಗು ಮನೆಯಲ್ಲಿರುವುದಕ್ಕೆ ಎರಡು ವಿಧಗಳಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂದು ತತ್ವಶೀಲ್ ಕಾಂಬ್ಳೆ ಹೇಳುತ್ತಾರೆ, "ಅವನು ಹುಡುಗನಾಗಿದ್ದರೆ, ಬಾಲಕಾರ್ಮಿಕನಾಗಲು ಒತ್ತಾಯಿಸಲಾಗುತ್ತದೆ. ಹೆಣ್ಣು ಮಗುವಿನ ಪಾಲಿಗೆ ಈ ಒತ್ತಡವು ಮದುವೆಯ ರೂಪದಲ್ಲಿರುತ್ತದೆ.“ ಶಾಸನಬದ್ಧ ಸಂಸ್ಥೆಯಾಗಿರುವ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿರುವ ಕಾಂಬ್ಳೆ, ಅಗತ್ಯವಿರುವ ಮಕ್ಕಳ ಆರೈಕೆ ಮತ್ತು ರಕ್ಷಣೆಯನ್ನು ನೋಡಿಕೊಳ್ಳುತ್ತಾರೆ, ಬೀಡ್‌ನಲ್ಲಿ ಅನೇಕ ಬಾಲ್ಯ ವಿವಾಹಗಳನ್ನು ತಡೆಯಲು ಸಹಾಯ ಮಾಡಿದ್ದಾರೆ.

Girls as young as 12 are being married off by their parents to ease the family's financial burden
PHOTO • Labani Jangi

ಕುಟುಂಬದ ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ ಪೋಷಕರು ತಮ್ಮ 12 ವರ್ಷದ ಹೆಣ್ಣು ಮಗುವಿಗೂ ಮದುವೆ ಮಾಡಿಸಲು ಮುಂದಾಗುತ್ತಿದ್ದಾರೆ

ಬೀಡ್ ತಾಲೂಕಿನ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರಾದ ಅಶೋಕ್ ತಾಂಗ್ಡೆ ಜೊತೆಗೂಡಿ, ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪಿಡುಗನ್ನು ತಡೆಯುವ ಕೆಲಸ ಮಾಡುತ್ತಿರುವ ಕಾಂಬ್ಳೆಯವರು ಮಾರ್ಚ್ 2020ರಲ್ಲಿ ಕೋವಿಡ್ -19 ಏಕಾಏಕಿ ಪ್ರಸರಣದ ನಂತರ 100ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ. "ಇದು ನಾವು ತಡೆಯಲು ಸಾಧ್ಯವಾಗಿರುವ ಬಾಲ್ಯ ವಿವಾಹಗಳ ಲೆಕ್ಕ ಮಾತ್ರ" ಎಂದು 53 ವರ್ಷದ ತಾಂಗ್ಡೆ ಹೇಳುತ್ತಾರೆ. "ಆದರೆ ಎಷ್ಟು ಮಂದಿ ಈ ಪ್ರಪಾತದಲ್ಲಿ ನಮ್ಮ ಕಣ್ತಪ್ಪಿ ಬಿದ್ದಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ."

ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಜನರ ಖರೀದಿ ಸಾಮರ್ಥ್ಯದ ಕುಸಿತ ಬಾಲ್ಯ ವಿವಾಹಗಳಲ್ಲಿ ಪಾತ್ರವಹಿಸುತ್ತಿದೆ. "ಈ ಸಮಯದಲ್ಲಿ ವರನ ಪೋಷಕರು ಹೆಚ್ಚಿನ ವರದಕ್ಷಿಣೆಗಾಗಿ ಒತ್ತಾಯಿಸುತ್ತಿಲ್ಲ" ಎಂದು ತಾಂಗ್ಡೆ ಹೇಳುತ್ತಾರೆ. ಮದುವೆಗಳು ಈಗಿನ ಕಾಲದಲ್ಲಿ ಬಹಳ ಸೋವಿಯಾಗಿವೆ, ಎಂದು ಅವರು ಮುಂದುವರೆದು ಹೇಳಿದರು. "ಹತ್ತಿರದ ಸಂಬಂಧಿಗಳನ್ನು ಮಾತ್ರ ಆಹ್ವಾನಿಸುವ ಮೂಲಕ ನೀವು ಹಲವು ಖರ್ಚುಗಳನ್ನು ಉಳಿಸಬಹುದು. ಏಕೆಂದರೆ ಈಗ ದೊಡ್ಡ ಮಟ್ಟದ ಕೂಟಗಳಿಗೆ ಅನುಮತಿಯಿಲ್ಲ."

