"ಚಳುವಳಿಯು ನಮ್ಮ ಸಮಸ್ಯೆಗಳನ್ನು ಹೇಗೆ ಎದುರಿಸಬೇಕೆಂದು ನನಗೆ ಕಲಿಸಿತು. ನಾವು ಈಗ ಗೌರವಿಸಲ್ಪಡುತ್ತಿದ್ದೇವೆ.” ಅವರು ಹೇಳುತ್ತಿರುವ 'ನಾವು' ಎಂದರೆ, 49ರ ಹರೆಯದ ರಾಜಿಂದರ್ ಕೌರ್ ಅವರಂತಹ ಹಲವಾರು ಮಹಿಳೆಯರು, ಸೆಪ್ಟೆಂಬರ್ 2020ರಲ್ಲಿ ಅಂಗೀಕರಿಸಲಾದ ಕೃಷಿ ಕಾನೂನುಗಳ ವಿರುದ್ಧ ಹೋರಾಟದ ಕಣದಲ್ಲಿದ್ದವರು. ಪಂಜಾಬ್‌ನ ಪಟಿಯಾಲ ಜಿಲ್ಲೆಯ ರಾಜೀಂದರ್ 220 ಕಿಮೀ ದೂರವನ್ನು ಕ್ರಮಿಸಿ ಹಲವಾರು ಬಾರಿ ಸಿಂಘು ಗಡಿಗೆ ಭೇಟಿ ನೀಡಿ ಅಲ್ಲಿ ಭಾಷಣ ಮಾಡಿದರು.
50 ವರ್ಷದ ಹರ್ಜೀತ್ ಕೌರ್ ತನ್ನ ಹಳ್ಳಿಯಾದ ದೌನ್ ಕಲಾನ್‌ನ ಪಕ್ಕದಲ್ಲಿ ವಾಸಿಸುತ್ತಿದ್ದು, ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಘುವಿನಲ್ಲಿ 205 ದಿನಗಳ ಕಾಲ ತಂಗಿದ್ದರು. “ನಾನು ಬೇಸಾಯದಲ್ಲಿ ತೊಡಗಿಸಿಕೊಳ್ಳದ ದಿನಗಳೇ ಇಲ್ಲ. ಪ್ರತಿ ಕೊಯ್ಲಿನ ನಂತರವೂ ನನಗೂ ವಯಸ್ಸಾಗುತ್ತಾ ಬಂತು,” ಎಂದು ಕಳೆದ 36 ವರ್ಷಗಳಿಂದ ಕೃಷಿ ಮಾಡುತ್ತಿರುವ ಹರ್ಜೀತ್ ಹೇಳುತ್ತಾರೆ. "ಆದರೆ ನಾನು ಇಂತಹ ಚಳುವಳಿಯನ್ನು ನೋಡಿದ್ದು ಇದೇ ಮೊದಲು ಮತ್ತು ಭಾಗವಹಿಸಿದ್ದು ಸಹ ಇದೇ ಮೊದಲು" ಎಂದು ಅವರು ಹೇಳಿದರು. ಆಂದೋಲನಕ್ಕೆ ಮಕ್ಕಳು ಮತ್ತು ವೃದ್ಧೆಯರು ಸಹ ಬರುವುದನ್ನು ನೋಡಿದೆ.
ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ಜಮಾಯಿಸಿ ವಿವಾದಿತ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಬಹುಪಾಲು ರೈತರು ನವೆಂಬರ್ 2020ರಿಂದ ನವೆಂಬರ್ 2021ರಲ್ಲಿ ಕಾನೂನನ್ನು ರದ್ದುಗೊಳಿಸುವವರೆಗೆ ಅಲ್ಲಿಯೇ ನೆಲೆಸಿದ್ದರು. ಈ ರೈತ ಚಳುವಳಿ ಐತಿಹಾಸಿಕವಾಗಿತ್ತು, ಜೊತೆಗೆ ಇದು ಬಹುಶಃ ಇತ್ತೀಚಿನ ಸಾರ್ವಜನಿಕ ಹೋರಾಟಗಳಲ್ಲೇ ದೊಡ್ಡದೆನ್ನಬಹುದು.
ಪಂಜಾಬಿನ ಹಲವಾರು ಮಹಿಳೆಯರು ಚಳವಳಿಯ ಮುಂಚೂಣಿಯಲ್ಲಿದ್ದರು. ಅಲ್ಲಿದ್ದ ಒಗ್ಗಟ್ಟು ಇಂದಿಗೂ ಹಾಗೆಯೇ ಇದೆ ಎನ್ನುತ್ತಾರೆ. ಮತ್ತು ಆಂದೋಲನದಲ್ಲಿ ಭಾಗವಹಿಸಿದ್ದರಿಂದಾಗಿ ತಮ್ಮ ಧೈರ್ಯ ಮತ್ತು ಸ್ವಾತಂತ್ರ್ಯದ ಪ್ರಜ್ಞೆ ಬಲಗೊಂಡಿದೆ ಎಂದು ಅವರು ಭಾವಿಸುತ್ತಾರೆ. "ನಾನು [ಪ್ರತಿಭಟನಾ ಸ್ಥಳದಲ್ಲಿ] ಇದ್ದೆ, ನನಗೆ ಮನೆಯ ನೆನನಪೇ ಕಾಡಲಿಲ್ಲ. ಈಗ ನಾನು ಆಂದೋಲನವನ್ನು ನಿರಂತರವಾಗಿ ನೆನಪಿಸಿಕೊಳ್ಳುತ್ತೇನೆ,” ಎಂದು ಮಾನ್ಸಾ ಜಿಲ್ಲೆಯ ಕುಲದೀಪ್ ಕೌರ್, 58, ಹೇಳುತ್ತಾರೆ.
ಈ ಮೊದಲು, ಬುಧ್ಲಡಾ ತಾಲ್ಲೂಕಿನ ರಾಲಿ ಗ್ರಾಮದ ಮನೆಯಲ್ಲಿ ಕೆಲಸದ ಹೊರೆ ಅವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿತ್ತು. "ಇಲ್ಲಿ ನಾನು ಒಂದರ ನಂತರ ಒಂದರಂತೆ ಕೆಲಸ ಮಾಡಬೇಕು, ಅಥವಾ ಮನೆಗೆ ಬರುವ ಅತಿಥಿಗಳ ಉಪಚಾರ ಮಾಡಬೇಕಿತ್ತು. ಅಲ್ಲಿ ನಾನು ಸ್ವತಂತ್ರಳಾಗಿದ್ದೆ" ಎಂದು ಕುಲದೀಪ್ ಹೇಳುತ್ತಾರೆ. ಪ್ರತಿಭಟನಾ ಸ್ಥಳಗಳಲ್ಲಿ, ಅವರು ಸಮುದಾಯ ಅಡುಗೆಮನೆಗಳಲ್ಲಿ ಸ್ವಯಂಸೇವಕಳಾಗಿದ್ದರು. ತನ್ನ ಜೀವನದುದ್ದಕ್ಕೂ ಬೇಕಿದ್ದರೂ ಅಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳುತ್ತಾರೆ. "ಅಲ್ಲಿ ನಾನು ಹಿರಿಯರನ್ನು ನೋಡಿ ನನ್ನ ಹೆತ್ತವರಿಗಾಗಿ ಅಡುಗೆ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ."












