"ನನ್ನ ಅಬ್ಬು [ತಂದೆ] ಕೂಲಿ ಕಾರ್ಮಿಕರಾಗಿದ್ದರು, ಆದರೆ ಮೀನುಗಾರಿಕೆ ಅವರ ಬದುಕಿನ ಪ್ರೀತಿಯಾಗಿತ್ತು. ಅವರು ಹೇಗೋ ಮಾಡಿ ಒಂದು ಕಿಲೋ ಅಕ್ಕಿ ಸಂಪಾದಿಸಿ ತರುತ್ತಿದ್ದರು, ಮತ್ತು ಅಂದಿಗೆ ತಮ್ಮ ಕರ್ತವ್ಯ ಮುಗಿಯಿತೆನ್ನುವಂತೆ ಹೊರಟುಹೋಗುತ್ತಿದ್ದರು! ನನ್ನ ಅಮ್ಮಿ [ತಾಯಿ] ಎಲ್ಲವನ್ನೂ ನಿಭಾಯಿಸಬೇಕಾಗಿತ್ತು" ಎಂದು ಬೆಲ್ಡಂಗದ ಉತ್ತರಪಾರಾ ಪ್ರದೇಶದಲ್ಲಿರುವ ತನ್ನ ಮನೆಯ ಟೆರೇಸ್ ಮೇಲೆ ನಿಂತು ಮಾತನಾಡುತ್ತಾ ಕೊಹಿನೂರ್ ಬೇಗಂ ಹೇಳುತ್ತಾರೆ.
"ಹಾಗೇ ಊಹಿಸಿಕೊಳ್ಳಿ, ಆ ಒಂದು ಕಿಲೋ ಅಕ್ಕಿಯಿಂದ, ನನ್ನ ಅಮ್ಮಿ ನಾಲ್ಕು ಮಕ್ಕಳಿಗೆ, ನಮ್ಮ ದಾದಿ [ತಂದೆಯ ಅಮ್ಮ], ನನ್ನ ತಂದೆ, ಚಿಕ್ಕಮ್ಮ ಮತ್ತು ಮತ್ತು ಅವರಿಗೆ ಆಹಾರವನ್ನು ತಯಾರಿಸಬೇಕಾಗಿತ್ತು." ಅವರು ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ಮತ್ತೆ ಹೇಳಿದರು, "ಅದರ ಮೇಲೆ, ಮೀನು ಹಿಡಿಯಲು ಸ್ವಲ್ಪ ಅಕ್ಕಿಯನ್ನು ಕೇಳುವ ಧೈರ್ಯ ಅಬ್ಬುಗೆ ಇತ್ತು. ನಾವು ಈ ಮನುಷ್ಯನೊಂದಿಗೆ ನಮ್ಮ ಬುದ್ಧಿವಂತಿಕೆಯನ್ನು ಬಳಸಲು ನಮಗೆ ಸಾಕಾಗುತ್ತಿತ್ತು!"
55 ವರ್ಷದ ಕೊಹಿನೂರ್ ಆಪಾ (ಅಕ್ಕ) ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಾನಕಿ ನಗರ ಪ್ರಾಥಮಿಕ್ ವಿದ್ಯಾಲಯದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಅಡುಗೆಯವರಾಗಿ ಕೆಲಸ ಮಾಡುತ್ತಾರೆ. ತನ್ನ ಬಿಡುವಿನ ವೇಳೆಯಲ್ಲಿ, ಅವರು ಬೀಡಿ ಕಟ್ಟುತ್ತಾರೆ ಮತ್ತು ಈ ಕೆಲಸದಲ್ಲಿ ತೊಡಗಿರುವ ಇತರ ಮಹಿಳೆಯರ ಹಕ್ಕುಗಳಿಗಾಗಿ ಸಂಘಟನೆ ಮಾಡುತ್ತಾರೆ. ಮುರ್ಷಿದಬಾದ್‌ನ ಈ ಬೀಡಿ ಕಟ್ಟುವ ಕೆಲಸ ಮಾಡುವ ಮಹಿಳೆಯರು ಅತ್ಯಂತ ಬಡವರು. ಇದು ಅತ್ಯಂತ ಕಠಿಣ ದೈಹಿಕ ಶ್ರಮ ಬೇಡುವ ಕೆಲಸ. ಸಣ್ಣ ವಯಸ್ಸಿನಿಂದಲೂ ಈ ಮಹಿಳೆಯರು ತಮ್ಮನ್ನು ತಂಬಾಕಿಗೆ ಒಡ್ಡಿಕೊಳ್ಳುವುದರಿಂದಾಗಿ ಇವರ ಆರೋಗ್ಯಕ್ಕೂ ಅಪಾಯ ಎದುರಾಗುತ್ತದೆ. ಇದನ್ನೂ ಓದಿ: ದಟ್ಟ ಹೊಗೆಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಬೀಡಿ ಕಟ್ಟುವ ಮಹಿಳೆಯರ ಆರೋಗ್ಯ
2021ರ ಡಿಸೆಂಬರ್ ಬೆಳಿಗ್ಗೆ, ಬೀಡಿ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಕೊಹಿನೂರ್ ಆಪಾ ಈ ವರದಿಗಾರರನ್ನು ಭೇಟಿಯಾದರು. ನಂತರ, ಹೆಚ್ಚು ನಿರಾಳವಾಗಿದ್ದ ಕೊಹಿನೂರ್ ತನ್ನ ಬಾಲ್ಯದ ಬಗ್ಗೆ ಮಾತನಾಡಿದರು ಮತ್ತು ಬೀಡಿ ಕಾರ್ಮಿಕರ ಪ್ರಯಾಸಕರ ಕೆಲಸ ಮತ್ತು ಶೋಷಣೆಯ ಕೆಲಸದ ಪರಿಸ್ಥಿತಿಗಳ ಬಗ್ಗೆ ತಮ್ಮದೇ ಆದ ಸಂಯೋಜನೆಯನ್ನು ಸಹ ಹಾಡಿದರು.
ತಾನು ಚಿಕ್ಕವಳಿದ್ದ ಸಮಯದಲ್ಲಿ ಕುಟುಂಬದ ಭೀಕರ ಆರ್ಥಿಕ ಪರಿಸ್ಥಿತಿಯು ಮನೆಯಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿತ್ತು ಎನ್ನುತ್ತಾರವರು. ಅವರಿಗೆ ಅದನ್ನೆಲ್ಲ ನೋಡುವುದು ಅಸಹನೀಯವೆನ್ನಿಸುತ್ತಿತ್ತು. “ಆಗ ನನಗೆ ಕೇವಲ ಒಂಬತ್ತು ವರ್ಷ, ಒಂದು ದಿನ ಬೆಳಗ್ಗೆ ಮನೆಯ ಎಲ್ಲಾ ಸಾಮಾನ್ಯ ಅಸ್ಥವ್ಯಸ್ತತೆಯ ನಡುವೆ ಅಮ್ಮ ಬೆರಣಿ, ಕಲ್ಲಿದ್ದಲು ಮತ್ತು ಸೌದೆ ಬಳಸಿ ಒಲೆ ಉರಿಸುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಣ್ಣಿಗೆ ಬಿತ್ತು, ಅಂದು ಮನೆಯಲ್ಲಿ ಅಡುಗೆ ಮಾಡಲು ಒಂದಿಷ್ಟೂ ಧಾನ್ಯವಿರಲಿಲ್ಲ” ಎಂದು ಅವರು ಹೇಳುತ್ತಾರೆ.