ಮತ್ತೊಂದೆಡೆ, ಈ ಸಾಂಕ್ರಾಮಿಕ ಪಿಡುಗು ಪೋಷಕರಲ್ಲಿ ಸಾವಿನ ಭಯವನ್ನೂ ಹುಟ್ಟಿಸಿದೆ. ಇದು ತಮ್ಮ ನಂತರ ಮಗಳ ಭವಿಷ್ಯವೇನೆಂದು ಅವರಲ್ಲಿ ಕಳವಳ ಮೂಡಿಸುತ್ತಿದೆ. “ಇವೆಲ್ಲವೂ ಬಾಲ್ಯ ವಿವಾಹಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಹೀಗೆ ಮದುವೆಯಾಗಿರುವ ಕೆಲವು ಹುಡುಗಿಯರು ಈಗಿನ್ನೂ 12 ವರ್ಷ ವಯಸ್ಸಿನವರು" ಎಂದು ತಾಂಗ್ಡೆ ಹೇಳುತ್ತಾರೆ.

ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 780 ಬಾಲ್ಯವಿವಾಹಗಳನ್ನು ದಾಖಲಿಸಿದ್ದು, ಇದು ಏಪ್ರಿಲ್ 2020ರಿಂದ ಜೂನ್ 2021ರವರೆಗೆ ತಡೆಯಲಾಗಿರುವ ಮದುವೆಗಳು. ಇದೊಂದು ಸರಕಾರಿ ಅಂದಾಜು, ತಾಂಗ್ಡೆ ಮತ್ತು ಕಾಂಬ್ಳೆ, ಈ ಅಂಕಿ-ಸಂಖ್ಯೆಯಲ್ಲಿ ಬೀಡ್‌ನಲ್ಲಿ 40 ಮದುವೆಗಳು ನಡೆದಿವೆ ಎಂದು ಹೇಳಲಾಗಿದೆ. ಆದರೆ ಆ ಅವಧಿಯಲ್ಲಿ ಅವರು ತಡೆದ ವಿವಾಹಗಳ ಸಂಖ್ಯೆಗಿಂತ ಇದು ಬಹಳ ಕಡಿಮೆ.

ಇಂತಹ ಸಾಂಪ್ರಾದಾಯಿಕ ಸರ್ಕಾರಿ ಲೆಕ್ಕವೂ ಈ ಮಹಾಮಾರಿಯ ಸಮಯದಲ್ಲಿ ಬಾಲ್ಯ ಮತ್ತು ಹದಿಹರೆಯದ ವಿವಾಹದ ಏರಿಕೆಯ ಕುರಿತು ಎಚ್ಚರಿಸುತ್ತಿವೆ. ಜನವರಿ 2019ರಿಂದ ಸೆಪ್ಟೆಂಬರ್ 2019ರ ತನಕ, ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದಲ್ಲಿ 187 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇದು ಕೋವಿಡ್ -19 ಏಕಾಏಕಿ ಪ್ರಸರಣ ಆರಂಭಗೊಂಡ ನಂತರ ತಡೆದ ಬಾಲ್ಯ ವಿವಾಹಗಳ ಮಾಸಿಕ ಸರಾಸರಿಯಲ್ಲಿ 150 ಶೇಕಡಾ ಹೆಚ್ಚಳವನ್ನು ಸೂಚಿಸುತ್ತದೆ.

ಕಾಂಬ್ಳೆ ಮತ್ತು ತಾಂಗ್ಡೆ ಇಂತಹ ಮದುವೆಗಳನ್ನು ನಿಲ್ಲಿಸಲು ಮಾಹಿತಿದಾರರನ್ನು ಅವಲಂಬಿಸಿದ್ದಾರೆ. "ಹಳ್ಳಿಯಲ್ಲಿರುವ ಆಶಾ ಕಾರ್ಯಕರ್ತರು ಅಥವಾ ಗ್ರಾಮ ಸೇವಕರು ನಮಗೆ ಮಾಹಿತಿ ನೀಡುತ್ತಾರೆ" ಎಂದು ಕಾಂಬ್ಳೆ ಹೇಳುತ್ತಾರೆ. "ಆದರೆ ಅವರು ಅದೇ ಗ್ರಾಮದಲ್ಲಿ ವಾಸಿಸುವ ಕಾರಣ ಹೆಚ್ಚಾಗಿ ಮಾಹಿತಿ ನೀಡಲು ಹೆದರುತ್ತಾರೆ. ಮದುವೆಯನ್ನು ನಡೆಸುವ ಕುಟುಂಬಗಳಿಗೆ ಈ ಕುರಿತು ತಿಳಿದರೆ, ಅವರು ಮಾಹಿತಿದಾರರ ಜೀವನವನ್ನು ಕಷ್ಟಕರವಾಗಿಸಿಬಿಡುತ್ತಾರೆ."

Left: A file photo of Tatwashil Kamble with a few homeless children. Right: Kamble and Ashok Tangde (right) at a Pardhi colony in Beed after distributing ration kits
PHOTO • Courtesy: Tatwashil Kamble and Ashok Tangde
Left: A file photo of Tatwashil Kamble with a few homeless children. Right: Kamble and Ashok Tangde (right) at a Pardhi colony in Beed after distributing ration kits
PHOTO • Courtesy: Tatwashil Kamble and Ashok Tangde

ಎಡ: ತತ್ವಶೀಲ್ ಕಾಂಬ್ಳೆಯವರ ಫೈಲ್ ಫೋಟೋ. ಕೆಲವು ಮನೆಯಿಲ್ಲದ ಮಕ್ಕಳೊಂದಿಗೆ. ಬಲ: ಪಡಿತರ ಕಿಟ್‌ಗಳನ್ನು ವಿತರಿಸಿದ ನಂತರ ಬೀಡ್‌ನ ಪಾರ್ಧಿ ಕಾಲೋನಿಯಲ್ಲಿ ಕಾಂಬ್ಳೆ ಮತ್ತು ಅಶೋಕ್ ತಾಂಗ್ಡೆ (ಬಲ)

ಹಳ್ಳಿಯ ಜಗಳಗಳು ಸಹ ಇಲ್ಲಿ ಒಂದು ಪಾತ್ರವನ್ನು ವಹಿಸುತ್ತವೆ, ಎಂದು ತಾಂಗ್ಡೆ ಮುಂದುವರೆದು ಹೇಳುತ್ತಾರೆ. "ಕೆಲವೊಮ್ಮೆ, ಎದುರಾಳಿ ಗುಂಪಿಗೆ ಸೇರಿದ ವ್ಯಕ್ತಿಯು ಮಾಹಿತಿಯನ್ನು ಬಹಿರಂಗಪಡಿಸುತ್ತಾನೆ. ಕೆಲವೊಮ್ಮೆ, ಮದುವೆಯಾದ ಹುಡುಗಿಯನ್ನು ಪ್ರೀತಿಸುವ ಹುಡುಗ ನಮಗೆ ತಿಳಿಸುತ್ತಾನೆ.”

ಮದುವೆ ತಡೆಯುವಲ್ಲಿ ಮಾಹಿತಿ ಕೇವಲ ಮೊದಲ ಹೆಜ್ಜೆ. ಕೆಲವು ಕುಟುಂಬಗಳು ಬೇರೆ ರೀತಿಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಅವುಗಳಲ್ಲಿ ರಾಜಕೀಯ ಬಳಸಿಕೊಳ್ಳುವುದು ಕೂಡ ಸೇರಿದೆ. "ನಮ್ಮನ್ನು ಬೆದರಿಸುವುದು ಮತ್ತು ದಾಳಿ ಮಾಡುವುದು" ಕೂಡ ಮಾಡಲಾಗಿದೆ ಎಂದು ಕಾಂಬ್ಳೆ ಹೇಳುತ್ತಾರೆ. "ಜನರು ನಮಗೆ ಲಂಚ ನೀಡಲು ಪ್ರಯತ್ನಿಸಿದ್ದಾರೆ. ಆದರೆ ನಾವು ಸದಾ ಎಚ್ಚರವಾಗಿರುತ್ತಿದ್ದೆವು. ಕೆಲವು ಜನರು ಬಹಳ ಬೇಗ ಶರಣಾಗಿಬಿಡುತ್ತಾರೆ ಉಳಿದವರು ಬಡಿದಾಟಗಳಿಲ್ಲದೆ ಹೋಗುವುದಿಲ್ಲ.“

ಅಕ್ಟೋಬರ್ 2020ರಲ್ಲಿ, 16 ವರ್ಷದ ಸ್ಮಿತಾಳ ವಿವಾಹದ ಒಂದು ದಿನದ ಮೊದಲು ಕಾಂಬ್ಳೆ ಮತ್ತು ತಾಂಗ್ಡೆಯವರಿಗೆ ವಿಷಯ ತಿಳಿಯಿತು. ಆ ದಿನ, ಅವರು ಮದುವೆಯ ಆಚರಣೆಗಳು ಪ್ರಾರಂಭವಾಗುವ ಮೊದಲು ಅವರು ಬೀಡ್ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿನ ಆ ಸ್ಥಳವನ್ನು ತಲುಪಿದರು. ಆದರೆ ಹುಡುಗಿಯ ತಂದೆಯಾದ ವಿಠಲ್‌ ಮದುವೆ ನಿಲ್ಲಿಸಲು ನಿರಾಕರಿಸಿದರು. "ಅವರು ಕೂಗಾಡಿದರು, 'ಅವಳು ನನ್ನ ಮಗಳು, ಮತ್ತು ನಾನು ಅವಳನ್ನು ಏನು ಬೇಕಾದರೂ ಮಾಡಬಲ್ಲೆ.ʼ ಎಂದರು" ಎಂದು ತಾಂಗ್ಡೆ ಹೇಳುತ್ತಾರೆ. "ಏನಾಗುತ್ತಿದೆ ಎಂಬುದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸ್ವಲ್ಪ ಸಮಯ ಹಿಡಿಯಿತು. ನಾವು ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಆತನ ವಿರುದ್ಧ ದೂರು ದಾಖಲಿಸಿದೆವು.“

ಸ್ಮಿತಾ ಬುದ್ಧಿವಂತ ವಿದ್ಯಾರ್ಥಿಯಾಗಿದ್ದಳು, ಎಂದು ಆಕೆಯ ಚಿಕ್ಕಪ್ಪ ಕಿಶೋರ್‌ ಹೇಳುತ್ತಾರೆ. "ಆದರೆ ಆಕೆಯ ಪೋಷಕರು ಶಾಲೆಗೆ ಹೋಗಿಲ್ಲ ಇದರಿಂದಾಗಿ ಅವರಿಗೆ ಅದರ ಮಹತ್ವ ಅರ್ಥವಾಗಲಿಲ್ಲ. ಸಾಂಕ್ರಾಮಿಕ ಪಿಡುಗಿನಿಂದಾಗಿ ಅವರು ದಿನಕ್ಕೆ ಎರಡು ಹೊತ್ತಿನ ಊಟವನ್ನು ನಿರ್ವಹಿಸಲು ಕೂಡಾ ಹೆಣಗಾಡುತ್ತಿದ್ದರು.“ ವಿಠ್ಠಲ್ ಮತ್ತು ಅವರ ಪತ್ನಿ ಪೂಜಾ ಇಬ್ಬರೂ ತಮ್ಮ 30ರ ಹರೆಯದಲ್ಲಿದ್ದು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ, ನಾಲ್ಕು ತಿಂಗಳ ಕೆಲಸಕ್ಕೆ ಒಟ್ಟಾಗಿ 20,000 ರೂ. ಸಂಪಾದಿಸುತ್ತಾರೆ. "ಕೂಲಿ ಕೆಲಸಗಳು ಸಂಪೂರ್ಣ ಇಲ್ಲವಾಗಿದ್ದವು.  ಸ್ಮಿತಾಳಿಗೆ ಮದುವೆ ಮಾಡಿಸುವುದೆಂದರೆ ಎಂದರೆ ಪ್ರತಿದಿನ ಎರಡು ಊಟ ಹೊಂದಿಸುವ ಚಿಂತೆ ಕಡಿಮೆಯಾಗುವುದು,” ಎಂದು ಕಿಶೋರ್ ವಿವರಿಸುತ್ತಾರೆ.

ಕಾಂಬ್ಳೆ ಮತ್ತು ತಾಂಗ್ಡೆಯವರ ಪಾಲಿಗೆ ಒಂದು ದೊಡ್ಡ ಸವಾಲೆಂದರೆ ಕುಟುಂಬವು ಮತ್ತೆ ಮದುವೆಗೆ ವ್ಯವಸ್ಥೆ ಮಾಡದಂತೆ ನೋಡಿಕೊಳ್ಳುವುದು. “ಬಾಲ್ಯವಿವಾದ ಪ್ರಯತ್ನಗಳು ನಡೆಯುತ್ತಿರುವ ಮನೆಯ ಹೆಣ್ಣುಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿದಾಗ ಶಾಲಾ ಶಿಕ್ಷಕರು ನಮಗೆ ಮಾಹಿತಿ ನೀಡುತ್ತಿದ್ದರು. ಆಗ ನಾವು ಆ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೆವು. ಆದರೆ ಶಾಲೆಗಳು ಮುಚ್ಚಿದ್ದರಿಂದಾಗಿ ಈ ಕುರಿತು ಮಾಹಿತಿ ಪಡೆಯುವುದು ಕಷ್ಟವಾಗುತ್ತಿದೆ.“

ವಿಠ್ಠಲ್‌ ಅವರಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ಪೋಲಿಸ್‌ ಸ್ಟೇಷನ್‌ಗೆ ಬಂದು ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. "ನಾವು ಆತನನ್ನು ನಂಬುವ ಸ್ಥಿತಿಯಲ್ಲಿಲ್ಲ" ಎಂದು ತಾಂಗ್ಡೆ ಹೇಳುತ್ತಾರೆ, ಆತ ಮತ್ತೆ ತನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ಮದುವೆ ಮಾಡಿಸಲು ಪ್ರಯತ್ನಿಸಬಹುದು ಎನ್ನುವುದು ಅವರ ಚಿಂತೆ.

Left: Ashok Tangde and Tatwashil Kamble (right) with a retired migrant worker (centre). Right: Kamble talking to students about child marriage
PHOTO • Courtesy: Tatwashil Kamble and Ashok Tangde
Left: Ashok Tangde and Tatwashil Kamble (right) with a retired migrant worker (centre). Right: Kamble talking to students about child marriage
PHOTO • Courtesy: Tatwashil Kamble and Ashok Tangde

ಎಡ: ಅಶೋಕ್ ತಾಂಗ್ಡೆ ಮತ್ತು ತತ್ವಶೀಲ್ ಕಾಂಬ್ಳೆ (ಬಲ) ನಿವೃತ್ತ ವಲಸೆ ಕಾರ್ಮಿಕರೊಬ್ಬರೊಂದಿಗೆ (ನಡುವೆ) ಬಲ: ಕಾಂಬ್ಳೆ ಬಾಲ್ಯ ವಿವಾಹದ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿರುವುದು

ಮದುವೆ ನಿಲ್ಲಿಸಿದ ನಂತರ ಸ್ಮಿತಾ ಮೂರು ತಿಂಗಳ ಕಾಲ ತನ್ನ ಚಿಕ್ಕಪ್ಪ ಕಿಶೋರ್‌ ಅವರೊಂದಿಗೆ ಉಳಿಯಲು ಹೋದಳು.ಅಷ್ಟೂ ದಿನ ಆಕೆ ಅಸಹಜ ರೀತಿಯಲ್ಲಿ ಮೌನವಾಗಿದ್ದಳು ಎಂದು ಅವರು ಹೇಳುತ್ತಾರೆ. “ಅವಳು ಮಾತನಾಡುತ್ತಿರಲಿಲ್ಲ ಮತ್ತು ಅವಳ ಪಾಡಿಗಿರುತ್ತಿದ್ದಳು. ಅವಳು ಕೆಲಸಗಳನ್ನು ಮಾಡುತ್ತಿದ್ದಳು, ಪತ್ರಿಕೆ ಓದುವುದು ಮತ್ತು ನಮ್ಮ ಮನೆಕೆಲಸಗಳಿಗೆ ಸಹಾಯ ಮಾಡುವುದನ್ನು ಮಾಡುತ್ತಿದ್ದಳು.ಅವಳಿಗೆ ಅಷ್ಟು ಬೇಗ ಮದುವೆಯಾಗುವ ಕುರಿತು ಯಾವ ಆಸಕ್ತಿಯೂ ಇದ್ದಿರಲಿಲ್ಲ.“

ಮಹಿಳೆಯರ ಆರೋಗ್ಯದ ಕುರಿತಾದ ಅಧ್ಯಯನಗಳು ತಾಯಿಯ ಮರಣದ ಮೇಲೆ ಬಾಲ್ಯ ವಿವಾಹದ ಪ್ರಭಾವವನ್ನು ಒಳಗೊಂಡಂತೆ ಬಾಲ್ಯ ವಿವಾಹದ ಪ್ರತಿಕೂಲ ಪರಿಣಾಮಗಳನ್ನು ದಾಖಲಿಸಿವೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ವರದಿಯು, 2011ರ ಜನಗಣತಿಯ ಆಧಾರದ ಮೇಲೆ ನಡೆಸಿದ ಭಾರತದಲ್ಲಿನ ಬಾಲ್ಯ ವಿವಾಹಗಳ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯ ಪ್ರಕಾರ , (A Statistical Analysis of Child Marriage in India) 10-24 ವಯೋಮಾನದ ಹುಡುಗಿಯರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸಾಯುವ ಸಾಧ್ಯತೆ 20-24 ವಯಸ್ಸಿನ ಮಹಿಳೆಯರಿಗಿಂತ ಐದು ಪಟ್ಟು ಹೆಚ್ಚು.ಮತ್ತು ಗರ್ಭಾವಸ್ಥೆಯ ಮೊದಲು ಅಥವಾ ನಂತರದಲ್ಲಿ ತಾಯಂದಿರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಮಕ್ಕಳು ಅಪೌಷ್ಟಿಕತೆಯೊಂದಿಗೆ ಜನಿಸುತ್ತಾರೆ.

ರೇಖಾಳ ವಿಷಯದಲ್ಲಿ, ದೈಹಿಕ ದೌರ್ಬಲ್ಯ, ಅಪೌಷ್ಟಿಕತೆಯ ಚಿಹ್ನೆ, ಅವಳನ್ನು ಅವಳ ಹೆತ್ತವರ ಬಳಿಗೆ ಕಳುಹಿಸಲು ಅವಳ ಅತ್ತೆ ಮಾವ ನೀಡಿದ ಕಾರಣ."ಜನವರಿ 2021ರಲ್ಲಿ, ತನ್ನ ಗಂಡನೊಂದಿಗೆ ಹೋದ ಎರಡು ಅಥವಾ ಮೂರು ತಿಂಗಳ ನಂತರ, ಅವಳು ಮನೆಗೆ ಮರಳಿದಳು" ಎಂದು ಭಾಗ್ಯಶ್ರೀ ಹೇಳುತ್ತಾರೆ.

ಕಬ್ಬನ್ನು ಕತ್ತರಿಸುವುದು ಮತ್ತು ತಲೆಯ ಮೇಲೆ 25 ಕಿಲೊಗಳಿಗಿಂತ ಹೆಚ್ಚು ತೂಕದ ಕಟ್ಟುಗಳನ್ನು ಹೊತ್ತುಕೊಳ್ಳುವುದು ಕಡಿಮೆ ತೂಕವನ್ನು ಹೊಂದಿದ್ದ ರೇಖಾ ಅವರಿಗೆ ಕಷ್ಟವಾಗುತ್ತಿತ್ತು."ಅವಳು ಬೆನ್ನು ಬಾಗಿ ಹೋಗುವಂತಹ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ.ಇದು ಆಕೆಯ ಪತಿಯ ಆದಾಯದ ಮೇಲೆ ಪರಿಣಾಮ ಬೀರಿತು,” ಎನ್ನುತ್ತಾರೆ ಭಾಗ್ಯಶ್ರೀ. "ಹೀಗಾಗಿ ಅವಳ ಅತ್ತೆ-ಮಾವ ಮದುವೆಯನ್ನು ಕೊನೆಗೊಳಿಸಿ ಅವಳನ್ನು ವಾಪಸ್ ಕಳುಹಿಸಿದರು."

ಹಿಂದಿರುಗಿದ ನಂತರ ರೇಖಾ ಮನೆಯಲ್ಲಿಯೇ ಸ್ವಲ್ಪ ಸಮಯ ಕಳೆದಳು."ಆದರೆ ಮದುವೆಯಾದ ಕೆಲವು ತಿಂಗಳ ನಂತರ ಹುಡುಗಿ ಮನೆಗೆ ಬಂದಾಗ, ಹಳ್ಳಿಯ ಜನರು ಪ್ರಶ್ನೆಗಳನ್ನು ಕೇಳುತ್ತಾರೆ.ಈ ಕಾರಣಕ್ಕಾಗಿ ಅವಳು ಹೆಚ್ಚಾಗಿ ಚಿಕ್ಕಮ್ಮನ ಜೊತೆಯಲ್ಲಿಯೇ ಇರುತ್ತಿದ್ದಳು" ಎಂದು ಆಕೆಯ ತಾಯಿ ಹೇಳುತ್ತಾರೆ.

ಕಬ್ಬಿನ ಕಟಾವಿನ ಇನ್ನೊಂದು ಹಂಗಾಮು ಸಮೀಪಿಸುತ್ತಿದ್ದಂತೆ ಮತ್ತು ಭಾಗ್ಯಶ್ರೀ ಮತ್ತು ಅಮರ್ ವಲಸೆ ಹೋಗಲು ತಯಾರಾಗುತ್ತಿರುವಾಗ, ರೇಖಾಳ ಭವಿಷ್ಯವನ್ನು ಮತ್ತೊಮ್ಮೆ ಯೋಜಿಸಲಾಗುತ್ತಿದೆ. ಒಂದೇ ವ್ಯತ್ಯಾಸವೆಂದರೆ ರೇಖಾ ಈ ಬಾರಿ ವಿರೋಧಿಸುತ್ತಿಲ್ಲ - ಅವಳು ಮತ್ತೆ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ.

ಖಾಸಗಿತನವನ್ನು ರಕ್ಷಿಸಲು ಮಕ್ಕಳ ಮತ್ತು ಅವರ ಸಂಬಂಧಿಕರ ಹೆಸರನ್ನು ಲೇಖನದಲ್ಲಿ ಬದಲಾಯಿಸಲಾಗಿದೆ.

ಈ ಲೇಖನವು ಪುಲಿಟ್ಜರ್ ಸೆಂಟರ್ ಬೆಂಬಲಿತ ಲೇಖನ ಸರಣಿಯ ಭಾಗವಾಗಿದೆ.

ಅನುವಾದ: ಶಂಕರ ಎನ್. ಕೆಂಚನೂರು

Parth M.N.

ପାର୍ଥ ଏମ୍.ଏନ୍. ୨୦୧୭ର ଜଣେ PARI ଫେଲୋ ଏବଂ ବିଭିନ୍ନ ୱେବ୍ସାଇଟ୍ପାଇଁ ଖବର ଦେଉଥିବା ଜଣେ ସ୍ୱାଧୀନ ସାମ୍ବାଦିକ। ସେ କ୍ରିକେଟ୍ ଏବଂ ଭ୍ରମଣକୁ ଭଲ ପାଆନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Parth M.N.
Illustrations : Labani Jangi

ଲାବଣୀ ଜାଙ୍ଗୀ ୨୦୨୦ର ଜଣେ ପରୀ ଫେଲୋ ଏବଂ ପଶ୍ଚିମବଙ୍ଗ ନଦିଆରେ ରହୁଥିବା ଜଣେ ସ୍ୱ-ପ୍ରଶିକ୍ଷିତ ଚିତ୍ରକର। ସେ କୋଲକାତାସ୍ଥିତ ସେଣ୍ଟର ଫର ଷ୍ଟଡିଜ୍‌ ଇନ୍‌ ସୋସିଆଲ ସାଇନ୍ସେସ୍‌ରେ ଶ୍ରମିକ ପ୍ରବାସ ଉପରେ ପିଏଚଡି କରୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru